ಡಿಸೆಂಬರ್ 18, 2023ರ ಸಂಕಲ್ಪ

 

ಕಾಮ್ರೇಡ್ ವಿನೋದ್ ಮಿಶ್ರಾ ಅವರ 25ನೇ ಸಂಸ್ಮರಣಾ ದಿನದಂದು ಸಿಪಿಐ(ಎಂಎಲ್) ಪಕ್ಷವು ಮಹಾನ್ ಹುತಾತ್ಮರ ಮತ್ತು ಅಗಲಿದ ಮುಖಂಡರ ಕ್ರಾಂತಿಕಾರಿ ಧ್ಯೇಯಕ್ಕಾಗಿ ಪುನರಾರ್ಪಣೆ ಮಾಡಿಕೊಳ್ಳುತ್ತದೆ ಮತ್ತು ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಕಾಮ್ರೇಡ್ ವಿಎಂ ಅವರ ಕ್ರಾಂತಿಕಾರಿ ಪರಂಪರೆಯನ್ನು ಮುಂದುವರೆಸಲು ಸಂಕಲ್ಪ ಮಾಡುತ್ತದೆ.

1970ರ ದಶಕದ ಆರಂಭದಲ್ಲಿ ಪಕ್ಷಕ್ಕೆ ಉಂಟಾಗಿದ್ದ ಹಿನ್ನಡೆಯ ನಂತರ ಕಾಮ್ರೇಡ್ ವಿಎಂ ಪಕ್ಷದ ಮರುಸಂಘಟನೆಯ ನೇತೃತ್ವ ವಹಿಸಿದ್ದರು. ಪಕ್ಷವನ್ನು ಜೀವಂತವಾಗಿಡುವುದಕ್ಕಾಗಿ ಜನಸಾಮಾನ್ಯರೊಂದಿಗೆ ನಿಕಟ ಸಂಬಂಧವನ್ನು ಬೆಸೆಯುವುದು ಮತ್ತು ಅವರ ಹಿತಾಸಕ್ತಿಗಳನ್ನು ಎತ್ತಿಹಿಡಿಯುವುದು ಪರಮೋಚ್ಛ ಕರ್ತವ್ಯವಾಗಿರಬೇಕೆಂದು ತಿಳಿಸಿರುವ ಕಾಮ್ರೇಡ್ ಚಾರು ಮಜುಂದಾರ್ ರವರ ಕೊನೆಯ ಮಾತುಗಳು ಪಕ್ಷದ ಪುನಶ್ಚೇತನ ಮತ್ತು ಮರುಸಂಘಟನೆಯ ಈ ಪ್ರಕ್ರಿಯೆಗೆ ಸ್ಫೂರ್ತಿ ನೀಡಿತು. ಜನರೊಂದಿಗಿನ ಪಕ್ಷದ ಒಡನಾಟ, ಜನರ ಮೇಲಿನ ನಂಬಿಕೆ ಮತ್ತು ಬಹುಮುಖ ಹೋರಾಟಗಳಲ್ಲಿ ಜನರನ್ನು ಧೈರ್ಯದಿಂದ ಒಟ್ಟುಗೂಡಿಸುವಲ್ಲಿ ಪಕ್ಷದ ಪ್ರಮುಖ ಪಾತ್ರವು ಪಕ್ಷದ ಬೆಳವಣಿಗೆಗೆ ಪ್ರಮುಖವಾಗಿದೆ. ಪಕ್ಷದ ಸಾಮೂಹಿಕ ಚಟುವಟಿಕೆಗಳು ಮತ್ತು ಸಾಮೂಹಿಕ ನಾಯಕತ್ವವನ್ನು ಬಲಪಡಿಸಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ನಾವು ನಿರ್ಧರಿಸುತ್ತೇವೆ. 

ಮಿತ್ರಸಂಘಟನೆಗಳನ್ನು ಮತ್ತು ಸಮಾನಮನಸ್ಕರ ವ್ಯಕ್ತಿಗಳನ್ನು ಒಗ್ಗೂಡಿಸಲು, ಅದೇ ಸಂದರ್ಭದಲ್ಲಿ ಪಕ್ಷದ ಸ್ವತಂತ್ರ‍್ಯ ಪಾತ್ರ, ನೇತೃತ್ವ ಮತ್ತು ಗುರುತಿಸಿ ಕೊಳ್ಳುವುದನ್ನು ಬಲಪಡಿಸಲು ಕಾಮ್ರೇಡ್ ವಿಎಂ ಅವರ ನೇತೃತ್ವದಲ್ಲಿ ಪಕ್ಷದಿಂದ ಒಂದು ಪರಿಣಾಮಕಾರಿ ಐಕ್ಯರಂಗ ನೀತಿಯನ್ನು ನಿರ್ಮಿಸಲಾಯಿತು. ಈ ಐಕ್ಯರಂಗ ನೀತಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಅನುಷ್ಠಾನಗೊಳಿಸುತ್ತಾ ಪಕ್ಷದ ಸ್ವತಂತ್ರ ಸಾಮರ್ಥ್ಯ ಮತ್ತು ಪಾತ್ರವನ್ನು ಬಲಗೊಳಿಸಬೇಕಿದೆ.

ಪಕ್ಷದ ಯಶಸ್ಸು, ತನ್ನ ಯೋಜನೆ ಮತ್ತು ನೀತಿಗಳ ರಚನೆ ಮತ್ತು ಹಲವಾರು ರಂಗಗಳಲ್ಲಿ ಪಕ್ಷದ ಸಂಘಟನಾತ್ಮಕ ಸಾಮರ್ಥ್ಯ ಮತ್ತು ಸೈದ್ಧಾಂತಿಕ ಸ್ಪಷ್ಠತೆ ಮೇಲೆ ಅವಲಂಬನೆಯಾಗಿದೆ. ಸೊವಿಯಟ್ ಯೂನಿಯನ್ ಕುಸಿದ ಸಂದರ್ಭದಲ್ಲಿ ಹಲವಾರು ಕಮ್ಯುನಿಸ್ಟ್ ಪಕ್ಷಗಳು ಕೊನೆಗೊಳ್ಳುತ್ತಿರುವಾಗ ಕಾಮ್ರೇಡ್ ವಿಎಂ ಅವರ ನೇತೃತ್ವದಲ್ಲಿ ನಮ್ಮ ಪಕ್ಷವು ಕ್ರಾಂತಿಕಾರಿ ಮಾರ್ಕ್ಸ್ ವಾದದ ಧ್ವಜವನ್ನು ಹಾರಿಸಿತು. ಅದೇ ಸಮಯದಲ್ಲಿ ಪಕ್ಷವು ತನ್ನ ಸಂಘಟನಾತ್ಮಕ ಸ್ವರೂಪ, ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆ ಮತ್ತು ಸಾಮೂಹಿಕ ನಾಯಕತ್ವವನ್ನು ಅಭಿವೃದ್ಧಿಗೊಳಿಸಿತು ಮತ್ತು ಏಕೀಕರಣಗೊಳಿಸಿತು.

2024ರ ನಿರ್ಣಾಯಕ ಲೋಕಸಭಾ ಚುನಾವಣೆಯ ತಯಾರಿ ಮತ್ತು ಫ್ಯಾಸಿಸ್ಟ್ ದಾಳಿಯ ವಿರುದ್ಧ ನಮ್ಮ ಪ್ರತಿರೋಧದ ಸಮಯದಲ್ಲಿ ನಾವು ಮಾರ್ಕ್ಸ್ ವಾದ - ಲೆನಿನ್ ವಾದ ಮತ್ತು ಮಾವೋ ಆಲೋಚನೆಗಳ ಆಧಾರದ ಮೇಲೆ ನಿಲ್ಲಬೇಕು ಮತ್ತು ನಮ್ಮ ಸಂಘಟನಾತ್ಮಕ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣೆಯನ್ನು ಬಲಪಡಿಸಬೇಕು. ಈ ವರ್ಷ ಫೆಬ್ರವರಿ ತಿಂಗಳಲ್ಲಿ ಪಾಟ್ನಾದಲ್ಲಿ ಯಶಸ್ವಿಯಾಗಿ ನಡೆದ ಪಕ್ಷದ 11ನೇ ಮಹಾಧಿವೇಶನದಲ್ಲಿ ನಾವು ನಮ್ಮ ಘಟಕಗಳು ಮತ್ತು ಸ್ಥಳೀಯ ಸಮಿತಿಗಳಿಂದ ನಮ್ಮ ಕೆಲಸದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಂಘಟನೆಯನ್ನು ವ್ಯವಸ್ಥಿತಗೊಳಿಸಲು ಪ್ರತೀಜ್ಞೆ ಮಾಡಿದ್ದೆವು. 

ಕಾರ್ಯಪ್ರವೃತ್ತಿಯಲ್ಲಿ ತೊಡಗಿರುವ ಘಟಕಗಳು ಮತ್ತು ಸ್ಥಳೀಯ ಸಮಿತಿಗಳು ಇಲ್ಲದೆ ಮತ್ತು ತಳಮಟ್ಟದ ಸ್ಥಳೀಯ ಸಂಘಟನೆಯಿಲ್ಲದೆ ನಾವು ವ್ಯವಸ್ಥಿತ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಫ್ಯಾಸಿಸ್ಟ್ ದಾಳಿಯು ಅತಿಹೆಚ್ಚು ಇರುವ ಸಂದರ್ಭದಲ್ಲಿ ತಳಮಟ್ಟದಲ್ಲಿ ಬಲಿಷ್ಠ ಪಕ್ಷದ ಸಂಘಟನೆ ಇರದಿರುವುದು ನಮ್ಮ ಅತಿದೊಡ್ಡ ದೌರ್ಬಲ್ಯವಾಗಿದೆ. ವೈವಿಧ್ಯಮಯ ಮತ್ತು ಕ್ರಿಯಾಶೀಲ ಸಂಘಟನಾತ್ಮಕ ಸ್ವರೂಪವನ್ನು ತಳಮಟ್ಟದಿಂದ ಕಟ್ಟುವುದು ನಮ್ಮ ಪ್ರಮುಖ ಕಾರ್ಯವಾಗಿರಬೇಕು. ಏಕೆಂದರೆ ಇದು ನಮ್ಮ ಪಕ್ಷದ ವಿಶಿಷ್ಠ ಲಕ್ಷಣವಾಗಿದೆ. ಈ ಸಂಕಲ್ಪ ದಿನದಂದು ನಮ್ಮ ಸಂಪೂರ್ಣ ಸಂಘಟನೆಯನ್ನು ಪುನಶ್ಚೇತನಗೊಳಿಸಲು ಮತ್ತು ಐಕ್ಯರಾಗಿ ಯುದ್ಧಕ್ಕೆ ಸಿದ್ಧರಾಗಿರುವ ಶಕ್ತಿಯಾಗಬೇಕೆಂದು ಸಂಕಲ್ಪ ಮಾಡೋಣ.

ಕಾಮ್ರೇಡ್ ವಿಎಂ ಅವರಿಗೆ ಕೆಂಪು ವಂದನೆಗಳು!

ನಮ್ಮ ಹುತಾತ್ಮರಿಗೆ ಮತ್ತು ಅಗಲಿದ ಮುಖಂಡರಿಗೆ ಕೆಂಪು ವಂದನೆಗಳು!

ಸಿಪಿಐ(ಎಂಎಲ್) ಚಿರಾಯುವಾಗಲಿ!

ಫ್ಯಾಸಿಸಂ ಸೋಲಿಸೋಣ, ಜನರ ಹಕ್ಕುಗಳನ್ನು ರಕ್ಷಿಸಿ!

ಹೋರಾಡಲು ಐಕ್ಯರಾಗಿ! ಜಯಗಳಿಸಲು ಹೋರಾಡಿ!