By CPIML (not verified) |

ಉದ್ಯೋಗ, ಕೂಲಿ, ವಸತಿ, ಆಹಾರ ಭದ್ರತೆ ಇವೆಲ್ಲವೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು

(ಸಿಪಿಐಎಂಎಲ್ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮತ್ತು ಎಐಸಿಸಿಟಿಯು ರಾಷ್ಟ್ರೀಯ ಕಾರ್ಯದರ್ಶಿ ಕ್ಲಿಫ್ಟನ್ ಡಿ’ ರೊಜೇರಿಯೋ ಅವರೊಡನೆ, ಜೂನ್ 18ರಂದು 'ಥರ್ಡ್ ಐ' ಮಾಧ್ಯಮದ ವತಿಯಿಂದ ನಡೆಸಲಾದ ಒಂದು ಸಂದರ್ಶನ.)
 

ಪ್ರಶ್ನೆ : ಆಹಾರದ ಹಕ್ಕು ಆಂದೋಲನವನ್ನು ಕುರಿತು ಮತ್ತು ಸಾರ್ವಜನಿಕ ಆರೋಗ್ಯದ ಒಂದು ಭಾಗವಾಗಿ ಆಹಾರ ಭದ್ರತೆಯನ್ನು ಕುರಿತು ಮಾತನಾಡಬಹುದೇ ?
ರೊ : ಭಾರತದಲ್ಲಿರುವ ಹಸಿವು ಮತ್ತು ಅಪೌಷ್ಟಿಕತೆಯನ್ನು ಸಾಕ್ಷೀಕರಿಸುವ ಒಂದು ಪ್ರಕ್ರಿಯೆಯಾಗಿ ಆಹಾರದ ಹಕ್ಕಿಗಾಗಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಂದೋಲನದ ಪ್ರಭಾವದಿಂದಲೇ ನ್ಯಾಯಾಲಯಗಳೂ ಸಹ ಕಾಡುತ್ತಿರುವ ಹಸಿವಿನ ಬಗ್ಗೆ ಕಾಳಜಿ ವಹಿಸಿವೆ. ಸರ್ಕಾರ ಅನುಸರಿಸುತ್ತಿರುವ ಆಹಾರದ ಹಕ್ಕಿನ ಆಂದೋಲನ ಒಂದು ರೀತಿಯಲ್ಲಿ ಕೇವಲ ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡಿದಂತೆ. ಏಕೆಂದರೆ ದೇಶವನ್ನು ಕಾಡುತ್ತಿರುವ ತೀವ್ರ ಬಡತನ ಮತ್ತು ಹಸಿವಿನ ಪ್ರಶ್ನೆಯ ಮೂಲ ಕಾರಣಗಳನ್ನು ನ್ಯಾಯಾಲಯಗಳು ಪರಿಗಣಿಸಿಯೇ ಇಲ್ಲ. ಅಂಗನವಾಡಿಗಳ ಮೂಲಕ ಜಾರಿಯಲ್ಲಿರುವ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಸಾಲುವುದಿಲ್ಲ.

ನನ್ನ ತಟ್ಟೆಯಲ್ಲಿ ಇಂದು ಏಕೆ ಅನ್ನ ಇಲ್ಲ ಎನ್ನುವ ಪ್ರಶ್ನೆಯನ್ನು ನಾವು ಪರಿಗಣಿಸಬೇಕಿದೆ. ಇದಕ್ಕೆ ಕಾರಣ ನಾನು ಸೋಮಾರಿಯಾಗಿರುವುದಲ್ಲ. ನನಗೆ ಉದ್ಯೋಗ ಇಲ್ಲ ಎನ್ನುವುದು ಕಾರಣ. ನನಗೆ ಉದ್ಯೋಗ ಇದೆ, ಕಷ್ಟಪಟ್ಟು ದುಡಿಯುತ್ತೇನೆ ಆದರೂ ನನ್ನ ಶ್ರಮಕ್ಕೆ ತಕ್ಕ ಕೂಲಿ ದೊರೆಯುತ್ತಿಲ್ಲ. ನನಗೆ ಉದ್ಯೋಗ ಭದ್ರತೆ ಇಲ್ಲ. ನನ್ನ ಆರೋಗ್ಯ ಹದಗೆಟ್ಟರೆ ನಾನು ಹಣ ಹೊಂದಿಸಲು ಕಷ್ಟಪಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಅಪೌಷ್ಟಿಕತೆ ವ್ಯಾಪಕವಾಗಿದ್ದರೆ ಅದಕ್ಕೆಎ ಕಾರಣ ಮಕ್ಕಳೂ ಅಲ್ಲ ಅಥವಾ ಅವರ ಪೋಷಕರೂ ಅಲ್ಲ. ಜನರಿಗೆ ಬದುಕಲು ಅವಶ್ಯವಾದ ಕೂಲಿ ನೀಡುವುದು ಮತ್ತು ಸಮಾನ ಸಂಪನ್ಮೂಲಗಳನ್ನು ಒದಗಿಸುವುದು ಇಂದಿನ ತುರ್ತು.
 

ಪ್ರಶ್ನೆ : ನಮ್ಮ ಆಹಾರ ಭದ್ರತೆಯ ನೀತಿಯ ಬಗ್ಗೆ ಕಳೆದ ವರ್ಷದ ಘಟನೆಗಳು ಏನನ್ನು ಸೂಚಿಸುತ್ತವೆ ?
ರೊ : ಕೇವಲ ನಾಲ್ಕು ಗಂಟೆಗಳ ಸಮಯಾವಕಾಶ ನೀಡಿ ಇಡೀ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡುವುದನ್ನು ಹೇಗೆ ಭಾವಿಸಬೇಕು ? ನಮಗೆ ಅದರ ಗಂಭೀರತೆ ಅರಿವಿರಲಿಲ್ಲ ಎಂದು ಹೇಳಲಾಗುವುದಿಲ್ಲ. ದೇಶದ ಬಹುಸಂಖ್ಯೆಯ ಜನತೆಗೆ ನಾಳಿನ ಕೂಳು ಸಹ ದೊರೆಯುವ ಪರಿಸ್ಥಿತಿ ಇಲ್ಲ ಎನ್ನುವುದನ್ನು ನೀವು ಲೆಕ್ಕಿಸುವುದೇ ಇಲ್ಲ. ಹತ್ತು ದಿನಗಳ ನಂತರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಜಾರಿಗೊಳಿಸಿತ್ತು. ತಿಂಗಳಿಗೆ ಐದು ಕಿಲೋ ಅಕ್ಕಿ, ಎರಡು ಕಿಲೋ ಬೇಳೆಯನ್ನು ಎರಡು ತಿಂಗಳ ಕಾಲ ನೀಡಲು ನಿರ್ಧರಿಸಲಾಯಿತು. ನೆಲಮಟ್ಟದ ವಾಸ್ತವಗಳ ಅರಿವೇ ಇಲ್ಲದ ಈ ಯೋಜನೆ ಅತಾರ್ಕಿಕವೂ ಆಗಿತ್ತು. ಜನತೆಯ ದುಡಿಮೆಯ, ಸಂಪಾದನೆಯ ಹಕ್ಕುಗಳನ್ನೇ ಕಸಿದುಕೊಂಡಾಗ, ಅವರ ಕೈಯ್ಯಲ್ಲಿ ನಗದು ಹಣ ಇಲ್ಲದಾದಾಗ, ಅಡುಗೆ ಅನಿಲ ಲಭ್ಯವಿಲ್ಲದಾದಾಗ, ಎಣ್ಣೆ ಅಥವಾ ಮಸಾಲೆ ಪದಾರ್ಥಗಳನ್ನು ಖರೀದಿಸುವ ಶಕ್ತಿಯೂ ಇಲ್ಲವಾದಾಗ ಈ ರೀತಿಯ ಯೋಜನೆ ಜನರನ್ನು ಅಪಮಾನಗೊಳಿಸುತ್ತದೆ. ದಿನಗೂಲಿ ನೌಕರರ ಕುಟುಂಬದಲ್ಲಿ ಬದುಕುವವರಿಗೆ ಈ ಅನುಭವ ಆಗಿರಲಿಕ್ಕುಂಟು. ಅಕ್ಕಿ ಬೇಳೆ ನೀಡುವ ಮೂಲಕ ಮಹತ್ಸಾಧನೆ ಮಾಡಿದ್ದೇವೆ ಎಂದು ಹೇಳುವುದು ಹೇಗೆ ಸರಿ.

ಇವತ್ತಿನ ಕರ್ನಾಟಕದ ಪರಿಸ್ಥಿತಿಯನ್ನೇ ನೋಡಿ. ಈಗಾಗಲೇ ಲಾಕ್ ಡೌನ್ ಘೋಷಿಸಿ ಮೂರು ತಿಂಗಳು ಕಳೆದಿದೆ. ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಜನರ ಆಹಾರ ಭದ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ನೀತಿಯನ್ನೂ ಸರ್ಕಾರ ಹೊಂದಿರಲಿಲ್ಲ. ಬದಲಾಗಿ ಈಗ ಇಂದಿರಾ ಕ್ಯಾಂಟೀನ್ ಆಹಾರ ಪ್ಯಾಕೇಜ್‍ಗಳನ್ನೇ ಬಡಜನತೆಗೆ ದಿನಕ್ಕೆ ಮೂರು ಬಾರಿ ನೀಡುವುದಾಗಿ ಹೇಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕತೆ ಇದ್ದವರಿಗೆ ಗ್ರಾಮ ಪಂಚಾಯತ್‍ಗಳು ಆಹಾರ ಪ್ಯಾಕೇಜ್ ನೀಡುತ್ತವೆ. ಇದರಿಂದ ದುಡಿಯುವ ವರ್ಗಗಳು ದಿನಕ್ಕೆ ಮೂರು ಬಾರಿ ಆಹಾರಕ್ಕಾಗಿ ಕ್ಯೂ ನಿಲ್ಲಬೇಕಾಗುತ್ತದೆ. ಕಳೆದ ವರ್ಷದ ಅನುಭವದಿಂದ ರಾಜ್ಯ ಸರ್ಕಾರ ಯಾವ ಪಾಠ ಕಲಿತಿದೆ ?

ಕರ್ನಾಟಕದಲ್ಲಿ ಕೋವಿದ್ 19 ಸಾಂಕ್ರಾಮಿಕ ನಿರ್ವಹಣೆಯ ಬಗ್ಗೆ ಮೊಕದ್ದಮೆಯೊಂದರಲ್ಲಿ ನಾನು ವಕೀಲಿಕೆ ವಹಿಸುತ್ತಿದ್ದ ಸಂದರ್ಭದಲ್ಲಿ, ನಾನು ಜನರು ದಿನನಿತ್ಯ ಆಹಾರಕ್ಕಾಗಿ ಕ್ಯೂ ನಿಲ್ಲುವಂತಾಗಬಾರದು ಎಂದು ಹೇಳಿದ್ದೆ. ಇದು ಜನರನ್ನು ಅಪಮಾನಗೊಳಿಸಿದಂತೆ. ಅವರ ಘನತೆಗೆ ಧಕ್ಕೆ ಉಂಟುಮಾಡಿದಂತೆ. ಪ್ರತಿದಿನವೂ ಕಠಿಣ ಉದ್ಯೋಗದಲ್ಲಿ ತೊಡಗಿ ಆಹಾರ ಸಂಪಾದಿಸುವ ಜನತೆಯ ಮೇಲೆ ಲಾಕ್ ಡೌನ್ ಹೇರಲಾಗಿದೆ. ಅವರಿಂದ ದುಡಿಮೆಯ ಶಕ್ತಿಯನ್ನು ಕಸಿದುಕೊಳ್ಳಲಾಗಿದೆ ಆದರೆ ಅವರನ್ನು ಒಂದು ತಟ್ಟೆ ಕೂಳಿಗಾಗಿ ಕ್ಯೂ ನಿಲ್ಲಲು ಹೇಳಲಾಗುತ್ತದೆ. ಇನ್ನು ವಸತಿಯ ಹಕ್ಕನ್ನು ಪರಿಗಣಿಸೋಣ. ಜನಸಾಮಾನ್ಯರ ಬಳಿ ಬಾಡಿಗೆ ಪಾವತಿ ಮಾಡಲು ಹಣ ಇಲ್ಲ. ಮನೆಯ ಮಾಲಿಕರು ಲಾಕ್ ಡೌನ್ ಅವಧಿಯಲ್ಲಿ ಬಾಡಿಗೆ ಕೇಳುವಂತಿಲ್ಲ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಜಾರಿಗೊಳಿಸಲೇ ಇಲ್ಲ. ಒಂದಾದಮೇಲೊಂದರಂತೆ ರಾಜ್ಯಗಳು ಲಾಕ್ ಡೌನ್ ಹೇರುತ್ತಲೇ ಹೋಗಿವೆ. ಆದರೆ ಜನತೆಗೆ ಸೂರು ದೊರೆಯುತ್ತಿಲ್ಲ. ಈಗಾಗಲೇ ಹಲವೆಡೆ ಜನರ ಎತ್ತಂಗಡಿಯಾಗುತ್ತಿರುವ ವರದಿಗಳು ಬರುತ್ತಿವೆ. ಇನ್ನು ಸಾಲ ಸೌಲಭ್ಯಗಳನ್ನು ಗಮನಿಸೋಣ. ಸ್ವ ಸಹಾಯ ಗುಂಪುಗಳನ್ನು ಗಮನಿಸೋಣ. ಕಳೆದ ವರ್ಷ ನಮ್ಮ ಪಕ್ಷದಿಂದ ಸಾಲ ಮನ್ನಾ ಆಂದೋಲನವನ್ನು ಲಾಕ್ ಡೌನ್ ನಂತರದಲ್ಲಿ ಹಮ್ಮಿಕೊಂಡಿದ್ದವು.

ಜನರನ್ನು ಚಿತ್ರಹಿಂಸೆಗೊಳಪಡಿಸುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ನಾವು ದನಿ ಎತ್ತಿದ್ದೇವೆ. ಒಂದು ಸ್ವಸಹಾಯ ಗುಂಪಿನಿಂದ ಸಾಲ ಪಡೆದವರು, ಪಾವತಿ ಮಾಡಲಾಗದಿದ್ದರೆ, ವಸೂಲಿಗಾಗಿ ಮನೆ ಬಾಗಿಲಿಗೆ ಜನ ಬರುತ್ತಾರೆ. ಇಲ್ಲಿ ಸಾಮಾನ್ಯ ಜನತೆ ಗೌರವ, ಮರ್ಯಾದೆಗೂ ಚ್ಯುತಿ ಬರುತ್ತದೆ. ಕಳೆದ ವರ್ಷದ ಲಾಕ್ ಡೌನ್ ನಿಂದಾದ ಪರಿಣಾಮವನ್ನೇ ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಸಿಎಂಐಇ ವರದಿಯ ಅನುಸಾರ ಅಪಾರ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಲೇ ಇದೆ.ಕೂಲಿಯ ಪ್ರಮಾಣ ಕ್ಷೀಣಿಸುತ್ತಿದೆ. ಸಾಲ ನೀಡುವವರಿಂದ ದುಡಿಯುವ ವರ್ಗಗಳಿಗೆ ಮುಕ್ತಿಯೇ ಇಲ್ಲದಂತಾಗಿದೆ. ವೈಜ್ಞಾನಿಕ ತಳಹದಿಯ ಯಾವುದೇ ಆಡಳಿತ ನೀತಿಯನ್ನೂ ಸರ್ಕಾರ ಘೋಷಿಸಿಲ್ಲ.
 

ಪ್ರಶ್ನೆ : ಆಹಾರ ಭದ್ರತೆ, ವಸತಿ, ಹಣಕಾಸು ಸೌಲಭ್ಯ ಮತ್ತಿತರ ಅಂಶಗಳನ್ನು ಪರಿಗಣಿಸದೆ ಯಾವುದೇ ಅಲ್ಪಕಾಲಿಕ ಸಾರ್ವಜನಿಕ ಆರೋಗ್ಯ ನೀತಿಯನ್ನು ರೂಪಿಸಲು ಸಾಧ್ಯವಿಲ್ಲ ಎಂದು ನೀವು ಭಾವಿಸುತ್ತೀರಿ. ನೀವು ಹೈಕೋರ್ಟ್‍ನಲ್ಲಿ ವಾದ ಮಂಡಿಸುತ್ತಿದ್ದ ಸಂದರ್ಭದಲ್ಲಿ ನೀವು ರಾಜ್ಯ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಯಾವ ರೀತಿಯ ಶಿಫಾರಸುಗಳನ್ನು ಮಾಡಿರುವಿರಿ?
ರೊ : ಈ ಸಂಕಷ್ಟಕರ ಸಮಯದಲ್ಲಿ ಜನರಿಗೆ ನಗದು ನೀಡಬೇಕು ಎಂದು ನಾವು ಸಲಹೆ ನೀಡಿದ್ದೇವೆ. ಉಚಿತ ಪಡಿತರ ಕಿಟ್‍ಗಳನ್ನು ನೀಡುವುದು, ಅದರಲ್ಲಿ ಅಕ್ಕಿ, ಎಣ್ಣೆ, ಬೇಳೆ, ಮಸಾಲೆ, ಅಡುಗೆ ಅನಿಲ ಮುಂತಾದುವನ್ನು ಒಳಗೊಂಡಿರುವಂತೆ ಸೂಚಿಸಿದ್ದೇವೆ. ವಿಪತ್ತು ನಿರ್ವಹಣಾ ಕಾಯ್ದೆಯ ಅನುಸಾರ ಸರ್ಕಾರ ಆದೇಶವನ್ನು ಹೊರಡಿಸಿ ,ಸಾಮಾನ್ಯ ಜನರನ್ನು ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಎತ್ತಂಗಡಿ ಮಾಡಿಸುವುದಕ್ಕೆ ನಿರ್ಬಂಧ ಹಾಕಲು ಕೋರಿದ್ದೇವೆ. ವಿದ್ಯುತ್ ಮತ್ತು ನೀರಿನ ಶುಲ್ಕವನ್ನು ಮನ್ನಾ ಮಾಡುವುದು, ಮೈಕ್ರೋಫೈನಾನ್ಸ್ ಕಂಪನಿಗಳ , ಖಾಸಗಿ ಲೇವಾದೇವಿಗಾರರ ಮತ್ತು ಬ್ಯಾಂಕುಗಳ ಸಾಲದ ಕಂತುಗಳ ಮರುಪಾವತಿಗೆ ಆಗ್ರಹಿಸದಂತೆ ನಿರ್ಬಂಧ ಹೇರುವುದು ನಮ್ಮ ಬೇಡಿಕೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿ ಅಂಗನವಾಡಿಗಳ ಮುಖಾಂತರ ಆರು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು, ಗರ್ಭಿಣಿ ಮಹಿಳೆಯರಿಗೆ, ಹಾಲುಣಿಸುವ ತಾಯಂದಿರಿಗೆ ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮನೆ ಬಾಗಿಲಿಗೇ ಪೌಷ್ಟಿಕ ಆಹಾರ ಒದಗಿಸುವುದು ನಮ್ಮ ಬೇಡಿಕೆಯಾಗಿದೆ. ಹಾಗೆಯೇ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದನ್ನೂ ಮುಂದುವರೆಸಲು ಕೋರಲಾಗಿದೆ. ಇದು ಶಾಸನಬದ್ಧ ಆದೇಶಗಳೇ ಆಗಿರುವುದರಿಂದ ಮತ್ತೊಮ್ಮೆ ಆಗ್ರಹಿಸುವುದೇಕೆ ಎಂದು ನೀವು ಕೇಳಬಹುದು. ಏಕೆಂದರೆ ಕಳೆದ ವರ್ಷ ಸರ್ಕಾರ ಇದನ್ನು ಮಾಡಲಿಲ್ಲ. ಶಾಲೆಗಳು ಮುಚ್ಚಿವೆ ಎಂಬ ಕಾರಣಕ್ಕೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲೇ ಇಲ್ಲ. ಅದಕ್ಕೆ ಸಮನಾದ ಧಾನ್ಯಗಳನ್ನು ನೀಡುವುದಾಗಿಯೂ, ಮನೆಯಲ್ಲೇ ತಯಾರಿಸಿಕೊಳ್ಳಬೇಕೆಂದೂ ಸರ್ಕಾರ ಆದೇಶಿಸಿತ್ತು. ಇದನ್ನೂ ಸಹ ಕೆಲವು ತಿಂಗಳುಗಳ ಕಾಲ ಮಾಡಲಿಲ್ಲ. ಹಾಗಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು.
 

ಪ್ರ : ಸಾರ್ವಜನಿಕ ಆರೋಗ್ಯ ನೀತಿಯನ್ನು ವ್ಯಾಪಕ ನೆಲೆಯಲ್ಲಿ ಪರಿಗಣಿಸಿದಾಗ, ಕೋವಿದ್ 19 ಸಂದರ್ಭದಲ್ಲಿ ಇದನ್ನು ಒಂದು ಆಡಳಿತ ನೀತಿಯನ್ನಾಗಿ ಜಾರಿಗೊಳಿಸುವ ಪ್ರಯತ್ನಗಳು ನಿಮಗೆ ಕಾಣುತ್ತಿವೆಯೇ ?
ರೊ : ಕೋವಿದ್ 19 ಸಂದರ್ಭದಲ್ಲಿ ಹೇಳುವುದಾದರೆ ಕೇರಳ ಅನುಸರಿಸಿದ ಮಾದರಿ ಒಪ್ಪುವಂತಹುದು. ಅಲ್ಲಿ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಾಗಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ. ಅಂದರೆ ತಕ್ಷಣದ ಆರೋಗ್ಯ ಕಾಳಜಿ ವಹಿಸುತ್ತಿರುವುದು ಸ್ಪಷ್ಟವಾಗುತ್ತದೆ. ಅಲ್ಲಿ ಆಮ್ಲಜನಕ ಇಲ್ಲದೆ, ಹಾಸಿಗೆ ಇಲ್ಲದೆ ಸೋಂಕಿತರು ಸತ್ತ ಒಂದೇ ಒಂದು ಘಟನೆಯನ್ನೂ ಗುರುತಿಸಲಾಗುವುದಿಲ್ಲ. ಲಾಕ್ ಡೌನ್ ಘೋಷಿಸಿದ ಕೂಡಲೇ ಅಲ್ಲಿನ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಆಹಾರ ಕಿಟ್ ನೀಡಿದೆ. ಇದು ಜನರನ್ನು ಗೌರವಯುತವಾಗಿ ಕಾಣುವ ಒಂದು ವಿಧಾನ. ಮುಂಬಯಿಯ ಟ್ರಯೇಜ್ ವ್ಯವಸ್ಥೆಯ ಲಕ್ಷಣಗಳೂ ಇದ್ದು ಇದನ್ನು ಈಗ ಪರಿಶೀಲಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿದ್ ಹರಡುತ್ತಿರುವುದನ್ನು ನೋಡಿದರೆ, ಉತ್ತರಪ್ರದೇಶದ ಉದಾಹರಣೆಯನ್ನೇ ತೆಗೆದುಕೊಂಡರೆ, ಪೂರ್ವ ತಯಾರಿ ನಡೆಸದೆ ಹೋದರೆ ಗಂಭೀರ ಪರಿಣಾಮಗಳನ್ನು ಎದುರಿಸುವುದು ಶತಃಸಿದ್ಧ. ಪ್ರತಿಯೊಂದು ಗ್ರಾಮ ಪಂಚಾಯತ್‍ನಲ್ಲೂ ಒಂದು ಕೋವಿದ್ ಕೇಂದ್ರ ಇರಬೇಕು. ಜನರನ್ನು ಮನೆಯಲ್ಲೇ ಕ್ವಾರಂಟೈನ್ ಆಗಲು ಅಪೇಕ್ಷಿಸಲಾಗುವುದಿಲ್ಲ. ಏಕೆಂದರೆ ಮನೆಗಳು ಚಿಕ್ಕದಾಗಿರುವತ್ತವೆ, ಬಡತನ ಕಾಡುತ್ತಿರುತ್ತದೆ. ಕ್ವಾರಂಟೈನ್ ಆಗಬೇಕಾದರೆ, ಟೆಸ್ಟಿಂಗ್ ನಡೆಯಬೇಕಾದರೆ ಹಳ್ಳಿಗಳಲ್ಲಿ ಕೋವಿದ್ ಕೇಂದ್ರಗಳು ಇರಬೇಕು. ಕನಿಷ್ಟ ಆಮ್ಲಜನಕ ಪೂರೈಕೆ ಇರಬೇಕು ಮತ್ತು ಔಷಧಿಗಳು ಲಭ್ಯವಿರಬೇಕು. ಸೋಂಕು ಹೆಚ್ಚಾದಲ್ಲಿ ಜನರು ಕೋವಿದ್ ಕೇಂದ್ರಕ್ಕೆ ಹೋಗುತ್ತಾರೆ. ಅಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು ಮತ್ತು ಶುಶ್ರೂಷಕ ಸಿಬ್ಬಂದಿ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯ.
 

ಪ್ರಶ್ನೆ: ಕೋವಿದ್ ಪರಿಣಾಮದಿಂದ ಸಾರ್ವಜನಿಕ ಆರೋಗ್ಯವನ್ನು ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆಯೇ?
ರೊ : ಜನರು ಕೋವಿದ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಗಳು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕ ಚರ್ಚೆಯೂ ನಡೆಯುತ್ತಿಲ್ಲ. ಮಧ್ಯಮ ವರ್ಗಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಾಮಥ್ರ್ಯ ಇರುವುದರಿಂದ, ಅಲ್ಲಿಯೇ ಲಸಿಕೆಯನ್ನೂ ಪಡೆಯಲು ಸಾಧ್ಯ. ಆದರೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲ ಸೌಕರ್ಯಗಳಿಗಾಗಿ ಖರ್ಚು ಮಾಡಿದ ಹಣವನ್ನು ಕುರಿತು ಚರ್ಚೆ ಮಾಡಲು ಸಾಧ್ಯವಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೊರತೆಗಳು ದೇಶಾದ್ಯಂತ ಒಂದೇ ತೆರನಾಗಿ ಕಾಣುವುದಿಲ್ಲ. ಕೆಲವು ರಾಜ್ಯಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಕೆಲವೆಡೆ ಸಂಪೂರ್ಣ ಕುಸಿದುಹೋಗಿವೆ. ಈ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಅವಶ್ಯತೆಯಂತೂ ಇದ್ದೇ ಇದೆ. ಆಮ್ಲಜನಕದ ಪೂರೈಕೆಯ ವಿಚಾರದಲ್ಲಿ, ರೆಮಿಡಿಸಿವಿರ್ ಮತ್ತು ಟಾಕ್ಲಿಜುಮಾಬ್ ಮಾತ್ರೆಗಳ ಸರಬರಾಜು ವಿಚಾರದಲ್ಲಿ ಎಲ್ಲವನ್ನೂ ಕೇಂದ್ರೀಕರಿಸಲಾಗಿದೆ.
ಯಾವ ರಾಜ್ಯಕ್ಕೆ ಎಷ್ಟು ನೀಡಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ. ಲಸಿಕೆಯ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸುತ್ತಿದೆ. ಕೇಂದ್ರ ಸರ್ಕಾರ ಲಾಭ ಗಳಿಸುವ ತವಕದಲ್ಲಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಚಿಂತೆಗೀಡುವ ವಿಚಾರ. ಕೋವಿದ್ 19 ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಯ ಮೇಲೆ ಆಕ್ರಮಣ ನಡೆಯುತ್ತಿರುವುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರಗಳ ನಿರ್ಣಯಗಳಿಗೆ ಮಾನ್ಯತೆ ನೀಡಲಾಗುತ್ತಿಲ್ಲ. ಆಡಳಿತದ ಜವಾಬ್ದಾರಿ ಮತ್ತು ಕರ್ತವ್ಯಗಳ ವಿಕೇಂದ್ರೀಕರಣ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ಇದನ್ನು ಕೂಡಲೇ ಪರಿಹರಿಸಬೇಕಿದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸ್ವಚ್ಚತಾ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸ್ವಚ್ಚತಾ ಕಾರ್ಮಿಕರನ್ನು ಮುಂಚೂಣಿ ಕಾರ್ಮಿಕರು ಎಂದೂ ಆಶಾ ಕಾರ್ಯಕರ್ತರನ್ನು ಆರೋಗ್ಯ ಸೇವಾ ಕಾರ್ಮಿಕರೆಂದೂ ಪರಿಗಣಿಸಲಾಗುತ್ತದೆ. ಕೋವಿದ್ ವಿರುದ್ಧ ಸಂಗ್ರಾಮದಲ್ಲಿ ಈ ಕಾರ್ಮಿಕರು ಸದಾ ಸಕ್ರಿಯರಾಗಿದ್ದಾರೆ. ದೇಶದ ಬಹುಪಾಲು ಸ್ವಚ್ಚತಾ ಕಾರ್ಮಿಕರು ಗುತ್ತಿಗೆ ಕಾರ್ಮಿಕರಾಗಿದ್ದು ನಿಗದಿತ ಕನಿಷ್ಟ ವೇತನವನ್ನೂ ಪಡೆಯುತ್ತಿಲ್ಲ. ಇವರು ತೀವ್ರ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಕೋವಿದ್ ಸಂದರ್ಭದಲ್ಲಿ ಕೊರೋನಾ ಸೋಂಕಿತರ ಮನೆಯಿಂದ ತರುವ ಕಸವನ್ನು ಇತರ ಸಂಗ್ರಹದಿಂದ ಬೇರ್ಪಡಿಸದೆ ಹೋದರೆ, ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ ಇದನ್ನು ಪಾಲಿಸಲಾಗುತ್ತಿಲ್ಲ. ಸ್ವಚ್ಚತಾ ಕಾರ್ಮಿಕರಿಗೆ ಕನಿಷ್ಟ ಸುರಕ್ಷತೆಯನ್ನೂ ನೀಡಲಾಗುತ್ತಿಲ್ಲ. ಇದರಿಂದಲೇ ಹೆಚ್ಚಿನ ಕಾರ್ಮಿಕರ ಸಾವು ಸಂಭವಿಸುತ್ತಿದೆ.

ಇದು ಕೇವಲ ವರ್ಗ ಪ್ರಶ್ನೆಯೊಂದೇ ಅಲ್ಲ. ಜಾತಿ ಮತ್ತು ಲಿಂಗದ ಸಮಸ್ಯೆಗಳೂ ಇವೆ. ಸರ್ಕಾರ ಈ ಕಾರ್ಮಿಕರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದೆ ಎನ್ನುವುದನ್ನೂ ಗಮನಿಸಬೇಕಿದೆ. ಆಸ್ಪತ್ರೆಗಳಲ್ಲೂ ಸಹ ನರ್ಸ್‍ಗಳನ್ನು ಗುತ್ತಿಗೆ ಮೇಲೆ ನೇಮಿಸಲಾಗುತ್ತಿದೆ. ನಾಲ್ಕನೆ ದರ್ಜೆಯ ಕಾರ್ಮಿಕರಲ್ಲಿ ಬಹುಪಾಲು ಮಹಿಳೆಯರೇ ಇದ್ದಾರೆ. ಎಲ್ಲರೂ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಇದೇ ರೀತಿಯ ಶೋಷಣೆಯನ್ನು ಎದುರಿಸುತ್ತಿದ್ದಾರೆ. ಕೋವಿದ್ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದರೂ ಈ ಕಾರ್ಮಿಕರು ತಮ್ಮ ಕಾರ್ಯಕ್ಷೇತ್ರದಲ್ಲಿ ತೀವ್ರ ಶೋಷಣೆ ಎದುರಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕಿದೆ.
 

ಪ್ರ : ಆಸ್ಪತ್ರೆ ಸೌಕರ್ಯ ಮತ್ತು ಔಷಧಿಗಳ ಪೂರೈಕೆಯಷ್ಟೇ ಆರೋಗ್ಯಕ್ಕೆ ಸಂಬಂಧಿಸಿದೆ ಎನ್ನುವಂತಹ ವಾತಾವರಣದಲ್ಲಿ, ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸುಭದ್ರ ಅಡಿಪಾಯ ನಿರ್ಮಿಸಲು ಏನು ಸಲಹೆ ನೀಡುವಿರಿ ?
ರೊ : ಜೀವನ ನಿರ್ವಹಣೆಗೆ ನೀಡುವ ವೇತನ ಸಮರ್ಪಕವಾಗಿದ್ದರೆ ಸಾರ್ವಜನಿಕ ಆರೋಗ್ಯವೂ ವೃದ್ಧಿಸುತ್ತದೆ. ನಾವಿನ್ನೂ ಕನಿಷ್ಟ ಕೂಲಿಯ ಯುಗದಲ್ಲೇ ಇದ್ದೇವೆ. ಈ 8 ಅಥವಾ 10 ಸಾವಿರ ಕನಿಷ್ಟ ವೇತನ ಜೀವನ ನಿರ್ವಹಣೆಗೆ ಸಮರ್ಪಕವಾಗಿರುವುದಿಲ್ಲ. ಸಂವಿಧಾನದಲ್ಲೂ ಸಹ ಬದುಕಲು ಪೂರಕವಾದ ವೇತನದ ಬಗ್ಗೆ ಪ್ರಸ್ತಾಪಿಸಲಾಗಿದೆ. ನಮ್ಮ ಅಂದಾಜಿನ ಪ್ರಕಾರ ಇಂದಿನ ಪರಿಸ್ಥಿತಿಯಲ್ಲಿ ಕನಿಷ್ಟ ವೇತನ 25 ಸಾವಿರ ರೂಗಳಷ್ಟಾದರೂ ಇರಬೇಕು. ಜೀವನನಿರ್ವಹಣೆಯ ಕೂಲಿ ಇದಕ್ಕಿಂತಲೂ ಹೆಚ್ಚಿರಬೇಕು. ಕಳೆದ ಮೂವತ್ತು ವರ್ಷಗಳಲ್ಲಿ ದುಡಿಮೆಯ ಕ್ಷೇತ್ರವು ಅನೌಪಚಾರಿಕ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಎಲ್ಲವೂ ಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದೆ. ಇದನ್ನು ಸರಿಪಡಿಸುವುದಾದರೆ, ಎಲ್ಲ ವೇತನವೂ ಹೆಚ್ಚಾಗುತ್ತದೆ. ಕಾರ್ಮಿಕರು ಉತ್ತಮ ಉದ್ಯೋಗ ಮತ್ತು ಸುಭದ್ರತೆಯಿಂದ ಇರುತ್ತಾರೆ. ಕಾರ್ಮಿಕರಿಗೆ ತಮ್ಮ ಸೂರು ಒದಗಿಸುವಷ್ಟು ವೇತನವನ್ನು ನೀಡುವುದು ಖಚಿತವಾದರೆ, ಆಹಾರದ ಕೊರತೆ ಇಲ್ಲದಂತೆ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುವುದಾದರೆ ಒಂದು ಹಂತದಲ್ಲಿ ಸಮಾನತೆಯನ್ನು ಸಾಧಿಸುವ ಪ್ರಯತ್ನ ಮಾಡಬಹುದು. ಇದು ಮೂಲ ಅವಶ್ಯಕತೆ. ಅನೇಕರಿಗೆ ಹಲವು ಕಾರಣಗಳಿಂದ ಕೆಲಸ ಮಾಡಲು ಆಗುವುದಿಲ್ಲ. ಪ್ರತಿಯೊಂದು ಕುಟುಂಬಕ್ಕೂ ಕನಿಷ್ಟ ಮಾಸಿಕ ಆದಾಯವನ್ನು ಖಚಿತವಾಗಿ ನಿಗದಿಪಡಿಸಿದರೆ ಎಲ್ಲರೂ ಸಹಮಾನವರಂತೆ ಬದುಕಬಹುದು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡುವುದು ಇಂದಿನ ಸನ್ನಿವೇಶದಲ್ಲಿ ಅನಿವಾರ್ಯ. 2020ರಲ್ಲಿ ಸ್ಪೇನ್ ಹೀಗೆ ಮಾಡಿದೆ. ಸರ್ಕಾರ ಇದಕ್ಕೆ ತಯಾರಿಲ್ಲ ಎನ್ನುವುದಾದರೆ, ವಿಪತ್ತು ನಿರ್ವಹಣಾ ಕಾಯ್ದೆಯ ಅನುಸಾರ ಸರ್ಕಾರ ಅವಶ್ಯ ಸಂಪನ್ಮೂಲಗಳನ್ನು ವಶಕ್ಕೆ ಪಡೆಯಬಹುದು. ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಂದು ಆರೋಗ್ಯ ಸೇವೆಯ ಸಂಸ್ಥೆಯೂ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದೆ ಎಂದು ಸರ್ಕಾರ ಘೋಷಿಸಬಹುದು.
 

ಪ್ರ : ಆರೋಗ್ಯ ಸೇವೆಯ ವಿಕೇಂದ್ರೀಕರಣ ಮತ್ತು ಅದಕ್ಕೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವುದು, ರಾಷ್ಟ್ರೀಕರಣಕ್ಕೆ ಪರ್ಯಾಯ ಎಂದು ಹೇಳುವಿರಾ ?
ರೊ : ಇದು ಸಾಧ್ಯವಾಗಬಹುದು. ಆದರೆ ಎಲ್ಲಿಂದ ಆರಂಭವಾಗುತ್ತದೆ ಎನ್ನುವುದು ಮುಖ್ಯ. ಇವತ್ತಿನ ಆಡಳಿತ ವ್ಯವಸ್ಥೆಯಲ್ಲಿ ಹೀಗೆ ಮಾಡುವುದಾದರೆ ಇದು ಸಾಧ್ಯವಾಗುವುದಿಲ್ಲ. ಕೇರಳದಲ್ಲಿ ಸಾಕಷ್ಟು ವಿಕೇಂದ್ರೀಕರಣ ನಡೆದಿದೆ. ಅಲ್ಲಿನ ಪಂಚಾಯತ್‍ಗಳು ರಬ್ಬರ್ ಸ್ಟಾಂಪ್‍ಗಳಾಗಿ ಉಳಿದಿಲ್ಲ. ಯೋಜನೆಗಳನ್ನು ಸಿದ್ಧಪಡಿಸುವುದರಿಂದ ಹಿಡಿದು ಬಹುತೇಕ ನಿರ್ಧಾರಗಳನ್ನು ಪಂಚಾಯತ್ ಮಟ್ಟದಲ್ಲೇ ಕೈಗೊಳ್ಳಲಾಗುತ್ತದೆ. ವಿಕೇಂದ್ರೀಕರಣ ಅತ್ಯವಶ್ಯ ಇದರೊಟ್ಟಿಗೆ ಹಣಕಾಸು ಸ್ಥಿರತೆಯೂ ಮುಖ್ಯ. ಉತ್ತರ ಕರ್ನಾಟಕದಂತಹ ಬಡತನ ಎದುರಿಸುತ್ತಿರುವ ಪ್ರದೇಶಗಳಲ್ಲಿ ಗ್ರಾಮಗಳಿಗೆ ತಮ್ಮದೇ ಆದ ನಿರ್ಧಾರ ಕೈಗೊಳ್ಳುವಂತೆ ಅಪೇಕ್ಷಿಸಲಾಗುವುದಿಲ್ಲ. ಹಣಕಾಸು ಸ್ಥಿರತೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಪನ್ಮೂಲಗಳು ಸುಲಭವಾಗಿ ಲಭ್ಯವಾಗುವಂತಿರಬೇಕು.

ನಮ್ಮ ಶ್ರೇಣೀಕೃತ ಸಮಾಜದ ಮೂಲ ರಚನೆಯಲ್ಲೇ ಇರುವ ಈ ಅಸಮಾನತೆಗಳನ್ನು ಹೇಗೆ ಸರಿಪಡಿಸುವುದು ಎನ್ನುವುದೇ ಪ್ರಶ್ನೆ. ಇದು ಕೇವಲ ಒಂದು ನಿರ್ಣಯದಿಂದ ಪರಿಹಾರವಾಗುವುದಿಲ್ಲ. ಶಿಕ್ಷಣ ವ್ಯವಸ್ಥೆಯನ್ನೇ ಗಮನಿಸಿ. ಅಲ್ಲಿ ಅಸಮಾನತೆಯೇ ತುಂಬಿದ ಪೈಪೋಟಿಯನ್ನು ನೋಡುತ್ತಿದ್ದೇವೆ. ಸಮಾಜದಲ್ಲಿ ಸಮಾನತೆಯ ಮನೋಭಾವ ಇಲ್ಲದಿದ್ದರೆ ಆರೋಗ್ಯ ವ್ಯವಸ್ಥೆಯಲ್ಲಿ ಮಾತ್ರವೇ ಸಮಾನತೆಯನ್ನು ತರಲು ಸಾಧ್ಯವಿಲ್ಲ.
ನಮ್ಮ ಸಂವಿಧಾನದಲ್ಲಿ ಒಂದು ಆದರ್ಶದ ಕಲ್ಪನೆಯಲ್ಲೇ ಭ್ರಾತೃತ್ವವನ್ನು ಪ್ರಸ್ತಾಪಿಸಲಾಗಿದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಇದನ್ನು ಕಾಣುತ್ತೇವೆ. ಏಕೆಂದರೆ ನಮ್ಮ ಶ್ರೇಣೀಕೃತ ಸಮಾಜದಲ್ಲಿ ಅನುಕಂಪ ಮತ್ತು ಸಹಾನುಭೂತಿಗೆ ಆಸ್ಪದವೇ ಇರುವುದಿಲ್ಲ. ಯಾವುದೇ ಆಡಳಿತ ನೀತಿಯನ್ನು ರೂಪಿಸಬಾರದು ಎಂದು ನಾನು ಹೇಳುವುದಿಲ್ಲ ಆದರೆ ಭ್ರಾತೃತ್ವವನ್ನು ಸಾಧಿಸುವುದು ನಮ್ಮ ಆದ್ಯತೆಯಾಗಬೇಕು. ಇವೆಲ್ಲವೂ ಯುಟೋಪಿಯನ್, ಕಾಲ್ಪನಿಕ ಎನಿಸಬಹುದು. ಅಂಗನವಾಡಿಯೊಂದು ಮುಚ್ಚಿದರೆ, ಮಕ್ಕಳಿಗೆ ತಿನ್ನಲು ಕೂಳು ದೊರೆಯದೆ ಹೋದರೆ ಆ ಮಕ್ಕಳು ತಮ್ಮ ಆಹಾರದ ಹಕ್ಕುಗಳಿಗಾಗಿ ಹೋರಾಡಲಿ ಎಂದು ನಾನು ಹೇಳುವುದಿಲ್ಲ. ಬದಲಾಗಿ ಭ್ರಾತೃತ್ವ, ಸಮಾನತೆ, ಘನತೆಯನ್ನು ಸಂರಕ್ಷಿಸುವಂತಹ ಒಂದು ವ್ಯವಸ್ಥೆಯನ್ನು ನಾವು ರೂಪಿಸಬೇಕು. ಆಗ ಆಡಳಿತ ನೀತಿಯನ್ನು ರೂಪಿಸುವುದು ಸುಲಭವಾಗುತ್ತದೆ.