By CPIML (not verified) |

ಮೂಲ: ಲಿಬರೇಶನ್ ಮಾಸ ಪತ್ರಿಕೆ
ಅನುವಾದ: ನಾ ದಿವಾಕರ್
 

2021ರ ಫೆಬ್ರವರಿ 19ರಂದು ಕೇಂದ್ರ ಸಂಸ್ಕøತಿ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ರೀತಿಯ ಸಂದೇಶವನ್ನು ನೀಡಿತ್ತು: “ಮಹಾನ್ ಚಿಂತಕ, ವಿದ್ವಾಂಸ ಮತ್ತು ಮಹಾನ್ ನಾಯಕ ಎಮ್ ಎಸ್ ಗೋಲ್ವಾಲ್‍ಕರ್ ಅವರನ್ನು ಅವರ ಜನ್ಮದಿನದಂದು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳು ಹಲವು ಪೀಳಿಗೆಗಳಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರೆಯಲಿದೆ ”. ಮೋದಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಆರೆಸ್ಸೆಸ್‍ನ ಸಂಸ್ಥಾಪಕ ಗೋಲ್ವಾಲ್‍ಕರ್ ಅವರ ಚಿಂತನೆ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆಯುವುದು ಹೊಸ ವಿಚಾರವೇನಲ್ಲ. ಆದರೆ ಈ ಚಿಂತನೆಗಳಲ್ಲಿ ಯಾವುದೇ ವಿದ್ವತ್ ಆಗಲೀ, ಸ್ಫೂರ್ತಿಯ ಸೆಲೆಯಾಗಲೀ ಇಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ. ಮೂಲತಃ ಗೋಲ್ವಾಲ್‍ಕರ್ ಅವರ ಚಿಂತನೆಗಳು ಹಿಂದೂ ಶ್ರೇಷ್ಠತೆಯ ಪ್ರತಿಪಾದನೆಯೇ ಆಗಿದ್ದು, ನಿರಂಕುಶಾಧಿಪತ್ಯದ, ಫ್ಯಾಸಿಸ್ಟ್ ಧೋರಣೆಯ, ಜಾತೀಯತೆಯ , ಪಿತೃ ಪ್ರಧಾನ ಧೋರಣೆಯ ಲಕ್ಷಣಗಳನ್ನೇ ಹೊಂದಿದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿಯೇ ಇವೆ. ಗಾಂಧಿಯ ಹತ್ಯೆಯ ಪ್ರಕರಣದಲ್ಲಿ ಇತರ ಆರೆಸ್ಸೆಸ್ ಸದಸ್ಯರೊಡನೆ ಬಂಧನಕ್ಕೊಳಗಾಗಿದ್ದ ಗೋಲ್ವಾಲ್‍ಕರ್, ಕೆಲವು ಸಾಕ್ಷಿಗಳು ಹಿಂಜರಿದಿದ್ದರಿಂದ ಬಿಡುಗಡೆ ಹೊಂದಿದ್ದರು. ಗಾಂಧೀಜಿಯ ಹತ್ಯೆಯ ಸಂಚು ರೂಪಿಸುವಲ್ಲಿ ಗೋಲ್ವಾಲ್‍ಕರ್ ತಮ್ಮ ಹಿಂಬಾಲಕರಿಗೆ ಪ್ರಚೋದನೆ ನೀಡಿದ್ದರು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ. ಈ ಸಾಕ್ಷಿಗಳನ್ನು ನಮ್ಮ ಮಾತಿನಲ್ಲಿ ಹೇಳುವ ಅವಶ್ಯಕತೆ ಇಲ್ಲ. ಗೋಲ್ವಾಲ್‍ಕರ್ ಅವರ ವಿ ಆರ್ ಅವರ್ ನೇಷನ್‍ಹುಡ್ ಡಿಫೈನ್ಡ್ ( ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕರ್ಷೆ 1939) ಮತ್ತು ಬಂಚ್ ಆಫ್ ತಾಟ್ಸ್ ( ಚಿಂತನೆಗಳ ಗೊಂಚಲು 1966) ಈ ಎರಡೂ ಕೃತಿಗಳಲ್ಲಿನ ಅವರದೇ ಮಾತುಗಳನ್ನು ಅವಲೋಕನ ಮಾಡಬಹುದು.
 

ಯಹೂದಿಗಳ ದಮನಕ್ಕೆ ನಾಜಿ ಜರ್ಮನಿ ಅನುಸರಿಸಿದ ಮಾರ್ಗದ ಸಮರ್ಥನೆ :
“ ಇಂದು ಜರ್ಮನಿಯ ಜನಾಂಗೀಯ ಶ್ರೇಷ್ಠತೆಯ ಚರ್ಚೆ ವಿಶ್ವವ್ಯಾಪಿಯಾಗಿ ಹರಡಿದೆ. ಜನಾಂಗದ ಶ್ರೇಷ್ಠತೆ ಮತ್ತು ಸಂಸ್ಕøತಿಯನ್ನು ರಕ್ಷಿಸಲು ಜರ್ಮನಿ ಯಹೂದಿಗಳು ಪ್ರತಿನಿಧಿಸುವ ಯಹೂದ್ಯ ಜನಾಂಗವನ್ನು ನಿರ್ನಾಮ ಮಾಡುವ ಮೂಲಕ ಇಡೀ ಜಗತ್ತನ್ನೇ ಆಘಾತಕ್ಕೀಡುಮಾಡಿದೆ. ಇಲ್ಲಿ ಜನಾಂಗೀಯ ಶ್ರೇಷ್ಠತೆಯ ಪರಾಕಾಷ್ಠೆಯನ್ನು ಕಾಣಬಹುದು. ಮೂಲತಃ ತಮ್ಮ ಸಾಂಸ್ಕøತಿಕ ಬೇರುಗಳಲ್ಲಿಯೇ ವಿಭಿನ್ನವಾಗಿ ಕಾಣುವ ಜನಾಂಗಗಳು ಮತ್ತು ಸಂಸ್ಕøತಿಗಳು ಒಂದಾಗಿ ಬದುಕುವುದು ಎಷ್ಟು ಕಷ್ಟ ಎನ್ನುವುದನ್ನು ಜರ್ಮನಿ ಸ್ಪಷ್ಟಪಡಿಸಿದ್ದು ಈ ವಿಭಿನ್ನ ಜನಾಂಗಗಳನ್ನು ಒಂದುಗೂಡಿಸುವುದು ಎಷ್ಟು ಅಸಾಧ್ಯದ ಕೆಲಸ ಎನ್ನುವುದನ್ನೂ ನಿರೂಪಿಸಿದೆ. ಹಿಂದೂಸ್ತಾನದಲ್ಲಿರುವ ನಮಗೆ ಇದರಿಂದ ಕಲಿಯಲು ಮತ್ತು ಈ ಧೋರಣೆಯ ಲಾಭ ಪಡೆಯಲು ಸಾಕಷ್ಟು ಪಾಠ ಕಲಿಯುವುದಿದೆ.” (ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕರ್ಷೆ 1939 ನಾಗಪುರ) ಟಿಪ್ಪಣಿ : ಇಲ್ಲಿ ಗೋಲ್ವಾಲ್‍ಕರ್ ಹಿಂದೂ-ಸ್ತಾನ್ ಪದವನ್ನು ಬಳಸುವ ಮೂಲಕ ಹಿಂದೂ ಅಧಿಪತ್ಯದ ರಾಷ್ಟ್ರವನ್ನು ಪ್ರತಿಪಾದಿಸುತ್ತಾರೆ. ಇದು ಸಾಮಾನ್ಯವಾಗಿ ಬಳಸಲಾಗುವ ಹಿಂದೂಸ್ತಾನದಿಂದ ಭಿನ್ನವಾದ ಕಲ್ಪನೆ. ಈ ಹಿಂದೂಸ್ತಾನ ಪರ್ಷಿಯಾ ಮೂಲದ ಹಿಂದೂ ಪದದಿಂದ ಬಳಕೆಗೆ ಬಂದಿದೆ. ಸಿಂಧೂ ನದಿಗೆ ಹಿಂದೂ ಎಂದು ಕರೆಯಲಾಗುತ್ತದೆ. ಹಾಗಾಗಿ ಹಿಂದೂಸ್ತಾನ ಎಂದರೆ ಸಿಂಧು ನದಿಯಿಂದ ಆಚೆಗೆ ಇರುವ ಭೂ ಖಂಡ ಎಂದರ್ಥ. ಇಂಡಿಯಾ ಎನ್ನುವ ಲ್ಯಾಟಿನ್ ಪದವನ್ನೂ ಸಹ ಪರ್ಷಿಯಾದ ಈ ಪದದಿಂದಲೇ ಎರವಲು ಪಡೆಯಲಾಗಿದೆ.
 

ಮುಸಲ್ಮಾನರನ್ನು, ಕ್ರೈಸ್ತರನ್ನು ಪ್ರಜೆಗಳೆಂದು ಪರಿಗಣಿಸದೆ ಇರುವ ಪರಿಕಲ್ಪನೆ :
“ ಭಾರತದಲ್ಲಿರುವ ವಿದೇಶಿ ಜನಾಂಗಗಳು ಹಿಂದೂ ಸಂಸ್ಕøತಿ ಮತ್ತು ಭಾಷೆಯನ್ನು ಒಪ್ಪಿಕೊಳ್ಳಬೇಕು, ಹಿಂದೂ ಧರ್ಮವನ್ನು ಗೌರವಿಸಿ ಆರಾಧಿಸಲು ಕಲಿಯಬೇಕು, ಹಿಂದೂ ಜನಾಂಗ ಮತ್ತು ಸಂಸ್ಕøತಿಯನ್ನು, ಅಂದರೆ ಹಿಂದೂ ರಾಷ್ಟ್ರವನ್ನು, ವೈಭವೀಕರಿಸುವುದನ್ನು ಹೊರತುಪಡಿಸಿ ಮತ್ತಾವುದೇ ರೀತಿಯ ಅನ್ಯ ಯೋಚನೆ ಮಾಡಕೂಡದು ಮತ್ತು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ, ಕಳೆದುಕೊಂಡು ಹಿಂದೂ ಜನಾಂಗದಲ್ಲಿ ಐಕ್ಯವಾಗಬೇಕು, ಅಥವಾ ಹಿಂದೂ ರಾಷ್ಟ್ರಕ್ಕೆ ಶರಣಾಗಿ, ಸಂಪೂರ್ಣ ಬದ್ಧರಾಗಿ ಈ ದೇಶದಲ್ಲಿ ವಾಸಿಸಬಹುದು. ಯಾವುದೇ ಸವಲತ್ತುಗಳು, ಸೌಕರ್ಯಗಳು, ರಿಯಾಯಿತಿಗಳನ್ನು ನಿರೀಕ್ಷಿಸದೆ, ಯಾವುದೇ ರೀತಿಯ ಆದ್ಯತೆಯನ್ನಾಧರಿಸಿದ ಅವಕಾಶಗಳನ್ನು ನಿರೀಕ್ಷಿಸದೆ , ಪೌರತ್ವ ಹಕ್ಕುಗಳನ್ನೂ ಅಪೇಕ್ಷಿಸದೆ ಇಲ್ಲಿ ವಾಸಿಸಬಹುದು ” (ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕರ್ಷೆ 1939-ಭಾರತ್ ಪ್ರಕಾಶನ ನಾಗಪುರ).

2006ರಲ್ಲಿ ಆರೆಸ್ಸೆಸ್ ಗೋಲ್ವಾಲ್‍ಕರರ ಈ ಕೃತಿಯನ್ನು ನಿರಾಕರಿಸುವ ಪ್ರಯತ್ನ ನಡೆಸಿತ್ತು. ಆರೆಸ್ಸೆಸ್ ವಕ್ತಾರ ಎಂ ಜಿ ವೈದ್ಯ ಸಂದರ್ಶನವೊಂದರಲ್ಲಿ “ ಎಲ್ಲರೂ ನಂಬುವ ಹಾಗೆ ಗೋಲ್ವಾಲ್‍ಕರರ ಕೃತಿ ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕರ್ಷೆ, ಆರೆಸ್ಸೆಸ್‍ನ ಬೈಬಲ್ ಅಲ್ಲ. ಹಾಗೊಮ್ಮೆ ಅದು ಬೈಬಲ್ ಆಗಿದ್ದಲ್ಲಿ ಸಂಘಪರಿವಾರದ ಪ್ರತಿಯೊಬ್ಬ ಸದಸ್ಯರೂ ಅದನ್ನು ಓದಿರುತ್ತಿದ್ದರು. ಎಲ್ಲರ ಮನೆಯಲ್ಲೂ ಈ ಕೃತಿಯ ಒಂದು ಪ್ರತಿ ಇರಬೇಕಿತ್ತು. ಆದರೆ ಅದು ಹಾಗಾಗಿಲ್ಲ. ನಮಗೆ ಮುಖ್ಯವಾಗುವುದು ಗೋಲ್ವಾಲ್‍ಕರ್ ಅವರ ಚಿಂತನೆಗಳ ಗೊಂಚಲು ಪುಸ್ತಕ. ಏಕೆಂದರೆ 1940ರ ಜೂನ್ 21ರಂದು ಸರಸಂಘಚಾಲಕರಾಗಿ ನೇಮಕಗೊಂಡ ನಂತರದಲ್ಲಿ ಗೋಲ್ವಾಲ್‍ಕರ್ ಅವರ ಚಿಂತನೆಗಳು ಈ ಕೃತಿಯಲ್ಲಿದೆ ” ಎಂದು ಹೇಳಿದ್ದರು. (ಅಕ್ಷಯ್ ಮುಕುಲ್, ಟೈಮ್ಸ್ ಆಫ್ ಇಂಡಿಯಾ, ಮಾರ್ಚ್ 2006). ಗೋಲ್ವಾಲ್‍ಕರ್ ಮುಕ್ತವಾಗಿ ನಾಜಿ ಚಿಂತನೆಗಳ ಪ್ರತಿಪಾದನೆ ಮಾಡಿದ್ದರಿಂದ ಮುಜುಗರಕ್ಕೊಳಗಾಗಿದ್ದ ಆರೆಸ್ಸೆಸ್ ಇದರಿಂದ ಪಾರಾಗಲು ಯತ್ನಿಸಿದ್ದು ನಿಜ. ಆದರೆ ಚಿಂತನೆಗಳ ಗೊಂಚಲು ಪುಸ್ತಕದಲ್ಲಿಯೂ ಸಹ, ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕಷೆ ಕೃತಿಯಲ್ಲಿ ಹೇಳಲಾಗಿರುವ ಅಭಿಪ್ರಾಯಗಳನ್ನು ಅನುಮೋದಿಸಲಾಗಿದೆ. ಇನ್ನೂ ವಿಸ್ತøತವಾಗಿ ವ್ಯಾಖ್ಯಾನಿಸಲಾಗಿದೆ. ಮೊದಲ ಕೃತಿಯಲ್ಲಿ ಅಲ್ಪಸಂಖ್ಯಾತರು ಹಿಂದೂ ಜನಾಂಗದಲ್ಲಿ ವಿಲೀನವಾಗಲು ಕರೆ ನೀಡಲಾಗಿತ್ತು. ಎರಡನೆ ಕೃತಿಯಲ್ಲಿ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಒಂದಾಗುವಂತೆ ಕರೆ ನೀಡಲಾಗಿದೆ. ಈ ರಾಷ್ಟ್ರೀಯತೆಯನ್ನೇ ಕೃತಿಯಲ್ಲಿ ಹಿಂದೂ ಎಂದು ಪರಿಗಣಿಸಲಾಗಿದೆ.
 

ಹಿಂದೂ ಎಂದರೆ ರಾಷ್ಟ್ರೀಯ ; ಹಿಂದುಯೇತರ ಅಸ್ಮಿತೆ ಎಂದರೆ ವಿಭಜಕ, ಕೋಮುವಾದಿ :
ಹಿಂದೂಗಳು ಎಂದಿಗೂ ಭಯೋತ್ಪಾಕರಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಗಳಲ್ಲಿ ಹೇಳುತ್ತಲೇ ಇರುತ್ತಾರೆ. ಯಾವುದೇ ಒಬ್ಬ ಹಿಂದೂ ಭಯೋತ್ಪಾದಕ ಕೃತ್ಯ ಎಸಗಿದ್ದಾನೆ ಎಂದು ಹೇಳುವುದು ಅಪಮಾನ ಮಾಡಿದಂತೆ ಎಂದೂ ಹೇಳುತ್ತಿರುತ್ತಾರೆ. ಅಂದರೆ ಗೋಡ್ಸೆಯಿಂದ ಪ್ರಗ್ಯಾ ಠಾಕುರ್‍ವರೆಗೆ, ಗೌರಿ ಲಂಕೇಶ್ ಹಂತಕರವರೆಗೆ, ರಾಜಕೀಯ ಪ್ರೇರಿತ ಹತ್ಯೆ ಮಾಡುವ ಹಿಂದೂಗಳು, ನಿಶ್ಶಸ್ತ್ರ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸುವ ಹಿಂದೂಗಳು ಭಯೋತ್ಪಾದಕರಲ್ಲ ಎಂದಂತಾಯಿತು. ಏಕೆಂದರೆ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಹಿಂದೂ ರಾಷ್ಟ್ರದ ಚೌಕಟ್ಟಿನಲ್ಲಿ ದೇಶಭಕ್ತಿಯ ಕೃತ್ಯಗಳೆಂದು ಭಾವಿಸಲಾಗುತ್ತದೆ.

ಈ ಪರಿಕಲ್ಪನೆಯನ್ನು ಗೋಲ್ವಾಲ್‍ಕರ್ ಅವರ ನಾವು ಮತ್ತು ನಮ್ಮ ರಾಷ್ಟ್ರೀಯತೆಯ ನಿಷ್ಕರ್ಷೆ ಕೃತಿಯಿಂದಲೇ ನೇರವಾಗಿ ಪಡೆಯಲಾಗಿದೆ. ಈ ಕೃತಿಯಲ್ಲಿ ಗೋಲ್ವಾಲ್‍ಕರ್ “ಭಾರತದಲ್ಲಿ ಹಿಂದೂ ಎಂದರೆ ಹಿಂದೂ ರಾಷ್ಟ್ರದ ಪ್ರಜೆ ಅವರನ್ನು ಕೋಮುವಾದಿ ಎನ್ನಲಾಗುವುದಿಲ್ಲ ” ಎಂದು ಹೇಳುತ್ತಾರೆ.

ಗೋಲ್ವಾಲ್‍ಕರ್ ಅಭಿಪ್ರಾಯದಲ್ಲಿ ಕೋಮುವಾದಿ ಎಂದರೆ, ಇಂದು ಅವರ ಹಿಂಬಾಲಕರು “ತುಕಡೆ ತುಕಡೆ ಗುಂಪು” ಎಂದು ಬಣ್ಣಿಸಲಾಗುವವರು ಅಥವಾ ಭಾರತವನ್ನು ವಿಭಜಿಸಲು, ಇಬ್ಭಾಗ ಮಾಡಲು ಉತ್ಸುಕರಾಗಿರುವವರು. ಅಂದರೆ ಗೋಲ್ವಾಲ್‍ಕರ್ ಅಭಿಪ್ರಾಯದಲ್ಲಿ ಕೋಮುವಾದಿ (ವಿಭಜಕರು) ಎಂದರೆ ಯಾರು. ಇದಕ್ಕೆ ಉತ್ತರ ನೋಡಿದರೆ ಅಚ್ಚರಿಯಾಗಬಹುದು.

ಮುಸಲ್ಮಾನರು, ಕ್ರೈಸ್ತರು ಮೂಲತಃ ಕೋಮುವಾದಿಗಳು, ಹಾಗೆಯೇ ಎಲ್ಲ ಹಿಂದೂಯೇತರರೂ ಕೋಮುವಾದಿಗಳೇ ಎಂದು ಅರ್ಥೈಸುವ ಗೋಲ್ವಾಲ್‍ಕರ್ ತಮ್ಮ ಕೃತಿಯಲ್ಲಿ “ ತಮ್ಮ ಜೀವನ ವಾಹಿನಿಯಲ್ಲೇ ಭಾರತೀಯ ರಾಷ್ಟ್ರದ ಅಭಿವ್ಯಕ್ತಿಯನ್ನು ಹೊಂದಿರುವ ಹಿಂದೂ ಜನತೆಯ ವಿರುದ್ಧ ಕತ್ತಿ ಮಸೆಯುವ ಹಿಂದುಯೇತರ ಗುಂಪುಗಳೆಲ್ಲವೂ ಒಂದು ರೀತಿಯಲ್ಲಿ ಕೋಮುವಾದಿಗಳೇ ” ಎಂದು ಹೇಳುತ್ತಾರೆ (ಚಿಂತನೆಗಳ ಗೊಂಚಲು ಭಾಗ ಎರಡು 10.)
 

ಚಿಂತನೆಗಳ ಗೊಂಚಲು ಕೃತಿ ಕೆಲವು ಪ್ರಮುಖ ಉಲ್ಲೇಖಗಳು ಇಲ್ಲಿವೆ :
ಸಿಖ್ಖರು ಮತ್ತು ಬೌದ್ಧರು : “ ಹಿಂದೂ ಸಮಾಜದಲ್ಲೂ ಕೋಮುವಾದಿಗಳಿದ್ದಾರೆ. ಬಹುಮುಖೀ ಹಿಂದೂ ಮೇಧಾವಿಗಳ ಉಗಮದೊಂದಿಗೆ ಮೂಲತಃ ಪಂಥಗಳ ಸ್ವರೂಪದಲ್ಲಿ ಹೊರಹೊಮ್ಮಿದ ಈ ಕೋಮುವಾದಿಗಳು ಕ್ರಮೇಣ ತಮ್ಮ ಮೂಲ ಸ್ಫೂರ್ತಿಯ ಸೆಲೆಯನ್ನು ಮರೆತು, ತಮ್ಮ ಉಗಮದ ಮೂಲವನ್ನು ಮರೆತು ತಮ್ಮನ್ನು ತಾವೇ ಹಿಂದೂ ಸಮಾಜ ಮತ್ತು ಹಿಂದೂ ಧರ್ಮದಿಂದ ಭಿನ್ನ ಎಂದು ಪರಿಭಾವಿಸಲಾರಂಭಿಸಿದರು. ಈ ಆಧಾರದ ಮೇಲೆಯೇ ಇವರು ಪ್ರತ್ಯೇಕ ರಾಜಕೀಯ ಮತ್ತು ಆರ್ಥಿಕ ಸವಲತ್ತುಗಳನ್ನು ಅವಕಾಶಗಳನ್ನೂ ನೀಡುವಂತೆ ಆಗ್ರಹಿಸಲಾರಂಭಿಸಿದರು. ಈ ಬೇಡಿಕೆಗಳ ಈಡೇರಿಕೆಗಾಗಿಯೇ ಇವರು ಹಿಂದೂ ಸಮಾಜದಿಂದ ಭಿನ್ನ ಎಂದು ಬಿಂಬಿಸಿಕೊಂಡು ಪ್ರತಿಭಟನೆಯ ಮಾರ್ಗ ಅನುಸರಿಸಿದರು. ನವ ಬೌದ್ಧರು ಮತ್ತು ಸಿಖ್ಖರು ಈ ಗುಂಪಿಗೆ ಸೇರಿದವರಾಗಿದ್ದಾರೆ”.

ತಮಿಳು, ಅಸ್ಸಾಮೀಯರು, ಮಣಿಪುರ ಮತ್ತು ನಾಗಾ ಜನಾಂಗ ಇತ್ಯಾದಿ : “ ಕೋಮುವಾದದ ಮೂರನೆಯ ಸ್ವರೂಪವನ್ನು ದ್ರಾವಿಡ ಕಳ್ಗಂ ಮತ್ತು ದ್ರಾವಿಡ ಮುನ್ನೇಟ್ರ ಕಳ್ಗಂನಲ್ಲಿ ಕಾಣಬಹುದು. ಜನಾಂಗೀಯವಾಗಿ ತಮ್ಮ ವೈಶಿಷ್ಟ್ಯವನ್ನು ಪ್ರತಿಪಾದಿಸುವ ಇವರು ಪ್ರತ್ಯೇಕತೆಗಾಗಿ ಆಗ್ರಹಿಸುವುದೇ ಅಲ್ಲದೆ ತಮ್ಮ ಧ್ಯೇಯ ಸಾಧಿಸಲು ಸಮಾಜದಲ್ಲಿ ದ್ವೇಷ,. ಅಸೂಯೆ, ಶತ್ರುತ್ವ ಮತ್ತು ಹಿಂಸೆಯನ್ನು ಹರಡುತ್ತಾರೆ ”
ಮೀಸಲಾತಿ ಮತ್ತಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಎಸ್‍ಸಿ/ಎಸ್‍ಟಿ/ಒಬಿಸಿ ಗುಂಪುಗಳು : “ ಕೋಮುವಾದಿಗಳ ನಾಲ್ಕನೆಯ ವರ್ಗದಲ್ಲಿ ಸ್ಪøಶ್ಯತೆ, ಅಸ್ಪøಶ್ಯತೆ, ಬ್ರಾಹ್ಮಣ, ಬ್ರಾಹ್ಮಣೇತರ ಇವೇ ಮುಂತಾದ ವಿಚಾರಗಳನ್ನು ಮುನ್ನೆಲೆಗೆ ತಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ದ್ವೇಷ, ಶತ್ರುತ್ವವನ್ನು ಹರಡಿ, ತಮ್ಮ ವಿಶೇಷ ಸವಲತ್ತುಗಳನ್ನು ಗಳಿಸಲು ಸ್ವಾರ್ಥದ ಹಾದಿ ಅನುಸರಿಸುತ್ತಾರೆ ”

ಎಸ್‍ಸಿ, ಎಸ್‍ಟಿ, ಒಬಿಸಿಗಳ ಚಳುವಳಿಗಳನ್ನು ಪ್ರತ್ಯೇಕತಾ ಆಂದೋಲನಗಳು ಎಂದೇ ಪರಿಗಣಿಸುವ ಗೋಲ್ವಾಲ್‍ಕರ್ “ ಅವರನ್ನು ಹರಿಜನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ಗುರುತಿಸುವ ಮೂಲಕ ನಮ್ಮ ಜನರ ನಡುವೆ ಅಸೂಯೆ ಮತ್ತು ಸಂಘರ್ಷವನ್ನು ಹುಟ್ಟುಹಾಕಿ ಪ್ರತ್ಯೇಕತಾ ಭಾವನೆಗಳನ್ನು ಸೃಷ್ಟಿಸಲಾಗುತ್ತಿದೆ. ಇವರನ್ನು ಹಣದ ಆಮಿಷ ತೋರಿಸಿ ಶಾಶ್ವತವಾಗಿ ತಮ್ಮ ಗುಲಾಮರಂತೆ ಮಾಡುವ ಉದ್ದೇಶದಿಂದ ವಿಶೇಷ ಸವಲತ್ತುಗಳಿಗಾಗಿ ಆಗ್ರಹಿಸುವಂತೆ ಪ್ರಚೋದಿಸುತ್ತಾರೆ ”

ಭಾಷಾ ಅಲ್ಪಸಂಖ್ಯಾತರು- ಭಾಷೆ ಆಧಾರಿತ ಅಸ್ಮಿತೆಗಳು ಮತ್ತು ಚಳುವಳಿಗಳು :

“ಇದು ಐದನೆಯ ಮಾದರಿ. ಭಾಷಾ ಸಮೂಹಗಳ ಕೋಮುವಾದ. ಇವರು ಇತರ ಭಾಷಿಕರ ವಿರುದ್ಧ ನೆರೆ ಪ್ರಾಂತ್ಯದವರ ವ ಇರುದ್ಧ ಮತ್ಸರವನ್ನು ಹೆಚ್ಚಿಸಿ, ವೈರತ್ವವನ್ನು ಹರಡಿ ದ್ವೇಷ ಮೂಡಿಸುತ್ತಾರೆ. ಈ ಪ್ರವೃತ್ತಿಯಿಂದಲೇ ಭಾಷಾ ಅಲ್ಪಸಂಖ್ಯಾತರು ಎಂಬ ಪರಿಕಲ್ಪನೆಯೂ ಹೊರಹೊಮ್ಮಿದೆ ”
 

ವಿಶಿಷ್ಟ ಪ್ರಾದೇಶಿಕ ಸಂಸ್ಕøತಿ ಅಥವಾ ರಾಜ್ಯತ್ವದ ಪ್ರತಿಪಾದನೆ :
“ಕೋಮುವಾದದ ಆರನೆಯ ಮಾದರಿ ಎಂದರೆ ಸಂಕುಚಿತ ಪ್ರಾದೇಶಿಕ ಮನೋಭಾವ ಮತ್ತು ಇತರ ಪ್ರಾಂತ್ಯದ ಜನತೆಯ ಬಗ್ಗೆ ಅನಾರೋಗ್ಯಕರ ಭಾವನೆಗಳನ್ನು ಹೊಂದುವುದು. ದಕ್ಷಿಣ ಮತ್ತು ಉತ್ತರ, ಪಂಜಾಬಿ ಮತ್ತು ಪಂಜಾಬಿಯೇತರ, ಮರಾಠಿ ಮತ್ತು ಕನ್ನಡ, ಗುಜರಾತಿ ವಿರುದ್ಧ ಮರಾಠಿ, ಬಂಗಾಲ, ಬಿಹಾರ ಮತ್ತು ಒಡಿಷಾ ಇವೆಲ್ಲವೂ ಈ ಮಾದರಿಯಲ್ಲಿ ಕಂಡುಬರುತ್ತವೆ.”

 

ಈ ಮೇಲಿನ ಅಸ್ಮಿತೆಗಳನ್ನು ಮತ್ತು ಹಿತಾಸಕ್ತಿಗಳನ್ನು ಪ್ರತಿಪಾದಿಸುವ ರಾಜಕೀಯ ಚಳುವಳಿಗಳು : 

“ಜಾತಿ, ಕುಲ, ಭಾಷೆ ಮುಂತಾದ ಅಸ್ಮಿತೆಗಳ ನಡುವೆ ಇರುವ ಭಿನ್ನತೆಯನ್ನೇ ಬಳಸಿಕೊಂಡು ಇನ್ನೂ ಹೆಚ್ಚು ಭಿನ್ನತೆಯನ್ನು ಸೃಷ್ಟಿಸುವ ಮತ್ತೊಂದು ರೀತಿಯ, ಏಳನೆಯ ಮಾದರಿಯ ಕೋಮುವಾದವೂ ಇದೆ. ಇದರಲ್ಲಿ ಚುನಾವಣಾ ಲಾಭಕ್ಕಾಗಿ ಪರಸ್ಪರ ದ್ವೇಷ ಹರಡಲಾಗುತ್ತದೆ. ಇದು ದೇಶವ್ಯಾಪಿ ಹರಡಿರುವ ಅಪಾಯಕಾರಿ ಕೋಮುವಾದ ಆಗಿದ್ದು, ಈಗ ಅಧಿಕಾರದಲ್ಲಿರುವ ರಾಜಕೀಯ ಪಕ್ಷವೂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ. ಈ ರಾಜಕೀಯ ಸ್ವರೂಪದ ಕೋಮುವಾದ ಇರುವವರೆಗೂ ಮತ್ತಾವುದೇ ರೀತಿಯ ಕೋಮುವಾದವನ್ನು ಅಳಿಸಿಹಾಕಲು ಸಾಧ್ಯವಿಲ್ಲ ”

ಈ ಮೇಲಿನ ವಿಚಾರಗಳ ಜೊತೆಗೆ ಗೋಲ್ವಾಲ್‍ಕರ್ ಸ್ತ್ರೀವಾದ ಮತ್ತು ಮಹಿಳಾ ಸಮಾನತೆಯ ಹಕ್ಕೊತ್ತಾಯಗಳನ್ನು ಮತ್ತೊಂದು ವಿಭಜಕ ಪ್ರವೃತ್ತಿ ಎಂದು ಪ್ರತಿಪಾದಿಸುತ್ತಾರೆ : “ ಈಗ ಮಹಿಳಾ ಸಮಾನತೆಗಾಗಿ ಆಗ್ರಹಿಸಲಾಗುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆಯಿಂದ ವಿಮೋಚನೆಗಾಗಿ ಆಗ್ರಹಿಸಲಾಗುತ್ತಿದೆ. ಲಿಂಗತ್ವದ ಆಧಾರದ ಮೇಲೆ ಅಧಿಕಾರಶಾಹಿಯಲ್ಲಿ ಮಹಿಳೆಯರ ಮೀಸಲಾತಿಗಾಗಿ ಆಗ್ರಹಿಸಲಾಗುತ್ತಿದೆ. ಇದು ಮತ್ತೊಂದು ಇಸಂ ಅಥವಾ ವಾದಕ್ಕೆ, ಲಿಂಗತ್ವವಾದಕ್ಕೆ ಎಡೆಮಾಡಿಕೊಡುತ್ತಿದೆ. ಜಾತಿವಾದ, ಕೋಮುವಾದ, ಭಾಷಾವಾದಕ್ಕೆ ಲಿಂಗತ್ವವಾದವೂ ಸೇರಿಕೊಳ್ಳುತ್ತಿದೆ .”

ಭಾರತ ಹಿಂದೂ ಆಗಿರಬೇಕು ಎನ್ನುವುದರ ಬಗ್ಗೆ ಈ ಕೃತಿಯಲ್ಲಿ ಗೋಲ್ವಾಲ್‍ಕರ್ ಸ್ಫಟಿಕಸ್ಪಷ್ಟತೆಯಿಂದ ಪ್ರತಿಪಾದಿಸುತ್ತಾರೆ. ಹಿಂದೂ ಅಸ್ಮಿತೆಯನ್ನು ತೊರೆದು ಸೆಕ್ಯುಲರ್ ಅಸ್ಮಿತೆಯನ್ನು ಅಪ್ಪಿಕೊಳ್ಳುವ ಹಿಂದೂಗಳೂ ಸಹ ಹಿಂದೂ ಧರ್ಮದ ಶತ್ರುಗಳೇ ಎಂದು ಹೇಳುತ್ತಾರೆ. “ ಸಮಸ್ತ ಹಿಂದೂ ಸಮಾಜ, ಐಕ್ಯತೆಯನ್ನು ಸಾಧಿಸಿದ ಹಿಂದೂ ಸಮಾಜ, ಇದನ್ನು ಸಾಧಿಸುವುದೇ ನಮ್ಮೆಲ್ಲರ ಒಂದಂಶದ ಭಕ್ತಿಯಿಂದ ಕೂಡಿದ ಗುರಿಯಾಗಬೇಕು. ಜಾತಿ, ಪಂಥ, ಭಾಷೆ, ಪ್ರಾಂತ್ಯ ಅಥವಾ ಪಕ್ಷ ಈ ಯಾವುದೇ ವಿಚಾರಗಳು ನಮ್ಮ ಭಕ್ತಿ ಮತ್ತು ಬದ್ಧತೆಗೆ ಅಡ್ಡಿಯಾಗಬಾರದು. ಭಕ್ತಿಯ ಸಾಕಾರ ಮೂರ್ತಿಯಾದ ರಾಮನನ್ನು ಗೌರವಿಸದೆ ಇರುವವರು, ಇದಕ್ಕೆ ಅಡ್ಡಿ ಮಾಡುವವರು ಹತ್ತುಲಕ್ಷ ಪಟ್ಟು ಹೆಚ್ಚಿನ ಶತ್ರು ಎಂದು ಭಾವಿಸಬೇಕು. ಅವರು ನಮಗೆ ಎಷ್ಟೇ ಹತ್ತಿರದವರಾಗಿದ್ದರೂ ನಮ್ಮ ನಿಲುವು ಇದೇ ಆಗಿರಬೇಕು.”
 

ಎಸ್/ಎಸ್‍ಟಿ/ಒಬಿಸಿ ಮೀಸಲಾತಿಗೆ ವಿರೋಧ
“ಜಾತಿ ಮತ್ತು ಕುಲಗಳ ಆಧಾರದ ಮೇಲೆ ಗುಂಪುಗಳನ್ನು ವರ್ಗೀಕರಿಸುವ ನೀತಿಗೆ ನಾವು ಇತಿಶ್ರೀ ಹಾಡಬೇಕು. ಹಾಗೆಯೇ ಸೇವಾ ಕ್ಷೇತ್ರದಲ್ಲಿ ವಿಶೇಷ ಹಕ್ಕು ಮತ್ತು ಸವಲತ್ತುಗಳಿಗಾಗಿ ಆಗ್ರಹಿಸುವುದು, ಹಣಕಾಸು ನೆರವು ಕೋರುವುದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಕೋರುವುದು ಇವೆಲ್ಲದಕ್ಕೂ ಅಂತ್ಯ ಹಾಡಬೇಕು. ಅಲ್ಪಸಂಖ್ಯಾತರು ಮತ್ತು ಸಮುದಾಯಗಳು ಎಂಬ ಪರಿಕಲ್ಪನೆ ಮತ್ತು ಚಿಂತನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕು ” -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-10
 

ಹಿಂದಿ ಅಥವಾ ಸಂಸ್ಕøತ ಭಾರತದ ಅಧಿಕೃತ ರಾಜಭಾಷೆಯಾಗಬೇಕು
ಹಿಂದಿ ಅಥವಾ ಸಂಸ್ಕøತವನ್ನು ಭಾರತದ ಏಕೈಕ ಅಧಿಕೃತ ರಾಜಭಾಷೆಯನ್ನಾಗಿ ಘೋಷಿಸಲು ಗೋಲ್ವಾಲ್‍ಕರ್ ಆಗ್ರಹಿಸಿದ್ದರು. “ ಸಂಸ್ಕøತ ಆ ಸ್ಥಾನವನ್ನು ಆಕ್ರಮಿಸುವವರೆಗೂ, ನಾವು ಸಂಸ್ಕøತವನ್ನೇ ಆಧರಿಸಿರುವ ಹಿಂದಿ ಭಾಷೆಯನ್ನು ಅಧಿಕೃತ ರಾಜಭಾಷೆ ಎಂದು ಪರಿಗಣಿಸುವುದು ಅನುಕೂಲಕರ. ಹಿಂದಿ ಸಾಮ್ರಾಜ್ಯವಾದ ಅಥವಾ ಉತ್ತರದ ಅಧಿಪತ್ಯ ಮುಂತಾದ ಘೋಷಣೆಗಳಿಗೆ ಮಣಿದು ಇಲ್ಲಿ ನಿರ್ಲಕ್ಷ್ಯ ಮಾಡಬಾರದು ” - ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-10
 

ಪ್ರತ್ಯೇಕ ತಮಿಳು ಸಂಸ್ಕøತಿಗೆ ವಿರೋಧ- ತಮಿಳು ಮತ್ತು ಹಿಂದೂ ಸಮೀಕರಣ
ಗೋಲ್ವಾಲ್‍ಕರ್ ತಮಿಳು ಭಾಷೆಯನ್ನು ವಿಶಿಷ್ಟವಾದ ಭಾಷೆ ಅಥವಾ ಸಂಸ್ಕøತಿ ಎಂದು ಒಪ್ಪಿಕೊಳ್ಳಲೇ ಇಲ್ಲ. “ ಇತ್ತೀಚೆಗೆ ನಾವು ತಮಿಳಿನ ಬಗ್ಗೆ ಹೆಚ್ಚು ವಾದವಿವಾದಗಳನ್ನು ಕೇಳುತ್ತಿದ್ದೇವೆ. ಕೆಲವು ತಮಿಳು ಭಾಷಾ ಪ್ರತಿಪಾದಕರು ತಮಿಳನ್ನು ವಿಶಿಷ್ಟವಾದ ಭಾಷೆ ಎಂದು ಪರಿಗಣಿಸಿ ತಮಿಳು ಭಾಷೆಗೆ ತನ್ನದೇ ಆದ ಸಂಸ್ಕøತಿ ಇರುವುದಾಗಿ ಹೇಳುತ್ತಿದ್ದಾರೆ. ಅವರು ವೇದಗಳಲ್ಲಿನ ನಂಬಿಕೆಯನ್ನು ನಿರಾಕರಿಸುತ್ತಿದ್ದಾರೆ. ತಿರುಕ್ಕುರಲ್ ತಮ್ಮ ವಿಶಿಷ್ಟ ಗ್ರಂಥ ಎಂದು ಹೇಳುತ್ತಿದ್ದಾರೆ. ಮಹಾಭಾರತದಂತೆಯೇ ತಿರುಕ್ಕುರಳ್ ಒಂದು ಹಿಂದೂ ಗ್ರಂಥ. ಅದು ಪರಿಶುದ್ಧ ಹಿಂದೂ ಭಾಷೆಯಲ್ಲಿ ಹಿಂದೂ ಚಿಂತನೆಗಳನ್ನೇ ಒಳಗೊಂಡಿದೆ ” -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-10
 

ಆಂತರಿಕ ಅಪಾಯ : ಅಲ್ಪಸಂಖ್ಯಾತ ಅಸ್ಮಿತೆಗಳು ಮತ್ತು ಪರಿವರ್ತಕ ಸಿದ್ಧಾಂತಗಳು
ಅಲ್ಪಸಂಖ್ಯಾತರ (ಮುಸ್ಲಿಮರು ಮತ್ತು ಕ್ರೈಸ್ತರು) ಧಾರ್ಮಿಕ ನಂಬಿಕೆಗಳನ್ನು ಮತ್ತು ಕ್ರಾಂತಿಕಾರಿ ಕಾರ್ಯಕರ್ತರನ್ನು (ಕಮ್ಯುನಿಸ್ಟರು) ಗೋಲ್ವಾಲ್‍ಕರ್ ಆಂತರಿಕವಾಗಿ ಅಪಾಯಕಾರಿ ಶಕ್ತಿಗಳು ಎಂದೇ ಗೋಲ್ವಾಲ್‍ಕರ್ ತಮ್ಮ -ಚಿಂತನೆಗಳ ಗೊಂಚಲು ಕೃತಿಯಲ್ಲಿ ಗುರುತಿಸುತ್ತಾರೆ.
ಹಿಂದೂ-ಮುಸ್ಲಿಂ ಐಕ್ಯತೆ = ರಾಜದ್ರೋಹ
ಹಿಂದೂ ಮುಸ್ಲಿಂ ಐಕ್ಯತೆಯನ್ನು ಗೋಲ್ವಾಲ್‍ಕರ್ ರಾಜದ್ರೋಹ ಎಂದೇ ಪರಿಗಣಿಸುತ್ತಾರೆ. 1947ರ ಸಂದರ್ಭದಲ್ಲಿ ಭಾರತ ಬ್ರಿಟೀಷ್ ಆಳ್ವಿಕೆಯಿಂದ ವಿಮೋಚನೆ ಗಳಿಸಿತು ಎನ್ನುವುದಕ್ಕಿಂತಲೂ ಅದು ಮುಸ್ಲಿಮರ ಕೈಯ್ಯಲ್ಲಿ ಸೋಲು ಅನುಭವಿಸಿದ ಘಳಿಗೆ ಎಂದೇ ಗೋಲ್ವಾಲ್‍ಕರ್ ಭಾವಿಸುತ್ತಾರೆ. “ ಹಿಂದೂ ಮುಸ್ಲಿಂ ಐಕ್ಯತೆ ಇಲ್ಲದೆ ಸ್ವರಾಜ್ ಸಾಧ್ಯವಿಲ್ಲ ಎಂದು ಘೋಷಿಸಿದವರು ನಮ್ಮ ಸಮಾಜದ ಮೇಲೆ ದೊಡ್ಡ ರಾಜದ್ರೋಹ ಎಸಗಿದ್ದಾರೆ, ಇದರ ನೇರ ಪರಿಣಾಮ ಎಂದರೆ ಹಿಂದೂಗಳ ಮುಸ್ಲಿಮರ ವಿರುದ್ಧ 1947ರಲ್ಲಿ ಸೋಲು ಅನುಭವಿಸಬೇಕಾಯಿತು ” ಎಂದು ಹೇಳುತ್ತಾರೆ. -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-12
 

ಭಾರತದ ಸಂವಿಧಾನವನ್ನು ಭಾರತೀಯ ಅಲ್ಲ ಎಂದು ಲೇವಡಿ ಮಾಡಿದ್ದರು
“ಭಾರತದ ಸಂವಿಧಾನ ಒಂದು ಕ್ಲಿಷ್ಟಕರವಾದ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ವಿವಿಧ ಸಂವಿಧಾನಗಳಿಂದ ಆಯ್ದ ಭಾಗಗಳಿಂದ ವೈವಿಧ್ಯಮಯವಾಗಿ ಕಾಣುವ ಒಂದು ಗ್ರಂಥವಾಗಿದೆ. ಇದರಲ್ಲಿ ನಮ್ಮ ಸ್ವಂತದ್ದು ಎನ್ನುವುದು ಏನೂ ಇಲ್ಲ. 

ನಮ್ಮ ರಾಷ್ಟ್ರೀಯ ಧ್ಯೇಯ ಏನು, ನಮ್ಮ ಜೀವನದ ಉದ್ದೇಶ ಏನು ಎನ್ನುವುದರ ಬಗ್ಗೆ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದೇ ಒಂದು ಉಲ್ಲೇಖ ಇರುವುದೇ? ಇಲ್ಲ. ಸಂಯುಕ್ತ ರಾಷ್ಟ್ರಗಳ ಒಡಂಬಡಿಕೆಯಿಂದ ಕೆಲವು ನೀತಿಗಳು, ಲೀಗ್ ಆಫ್ ನೇಷನ್ಸ್ ಒಡಂಬಡಿಕೆಯಿಂದ ಕೆಲವು ನಿಯಮಗಳು ಮತ್ತು ಅಮೆರಿಕ ಹಾಗೂ ಬ್ರಿಟನ್ನಿನ ಸಂವಿಧಾನಗಳಿಂದ ಆಯ್ದ ಕೆಲವು ಭಾಗಗಳನ್ನು ಒಟ್ಟುಗೂಡಿಸಿ ಒಂದು ಸಂವಿಧಾನವನ್ನು ಸಿದ್ಧಪಡಿಸಲಾಗಿದೆ. ಲೋಕಮಾನ್ಯರ ಪರಂಪರೆ ಎಂಬ ತಮ್ಮ ಕೃತಿಯಲ್ಲಿ ತಿಯೋಡರ್ ಶೇ ಹೀಗೆ ಹೇಳುತ್ತಾರೆ ‘ ಸಂವಿಧಾನ ಪೀಠಿಕೆಯಿಂದ ಸ್ವರಾಜ್, ಧರ್ಮರಾಜ್ಯ ಮತ್ತು ಪ್ರಭುತ್ವದ ಧ್ಯೇಯ ಹೊಂದಿದ, ಜೀವನದ ಧ್ಯೇಯ ಬಿಂಬಿಸುವ ಸಮಗ್ರತೆಯ ಧ್ಯೇಯ ಇಲ್ಲಿ ಕಾಣುವುದಿಲ್ಲ. ಅಂದರೆ ಭಾರತದ ಸಂವಿಧಾನದಲ್ಲಿ ಭಾರತೀಯ ಚಿಂತನೆ, ಪರಿಕಲ್ಪನೆಗಳಿಗೆ ಮತ್ತು ರಾಜಕೀಯ ತತ್ವಶಾಸ್ತ್ರಗಳಿಗೆ ಅವಕಾಶವೇ ದೊರೆತಿಲ್ಲ ’ ” -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 3-14

ಭಾರತೀಯ ಪರಿಕಲ್ಪನೆಗಳು ಎಂದರೆ ಗೋಲ್ವಾಲ್‍ಕರ್ ಹೇಗೆ ಅರ್ಥೈಸುತ್ತಾರೆ ? ಅವರ ಅರ್ಥದಲ್ಲಿ ಅದು ಮನುಸ್ಮøತಿಯೇ ಆಗಿದೆ. ( ಅಂಬೇಡ್ಕರ್ ಮನುಸ್ಮøತಿಯನ್ನು ಶೋಷಿತ ದಮನಿತ ಜಾತಿಗಳು ಮತ್ತು ಮಹಿಳೆಯರ ಗುಲಾಮಗಿರಿಯ ಒಂದು ಗ್ರಂಥ ಎಂದು ಭಾವಿಸಿದ್ದರು). 1949ರ ನವಂಬರ್ 26ರಂದು ಭಾರತದ ಸೆಕ್ಯುಲರ್ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಅಂಗೀಕರಿಸಿದ ನಂತರ ಆರೆಸ್ಸೆಸ್‍ನ ಆಂಗ್ಲ ಮುಖವಾಣಿ ಪತ್ರಿಕೆ ಆರ್ಗನೈಸರ್ ನವಂಬರ್ 30ರ ಸಂಪಾದಕೀಯದಲ್ಲಿ ಹೀಗೆ ಆರೋಪಿಸಿತ್ತು :
“ಆದರೆ ನಮ್ಮ ಸಂವಿಧಾನದಲ್ಲಿ ಪ್ರಾಚೀನ ಭಾರತದ ಸಾಂವಿಧಾನಿಕ ಬೆಳವಣಿಗೆಗಳ ವೈಶಿಷ್ಟ್ಯಗಳು ಪ್ರಸ್ತಾಪವಾಗಿಯೇ ಇಲ್ಲ. ಸ್ಪಾರ್ಟಾದ ಲಿಕರ್ಗಸ್ ಅಥವಾ ಪರ್ಷಿಯಾದ ಸೊಲೋನ್‍ಗಿಂತಲೂ ಮುನ್ನವೇ ಭಾರತದಲ್ಲಿ ಮನುಸ್ಮøತಿಯ ನಿಯಮಗಳು ರಚಿತವಾಗಿದ್ದವು. ಈ ದಿನದವರೆಗೂ ಮನುಸ್ಮøತಿಯಲ್ಲಿ ದಾಖಲಿಸಲಾಗಿರುವ ನಿಯಮಗಳು ವಿಶ್ವಾದ್ಯಂತ ಪ್ರಶಂಸೆ ಗಳಿಸಿರುವುದೇ ಅಲ್ಲದೆ ಏಕಾಏಕಿ ಬದ್ಧತೆ ಮತ್ತು ಸಮರ್ಪಣೆಯ ಭಾವವನ್ನು ಸೃಷ್ಟಿಸುತ್ತವೆ. ಆದರೆ ನಮ್ಮ ಸಂವಿಧಾನದ ಪಂಡಿತರಿಗೆ ಇದು ಅರ್ಥಹೀನ ಎನಿಸುತ್ತದೆ”.
 

ತ್ರಿವರ್ಣ ಧ್ವಜವನ್ನು ಗೋಲ್ವಾಲ್‍ಕರ್ ಲೇವಡಿ ಮಾಡಿದ್ದರು
“ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೂ ಸಹ ಮೂರು ಪಟ್ಟಿಗಳು ಆಕರ್ಷಣೀಯವಾಗಿ ಕಂಡಿವೆ. ಹಾಗಾಗಿ ಕಾಂಗ್ರೆಸ್ ಇದನ್ನು ಆಯ್ಕೆ ಮಾಡಿಕೊಂಡಿದೆ. ನಂತರ ಇದನ್ನೇ ವಿಭಿನ್ನ ಸಮುದಾಯಗಳ ಐಕ್ಯತೆಯ ಸಂಕೇತ ಎಂದು ಬಿಂಬಿಸಲಾಯಿತು. ಕೇಸರಿ ಬಣ್ಣ ಹಿಂದೂಗಳನ್ನು, ಹಸಿರು ಮುಸಲ್ಮಾನರನ್ನು ಮತ್ತು ಬಿಳಿಯ ಬಣ್ಣ ಇತರ ಎಲ್ಲ ಸಮುದಾಯಗಳನ್ನೂ ಪ್ರತಿನಿಧಿಸುತ್ತದೆ ಎಂದು ಬಿಂಬಿಸಲಾಯಿತು. ಹಿಂದೂಯೇತರ ಸಮುದಾಯಗಳ ಪೈಕಿ ಮುಸಲ್ಮಾನರನ್ನು ವಿಶೇಷವಾಗಿ ಹೆಸರಿಸಿದ ಉದ್ದೇಶ ಏನೆಂದರೆ ಬಹುತೇಕ ನಾಯಕರ ಅಭಿಪ್ರಾಯದಲ್ಲಿ ಮುಸಲ್ಮಾನರು ಪ್ರಧಾನವಾಗಿ ಕಂಡಿದ್ದರು ಮತ್ತು ಮುಸಲ್ಮಾನರನ್ನು ಹೆಸರಿಸದಿದ್ದರೆ ನಮ್ಮ ರಾಷ್ಟ್ರೀಯತೆ ಪರಿಪೂರ್ಣವಾಗುವುದಿಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಕೆಲವರು ಇದನ್ನು ಕೋಮುವಾದಿ ಧೋರಣೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ವ್ಯಾಖ್ಯಾನವನ್ನೇ ಬದಲಿಸಿ, ಕೇಸರಿ ತ್ಯಾಗ ಬಲಿದಾನವನ್ನು ಪ್ರತಿನಿಧಿಸುತ್ತದೆ, ಬಿಳಿಯ ಬಣ್ಣ ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ ಮತ್ತು ಹಸಿರು ಶಾಂತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಯಿತು. ಈ ವ್ಯಾಖ್ಯಾನಗಳನ್ನು ಆ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಗಳಲ್ಲಿ ಚರ್ಚೆಗೊಳಪಡಿಸಲಾಯಿತು. ಇದನ್ನು ಪರಿಶುದ್ಧವಾದ, ಆರೋಗ್ಯಕರವಾದ ರಾಷ್ಟ್ರೀಯ ದೃಷ್ಟಿಕೋನ ಎಂದು ಯಾರು ಹೇಳಲು ಸಾಧ್ಯ ?”- ಗೋಲ್ವಾಲ್‍ಕರ್ ಚಿಂತನೆಗಳ ಗೊಂಚಲು ಭಾಗ 3 19.
ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಹಕ್ಕುಗಳು ಮತ್ತು ಪಂಚಾಯತ್ ಚುನಾವಣೆಗಳಿಗೆ ವಿರೋಧ

“ನಾವು ಒಂದು ದೇಶ, ಒಂದು ಸಮಾಜ ಮತ್ತು ಒಂದು ರಾಷ್ಟ್ರ. ಜೀವನ ಮೌಲ್ಯಗಳನ್ನು, ಸೆಕ್ಯುಲರ್ ಆಶಯಗಳು ಮತ್ತು ಆಸಕ್ತಿಗಳನ್ನು ಹೊಂದಿರುವ ಒಂದು ಸಮುದಾಯ ಆದ್ದರಿಂದ ಈ ದೇಶವನ್ನು ಏಕಾಧಿಕಾರದ ಮಾದರಿಯಲ್ಲಿ ಒಂದು ರಾಷ್ಟ್ರವನ್ನಾಗಿಯೇ ಆಳುವುದು ನಮ್ಮ ಆಶಯ. ಈಗಿರುವ ಒಕ್ಕೂಟ ವ್ಯವಸ್ಥೆ ಪ್ರತ್ಯೇಕತಾ ಭಾವನೆಗಳನ್ನು ಸೃಷ್ಟಿಸುತ್ತದೆ ” -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-15
ಇದೇ ರೀತಿ ಗೋಲ್ವಾಲ್ಕರ್ ಸಂವಿಧಾನದ ತಿದ್ದುಪಡಿಯನ್ನೂ ಬಯಸಿದ್ದರು. “ ಪಂಚಾಯತ್ ಚುನಾವಣೆಗಳು ಸರ್ವಾನುಮತದಿಂದ ನಡೆಯಬೇಕು ಅಥವಾ ಚುನಾವಣೆಗಳೇ ಇರಕೂಡದು ” ಎಂದು ಹೇಳಿದ್ದರು. -ಚಿಂತನೆಗಳ ಗೊಂಚಲು – ಗೋಲ್ವಾಲ್‍ಕರ್ ಭಾಗ 2-15

ಮೋದಿ ಆಡಳಿತ, ಗೋಲ್ವಾಲ್‍ಕರ್ ಅವರ ಮೌಲ್ಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು ನಮ್ಮ ಪರಿಕಲ್ಪನೆಯ ಭಾರತವನ್ನು ಕಡೆಗಣಿಸುತ್ತಿದೆ. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಿರ್ಲಕ್ಷಿಸುತ್ತಿದ್ದು, ಜಾತಿ, ಕುಲ, ನಂಬಿಕೆ, ಲಿಂಗತ್ವ ಇವೆಲ್ಲದರಿಂದಲೂ ಹೊರತಾದ ಸಮಾನ ಹಕ್ಕು ಮತ್ತು ಸ್ಥಾನಮಾನಗಳನ್ನು ನಿರಾಕರಿಸಲು ಯತ್ನಿಸುತ್ತಿದೆ. ಬದಲಾಗಿ ಮನುವಾದಿ ನಾಜಿ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸಲು ಯತ್ನಿಸುತ್ತಿದೆ. ಭಾರತದ ಬಗ್ಗೆ ಗೋಲ್ವಾಲ್‍ಕರ್ ಅವರ ಕನಸುಗಳು ಭೀಕರವಾಗಿವೆ. ನಾವು ಇದನ್ನು ಅರ್ಥಮಾಡಿಕೊಳ್ಳಬೇಕಿದೆ, ಇದರ ವಿರುದ್ಧ ನಮ್ಮೆಲ್ಲಾ ಶಕ್ತಿಯನ್ನು ವ್ಯಯಿಸಿ ಹೋರಾಡಬೇಕಿದೆ.