ಡಿಸೆಂಬರ್ 31, 2023 ರಂದು 60 ವಯಸ್ಸಿನ ಕಾಮ್ರೇಡ್ ಇದ್ಲಿ ರಾಮಪ್ಪ ಅವರು ಹೃದಯಾಘಾತದಿಂದ ತೀರಿಕೊಂಡರು. ಸಿಪಿಐ (ಎಎಂಎಲ್) ಲಿಬರೇಶನ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಾಮಪ್ಪನವರು ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾಗಿ ಹಲವಾರು ವರ್ಷ ಶ್ರಮಿಸಿದರು. ಕೆಲವು ವರ್ಷಗಳು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಸಹ ಕಾರ್ಯನಿರ್ವಹಿಸಿದರು. ಅಯರ್ಲಾ ಮತ್ತು ಎಐಕೆಎಂ ಜನಸಂಘಟನೆಗಳ ಪ್ರಭಾರಿಯಾಗಿದ್ದರು.
ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸಕ್ರಿಯವಾಗಿದ್ದರು. ಗ್ರಾಮೀಣ ಬಡವರು, ದಮನಿತರು ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಅವರು ದಲಿತ ಸಮುದಾಯಕ್ಕೆ ಸೇರಿದವರಾಗದಿದ್ದರೂ, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದರು.
ಮೈಸೂರು ಜಿಲ್ಲೆಯಲ್ಲಿ ವಾಸವಾಗಿದ್ದ ಇತರೆ ಸಂಗಾತಿಗಳೊಂದಿಗೆ ಕಾಮ್ರೇಡ್ ರಾಮಪ್ಪ ಅವರು ಪಕ್ಷದೊಂದಿಗೆ 1997ರಲ್ಲಿ ಸಂಪರ್ಕಕ್ಕೆ ಬಂದರು. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರ ಪರವಾಗಿ ಹಲವಾರು ಸಂಘರ್ಷಗಳನ್ನು ರೂಪಿಸಿದರು. 1998ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಕಾಮ್ರೇಡ್ ಮಾರಿದಂಡಯ್ಯ (ಬುದ್ಧ) ಅವರು ಅಭ್ಯರ್ಥಿಯಾಗಿದ್ದಾಗ ನಮ್ಮ ಪಕ್ಷಕ್ಕೆ 4,716 ಮತಗಳನ್ನು ಗಳಿಸಿದೆವು. ಬಹುತೇಕವಾಗಿ ದಲಿತ ಮತ್ತು ಬಡ ಕೃಷಿ ಕಾರ್ಮಿಕರಿಂದ ಗಳಿಸಿದ ಮತಗಳು ಇವು. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರ ಹೋರಾಟಗಳ ಸಂಕೇತವಾಗಿ ಕೆಂಪು ಶಾಲನ್ನು ಕಾಮ್ರೇಡ್ ರಾಮಪ್ಪ ಅವರು ಪರಿಚಯಿಸಿದರು. ಕಾಲಾಂತರದಲ್ಲಿ ಕೆಂಪು ಶಾಲು ಪ್ರಚಲಿತ ಸಂಕೇತವಾಯಿತು.
ಕೆಲವು ವರ್ಷಗಳ ನಂತರದಲ್ಲಿ ಕಾಮ್ರೇಡ್ ರಾಮಪ್ಪ ಅವರು ಹರಪನಹಳ್ಳಿಗೆ ಹೋದರು. ಇಲ್ಲಿಯೂ ಸಹ ನಮ್ಮ ಪಕ್ಷವನ್ನು ತಮ್ಮ ಕೆಲಸಗಳ ಮೂಲಕ ಸ್ಥಾಪಿಸಿದರು. ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳ ಹಲವಾರು ಹಳ್ಳಿಗಳಲ್ಲಿ (ಈಗ ಅದು ವಿಜಯನಗರ ಜಿಲ್ಲೆಯ ಭಾಗವಾಗಿದ್ದು) ಪಕ್ಷದ ಕೆಲಸಗಳು ಶುರುವಾದವು. ಜನರ ಹಿತಾಸಕ್ತಿಯಲ್ಲಿ ನೂರಾರು ಸಂಘರ್ಷಗಳನ್ನು ನಡೆಸಿದರು. ಈ ಸಮಯದಲ್ಲಿ ಕಾಮ್ರೇಡ್ ರಾಮಪ್ಪ ಅವರು ಕಾಮ್ರೇಡ್ ಭಾರದ್ವಾಜ್ ಅವರನ್ನು ಜೈಲಿನಲ್ಲಿ ಭೇಟಿಯಾದರು. ಈ ಕಾರಣ ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಪಕ್ಷದ ಕೆಲಸಗಳು ವಿಸ್ತಾರಗೊಂಡಿತು. 2004ರ ಲೋಕ ಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಕಾಮ್ರೇಡ್ ರಾಮಪ್ಪ ಅವರು ಸ್ಪರ್ಧಿಸಿ ಪಕ್ಷಕ್ಕೆ 12,413 ಮತಗಳನ್ನು ಗಳಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪಕ್ಷದಿಂದ ಕಾಮ್ರೇಡ್ ಚೌಡಪ್ಪ ಅವರು ಅಭ್ಯರ್ಥಿಯಾಗಿದ್ದಾಗ, ಕಾಮ್ರೇಡ್ ರಾಮಪ್ಪ ಅವರ ನೇತೃತ್ವದಲ್ಲಿ ಪಕ್ಷಕ್ಕೆ 11,540 ಮತಗಳು ಗಳಿಸುವಂತೆ ಚುನವಣಾ ಪ್ರಚಾರ ನಡೆಸಿದ್ದರು.
ಕರ್ನಾಟಕದ ನಕ್ಷೆಯಲ್ಲಿ ಪಕ್ಷವನ್ನು ಸ್ಥಾಪಿಸಲು ಕಾಮ್ರೇಡ್ ರಾಮಪ್ಪ ಅವರ ಪಾತ್ರ ದೊಡ್ಡದು. ಪಕ್ಷವು ಭೂಗತ ದಿನಗಳಿಂದ ಹೊರಬರುತ್ತಿದ್ದಾಗ ರಾಮಪ್ಪ ಅವರ ಕಾರ್ಯಚಟುವಟಿಕೆಗಳು ಮಹತ್ವಪೂರ್ಣವಾದದ್ದು. ವಿಜಯನಗರ ಜಿಲ್ಲೆಯಲ್ಲಿ ಜನಪರ ಹೋರಾಟಗಳ ಕೇಂದ್ರ ಬಿಂದುವಾಗಿ ಕಾಮ್ರೇಡ್ ರಾಮಪ್ಪ ಅವರು ಉದಯಿಸಿದ್ದರು. ಡಿಸೆಂಬರ್ 29 ರಂದು ಅವರು ಸಾರ್ವಜನಿಕ ಜಮೀನನ್ನು ಖಾಸಗಿ ವ್ಯಕ್ತಿಗಳ ವಶದಿಂದ ಬಿಡಿಸಿಕೊಳ್ಳಲು ಹೋರಾಟವನ್ನು ಸಕ್ರಿಯವಾಗಿ ನಡೆಸಿದ್ದರು. ದುಡಿಯುವ ಜನರ ಮತ್ತು ಗ್ರಾಮೀಣ ಬಡವರ ವಿಮುಕ್ತಿಗಾಗಿ ಕಾಮ್ರೇಡ್ ರಾಮಪ್ಪ ಅವರು ನಡೆಸಿದ ಸಂಘರ್ಷಗಳು ಎಲ್ಲಾ ಸಂಗಾತಿಗಳಿಗೆ ಅವರ ಕೊನೆಯುಸಿರಿನ ವರೆಗೂ ಸ್ಫೂರ್ತಿ ನೀಡುವಂತಹದ್ದು.
ಕಾಮ್ರೇಡ್ ಇದ್ಲಿ ರಾಮಪ್ಪ ಅವರಿಗೆ ಲಾಲ್ ಸಲಾಮ್!