ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿರುವ ಕರಾವಳಿ ಕರ್ನಾಟಕದಲ್ಲಿ ಅವರೇ ಸೃಷ್ಠಿಸಿರುವ ಹಿಜಾಬ್ ವಿವಾದವನ್ನು ಕುರಿತು ಬರೆಯುವ ಮೊದಲು, ಮಹಿಳೆಯರು ಶಿಕ್ಷಣ ಪಡೆದುಕೊಳ್ಳುವಲ್ಲಿ ಕ್ರಾಂತಿಕಾರಿ ಹೋರಾಟ ನಡೆದ ಬಗ್ಗೆ ಚುಟುಕು ಇತಿಹಾಸವನ್ನು ಮೆಲಕು ಹಾಕಲು ಬಯಸುತ್ತೇನೆ. ದಲಿತರು, ಶೂದ್ರರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವೆಂದು ಪರಿಗಣಿಸಿದ್ದ ಇತಿಹಾಸವಿರುವ ಈ ಸಮಾಜದಲ್ಲಿ, ಮೊದಲಿಗೆ, ಅವರೆಲ್ಲರಿಗೂ ಶಿಕ್ಷಣ ದೊರಕಬೇಕೆಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ರವರು ಮಾಡಿದ ಕ್ರಾಂತಿಕಾರಿ ಹೋರಾಟದ ಫಲ ಅವರು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 1848 ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯನ್ನು ಸ್ಥಾಪಿಸಲು ಫಾತಿಮ್ ಶೇಖ್ ರವರು ತಮ್ಮ ಮನೆಯನ್ನೇ ನೀಡಿದ್ದರು ಎಂಬುವುದು ಅವಿಸ್ಮರಣೀಯ. ಇದು ಅವರ ಉದಾತ್ತ ಕಾರ್ಯಮಾತ್ರವಲ್ಲ, ಶೌರ್ಯ ಮತ್ತು ಅಪಾರ ಧೈರ್ಯದ ಕ್ರಿಯೆಯಾಗಿದೆ. ಅಂದಿನ ಕಾಲದಲ್ಲಿ ಮನುವಾದ ಮತ್ತು ಬ್ರಾಹ್ಮಣವಾದವನ್ನು ಪ್ರತಿಪಾದಿಸುತ್ತಿದ್ದವರುತುಳಿತಕ್ಕೊಳಪಟ್ಟ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವವರನ್ನು ದಂಡಿಸುತ್ತಿದ್ದ ಸನ್ನಿವೇಶದಲ್ಲೂ, ಫಾತಿಮಾ ಶೇಖ್ ಮನೆ-ಮನೆಗೆ ತೆರಳಿ ಕುಟುಂಬಗಳನ್ನು ಮತ್ತು ವಿಶೇಷವಾಗಿ ಮುಸ್ಲಿಂ ಸಮುದಾಯದ ಪೋಷಕರನ್ನು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಮನವೊಲಿಸಿದರು. ಈ ಕಾರಣದಿಂದ ತುಳಿತಕ್ಕೊಳಪಟ್ಟ ಸಮುದಾಯದವರಿಗೆ ಶಿಕ್ಷಣ ದೊರಕಿತ್ತು. ಆ ಸಮಯದಲ್ಲಿ ಮೇಲ್ಜಾತಿ ಪುರುಷರು ಮತ್ತು ಮಹಿಳೆಯರು ಅವರ ಮೇಲೆ ಮಣ್ಣು ಮತ್ತು ಸಗಣಿ ಎಸೆದರು. ಫಾತಿಮಾರವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಿಂದ ತೀವ್ರ ದ್ವೇಷ ಮತ್ತು ವಿರೋಧವನ್ನು ಅನುಭವಿಸಬೇಕಾಯಿತು. ಆದರೂ ಹಠ ಬಿಡದ ಫಾತಿಮಾ ಶೇಖ್‍ರವರು ಶಿಕ್ಷಣವನ್ನು ಮುಂದುವರೆಸಿದರು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಪರಿಣಾಮವಾಗಿ, ವಿವಿಧ ಜಾತಿಗಳು ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದ ಅನೇಕ ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯಲಾರಂಭಿಸಿದರು. ಅದೊಂದು ಸಾಧನೆಯಾಗಿತ್ತು; ಅಸಂಖ್ಯಾತ ಹುಡುಗಿಯರನ್ನು ಇಂದು ಗೌರವಾನ್ವಿತ ಮತ್ತು ಗೌರವಯುತ ಜೀವನವನ್ನು ನಡೆಸುವ ಸಾಲಿಗೆ ತಂದ ಸಾಧನೆ ಫುಲೆ ದಂಪತಿ ಮತ್ತು ಫಾತಿಮ್ ಶೇಖ್‍ಗೆ ಸಲ್ಲುತ್ತದೆ.  ಆದರೆ ಮತ್ತೆ ಅದೇ ಗತಕಾಲಕ್ಕೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳನ್ನು ನೂಕುವ ಪ್ರಯತ್ನವನ್ನು ಪ್ಯಾಸಿಸ್ಟ್ ಧೋರಣೆಯ ಬಿಜೆಪಿ ಸರ್ಕಾರ ಮಾಡುತ್ತಿರುವುದು ದುರುದುಷ್ಕರ ಸಂಗತಿ. ಆ ನಿಟ್ಟಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು  ಹಿಜಾಬ್ ಧರಿಸುವುದು ಕಾಲೇಜುಗಳ ಸಮವಸ್ತ್ರ ನೀತಿಯನ್ನು ಉಲ್ಲಂಘಿಸುತ್ತದೆ ಎಂಬ ಮೊಂಡವಾದನ್ನು ಮುಂದಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಲಾಗುತ್ತಿದೆ. ಹಿಂದೂ ವಿದ್ಯಾರ್ಥಿನಿಯರು ತಮ್ಮ ಸಮವಸ್ತ್ರದೊಂದಿಗೆ ತಮ್ಮ ಧಾರ್ಮಿಕ ನಂಬಿಕೆಗಳಾದ ಬಿಂದಿಗಳು, ತಾಯ್ತಗಳು, ತಿಲಕ, ಸಿಂಧೂರ ಮತ್ತು ತಾಳಿಗಳನ್ನು (ಮದುವೆಯಾಗಿದ್ದರೆ) ಧರಿಸುತ್ತಾರೆ; ಹಿಂದೂ ಬ್ರಾಹ್ಮಣ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ "ಜನಿವಾರ"ವನ್ನು ಧರಿಸುತ್ತಾರೆ; ಸಿಖ್ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ ಪೇಟವನ್ನು ಧರಿಸುತ್ತಾರೆ. ಇದ್ಯಾವುದಕ್ಕೂ ಅಡ್ಡಿ ಪಡಿಸದ ಸಮವಸ್ತ್ರ ನಿಯಮವು ಹಿಜಾಬ್‍ಗೆ ಮಾತ್ರ ನಿಷೇಧ ಹೇರುತ್ತಿದೆ ಎಂದರೇ ಕೋಮುವಾದವಲ್ಲದೆ ಮತ್ತೇನು ಅಲ್ಲ. ಈ ಮೂಲಕ ಸರ್ಕಾರ ವಿದ್ಯಾರ್ಥಿಗಳ ವೈಯುಕ್ತಿಕ ಮತ್ತು ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಕೋಮುವಾದದ ಭಾಗವಾಗಿ ಬಲವಂತವಾಗಿ ಹಿಜಾಬ್ ತೆಗಿಸುವ ಸರ್ಕಾರದ ಕ್ರಮವನ್ನು ನಾವು ಖಂಡಿಸಬೇಕಾಗಿದೆ ಹಾಗೇಯೇ ಕಾಲೇಜುಗಳು "ಅಸಭ್ಯ" ಎಂದು ಭಾವಿಸುವ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ  ಮಹಿಳೆಯರನ್ನು ಶಿಕ್ಷಿಸುವ ಪಿತೃಪ್ರಧಾನ ವ್ಯವಸ್ಥೆಯನ್ನು ಸಹ ನಾವು ಪ್ರತಿಭಟಿಸಬೇಕು.  
ಹಿಜಾಬ್‍ಗಳನ್ನು ತೆಗೆಯದಿದ್ದರೆ, ಶಿಕ್ಷಣ ಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತೀರೆಂಬ ಭಯವನ್ನುಂಟುಮಾಡುವುದು ಸಹ ಒತ್ತಾಯವಾಗಿದೆ. ಇಸ್ಲಾಮ್‍ಗೆ ಹಿಜಾಬ್ ಅಗತ್ಯವೇ ಅಥವಾ ಇಲ್ಲವೇ ಎಂಬುದು ಅಪ್ರಸ್ತುತವಾಗಿದೆ. ಸಾಮಾಜಿದಲ್ಲಿರುವ ವಾಸ್ತವ ಸಂಗತಿಯೆಂದರೆ ಮುಸ್ಲಿಂ ಮಹಿಳೆಯರು ಹಿಜಾಬ್‍ಗಳನ್ನು ಧರಿಸುತ್ತಾರೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಜಾಬ್ ಮೇಲೆ ನಿಷೇಧ ಹೇರುವುದು ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕಾದ ಖಾಸಗಿತನ ಮತ್ತು ದೈಹಿಕ ಸಮಗ್ರತೆ, ಮುಸ್ಲಿಂ ಮಹಿಳೆಯರ ಶಿಕ್ಷಣ ಮತ್ತು ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು ಉಲ್ಲಂಘಿಸುತ್ತದೆ.  "ಪಿತೃಪ್ರಧಾನ ಹಿಜಾಬ್ ವ್ಯವಸ್ಥೆ" ಗೆ ಸ್ತ್ರೀ ವಿರೋಧಿ ಎಂಬ ರೂಪವನ್ನು ಕೊಟ್ಟು ಕೋಮು ತಾರತಮ್ಯ ಮತ್ತು ಬಹಿಷ್ಕಾರವನ್ನು ಆಚರಿಸಲಾಗುತ್ತಿದೆ. ಅದೇ ಸಂಘಿ ಶಕ್ತಿಗಳು ಆನ್ ಲೈನ್‍ನಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜು ಮಾಡುತ್ತಿದ್ದಾಗ  ಸಂತೋಷದಿಂದ ಭಾಗವಹಿಸುತ್ತಾರೆ ಮತ್ತು ಹಿಂದೂ-ಪರಮಾಧಿಕಾರ ಹೊಂದಿರುವ ಸಮಾವೇಶಗಳಲ್ಲಿ ಭಾಷಣಕಾರರು ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಲೈಂಗಿಕ ಗುಲಾಮಗಿರಿಗೆ  ಮತ್ತು ಅತ್ಯಾಚಾರಕ್ಕೆ ಕರೆ ನೀಡುವಾಗ ಚಪ್ಪಾಳೆ ತಟ್ಟಿ  ಹುರಿದುಂಬಿಸುತ್ತಾರೆ.  ಸಾಂವಿಧಾನಿಕ ನೈತಿಕತೆಯ ತತ್ವಗಳು ಸ್ಪಷ್ಟವಾಗಿದ್ದಾವೆ: ಧರ್ಮವನ್ನು ಆಚರಣೆ ಮಾಡಲು ಸಾಂವಿಧಾನಿಕ ಸ್ವಾತಂತ್ರ್ಯವಿದೆ ಎಂದರೆ ವ್ಯಕ್ತಿಗಳು ತಮ್ಮ ಸ್ವಂತ ಧರ್ಮವನ್ನು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವ್ಯಾಖ್ಯಾನಿಸಲು ಮತ್ತು ಆಚರಣೆ ಮಾಡಲು ಸ್ವಾತಂತ್ರ್ಯವಿದೆ ಎಂದರ್ಥ.  ಸಂಘಪರಿವಾರದ ಗುಂಪುಗಳು ಎಲ್ಲಾ ರೀತಿಯ ಕೋಮು ದ್ವೇಷದ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದಲ್ಲಿ ಈ ಹಿಜಾಬ್‍ಗಳ ನಿಷೇಧವು ನಡೆಯುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ –  ಮುಸ್ಲಿಮರನ್ನು ಹಿಂದೂಗಳಿಂದ ಪ್ರತ್ಯೇಕಿಸಲು ಪ್ರಯತ್ನಿಸಲಾಗುತ್ತಿದೆ, ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡುವ ಹಿಂದೂ ವಿದ್ಯಾರ್ಥಿನಿಯರನ್ನು ಬೆದರಿಸುವುದು; ಕಾಲೇಜು ಬಸ್ಸಿನಿಂದ ಹಿಂದೂ-ಮುಸ್ಲಿಂ ಹುಡುಗ ಹುಡುಗಿಯರನ್ನು ಬಲವಂತವಾಗಿ ಇಳಿಸುವುದು; ಪರಸ್ಪರ ಸ್ನೇಹಿತರಾಗಿರುವ ಹಿಂದೂ-ಮುಸಲ್ಮಾನ ಹುಡುಗ-ಹುಡುಗಿಯರನ್ನು ಹೊಡೆಯುವುದು ಸೇರಿದಂತೆ ಇತ್ಯಾದಿ ಅಪರಾಧಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದ್ದಾವೆ.  ಹಿಜಾಬ್ ಧರಿಸಿರುವ ಮಹಿಳೆಯರನ್ನು ಮುಸ್ಲಿಂನವರು ನಡೆಸು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುವಂತೆ ಒತ್ತಡ ಹೇರುತ್ತಿರುವ ಕ್ರಮವು ಮುಸ್ಲಿಮರನ್ನು ಪ್ರತ್ಯೇಕಿಸುವ ದೊಡ್ಡ ಹುನ್ನಾರವನ್ನು ಹೊಂದಿದೆ. ಅಲ್ಲದೆ ಈ ಕ್ರಮದಿಂದ ಮುಸ್ಲಿಮರನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕುವುದು ಹಾಗೂ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಂವಹನದ ವ್ಯಾಪ್ತಿಯನ್ನು ಕಡಿಮೆ ಮಾಡುವುದರ ಮೂಲಕ ಹಿಂದೂಗಳ ಮೂಲಭೂತೀಕರಣವನ್ನು ಸಕ್ರಿಯಗೊಳಿಸುವುದಾಗಿರುತ್ತದೆ.  ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ದಲಿತ-ದಮನಿತ ಸಮುದಾಯಗಳ ಬಡ ಯುವಕ-ಯವತಿಯರನ್ನು ಮೂಲಭೂತವಾದಿಗಳನ್ನಾಗಿಸಲು ಮನುವಾದ ಮತ್ತು ಬ್ರಾಹ್ಮಣವಾದದ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ನಾವು ಗುರುತಿಸಬೇಕು. ಸಂಘಪರಿವಾರವು, ಚಾರಿತ್ರಿಕವಾಗಿ ಶಿಕ್ಷಣದ ನಿರಾಕರಣೆಗೊಳಪಟ್ಟಿದ್ದ ಈ ಯುವಜನರಿಗೆ ಹಿಂಧುತ್ವದ ಅಮಲು ತುಂಬಿ ಮೂಲಭೂತವಾದಿಗಳನ್ನಾಗಿಸುತ್ತಿದೆ ಮತ್ತು  ತಮ್ಮ ಕೋಮುವಾದಿ ವಿಷಬೀಜ ಬಿತ್ತಲು ಇವರನ್ನು ಬಳಸಿಕೊಳ್ಳುತ್ತಿದೆ.  ಕರಾವಳಿ ಭಾಗದಲ್ಲಿ ಉದ್ಭವವಾದ ಹಿಜಾಬ್ ವಿವಾದ ಇಂದು ರಾಜ್ಯಾದಾದ್ಯಂತ ಹಬ್ಬಿದೆ. ಆರ್.ಎಸ್.ಎಸ್ ನವರ  ಈ ಕುತಂತ್ರವು ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸೇರಿದ ಬಡ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತಿರುವುದು ಮಾತ್ರವಲ್ಲದೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಉಳಿಸಿಕೊಳ್ಳುವ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ.  ಕೋವಿಡ್‍ನಿಂದಾಗಿ ಕಳೆದ 2 ವರ್ಷಗಳಿಂದ ಮಕ್ಕಳು ಶಿಕ್ಷಣವಿಲ್ಲದೆ ಸಂಕಷ್ಟದಲ್ಲಿರುವಾಗ, ತಮ್ಮ ಅಮುಲು ತುಂಬಿರುವ ಕಾರ್ಯಸೂಚಿಗಳ ಜಾರಿಗೆ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ದಲಿತ ಮತ್ತು ಇತರೆ ಶೋಷಿತ ಸಮುದಾಯಗಳ ಬಡ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ! ಧಿಕ್ಕಾರ! ಹಿಜಾಬ್ ಧರಿಸಿ ಬರುವ ಹೆಣ್ಣು ಮಕ್ಕಳ ವಿರುದ್ಧ ದಲಿತ ಮತ್ತು ಶೋಷಿತ ಸಮುದಾಯದ ಬಡ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಚೂ ಬಿಡುವ ಬಿಜೆಪಿ ಕುತಂತ್ರ ತಿಳಿಯದೆ ತಮ್ಮ ವಿದ್ಯಾಭ್ಯಾಸವನ್ನು ಹಾಳುಮಾಡಿಕೊಳ್ಳುತ್ತಿರುವ ದಲಿತ ಮತ್ತು ಶೋಷಿತ ಬಡ ಮಕ್ಕಳು ಎಚ್ಚೇತ್ತು ಕೊಳ್ಳಬೇಕಾಗಿದೆ. ಅಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಜಾಬ್‍ಗಿಂತ ಹಿಜಾಬ್ ಮುಖ್ಯವಾಗಿದೆ ಎಂದು ಹೇಳುವ ಬಿಜೆಪಿ ನಾಯಕರುಗಳು ತಮ್ಮ ಆಡಳಿತದ ಅವಧಿಯಲ್ಲಿ ಜಾಬ್ ಸೃಷ್ಠಿ ಮಾಡುವಲ್ಲಿ ವಿಫಲವಾಗಿರುವುದನ್ನು ಮರೆಮಾಚಲೆಂದೇ ಹಿಜಾಬ್ ವಿವಾದವನ್ನು ಸೃಷ್ಠಿ ಮಾಡಿದ್ದಾರೆಂಬವುದು ಕೇಸರಿ ಶಾಲು ಹಾಕುವ ದಲಿತ ಮತ್ತು ಶೋಷಿತ ಬಡ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕಾಗಿದೆ.

ಸರ್ಕಾರೀ ಶಿಕ್ಷಣ ವ್ಯವಸ್ಥೆಯು ಅವ್ಯವಸ್ಥೆಯಲ್ಲಿದೆ. ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಉತ್ತಮವಾದ ಸೌಲಭ್ಯತೆಗಳಿಗಾಗಿ, ಉತ್ತಮ ಶಿಕ್ಷಣಕ್ಕಾಗಿ, ವಿದ್ಯಾರ್ಥಿ ವೇತನದ ಹೆಚ್ಚಳಕ್ಕಾಗಿ, ಉತ್ತಮ ವಿದ್ಯಾರ್ಥಿ ನಿಲಯಗಳಿಗಾಗಿ, ಮತ್ತು ಇತರೆ ವಿದ್ಯಾರ್ಥಿ ಕೇಂದ್ರಿತ ಹಕ್ಕೊತ್ತಾಯಗಳನ್ನು ದೊರಕಿಸಲು ಆಗ್ರಹಿಸಬೇಕಾಗಿದೆ. ದಲಿತ, ಬಹುಜನ, ಅಲ್ಪಸಂಖ್ಯಾತ, ಮತ್ತು ಮಹಿಳಾ ವಿದ್ಯಾರ್ಥಿ ಸಮುದಾಯವು ತಮ್ಮ ಕಾಲೇಜುಗಳಲ್ಲಿ ವಿಭಜಿತ ರಾಜಕಾರಣವನ್ನು ತಿರಸ್ಕರಿಸುತ್ತಾ ಐಕ್ಯತೆಯನ್ನು ಕಾಪಾಡಬೇಕು ಮತ್ತು ಸಂವಿಧಾನದ ಮೌಲ್ಯಗಳಾದ ನ್ಯಾಯಾ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಮೌಲ್ಯಗಳನ್ನು ಸಂರಕ್ಷಿಸಬೇಕು! ಆರ್ಎಸ್ಎಸ್-ಬಿಜೆಪಿ ಅವರ ವಿಭಜಿತ ರಾಜಕಾರಣವನ್ನು ತಿರಸ್ಕರಿಸಿ, ಶಾಲಾ-ಕಾಲೇಜುಗಳಲ್ಲಿ ಉತ್ತಮ ಸೌಲಭ್ಯತೆಗಳಿಗಾಗಿ ಆಗ್ರಹಿಸಬೇಕು.