- ಮೈತ್ರೇಯಿ ಕೃಷ್ಣನ್ ಮತ್ತು ರಘುಪತಿ ಸಿದ್ದಯ್ಯ

 

ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರ ಮೇಲೆ ಸಂಘಟಿತ ಮತ್ತು ಆಗಾಗ್ಗೆ ರಾಜ್ಯ ಪ್ರಾಯೋಜಿತ ದಾಳಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಕಾರ್ಮಿಕ ವರ್ಗಕ್ಕೆ ಸೇರಿದ ಮುಸ್ಲಿಮರ ಜೀವನೋಪಾಯದ ಮೇಲಿನ ದಾಳಿಗಳು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿದ್ದಾವೆ.

ಅಸ್ಸಾಂನಲ್ಲಿ ಮುಸ್ಲಿಂ ಸಮುದಾಯದ ಹಲವು ಕುಟುಂಬಗಳು ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಗುಡಿಸಲುಗಳನ್ನು ಕಟ್ಟಿ ವಾಸಿಸುತ್ತಿದ್ದರೆಂದು ಅಪಾದಿಸಿ, ಅಸ್ಸಾಂನ ಬಿಜೆಪಿ ಸರ್ಕಾರ ಅವರನ್ನು ತೆರೆವುಗೊಳಿಸಿತ್ತು.  ಸರ್ಕಾರದ ಈ ಕ್ರಮವನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಅಸ್ಸಾಂ ರಾಜ್ಯದ  ಪೊಲೀಸರು ೨೩/೦೯/೨೦೨೧ ರಂದು ದಾಳಿ ನಡೆಸಿ ಬರ್ಬರವಾಗಿ ಮೂರು ಜನರನ್ನು ಹತ್ಯೆ ಮಾಡಿದ್ದಾರೆ ಮತ್ತು ಈ ದಾಳಿಯಿಂದ  ಸಾಕಷ್ಟು ಮಕ್ಕಳು ಹಾಗೂ ವಯಸ್ಕರಿಗೆ ತೀವ್ರತರವಾದ ಗಾಯಗಳಾಗಿರುತ್ತವೆ. ಈ ಸಂಧರ್ಭದಲ್ಲಿ ಛಾಯಗ್ರಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ತುಳಿದು ಕುಪ್ಪಳಿಸಿ ತನ್ನ ವ್ಯಾಘ್ರ ರೂಪವನ್ನು ಪ್ರದರ್ಶಿಸಿರುವುದು ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೆಂಬ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ಇಂತಹ ಪೈಶಾಚಿಕ ಕೃತ್ಯವೆಸಗಿರುವುದನ್ನು ನೋಡಿ ಇಡೀ ಪ್ರಪಂಚವೇ ತಲ್ಲಣಗೊಂಡಿದೆ.

ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ  ಮಧ್ಯಪ್ರದೇಶದ ಇಂದೋರ್‌ನಲ್ಲಿ ಮುಸ್ಲಿಂ ಬಳೆ ಮಾರಾಟಗಾರ ಶ್ರೀ ತಸ್ಲೀಮ್ ಅಲಿಯವರು ಬಳೆಗಳನ್ನು ಮಾರಾಟ ಮಾಡುವಾಗ ನಕಲಿ ಹೆಸರನ್ನು ಬಳಸಿದ್ದಾರೆ ಎಂದು ಆರೋಪಿಸಿ ನಿರ್ದಯವಾಗಿ ಹಲ್ಲೆ ನಡೆಸಿರುವ  ಘಟನೆಯೊಂದು ವರದಿಯಾಗಿದೆ. ಆ ಸಂದರ್ಭದಲ್ಲಿ ಬಲಪಂಥಿಯರ ಮಾಲೀಕತ್ವದಲ್ಲಿರುವ ಟಿ.ವಿ ಚಾನೆಲ್‌ಗಳು ಈ ಘಟನೆಯ ವೀಡಿಯೋವೊಂದನ್ನು ಪ್ರಸಾರ ಮಾಡಲು ಪ್ರಾರಂಭಿಸಿದವು, ಈ ಘಟನೆಯನ್ನು "ಬ್ಯಾಂಗಲ್ ಜಿಹಾದ್" ಎಂದು ಕರೆದವು, ಮತ್ತು ಬಳೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಮುಸ್ಲಿಂ ಪುರುಷರು ಮಹಿಳೆಯರನ್ನು 'ಸೆಳೆಯಲು' ಪ್ರಯತ್ನಿಸ್ಮತ್ತಿದ್ದಾರೆಂದು ಆರೋಪಿಸಿದವು.   ಆಘಾತಕಾರಿ ಸಂಗತಿಯೆಂದರೆ, ಎಫ್‌ಐಆರ್ ನೋಂದಾಯಿಸಬೇಕೆಂದು ಆತನ ಬೆಂಬಲಕ್ಕೆ ಹೋದ ಹತ್ತು ಮಂದಿಗೆ ಈಗ ಆರು ಜಿಲ್ಲೆಗಳಿಂದ ಗಡಿಪಾರು ಮಾಡಲು ನೋಟಿಸ್ ನೀಡಲಾಗಿದೆ.

ಕಳೆದ ವರ್ಷ ಏಕಾಏಕಿ ಬಂದೇರಗಿದ ಕೋವಿಡ್-೧೯ ಸಮಯದಲ್ಲಿ, ಸಮಾಜ ಘಾತುಕ ಶಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಗಳನ್ನಾಗಿ ಮಾಡಿಕೊಂಡು ಮುಸ್ಲಿಂರ ವಿರುದ್ಧ ನಕಲಿ ವೀಡಿಯೊಗಳು ಪ್ರಸಾರ ಮಾಡಿದರು. ಮುಸ್ಲಿಂ ಪುರುಷರು ಆಹಾರ ಪದಾರ್ಥಗಳ ಮೇಲೆ ಉಗುಳುವುದನ್ನು ತೋರಿಸಿ, ಕೊರೊನಾ ವೈರಸ್ ಹರಡಲು ಕಾರಣವಾಗಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಹಬ್ಬಿಸಿದರು. ಇದರಿಂದಾಗಿ  ಕರ್ನಾಟಕ ಸೇರಿದಂತೆ ದೇಶಾದ್ಯಂತ ಮುಸ್ಲೀಂ ಮಾರಾಟಗಾರರು ಬಹಿಷ್ಕಾರವನ್ನು ಎದುರಿಸಬೇಕಾಯಿತು. ಅಂತಹ ಒಂದು ಸಂದರ್ಭದಲ್ಲಿ, ಬೆಂಗಳೂರಿನ ಮುಸ್ಲಿಂ ದ್ರಾಕ್ಷಿ ಮಾರಾಟಗಾರನೊಬ್ಬ ದಾಕ್ಷಿ ಹಣ್ಣಿನ ಮೇಲೆ ಉಗುಳಿದ್ದಾನೆ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಆತನಿಗೆ ಕಿರುಕುಳ ನೀಡಿದ ವಿಡಿಯೋವೊಂದನ್ನು ಪ್ರಸಾರ ಮಾಡಲಾಗಿತ್ತು. ಕೋಮುವಾದವನ್ನು ಹರಡುವ ನಿಟ್ಟಿನಲ್ಲಿ ಸುದ್ದಿವಾಹಿನಿಗಳು ಇದನ್ನು ಪ್ರಸಾರ ಮಾಡಿದವು. ರಾಷ್ಟ್ರೀಯ ಕಾರ್ಮಿಕರ ಸಂಘಟನೆ ಎಐಸಿಸಿಟಿಯುನೊಂದಿಗೆ ಸಂಯೋಜನೆಗೊಂಡಿರುವ  ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟವು ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಟಿವಿ ಚಾನೆಲ್ ಟಿವಿ ೫ ಮತ್ತು ಟ್ವಿಟರ್ ನಿರ್ವಹಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಇಂತಹ ತಪ್ಪು ಮಾಹಿತಿಗಳಿಂದ ಪ್ರಚೋದನೆಗೊಳಗಾಗಿ, ಕರ್ನಾಟಕದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಮುಸ್ಲಿಂ ಮಾರಾಟಗಾರರನ್ನು ಸ್ಥಳೀಯ ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿ ನೋಟಿಸ್‌ಗಳನ್ನು ಹೊರಡಿಸಲಾಗಿತ್ತು.  ಮಂಗಳೂರಿನ ಸಮೀಪದ ತೊಕ್ಕೊಟ್ಟುವಿನ ಕೃಷ್ಣನಗರದಲ್ಲಿ ನೀಡಲಾಗಿದ್ದ ಒಂದು ನೋಟಿಸ್‌ನಲ್ಲಿ, "ಸಾರ್ವಜನಿಕರ ಹಿತದೃಷ್ಟಿಯಿಂದ, ಕರೋನವೈರಸ್ ಸಂಪೂರ್ಣವಾಗಿ ನಿಯಂತ್ರಣಗೊಳ್ಳುವವರೆಗೆ, ನಮ್ಮ ಪ್ರದೇಶಕ್ಕೆ ಯಾವುದೇ ಮುಸ್ಲಿಂ ಮಾರಾಟಗಾರರಿಗೆ ಪ್ರವೇಶವಿಲ್ಲ." ಎಂಬುವುದಾಗಿ ಬರೆಯಲಾಗಿತ್ತು.  ಅಂತಹವುದೇ ಮೊತ್ತೊಂದು ನಿದರ್ಶನವೆಂದರೇ ರಾಮನಗರ ಜಿಲ್ಲೆಯ ಅಂಕನಹಳ್ಳಿ ಗ್ರಾಮದಲ್ಲಿ, “ಎಲ್ಲರೂ ಆಲಿಸಿ! ಗ್ರಾಮ ಪಂಚಾಯಿತಿ ಈ ಘೋಷಣೆ ಮಾಡುತ್ತಿದೆ, ಯಾವುದೇ ಮುಸ್ಲಿಮರು ಹಳ್ಳಿಗೆ ಬರಬಾರದು, ಮುಸ್ಲಿಮರಿಗಾಗಿ ಯಾರೂ ಕೆಲಸ ಮಾಡಬಾರದು, ನೀವು ಮಾಡಿದರೆ, ೫೦೦ ರಿಂದ ೧೦೦೦ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆಂದು ಗ್ರಾಮ ಪಂಚಾಯಿತಿಯು ಘೋಷಣೆ ಮಾಡಿತ್ತು. ”೦೬.೦೪.೨೦೨೦ ರಂದು ವೈರಲ್ ಆದ ಇನ್ನೊಂದು ವಿಡಿಯೋದಲ್ಲಿ,  ಬಾಗಲಕೋಟೆಯ ಗ್ರಾಮವೊಂದರ ನಿವಾಸಿಗಳು ಕೃಷ್ಣಾ ನದಿ ದಡೆಗೆ ಮುಸ್ಲಿಂ ಸಮುದಾಯದವರು ಮೀನು ಹಿಡಿಯಲು ಹೋಗಿದ್ದಾಗ ಅವಮಾನಿಸಲಾಗಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬಿದರಿ ಗ್ರಾಮದಲ್ಲಿ ಸುಮಾರು ೧೦ ರಿಂದ ೧೫ ನಿವಾಸಿಗಳು ಕೈಗಗಳಲ್ಲಿ ದೊಣ್ಣೆಗಳು ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದುಕೊಂಡು ಮೂವರು ಮುಸ್ಲಿಂ ಪುರುಷರಿಗೆ ಬೈಯುತ್ತಿದ್ದಾರು ಮತ್ತು ಇವರು ರೋಗವನ್ನು ಹರಡುತ್ತಾರೆ, ಇವರನ್ನು ಮುಟ್ಟಬೇಡಿ ಎಂದು ಸಾರ್ವಜನಿಕವಾಗಿ ಬೊಬ್ಬೆ ಹೊಡೆಯುತ್ತಿದ್ದರು.  

ಕಳೆದ ಹಲವಾರು ದಶಕಗಳಿಂದ ಸಂಘಪರಿವಾರವು ಮುಸ್ಲಿಂರನ್ನು ಕೋಮು ಗಲಭೆಯಲ್ಲಿ ಸಿಲುಕಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುವಂತಹ ಒಂದು ಯೋಜನೆಯನ್ನು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡಜಿಲ್ಲೆಯಲ್ಲಿ ರೂಪಿಸಿದ್ದು, ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ತನ್ನ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ.

ಈ ವರ್ಷ ಮಾರ್ಚ್ ೧೦ ರಂದು, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮದಲ್ಲಿ ನಡೆಯುತ್ತಿದ್ದ ದೇವಸ್ಥಾನದ ವಾರ್ಷಿಕೋತ್ಸವದ ಜಾತ್ರೆಗೆ ಐಸ್‌ಕ್ರೀಮ್ ಮಾಡಲು ಶ್ರೀ ಅಬ್ದುಲ್ ಹ್ಯಾರಿಸ್ ರವರು ಹೋಗಿದ್ದರು. ಆ ಸಮಯದಲ್ಲಿ ಜಾತ್ರೆಯ ಕೊನೆಯ ದಿನ ಭಜರಂಗದಳದ ಸದಸ್ಯರು ಈತನ ಮೇಲೆ ದಾಳಿ ಮಾಡಿದರು, ಮುಸ್ಲಿಮರು ಜಾತ್ರೆಯಲ್ಲಿ ಮಾರಾಟ ಮಾಡ ಬಾರದು ಎಂದು ತಾಕೀತು ಮಾಡಿದರು ಮತ್ತು ಆತ ಐಸ್ ಕ್ರೀಮ್ ಮಾರುತ್ತಿದ್ದ ವಾಹನವನ್ನು ಜಖಂಗೊಳಿಸಿ, ಸಂಪಾದಿಸಿದ ಹಣವನ್ನು ದರೋಡೆ ಮಾಡಿದರು.

ಇನ್ನೊಂದು ಘಟನೆಯಲ್ಲಿ, ಈ ವರ್ಷ ಮಾರ್ಚ್ ೩೧ ರಂದು, ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲ್ಲೂಕಿನ ಮೇಲಂತೂ ಬೆಟ್ಟು ಗ್ರಾಮದಲ್ಲಿ ‘ಗೋ ರಕ್ಷಕ’ರ ಹೆಸರಿನಲ್ಲಿ ೨೦ ರಿಂದ ೨೫ ಜನರಿಂದ ಗುಂಪೊಂದು ಚಾಲಕರಾಗಿ ಕೆಲಸ ಮಾಡುತ್ತಿದ್ದ ಶ್ರೀ ಅಬ್ದುಲ್ ರಹೀಮ್ ಮತ್ತು ಮುಹಮ್ಮದ್ ಮುಸ್ತಫಾರವರು ಗೋ ಸಾಗಾಣಿಕೆ ಮಾಡುತ್ತಿದ್ದಾರೆಂದು ಆಪಾದಿಸಿ, ಕಬ್ಬಿಣದ ರಾಡು ಮತ್ತು ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ಮಾಡಿದರು. ಆದರೆ ವಾಸ್ತವವಾಗಿ ಇವರು ಚಲಾಯಿಸುತ್ತಿದ್ದ ವಾಹನದಲ್ಲಿ ಯಾವುದೇ ಗೋವುಗಳು  ಇರಲಿಲ್ಲವಾದರೂ ಸಹ ಗೋವುಗಳನ್ನು ಕಳ್ಳತನ ಮಾಡಲು ಬಂದಿದ್ದಾರೆ ಎಂದು ಹೇಳಿ ಹಲ್ಲೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದರು.

ಸೆಪ್ಟೆಂಬರ್, ೨೦೨೧ರಲ್ಲಿ, ಮುಸ್ಲಿಂ ಉದ್ಯಮಿಗಳ ಮೇಲೂ ದಾಳಿ ಮಾಡುವ ಪ್ರಯತ್ನವನ್ನು ನಾವು ನೋಡಿದ್ದೇವೆ. ಇಡ್ಲಿ ಮತ್ತು ದೋಸಾ ಹಿಟ್ಟನ್ನು ಮಾರಾಟ ಮಾಡುವ ಆಹಾರ ಉತ್ಪನ್ನಗಳ ಕಂಪನಿ ‘ಐಡಿ ಫ್ರೆಶ್’ ತನ್ನ ಉತ್ಪನ್ನಗಳಲ್ಲಿ "ಹಸುವಿನ ಮೂಳೆಗಳನ್ನು ಮಿಶ್ರಣ ಮಾಡುತ್ತಿದೆ” ಎಂಬ ಸಂದೇಶಗಳು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಪ್ರಾರಂಭಿಸಿದವು. ಈ ಕಂಪನಿಯ ಸ್ಥಾಪಕರು ಮುಸ್ಲೀಂ ಸಮುದಾಯಕ್ಕೆ ಸೇರಿದ್ದರೆಂಬ ಕಾರಣಕ್ಕೆ ಈ ಅಪಪ್ರಚಾರವನ್ನು ಮಾಡಲಾಗುತ್ತಿತ್ತು ಮತ್ತು ಮುಸ್ಲೀಂ ಸಮುದಾಯದ ಜೀವನೋಪಾಯವನ್ನು ಕಸಿದುಕೊಳ್ಳುವುದೇ ಈ ಅಪಪ್ರಚಾರದ ಹಿಂದಿನ ಅಜೆಂಡಾ ವಾಗಿತ್ತು.  

೨೦೦೬ರಲ್ಲಿ ಬಿಡುಗಡೆಗೊಂಡ ಸಾಚಾರ್ ಸಮಿತಿ ವರದಿಯು ಭಾರತದಲ್ಲಿ ಮುಸ್ಲಿಮರ ಆರ್ಥಿಕತೆಯು ಅಳಿವಿನ ಅಂಚಿನಲ್ಲಿರುವುದನ್ನು ತಿಳಿಸಿದೆ. ಅನೌಪಚಾರಿಕ ವಲಯದ ಉದ್ಯೋಗದಲ್ಲಿ ಮುಸ್ಲೀಂರ ಏಕಾಗ್ರತೆ ಹೆಚ್ಚಿರುವುದರಿಂದ ಕೆಲಸದ ಪರಿಸ್ಥಿತಿಗಳಲ್ಲಿ ಹೆಚ್ಚು ದುರ್ಬಲರಾಗುತ್ತಿದ್ದಾರೆ.  ರಾಷ್ಟ್ರೀಯ ಮಾದರಿ ಸಮೀಕ್ಷೆ ೨೦೦೯ -೧೦ ರ ಅಂಕಿಅAಶಗಳ ಪ್ರಕಾರ, ಹೆಚ್ಚಿನ ಮುಸ್ಲಿಮರು ಕಡಿಮೆ ಸಂಬಳ, ನಿರಂತರವಾಗಿಲ್ಲದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಯಮಿತವಾಗಿ ಕೂಲಿ ಮತ್ತು ವೇತನ ನೀಡುವ ಉದ್ಯೋಗಗಳನ್ನು ಹೊಂದಿರುವವರಲ್ಲಿ ಮುಸ್ಲಿಮರು ಕೊನೆಯ ಸ್ಥಾನದಲ್ಲಿದ್ದಾರೆ. ದೇಶದಲ್ಲಿ ಇತರೆ ಸಮುದಾಯಗಳೊಂದಿಗೆ ಮುಸ್ಲಿಮ ಸಮುದಾಯದ ತುಲನಾತ್ಮಕ ಹೊಲಿಕೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಈ ದೇಶದ ನಿಯಮಗಳು “ ವೈವಿಧ್ಯತೆಯನ್ನು ಗೌರವಿಸುವಾಗ, ಈ ಸಮುದಾಯದ ಅಂತರ್ಗತ ಅಭಿವೃದ್ಧಿ ಮತ್ತು ಮುಖ್ಯವಾಹಿನಿಗೆ ತರುವುದಕ್ಕೆ ಹೆಚ್ಚು ಗಮನಹರಿಸಬೇಕು" ಎಂದು ಸಾಚಾರ್ ಸಮಿತಿಯು ಶಿಫಾರಸು ಮಾಡಿದೆ. ಆದರೆ ಈ ಶಿಫಾರಸ್ಸಿಗೆ ವಿರುದ್ಧವಾದ ನಡೆಯನ್ನು ಮತ್ತು ಮುಸ್ಲಿಂರು ತಮ್ಮ ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಅವರ ವಿರುದ್ಧ ನೇರ ದಾಳಿ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಜರ್ಮನಿಯಲ್ಲಿ ನಾಜಿಗಳು ಅಧಿಕಾರಕ್ಕೆ ಬಂದ ಕೆಲವು ತಿಂಗಳುಗಳ ನಂತರ,  ರಾಷ್ಟçವ್ಯಾಪಿ ಮೊದಲಿಗೆ ಯಹೂದಿಗಳ ವಿರುದ್ಧ  ೧.೪.೧೯೩೩ ರಂದು ಯೋಜಿತ ಕ್ರಮವೊಂದನ್ನು ಕೈಗೊಂಡರು ಅದು ಯಹೂದಿ ವ್ಯವಹಾರಗಳು ಮತ್ತು ವೃತ್ತಿಪರರ ಬಹಿಷ್ಕಾರವಾಗಿತ್ತು.  ಬಹಿಷ್ಕಾರ ಘೋಷಿಸಿದ ದಿನದಂದು, "ಯಹೂದಿಗಳಿಂದ ಖರೀದಿಸಬೇಡಿ" ಮತ್ತು "ಯಹೂದಿಗಳು ನಮ್ಮ ದುರದೃಷ್ಟ" ಎಂದು ಬರೆದಿರುವ ಫಲಕಗಳನ್ನು ಹಾಕಲಾಗಿತ್ತು.  ಜರ್ಮನಿಯುದ್ದಕ್ಕೂ ಯಹೂದಿಗಳು ಮತ್ತು ಯಹೂದಿಗಳ ಆಸ್ತಿಯ ಮೇಲೆ ದಾಳಿ ಮಾಡಲಾಯಿತು. ಯಹೂದಿಗಳ ವಿರುದ್ಧ ರಾಷ್ಟçವ್ಯಾಪಿ ಆಂದೋಲನದಲ್ಲಿ ಈ ಘಟನೆಯು ಪ್ರಾರಂಭ ಎಂಬುವುದು ಸಾಬೀತಾಗಿದೆ.

ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಒಂದು ಪ್ರಮುಖ ಕಾರಣವೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಯಲ್ಲಿ ಅಥವಾ ಅದರ ಅಡಿಯಲ್ಲಿ ಕೆಲಸ ಮಾಡುವ ಹಿಂದೂ-ರಾಷ್ಟ್ರೀಯವಾದಿ ಪಕ್ಷಗಳ ಬೆಳವಣಿಗೆ. ಈಗಿನ ಭಾರತೀಯ ಜನತಾ ಪಾರ್ಟಿ-ಸರ್ಕಾರವು ಆರ್ ಎಸ್ ಎಸ್ ನ ಅಂಗಸಂಸ್ಥೆಯಾಗಿದೆ ಮತ್ತು ವಿನಾಯಕ್ ದಾಮೋದರ್ ಸಾವರ್ಕರ್ ಮತ್ತು ಎಂ ಎಸ್ ಗೋಲ್ವಾಲ್ಕರ್ ಅವರ ಹಿಂದುತ್ವ-ಸಿದ್ಧಾಂತಕ್ಕೆ ಬದ್ಧವಾಗಿದೆ. ಆರ್‌ಎಸ್‌ಎಸ್ ಮತ್ತು ಇತರ ಹಿಂದೂ-ರಾಷ್ಟ್ರೀಯವಾದಿ ಸಂಘಟನೆಗಳ ವಿಚಾರವಾದಿಗಳೆಂದು ಪರಿಗಣಿಸಲ್ಪಟ್ಟ ಸಾವರ್ಕರ್ ಮತ್ತು ಗೋಲ್ವಾಲ್ಕರ್ ಕ್ರಮವಾಗಿ ಹಿಟ್ಲರ್ ಮತ್ತು ಮುಸೊಲಿನಿ ಮತ್ತು ಅವರ ನಾಜಿಸಂ ಮತ್ತು ಫ್ಯಾಸಿಸಂ ನಿಯಮಗಳ ಮುಕ್ತ-ಅಭಿಮಾನಿಗಳಾಗಿದ್ದರು ಎಂಬುವುದು ತೆರೆದಿಟ್ಟ ಸತ್ಯ ಮತ್ತು  ಗೋಲ್ವಾಲ್ಕರ್ ಅವರ ಬರಹಗಳಲ್ಲಿ ಇದು ಸ್ಪಷ್ಟವಾಗಿದೆ. ಹಿಟ್ಲರನ ನಾಜಿ-ಜರ್ಮನಿಯ ಬಗ್ಗೆ ಬರೆಯುತ್ತಾ, ಗೋಲ್ವಾಲ್ಕರ್ ತಿಳಿಸಿರುವುದೇನೆಂದರೆ: "ಜನಾಂಗದ ಹೆಮ್ಮೆ ತನ್ನ ಅತ್ಯುನ್ನತ ಮಟ್ಟದಲ್ಲಿ ಇಲ್ಲಿ ವ್ಯಕ್ತವಾಗಿದೆ. ಜರ್ಮನಿಯು ಜನಾಂಗಗಳು ಮತ್ತು ಸಂಸ್ಕೃತಿಗಳು ಎಷ್ಟು ಭಿನ್ನವಾಗಿದ್ದು, ಅವುಗಳ ಉಗಮದಲ್ಲೆ ವ್ಯತ್ಯಾಸಗಳನ್ನು ಹೊಂದಿರುವುದರಿಂದ, ಅದನ್ನು ಒಂದುಗೂಡಿಸಿ ಒಟ್ಟಾರೆಯಾಗಿ ಒಟ್ಟುಗೂಡಿಸುವುದು ಎಷ್ಟು ಅಸಾಧ್ಯವೆಂದು ತೋರಿಸಿದೆ. ಇದು  ಹಿಂದೂಸ್ಥಾನಕ್ಕೆ  ಕಲಿಯಲು ಉತ್ತಮ ಪಾಠವಾಗಿದ್ದು ಈ ಮೂಲಕ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.’’ ಈ ನಿಟ್ಟಿನಲ್ಲಿ ಮಾಜಿ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿಯವರು ಕೈಗೊಂಡ  ರಾಮ ರಥಯಾತ್ರೆಯ ಮೂಲಕ ಹಿಂದುತ್ವ-ಸಿದ್ಧಾAತವನ್ನು ಭಾರತೀಯ ರಾಜಕೀಯದ ಮುಖ್ಯವಾಹಿನಿಗೆ ತೆಗೆದುಕೊಂಡು ಬಂದ ನಂತರ,  ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರ ಮೇಲೆ ಹಿಂಸಾತ್ಮಕ ದಾಳಿಗಳು ಹೆಚ್ಚಾಗಿದೆ. ಆದ್ದರಿಂದ ಇವು ರಾಜಕೀಯ ಪ್ರೇರಿತ ದಾಳಿಗಳೇ ವಿನಃ ಮತ್ತೇನು ಅಲ್ಲ ಎಂಬುದನ್ನು ನಿಖರವಾಗಿ ಹೇಳಬಹುದು.

ಜೆನೊಸೈಡ್ ವಾಚ್‌ನ ಅಧ್ಯಕ್ಷ ಗ್ರೆಗೊರಿ ಎಚ್ ಸ್ಟಾಂಟನ್ ಜನಾಂಗೀಯ ಹತ್ಯೆಯ ೧೦ ಹಂತಗಳನ್ನು ಅಭಿವೃದ್ಧಿಪಡಿಸಿದ್ದು ಇದು ನರಮೇಧಕ್ಕೆ ಕಾರಣವಾಗುವ ವಿವಿಧ ಹಂತಗಳನ್ನು ವಿವರಿಸುತ್ತದೆ. ನರಮೇಧದ ಬಗ್ಗೆ ಅರಿತುಕೊಂಡಾಗ, ಅದು ಕೇವಲ ಇದ್ದಕ್ಕಿದ್ದಾಗೆ ನಡೆಯುವಂತದಲ್ಲ ಎಂಬುದು ತಿಳಿದು ಬರುತ್ತದೆ. ನರಮೇಧ ನಡೆಯುವ ಪೂರ್ವದಲ್ಲೇ ವಿವಿಧ ಹಂತಗಳಲ್ಲಿ ಸನ್ನಿವೇಶ ಮತ್ತು ಸಂಧರ್ಭಗಳನ್ನು ಸೃಷ್ಠಿಸಿ ನರಮೇಧ ನಡೆಯುವಂತ ವಾತವರಣವನ್ನು ನಿರ್ಮಿಸಲಾಗಿರುತ್ತದೆ. ಅವರು ತಾರತಮ್ಯ ಮತ್ತು ಅಮಾನವೀಯತೆಯನ್ನು ನರಮೇಧದ ಮೂರು ಮತ್ತು ನಾಲ್ಕನೇಯ ಹಂತಗಳೆಂದು ಹೇಳುತ್ತಾರೆ. ಗ್ರೆಗೊರಿ ಎಚ್ ಸ್ಟಾಂಟನ್ ಭಾರತದ ಬಗ್ಗೆ ಮಾತನಾಡುವಾಗ, ವಾಸ್ತವವಾಗಿ ಭಾರತದಲ್ಲಿ ನರಮೇಧದ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹೀಗಾಗಿ ಬಿ.ಜೆ.ಪಿ-ಆರ್.ಎಸ್.ಎಸ್‌ನ ರಾಜಕೀಯ ಪ್ರೇರಿತ ಈ ದಾಳಿಗಳನ್ನು ಎದುರಿಸಲು ಮತ್ತು ಭಾರತದ ಸಂವಿಧಾನವನ್ನು ರಕ್ಷಿಸಲು ನಾವು ಸನ್ನದ್ಧರಾಗಿ ಹೋರಾಟ ಮಾಡುವುದನ್ನು ಹೊರತು ಪಡಿಸಿದರೆ, ಮತ್ತೇವೂದೇ ಆಯುಧ ನಮ್ಮ ಕೈಯಲ್ಲಿಲ್ಲ ಎಂಬುವುದನ್ನು ಅರಿತು ಎಲ್ಲಾ ಸಾಮಾಜಿಕ ಸಂಘಟನೆಗಳು ಒಗ್ಗಟ್ಟಾಗಿ ಸೇರುವುದು ಅತ್ಯವಶ್ಯಕವಾಗಿದೆ.