ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಎಲ್ಲ ಹಿಂದೂ ಪರಮಾಧಿಕಾರವನ್ನು ಪ್ರತಿಪಾದಿಸುವ ಎಲ್ಲ ಬಣಗಳೂ ಸಹ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿದ್ದವು. ಬದಲಾಗಿ ಬ್ರಿಟೀಷರ ವಸಾಹತು ಆಳ್ವಿಕೆಯ ಒಡೆದು ಆಳುವ ನೀತಿಗೆ ಒತ್ತಾಸೆಯಾಗಿ, ಜನತೆಯ ಐಕ್ಯತೆಯನ್ನು ಭಂಗಗೊಳಿಸುವ ಹಿಂದೂ-ಮುಸ್ಲಿಂ ವಿಭಜನೆಯ ಪರವಾಗಿ ನಿಂತ್ತಿದ್ದವು. ಈ ಒಡೆದು ಆಳುವ ನೀತಿಯೇ ದೇಶದ ರಕ್ತಸಿಕ್ತ ವಿಭಜನೆಗೂ, ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಸ್ಥಾಪನೆಯೂ ಕಾರಣವಾಗಿತ್ತು. ನಂತರದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರೆಯಾಗಿತ್ತು.
ಈಗ ಮೋದಿ ಸರ್ಕಾರವು ಆರೆಸ್ಸೆಸ್ ಕಾರ್ಯಸೂಚಿಯನ್ನೇ ಜಾರಿಗೊಳಿಸುತ್ತಿದ್ದು, ಆಗಸ್ಟ್ 14ರ ದಿನವನ್ನು, ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು, ಭಾರತದಲ್ಲಿ ವಿಭಜನೆಯ ಕರಾಳತೆಯನ್ನು ಸ್ಮರಿಸುವ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಇದು ಭಾರತದಲ್ಲಿ ಅಂತರಿಕವಾಗಿ ಮತ್ತು ಭಾರತ ಪಾಕಿಸ್ತಾನದ ನಡುವೆ, ವಿಭಜನೆಯ ದುರಂತವನ್ನು ಮತ್ತು ನೋವುಗಳನ್ನು ಶಾಶ್ವತಗೊಳಿಸುವ ಒಂದು ಪ್ರಯತ್ನವೇ ಆಗಿದೆ. 74 ವರ್ಷಗಳ ಭಾರತದ ಸ್ವಾತಂತ್ರ್ಯವನ್ನು ಮೋದಿ ಸರ್ಕಾರವು, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಗಡಿಯ ಎರಡೂ ಬದಿಗಳಲ್ಲಲಿ ಸಾಮೂಹಿಕ ಹತ್ಯೆ ಮತ್ತು ಅತ್ಯಾಚಾರಗಳಲ್ಲಿ ಪಾಲ್ಗೊಂಡಿದ್ದ, ರಕ್ತಸಿಕ್ತ ವಿಭಜನೆಯ ನಡುವೆ ಸಿಲುಕಿಸುವ ಪ್ರಯತ್ನ ಏಕೆ ಮಾಡುತ್ತಿದೆ ? ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳದ ಆರೆಸ್ಸೆಸ್ ಮತ್ತು ಹಿಂದೂ ಪರಮಾಧಿಕಾರದ ಶಕ್ತಿಗಳನ್ನು ಇತಿಹಾಸದಲ್ಲಿ ಸೇರಿಸುವ ಮೂಲಕ, ಮರು ವ್ಯಾಖ್ಯಾನಕ್ಕೊಳಪಡಿಸಲು ಮೋದಿ ಆಳ್ವಿಕೆ ಹೇಗೆ ಪ್ರಯತ್ನಿಸುತ್ತಿದೆ?
ಆರೆಸ್ಸೆಸ್ ಮೂಲತಃ ಹಿಂದೂ ಪರಮಾಧಿಕಾರದ ಸಿದ್ಧಾಂತ ಮತ್ತು ಯೋಜನೆಗೆ ಬದ್ಧವಾಗಿದೆ. ಈ ಯೋಜನೆಯ ಮೂಲಕ ಭಾರತವನ್ನು ರಾಜಕೀಯ ವಿರೋಧ ಪಕ್ಷಗಳೇ ಇಲ್ಲದ ಒಂದು ರಾಷ್ಟ್ರವನ್ನಾಗಿ ಪರಿವರ್ತಿಸಲು ಸಜ್ಜಾಗಿದೆ. ಈ ದೇಶದಲ್ಲಿ ಆರೆಸ್ಸೆಸ್ ಹಿಂದೂಗಳ ಹೆಸರಿನಲ್ಲಿ ಆಳ್ವಿಕೆ ನಡೆಸುತ್ತದೆ. ಹಿಂದುಯೇತರರು ಎರಡನೆ ದರ್ಜೆಯ ಪ್ರಜೆಗಳಾಗಿ ಅಥವಾ ಪೌರತ್ವವಿಲ್ಲದವರಾಗಿ ಬದುಕಬೇಕಾಗುತ್ತದೆ. ಭಾರತದ ಈ ಪರಿಕಲ್ಪನೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮೂಲ ಪ್ರೇರಣೆಗೇ ವಿರುದ್ಧವಾದುದಾಗಿದೆ. ಎಲ್ಲ ಸಮುದಾಯಗಳಿಗೆ ಸೇರಿದ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಒಂದೇ ಗುರಿಯೊಂದಿಗೆ ಹೋರಾಡಿ, ಪ್ರಾಣತ್ಯಾಗ ಮಾಡಿದ್ದಾರೆ. ಹಾಗಾಗಿ, ಎಲ್ಲ ಸಮುದಾಯಗಳಿಗೂ ಭಾರತದ ಮೇಲೆ ಹಕ್ಕು ಸಹ ಇರುತ್ತದೆ.
ಭಾರತದ ರಾಷ್ಟ್ರೀಯತೆಯು ಯೂರೋಪ್ ಮಾದರಿಯ ರಾಷ್ಟ್ರೀಯತೆಯಿಂದ ಭಿನ್ನವಾದುದಾಗಿದೆ ಏಕೆಂದರೆ ಇದು ಆರ್ಥಿಕ ತಳಹದಿಯ ಮೇಲಲ್ಲದೆ ಸಾಂಸ್ಕøತಿಕ ತಳಹದಿಯನ್ನು ಹೊಂದಿದೆ ಎಂಬ ಆರೆಸ್ಸೆಸ್‍ನ ಸ್ವಹಿತಾಸಕ್ತಿಯ ಪ್ರತಿಪಾದನೆ ಹುರುಳಿಲ್ಲದ್ದು.
ಬಂಡವಾಳಶಾಹಿಯ ಚಾರಿತ್ರಿಕ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಉಗಮಿಸಿದ ಬಂಡವಾಳಶಾಹಿಯೊಂದಿಗೆ ಒಂದು ಕಲ್ಪಿತ ಅಸ್ಮಿತೆಯೊಂದಿಗೆ ಯೂರೋಪ್‍ನಲ್ಲಿ ರಾಷ್ಟ್ರ ಪ್ರಭುತ್ವ ರೂಪುಗೊಂಡಿತ್ತು. ಬಂಡವಾಳಶಾಹಿಗೆ ಒಂದು ಸಂಯುಕ್ತ ಕೇಂದ್ರ ಮಾರುಕಟ್ಟೆಯನ್ನು ರೂಪಿಸುವುದು ಇದರ ಉದ್ದೇಶವಾಗಿತ್ತು. ಈ ಹೊಸಸ್ವರೂಪದ ಆಳ್ವಿಕೆಗೆ ಒಂದು ಕಟ್ಟುನಿಟ್ಟಾದ ಪ್ರಾಬಲ್ಯವನ್ನು ಸೃಷ್ಟಿಸಲು ರಾಜಪ್ರಭುತ್ವದ ನಿಷ್ಠೆಯ ಬದಲು, ರಾಷ್ಟ್ರ ಪ್ರಭುತ್ವದ ನಿಷ್ಠೆಯನ್ನೇ ಪ್ರಧಾನವಾಗಿ ಬಿಂಬಿಸಲಾಯಿತು. ಭಾಷೆ, ಮತ ಈ ರಾಷ್ಟ್ರೀಯತೆಯ ಮೂಲ ಆಧಾರಗಳೆಂದು ಬಿಂಬಿಸಲಾಯಿತು. ಹಾಗಾಗಿ, 16-18ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬಂಡವಾಳಶಾಹಿಯ ಆರ್ಥಿಕ ಮತ್ತು ರಾಜಕೀಯ ಆಕಾಂಕ್ಷೆಗಳು ರಾಷ್ಟ್ರೀಯತೆಯ ಅಂತಃಸತ್ವವಾಗಿ ಪರಿಣಮಿಸಿದ್ದವು.
19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಆರಂಭದಲ್ಲಿ ರಾಷ್ಟ್ರೀಯತೆಯ ಹೊಸ ಘಟ್ಟ ಉಗಮಿಸಿತ್ತು. ವಸಾಹತು ಆಳ್ವಿಕೆಗೊಳಗಾಗಿದ್ದ ದೇಶಗಳಲ್ಲಿ ವಿವಿಧ ಸಮುದಾಯಗಳ ಜನತೆ ಐಕ್ಯತೆಯನ್ನು ಸಾಧಿಸುವ ಮೂಲಕ ವಸಾಹತು ದಾಸ್ಯದಿಂದ , ಬಂಡವಾಳಶಾಹಿ ದೇಶಗಳ ಮೊದಲ ಪೀಳಿಗೆಯ ವಿಮೋಚನೆಗಾಗಿ ಹೋರಾಡಲಾರಂಭಿಸಿದರು. ಹಾಗಾಗಿ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಮತ್ತು ಸಾರ್ವಭೌಮತ್ವದ ಆಕಾಂಕ್ಷೆಗಳು , ಈ ಹಂತದ ವಸಾಹತು ಆಳ್ವಿಕೆಯ ದೇಶಗಳಲ್ಲಿ ರಾಷ್ಟ್ರೀಯತೆಯ ಅಂತಃಸತ್ವವಾಗಿದ್ದವು. ಭಾರತೀಯ ರಾಷ್ಟ್ರೀಯತೆಯೂ ಸಹ ಪರಸ್ಪರ ಹಂಚಿಕೊಂಡ ಮತ ಆಧಾರಿತ ನಂಬಿಕೆಗಳನ್ನಾಧರಿಸಿದ ಐಕ್ಯತೆಯ ಪ್ರಜ್ಞೆಯನ್ನು ಅವಲಂಬಿಸಿರಲಿಲ್ಲ. ಬದಲಾಗಿ ವಸಾಹತು ಶೋಷಣೆಯ ವಿರುದ್ಧ ಹೋರಾಡುವ ಉದ್ದೇಶವನ್ನು ಹೊಂದಿತ್ತು.
ಭಾರತೀಯ ರಾಷ್ಟ್ರೀಯತೆ ಮುಘಲರ ವಿರುದ್ಧ ಹೋರಾಡುತ್ತಾ ಉಗಮಿಸಲಿಲ್ಲ, ಕಂಪನಿ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ರೂಪುಗೊಂಡಿತ್ತು.
ಕಂಪನಿ ಆಳ್ವಿಕೆಯ (ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ) ವಿರುದ್ಧ 1857ರ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವು, ಭಾರತದಲ್ಲಿ ವಸಾಹತು ವಿರೋಧಿ ರಾಷ್ಟ್ರೀಯತೆಯ ಮೊದಲ ಅಭಿವ್ಯಕ್ತಿಯಾಗಿತ್ತು. ಒಂದು ದೇಶಕ್ಕೆ ಸೇರಿದವರು ಎಂಬ ಭಾವನೆ ಜನತೆಯಲ್ಲಿ ಕಂಡುಬಂದಿತ್ತು. ಸಿಡೋ ಮತ್ತು ಕಾನ್ಹು ನೇತೃತ್ವದ ಸಂತಾಲ್ ದಂಗೆಯ ಬೆನ್ನಲ್ಲೇ ನಡೆದ ಈ ಸಂಗ್ರಾಮದಲ್ಲಿ ಸಮವಸ್ತ್ರದಲ್ಲಿದ್ದ ರೈತರು ತಮ್ಮ ಮತೀಯ ಸಂಕುಚಿತ ಭಾವನೆಯನ್ನು ತೊರೆದು, ಭಾರತೀಯರಾಗಿ ಬ್ರಿಟೀಷ್ ರಾಜ್ ವಿರುದ್ಧ , ಹಿಂದೂಸ್ತಾನದ ನೈಜ ವಾರಸುದಾರರಾಗಿ, ಹಿಂದೂಸ್ತಾನಿಗಳಾಗಿ ಹೋರಾಡಿದ್ದರು. ಕ್ರಾಂತಿಕಾರಿ ಹೋರಾಟಗಾರ ಅಜಿಮುಲ್ಲಾ ಖಾನ್ 1857ರಲ್ಲಿ ರಚಿಸಿದ ಗೀತೆ “ ನಾವು ಈ ನೆಲದ ಮಾಲೀಕರು ಹಿಂದೂಸ್ತಾನ ನಮ್ಮದು ” ಎನ್ನುವುದು ಘೋಷ ವಾಕ್ಯವಾಗಿತ್ತು. ಕೇವಲ ರಾಜ ವಂಶಿಕರ ಊಳಿಗಮಾನ್ಯ ಹಿನ್ನೆಲೆ ಮಾತ್ರವೇ ಅಲ್ಲದೆ, ಶೋಷಿತ ಜಾತಿಗಳು ಮತ್ತು ಮಹಿಳೆಯರೊಡನೆ, ತನ್ನ ವೈವಿಧ್ಯಮಯ ಹೋರಾಟಗಾರರೊಂದಿಗೆ ನಡೆದ ಈ ಸಂಗ್ರಾಮ ಒಂದು ತೀವ್ರಗಾಮಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಕ್ಕೆ ನಾಂದಿ ಹಾಡಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗುವ ಮೂವತ್ತು ವರ್ಷಗಳ ಮುನ್ನವೇ ಇದು ಸಂಭವಿಸಿತ್ತು.
1857ಕ್ಕೂ ಮುನ್ನ ಬ್ರಿಟೀಷ್ ಆಳ್ವಿಕೆಯ ವಿರುದ್ಧ ಹಲವಾರು ರೈತ ಹೋರಾಟಗಳು, ಬುಡಕಟ್ಟು ದಂಗೆಗಳು ಸಂಭವಿಸಿದ್ದವು. ಪ್ರಪ್ರಥಮ ಬಾರಿಗೆ 1857ರಲ್ಲಿ ಒಂದು ದೇಶಕ್ಕೆ ಸೇರಿದ ಭಾವನೆಯೊಂದಿಗೆ, ಹಿಂದೂಸ್ತಾನದ ಪರಿಕಲ್ಪನೆಯೊಂದಿಗೆ, ದಂಗೆ ಆರಂಭವಾಗಿತ್ತು. ದೇಶವನ್ನು ಲೂಟಿ ಮಾಡಲು ಬಂದ ವಿದೇಶೀಯರಿಂದ ವಿಮೋಚನೆ ಪಡೆಯುವುದು ಈ ದಂಗೆಗಳ ಉದ್ದೇಶವಾಗಿತ್ತು. 1857ರ ದಂಗೆಯಲ್ಲಿ ವೈವಿಧ್ಯಮಯ ಜನಸಮುದಾಯಗಳು ತೋರಿದ ಐಕ್ಯತೆಯಿಂದ ಬ್ರಿಟೀಷರು ಹತಾಶರಾಗಿದ್ದರು. ಹಿರಿಯ ಬ್ರಿಟೀಷ್ ಅಧಿಕಾರಿ ಥಾಮಸ್ ಲೋವ್ “ಗೋ ಹಂತಕರು ಮತ್ತು ಗೋ ಆರಾಧಕರು, ಹಂದಿಯನ್ನು ದ್ವೇಷಿಸುವವರು ಮತ್ತು ಹಂದಿ ಮಾಂಸ ತಿನ್ನುವವರು, ಅಲ್ಲಾಹ್ ತನ್ನ ದೇವರು ಮೊಹಮ್ಮದ್ ತಮ್ಮ ಪ್ರವಾದಿ ಎನ್ನುವವರು, ಬ್ರಹ್ಮನ ನಿಗೂಢತೆಯಲ್ಲಿ ನಂಬುವವರು, ಎಲ್ಲರೂ ಒಂದೇ ಉದ್ದೇಶದಿಂದ ಒಂದಾಗಿದ್ದಾರೆ ” ಎಂದು ಉದ್ಗರಿಸಿದ್ದ.
ಕ್ರಾಂತಿಕಾರಿ ಸೇನೆಯ ಮುಂದಾಳತ್ವ ಭಕ್ತ್ ಖಾನ್, ಸಿರ್ದಾರಿ ಲಾಲ್, ಗೌಸ್ ಮೊಹಮ್ಮದ್, ಹೀರಾ ಸಿಂಗ್ ಇವರುಗಳ ನಿಯಂತ್ರಣದಲ್ಲಿತ್ತು. ಮುಸ್ಲಿಮರು, ಹಿಂದೂಗಳು, ಸಿಖ್ಖರು ಎಲ್ಲರೂ ಒಂದಾಗಿದ್ದರು. ರಾಣ ಲಕ್ಷ್ಮಿ ಬಾಯಿಯ ಸೇನೆಯಲ್ಲಿ ಅಶ್ವದಳದ ದಂಡನಾಯಕನಾಗಿದ್ದುದು ಗುಲಾಮ್ ಘೌಸ್ ಖಾನ್. ಅವಳ ಕಾಲಾಳುಪಡೆಯ ನೇತೃತ್ವ ವಹಿಸಿದ್ದುದು ಖುದಾ ಭಕ್ಷ್, ಅವಳ ಅಂಗರಕ್ಷಕ ಅಧಿಕಾರಿಣ ಯಾಗಿದ್ದ ಮುಸ್ಲಿಂ ಮಹಿಳೆ ಮುಂದರ್ ಲಕ್ಷ್ಮೀಬಾಯಿಯೊಡನೆಯೇ ಹೋರಾಡಿ ಹುತಾತ್ಮಳಾಗಿದ್ದಳು. 1857ರ ಸಂಗ್ರಾಮದಿಂದ ಹಿಂದೂ ಮುಸ್ಲಿಂ ಐಕ್ಯತೆಯ ಈ ರೀತಿಯ ನಿದರ್ಶನಗಳನ್ನು ಗುರುತಿಸಬಹುದು. ಈ ದಂಗೆಯ ಕ್ರೂರ ದಮನದ ನಂತರ ಬ್ರಿಟೀಷರು ತಮ್ಮ ಒಡೆದು ಆಳುವ ನೀತಿಯನ್ನು ಅನುಸರಿಸಿದರು. ಇದು ಮುಸ್ಲಿಂ ಸಮುದಾಯದ ವಿರುದ್ಧ ವಿಷ ಕಾರುವ ಒಂದು ಮಾರ್ಗವಾಯಿತು.
ಹೋರಾಟ ಆಳುವವರ ವಿರುದ್ಧವೋ ಅಥವಾ ಮತಗಳ ವಿರುದ್ಧವೋ
ಆರೆಸ್ಸೆಸ್ ಅಭಿಪ್ರಾಯದಲ್ಲಿ, ಹಿಂದೂಗಳು ವಿರೋಧಿಸಿದ ಮತ್ತು ಹೋರಾಡಿದ ಮುಘಲರ ಆಳ್ವಿಕೆ ಭಾರತದ ಪಾಲಿಗೆ ವಿದೇಶಿ ಆಳ್ವಿಕೆಯಾಗಿರುತ್ತದೆ. ಹಾಗಾಗಿ ಭಾರತೀಯ ರಾಷ್ಟ್ರೀಯತೆ ಪ್ರಾಚೀನ ಕಾಲದಿಂದಲೂ ಹಿಂದೂ ಲಕ್ಷಣಗಳನ್ನು ಹೊಂದಿರುವುದಾಗಿದ್ದು ಈಗಲೂ ಹಾಗೆಯೇ ಉಳಿಯಬೇಕು ಎಂದು ಆರೆಸ್ಸೆಸ್ ಪ್ರತಿಪಾದನೆ ಮಾಡುತ್ತದೆ. ಮುಸಲ್ಮಾನವರ ವಿರುದ್ಧ ದ್ವೇಷ ಸಾರುವ ಹಿಂದೂ ರಾಷ್ಟ್ರೀಯತೆಯನ್ನು, ವಸಾಹತು ವಿರೋಧಿ ರಾಷ್ಟ್ರೀಯತೆಯ ಜಾಗದಲ್ಲಿರಿಸಲು ಗೋಲ್ವಾಲ್‍ಕರ್ ಶತಪ್ರಯತ್ನ ಮಾಡುತ್ತಾರೆ. “ ಬ್ರಿಟೀಷ್ ವಿರೋಧಿ ಧೋರಣೆಯನ್ನು ದೇಶಪ್ರೇಮ ಮತ್ತು ರಾಷ್ಟ್ರೀಯತೆಯೊಡನೆ ಸಮೀಕರಿಸಲಾಯಿತು. ಈ ಪ್ರತಿಗಾಮಿ ದೃಷ್ಟಿಕೋನವು ಇಡೀ ಸ್ವಾತಂತ್ರ್ಯ ಸಂಗ್ರಾಮದ ಮೇಲೆ, ಅದರ ನಾಯಕರ ಮೇಲೆ ಮತ್ತು ಸಾಮಾನ್ಯ ಜನತೆಯ ಮೇಲೆ ದುರಂತಮಯ ಪರಿಣಾಮವನ್ನು ಬೀರಿತ್ತು. ” ಎಂದು ಗೋಲ್ವಾಲ್‍ಕರ್ ತಮ್ಮ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಹೇಳುತ್ತಾರೆ.
ಆರೆಸ್ಸೆಸ್‍ನ ಈ ನಿರೂಪಣೆ ಬ್ರಿಟೀಷ್ ಪರ ಎನಿಸುವುದರಲ್ಲಿ ಅಚ್ಚರಿಯೇನಿಲ್ಲ. ಭಾರತದ ಇತಿಹಾಸವನ್ನು “ ಹಿಂದೂ ಯುಗ, ಮುಸ್ಲಿಂ ಯುಗ ಮತ್ತು ಬ್ರಿಟೀಷ್ ಯುಗ ” ಎಂದು ವಿಂಗಡಿಸಿದ್ದು ಜೇಮ್ಸ್ ಮಿಲ್ ಎಂಬ ಇತಿಹಾಸಕಾರ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ ಮುಘಲರನ್ನು ಸ್ಮರಿಸುವುದು ಗುಲಾಮಿ ಮನಸ್ಥಿತಿಯ ಸಂಕೇತ ” ಎಂದು ಹೇಳುವಾಗ ಅವರು ವಸಾಹತು ಸೃಷ್ಟಿಯ ಮಿಥ್ಯೆಯನ್ನು ಹರಡುತ್ತಿದ್ದಾರೆ ಎಂದೇ ಅರ್ಥ. ಮಿಲ್ಸ್‍ನ ವಿಂಗಡನೆಯನ್ನು ಅನುಕರಿಸುವ ಇತಿಹಾಸಕಾರ ಆರ್ ಸಿ ಮಜೂಂದಾರ್, ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತವನ್ನು ಅನುಮೋದಿಸಿದರೂ, “ ಇಂಡಿಯಾ ಅಥವಾ ಭಾರತ ಒಂದು ದೇಶ ಎನ್ನುವ ಪರಿಕಲ್ಪನೆಯು 19ನೆಯ ಶತಮಾನದ 60ನೆಯ ಅಥವಾ 70ನೆಯ ದಶಕದವರೆಗೂ ಪ್ರಚಲಿತವಾಗಿರಲಿಲ್ಲ ” ಎಂದು ಹೇಳುತ್ತಾರೆ. ಹಾಗಾಗಿ ಹಿಂದೂ ಸೈನಿಕರು ಮತ್ತು ಆಳ್ವಿಕರು ಇಂಡಿಯಾ ಪರ ಹೋರಾಡಿದವರಾಗಿರಲಿಲ್ಲ, ಮುಸ್ಲಿಂ ಆಳ್ವಿಕರು ಮತ್ತು ಸೈನಿಕರು ಅತಿಕ್ರಮಣಕಾರರೋ, ಆಕ್ರಮಿಸಿದವರೋ ಆಗಿರಲಿಲ್ಲ.
ಮುಘಲರ ಅವಧಿಯ ಯುದ್ಧಗಳು ಮೂಲತಃ ಆಳ್ವಿಕರ ನಡುವಿನ ಯುದ್ಧಗಳಾಗಿದ್ದವೇ ಹೊರತು ಮತಗಳ ನಡುವೆ ಆಗಿರಲಿಲ್ಲ , ರಾಜರ ನಡುವೆ ಆಗಿದ್ದವೇ ಹೊರತು, ಸಮುದಾಯಗಳ ನಡುವೆ ಅಲ್ಲ ಎನ್ನುವುದನ್ನು ದಾಖಲೆಗಳೇ ನಿರೂಪಿಸುತ್ತವೆ. ಉದಾಹರಣೆಗೆ :- 1576ರಲ್ಲಿ ನಡೆದ ಹಲ್ದಿಘಾಟಿ ಯುದ್ಧದಲ್ಲಿ ಅಕ್ಬರನ ಸೇನೆಯ ಮುಂದಾಳತ್ವವನ್ನು ವಹಿಸಿದ್ದುದು ಅಂಬರ್ ಪ್ರಾಂತ್ಯದ ಮಾನ್ ಸಿಂಗ್, ಓರ್ವ ಹಿಂದೂ. ಈ ಸೇನೆಯು ಹಕೀಮ್ ಖಾನ್ ಸೂರ್ ಎಂಬ ಮುಸ್ಲಿಂ ದಂಡನಾಯಕನ ಮುಂದಾಳತ್ವದಲ್ಲಿದ್ದ ಮಹಾರಾಣಾ ಪ್ರತಾಪ್ ಸೇನೆಯೊಂದಿಗೆ ಕಾದಾಡಿತ್ತು.
ಇನ್ನು ಅಫ್ಜಲ್ ಖಾನ್‍ನನ್ನು ಶಿವಾಜಿ ಪರಾಭವಗೊಳಿಸಿದ ಪ್ರಸಂಗವೂ ಸ್ವಾರಸ್ಯಕರವಾಗಿದೆ. ಶಿವಾಜಿ ಅಫ್ಜಲ್ ಖಾನ್‍ನನ್ನು ಭೇಟಿ ಮಾಡಲು ಹೊರಟಾಗ ಯಾವುದೇ ಅಸ್ತ್ರಗಳನ್ನು ಹೊಂದಿರಲಿಲ್ಲ ಎನ್ನಲಾಗುತ್ತದೆ. ಆದರೆ ಅವನ ಅಂಗರಕ್ಷಕನ ಸಲಹೆಯ ಮೇರೆಗೆ ಶಿವಾಜಿ ಕಬ್ಬಿಣದ ಪಂಜವನ್ನು ತನ್ನ ಬಳಿ ಇಟ್ಟುಕೊಂಡಿದ್ದು, ಅದರಿಂದಲೇ ತನ್ನ ಮೇಲೆ ಹಲ್ಲೆ ನಡೆದಾಗ ಅಫ್ಜಲ್ ಖಾನ್‍ನನ್ನು ಕೊಲ್ಲುತ್ತಾನೆ. ಈ ಅಂಗರಕ್ಷಕ ಯಾರು ? ರುಸ್ತಮ್ ಜವಾನ್, ಓರ್ವ ಮುಸ್ಲಿಂ. ಶಿವಾಜಿ ಅಫ್ಜಲ್ ಖಾನ್‍ನನ್ನು ಕೊಂದ ನಂತರ ಖಾನ್‍ನ ಸಹಾಯಕ ಕೃಷ್ಣಾಜಿ ಭಾಸ್ಕರ್ ಕುಲಕಣ ್, ಓರ್ವ ಹಿಂದೂ, ತನ್ನ ಒಡೆಯನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಶಿವಾಜಿಯನ್ನು ಕೊಲ್ಲಲೆತ್ನಿಸುತ್ತಾನೆ.
ಮೂರನೆಯ ನಿದರ್ಶನ ಎಂದರೆ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‍ನದು. ಟಿಪ್ಪು ಬ್ರಿಟೀಷರು ನಿಯೋಜಿಸಿದ್ದ ಮರಾಠ ಸೇನೆಯ ವಿರುದ್ಧ 1700ರ ಆಸುಪಾಸಿನಲ್ಲಿ ಕಾದಾಡುತ್ತಾನೆ. ಮರಾಠಾ ಸೇನೆಯು ಬ್ರಿಟೀಷರ ಆಜ್ಞೆಯನ್ನು ಅನುಸರಿಸಿ ಕರ್ನಾಟಕದ ಶೃಂಗೇರಿಯ ಮಠವನ್ನು ಧ್ವಂಸ ಮಾಡುತ್ತದೆ. ಶೃಂಗೇರಿಯ ದೇವಿಯ ಪುನರ್ ಪ್ರತಿಷ್ಠಾಪನೆಗೆ ಟಿಪ್ಪು ತನ್ನ ಖಜಾನೆಯಿಂದ ಧನಸಹಾಯವನ್ನು ಒದಗಿಸುತ್ತಾನೆ ಮತ್ತು ದೇವಿ ವಿಗ್ರಹಕ್ಕೆ ತನ್ನ ಉಡುಗೊರೆಗಳನ್ನು ಕಳುಹಿಸುತ್ತಾನೆ. ಒಂದು ಹಿಂದೂ ಸೇನೆ ಮಠವನ್ನು ಧ್ವಂಸ ಮಾಡುತ್ತದೆ, ಮುಸ್ಲಿಂ ದೊರೆಯೊಬ್ಬ ಧನ ಸಹಾಯ ನೀಡಿ ಅದನ್ನು ಪುನರ್ ನಿರ್ಮಾಣ ಮಾಡುತ್ತಾನೆ.
ಭಾರತೀಯ ರಾಷ್ಟ್ರೀಯತೆಯ ಉಗಮವಾಗಿದ್ದು ವಸಾಹತು ಶೋಷಣೆ ಮತ್ತು ಲೂಟಿಯ ವಿರುದ್ಧ, ಕಂಪನಿ ರಾಜ್ ವಿರುದ್ಧವೇ ಹೊರತು, ಮುಘಲ್ ರಾಜ್ ವಿರುದ್ಧ ಅಲ್ಲ. ಈ ರಾಷ್ಟ್ರೀಯತೆಯ ಮುಖ್ಯ ಲಕ್ಷಣವೆಂದರೆ ವೈವಿಧ್ಯಮಯ ಮತೀಯ ಮತ್ತು ಜಾತಿ ಸಮುದಾಯಗಳನ್ನು ಇದು ಒಳಗೊಂಡಿತ್ತು.
ಈ ನಿಟ್ಟಿನಲ್ಲಿ ಅತ್ಯಂತ ನಿಷ್ಕøಷ್ಟವಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮುಘಲ್ ಆಳ್ವಿಕೆಯ ಕುರಿತ ಮಾತುಗಳು ಉಲ್ಲೇಖನಾರ್ಹ: “ ಮೊಹಮದೀಯರ ಆಗಮನದೊಂದಿಗೆ ಒಂದು ಹೊಸ ಸಂಯೋಜನೆಯನ್ನು ಕ್ರಮೇಣ ರೂಪಿಸಲಾಗಿತ್ತು. ಅವರು ಹಿಂದೂಗಳ ಮತವನ್ನು ಒಪ್ಪಿಕೊಳ್ಳದೆ ಇದ್ದರೂ ಅವರು ಭಾರತವನ್ನು ತಮ್ಮ ನೆಲೆ ಮಾಡಿಕೊಂಡರು, ಜನಸಾಮಾನ್ಯರ ಸಾಮಾಜಿಕ ಬದುಕನ್ನು, ಅವರ ನೋವು ನಲಿವುಗಳನ್ನು ಹಂಚಿಕೊಂಡರು. ಪರಸ್ಪರ ಸಹಕಾರದೊಂದಿಗೆ ಹೊಸ ಕಲೆ ಮತ್ತು ಹೊಸ ಸಂಸ್ಕøತಿಯನ್ನು ಪೋಷಿಸಿ ಬೆಳೆಸಲಾಯಿತು...”
ಭಗತ್ ಸಿಂಗ್ ಮತ್ತು ಸಾವರ್ಕರ್- ತ್ಯಾಗ ಮತ್ತು ಶರಣಾಗತಿ
“ಹುತಾತ್ಮ, ಮಹೋನ್ನತವೇ ಆದರೆ ಆದರ್ಶವಲ್ಲ ” ಎಂಬ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿನ ತಮ್ಮ ಲೇಖನದಲ್ಲಿ ಆರೆಸ್ಸೆಸ್ ಸಿದ್ಧಾಂತಿ ಗೋಲ್ವಾಲ್‍ಕರ್ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರನ್ನು ಅವಹೇಳನಕಾರಿಯಾಗಿ ಕಂಡಿದ್ದು ಅವರನ್ನು ‘ ವಿಫಲರಾದವರು ’ ಎಂದು ಜರೆದಿದ್ದಾರೆ. “ನಮ್ಮ ಸಮಾಜದಲ್ಲಿ ಅಂತಹ ವ್ಯಕ್ತಿಗಳನ್ನು ಆದರ್ಶಪ್ರಾಯರಾಗಿ ಕಾಣುವುದಿಲ್ಲ. ಮನುಷ್ಯರು ಆಕಾಂಕ್ಷೆ ಪಡುವ ಅತ್ಯುನ್ನತ ಮಟ್ಟದ ಮಹಾನತೆಯನ್ನು ಗಳಿಸಲು ಹುತಾತ್ಮರಾಗುವುದನ್ನು ನಾವು ಮಾನ್ಯ ಮಾಡುವುದಿಲ್ಲ. ಅವರು ತಮ್ಮ ಗುರಿ ಸಾಧಿಸುವಲ್ಲಿ ವಿಫಲರಾಗಿರುತ್ತಾರೆ. ಈ ವೈಫಲ್ಯವೇ ಅವರಲ್ಲಿನ ಲೋಪವನ್ನು ತೋರಿಸುತ್ತದೆ ” ಎಂದು ಹೇಳುವ ಗೋಲ್ವಾಲ್‍ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವುದು “ಸಂಪೂರ್ಣವಾಗಿ ರಾಷ್ಟ್ರದ ಹಿತಾಸಕ್ತಿಗಾಗಿ” ಕೈಗೊಳ್ಳುವ ಕ್ರಮವಲ್ಲ ಎಂದು ಹೇಳುತ್ತಾರೆ.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತು ಹುತಾತ್ಮರನ್ನು ಕುರಿತು ಗೋಲ್ವಾಲ್‍ಕರ್ ಅವರ ಅಭಿಪ್ರಾಯ ಅಪಭ್ರಂಶವೇನಲ್ಲ. ಇದು ಹಿಂದೂ ಪರಮಾಧಿಕಾರ ಸಿದ್ಧಾಂತಿಗಳಲ್ಲಿಲ ಸಹಜವಾಗಿದ್ದ ನಿಯಮ. ಜೀವಾವಧಿ ಶಿಕ್ಷೆಗೊಳಗಾಗಿದ್ದ ಹಿಂದುತ್ವ ಸಿದ್ಧಾಂತಿ ವೀರ್ ಸಾವರ್ಕರ್ ಅವರ ಧೋರಣೆಯನ್ನು ಕ್ರಾಂತಿಕಾರಿ ಭಗತ್ ಸಿಂಗ್ ಧೋರಣೆಯನ್ನು ಹೋಲಿಸಿದರೆ ಇದು ಸ್ಪಷ್ಟವಾಗುತ್ತದೆ. 1911ರಲ್ಲಿ ಅಂಡಮಾನ್ ಸೆಲ್ಯುಲರ್ ಸೆರೆಮನೆಯಲ್ಲಿ ಬಂಧನಕ್ಕೊಳಗಾದಿದ್ದ ಸಾವರ್ಕರ್ , ತಮ್ಮ ಐವತ್ತು ವರ್ಷಗಳ ಸೆರೆವಾಸದ ಶಿಕ್ಷೆ ಆರಂಭವಾದ ಕೆಲವೇ ದಿನಗಳಲ್ಲಿ ಬ್ರಿಟೀಷರಿಗೆ ಅರ್ಜಿ ಸಲ್ಲಿಸುತ್ತಾರೆ. ಪುನಃ 1913ರಲ್ಲಿ ಮತ್ತು ನಂತರ ಹಲವು ಬಾರಿ ಅವರನ್ನು ಬೇರೆ ಬೇರೆ ಸೆರೆಮನೆಗಳಿಗೆ ವರ್ಗಾಯಿಸಲಾಗಿ, 1921ರಲ್ಲಿ ಭಾರತದ ಜೈಲಿನಲ್ಲಿ ಇರಿಸಲಾಗುತ್ತದೆ. 1924ರಲ್ಲಿ ಬಿಡುಗಡೆ ಹೊಂದುತ್ತಾರೆ. ತಮ್ಮ ನಿಷ್ಠೆಯನ್ನು ಪರಿಗಣ ಸಿ ತಮ್ಮನ್ನು ಬಿಡುಗಡೆ ಮಾಡುವಂತೆ ಸಾವರ್ಕರ್ ಬ್ರಿಟೀಷರಿಗೆ ಅರ್ಜಿ ಸಲ್ಲಿಸುತ್ತಾರೆ.
ಕ್ಷಮಾದಾನ ನೀಡಿ ಬಿಡುಗಡೆಯಾದಲ್ಲಿ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲವೆಂದೂ, ಬ್ರಿಟೀಷರ ವಿರುದ್ಧ ಹೋರಾಡುತ್ತಿರುವ ದಾರಿ ತಪ್ಪಿರುವ ಯುವ ಸಂಗ್ರಾಮಿಗಳ ಮನಃಪರಿವರ್ತನೆ ಮಾಡಿ ಬ್ರಿಟೀಷರಿಗೆ ನಿಷ್ಠೆಯಿಂದಿರುವಂತೆ ಮಾಡುವುದಾಗಿಯೂ ಸಾವರ್ಕರ್ ತಮ್ಮ ಅರ್ಜಿಯಲ್ಲಿ ಹೇಳುತ್ತಾರೆ. ಸೆರೆವಾಸದಲ್ಲಿದ್ದಾಗಲೂ ಸಾವರ್ಕರ್, ತಮಗೆ ಉತ್ತಮ ಆಹಾರ ನೀಡುತ್ತಿಲ್ಲ, ಇತರ ಸಾಧಾರಣ ಕೈದಿಗಳಿಗೆ ಹೋಲಿಸಿದರೆ, ತಾವು ಡಿ ದರ್ಜೆಯ ಕೈದಿಯಾಗಿದ್ದರೂ, ತಮಗೆ ವಿಶೇಷ ಗಮನ ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ. “ ನಾನು ಸಾಂವಿಧಾನಿಕ ಅಭಿವೃದ್ಧಿಗೆ ಬದ್ಧನಾಗಿದ್ದು, ಬ್ರಿಟೀಷ ಸರ್ಕಾರಕ್ಕೆ ನಿಷ್ಠನಾಗಿದ್ದೇನೆ, ಬ್ರಿಟೀಷ್ ಸರ್ಕಾರವೊಂದೇ ಈ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ” ಎಂದು ತಮ್ಮ ಅರ್ಜಿಯಲ್ಲಿ ಹೇಳುತ್ತಾರೆ.
ಇದಕ್ಕೆ ತದ್ವಿರುದ್ಧವಾಗಿ ಭಗತ್ ಸಿಂಗ್ ಮತ್ತು ಅವನ ಸಂಗಾತಿಗಳು, ವಸಾಹತು ಪ್ರಭುತ್ವದ ವಿರುದ್ಧ ಸಮರ ಸಾರಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೊಳಗಾಗಿದ್ದರೂ, ಧೈರ್ಯವಾಗಿ “ ಇಲ್ಲಿ ಯುದ್ಧದ ಸನ್ನಿವೇಶ ಇರುವುದನ್ನು ದಿಟ್ಟತನದಿಂದ ಘೋಷಿಸೋಣ, ಭಾರತದ ದುಡಿಯುವ ಜನಸಮೂಹಗಳು ಮತ್ತು ನೈಸರ್ಗಿಕ ಸಂಪನ್ಮೂಳಗಳೂ ಕೆಲವೇ ಪರಾವಲಂಬಿಗಳಿಂದ ಲೂಟಿಗೊಳಗಾಗುತ್ತಿರುವವರೆಗೂ ಈ ಯುದ್ಧ ಸನ್ನಿವೇಶ ಇರುತ್ತದೆ ಎಂದು ಘೋಷಿಸೋಣ ” ಎಂದು ಹೇಳುತ್ತಾರೆ. ತಾವು ಯುದ್ಧ ಕೈದಿಗಳಾಗಿದ್ದುದರಿಂದ ತಮ್ಮನ್ನು ಗಲ್ಲಿಗೇರಿಸುವುದರ ಬದಲು ಗುಂಡಿಟ್ಟು ಕೊಲ್ಲಬೇಕು ಎಂದು ಆಗ್ರಹಿಸುವ ಭಗತ್ ಸಿಂಗ್ ಮತ್ತು ಸಂಗಾತಿಗಳು “ ನಮ್ಮ ಮರಣದಂಡನೆಯ ಶಿಕ್ಷೆಯನ್ನು ಜಾರಿಗೊಳಿಸಲು ಶೀಘ್ರವೇ ಸೇನಾಧಿಕಾರಿಗಳನ್ನು ರವಾನಿಸಬೇಕು ” ಎಂದು ಬ್ರಿಟೀಷ್ ಸರ್ಕಾರವನ್ನು ಆಗ್ರಹಿಸುತ್ತಾರೆ.
ಬ್ರಿಟೀಷ್ ಪರ ಆರೆಸ್ಸೆಸ್ ಮತ್ತು ವೈವಿಧ್ಯಮಯ ಸಿದ್ಧಾಂತಗಳ ಸ್ವಾತಂತ್ರ್ಯ ಹೋರಾಟಗಾರರು
ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲಿಲ್ಲ, ಬದಲಾಗಿ ಬ್ರಿಟೀಷರೊಡನೆ ಸಹಕರಿಸಿದ್ದವು ಎನ್ನುವ ಅಂಶ ವ್ಯಾಪಕವಾಗಿ ದಾಖಲಾಗಿದೆ. ಈಗ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟದ ಚೌಕಟ್ಟಿನಲ್ಲಿ ಆರೆಸ್ಸೆಸ್ ಪಾತ್ರವನ್ನು ಅಳವಡಿಸಲು ಯತ್ನಿಸುತ್ತಿದ್ದಾರೆ. ಇಂತಹ ಒಂದು ಪ್ರಯತ್ನವನ್ನು ಇತ್ತೀಚೆಗೆ ಆರೆಸ್ಸೆಸ್ ಪ್ರತಿನಿಧಿ ರಾಕೇಶ್ ಸಿನ್ಹಾ ಬರೆದ ಲೇಖನದಲ್ಲಿ ಕಾಣಬಹುದು. 2021ರ ಆಗಸ್ಟ್ 15ರಂದು ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ಬರೆದ ತಮ್ಮ ಲೇಖನದಲ್ಲಿ ಸಿನ್ಹಾ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ “ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಕೆಲವು ಐಕನ್‍ಗಳ ಮತ್ತು ಘಟನೆಗಳ ಅನಗತ್ಯ ವೈಭವೀಕರಣ”ದ ವಿರುದ್ಧ ಎಚ್ಚರಿಕೆ ನೀಡುತ್ತಾರೆ. ಸಿನ್ಹಾ ಪ್ರತಿರೋಧ ವ್ಯಕ್ತಪಡಿಸುವ ಅತಿರೇಕದ ವೈಭವೀಕರಣಕ್ಕೊಳಗಾದ ಈ ಐಕನ್‍ಗಳು ಯಾರು ? ಸಂಘದ ಇತಿಹಾಸವನ್ನೊಮ್ಮೆ ಗಮನಿಸಿದರೆ, ಗಾಂಧಿ ಮತ್ತು ನೆಹರೂ ವಿರುದ್ಧದ ದ್ವೇಷ ಮನೋಭಾವವನ್ನು ಗಮನಿಸಿದರೆ, ವಾಸ್ತವ ಅರಿವಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮಿಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು, ಹಿಂಸಾತ್ಮಕ ಮತ್ತು ಅಹಿಂಸಾತ್ಮಕ ಕಾರ್ಯನೀತಿಗಳ ಬಗ್ಗೆ, ಮತೀಯ ಸಂಕೇತಗಳನ್ನು ಮತ್ತು ಪ್ರತಿಮೆಗಳನ್ನು ಆಂದೋಲನದಲ್ಲಿ ಬಳಸುವ ಬಗ್ಗೆ ಭಿನ್ನಮತ ಹೇರಳವಾಗಿತ್ತು ಎಂದು ವಾದಿಸುವ ರಾಕೇಶ್ ಸಿನ್ಹಾ ಅವರ ಮಾತುಗಳನ್ನು ಈ ಹಿಂದೆಯೂ ಸಾಕಷ್ಟು ಬಾರಿ ಕೇಳಿದ್ದೇವೆ.
“ಸ್ವಾತಂತ್ರ್ಯದೆಡೆಗೆ ಭಾರತದ ನಡೆ – ಮತ್ತೊಂದು ಆಯಾಮ” ಎಂಬ ತಮ್ಮ ಕೃತಿಯಲ್ಲಿ ದೀಪಂಕರ್ ಭಟ್ಟಾಚಾರ್ಯ ಹೀಗೆ ಹೇಳುತ್ತಾರೆ “ಸಾಮಾನ್ಯ ಜನತೆ, ಕಾರ್ಮಿಕರು ಮತ್ತು ರೈತರು ಭಾರತದ ವಿಮೋಚನೆಯ ಕಥನದಲ್ಲಿ ಕಾಣ ಸಿಕೊಂಡರೂ, ಅದು ಕೇವಲ ಸಂಖ್ಯೆಗಳ ರೂಪದಲ್ಲಿ, ಹೆಸರಿಲ್ಲದೆ, ಮೊಗವಿಲ್ಲದೆ ಕಾಣ ಸಿಕೊಳ್ಳುತ್ತಾರೆ. ಈ ಜನತೆ ತಮ್ಮದೇ ಆದ ದೃಷ್ಟಿಕೋನದೊಂದಿಗೆ, ಕ್ರಿಯಾಶಕ್ತಿಯೊಂದಿಗೆ, ಮತ್ತು ಸ್ವಪ್ರೇರಣೆಯಿಂದ ತಮ್ಮದೇ ಆದ ಹೋರಾಟದಲ್ಲಿ ತೊಡಗಿದ್ದರು ಹಾಗೂ ತಮ್ಮ ಸಾಮೂಹಿಕ ಭವಿಷ್ಯವನ್ನು ತಾವೇ ನಿರ್ಧರಿಸುವ ನಿಟ್ಟಿನಲ್ಲಿ ಹೋರಾಟನಿರತರಾಗಿದ್ದರು. ವರ್ತಮಾನದ ಕಾಲಘಟ್ಟದಲ್ಲಿ ದುಡಿಯುವ ಜನತೆಗೆ ಒಂದು ಸ್ಥಾನವನ್ನು ನಿರಾಕರಿಸಿರುವುದೇ ಅಲ್ಲದೆ, ಚರಿತ್ರೆಯಲ್ಲೂ ಅವರ ಪಾತ್ರವನ್ನು ಅಲ್ಲಗಳೆಯಲಾಗಿದೆ” ಎಂದು ಹೇಳುತ್ತಾರೆ.
ಆದರೆ ಆರೆಸ್ಸೆಸ್ ಸಹ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ಪ್ರತಿರೋಧದ ವಾಹಿನಿಯಾಗಿತ್ತು, ಈವರೆಗೂ ನಿರ್ಲಕ್ಷಿಸಲ್ಪಟ್ಟಿತ್ತು ಎನ್ನುವ ರಾಕೇಶ್ ಸಿನ್ಹಾ ಅವರ ವಾದ ಹುರುಳಿಲ್ಲದ್ದು. “ಸುಭಾಷ್ ಚಂದ್ರ ಬೋಸ್ ಅವರಿಂದ ಸ್ಥಾಪಿಸಲ್ಪಟ್ಟ ಫಾರ್ವರ್ಡ್ ಬ್ಲಾಕ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‍ಎ) ನಂತಹ ಶಕ್ತಿಗಳು, ಆರೆಸ್ಸೆಸ್ ಮತ್ತು ಕ್ರಾಂತಿಕಾರಿಗಳು ತಮ್ಮ ನಡುವಿನ ಸಾಮಾಜಿಕಾರ್ಥಿಕ ದೃಷ್ಟಿಕೋನದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಒಟ್ಟಿಗೇ ಅಂದೋಲನದಲ್ಲಿ ಪಾಲ್ಗೊಂಡಿದ್ದವು, ಬ್ರಿಟೀಷ್ ಸಾಮ್ರಾಜ್ಯವನ್ನು ಅಂತ್ಯಗೊಳಿಸಲು ಹೋರಾಡಿದವು ಮತ್ತು ಹಿಂಸೆಯನ್ನು ಒಂದು ನೈತಿಕ ಅಂಶವನ್ನಾಗಿ ಪರಿಗಣ ಸಿದ್ದವು. ಅದೇ ವೇಳೆ ಮುಖ್ಯವಾಹಿನಿಯ ನಾಯಕತ್ವವು ತಮ್ಮ ಸಿದ್ಧಾಂತದ ವಿರುದ್ಧವಾದ ಆಲೋಚನೆಗಳನ್ನು ಜನರ ನಡುವೆ ಪ್ರಚಾರ ಮಾಡುತ್ತಿದ್ದವು” ಎಂದು ರಾಕೇಶ್ ಸಿನ್ಹಾ ಹೇಳುತ್ತಾರೆ. ಹೀಗೆ ರಾಕೇಶ್ ಸಿನ್ಹಾ, ನಮ್ಮ ಕಣ್ತಪ್ಪಿಸಿ, ಸದ್ದಿಲ್ಲದೆ, ಯಾವುದೇ ಉಲ್ಲೇಖಗಳಿಲ್ಲದೆ, ಬೋಸ್ ಅವರ ಐಎನ್‍ಎ, ಫಾರ್ವರ್ಡ್ ಬ್ಲಾಕ್, ಭಗತ್ ಸಿಂಗ್‍ನ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಪಕ್ಷ, ಇವುಗಳೊಡನೆ ಆರೆಸ್ಸೆಸ್ ಸಹ ಇತ್ತು ಎಂದು ಪ್ರತಿಪಾದಿಸಲೆತ್ನಿಸುತ್ತಾರೆ.
ಈ ಶಕ್ತಿಗಳು ಮುಖ್ಯವಾಹಿನಿಯ ಅಹಿಂಸಾ ಧೋರಣೆಗೆ ವ್ಯತಿರಿಕ್ತವಾಗಿ ಹಿಂಸಾತ್ಮಕ ಮಾರ್ಗವನ್ನು ಅನುಕರಿಸಿದ್ದವು ಎಂದು ಹೇಳುತ್ತಾರೆ. ಇದು ಹಾಸ್ಯಾಸ್ಪದ ಎಂದಷ್ಟೇ ಹೇಳಬಹುದ. ಏಕೆಂದರೆ ಆರೆಸ್ಸೆಸ್ ಮುಸ್ಲಿಮರ ವಿರುದ್ಧ ಮಾತ್ರವೇ ಹಿಂಸಾತ್ಮಕ ಧೋರಣೆ ಅನುಸರಿಸಿತ್ತೇ ಹೊರತು ಬ್ರಿಟೀಷರ ವಿರುದ್ಧ ಅಲ್ಲ. ಆರೆಸ್ಸೆಸ್ ನಾಯಕರು ಎಂದೂ ಬ್ರಿಟೀಷರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯನ್ನು ಮಾಡಿರಲಿಲ್ಲ. ಬದಲಾಗಿ ಬ್ರಿಟೀಷ್ ವಿರೋಧಿ ಧೋರಣೆಯನ್ನು ನಿರಾಕರಿಸಿ ಮುಸ್ಲಿಂ ದ್ವೇಷ ಮತ್ತು ಮುಸ್ಲಿಮರ ವಿರುದ್ಧ ಹಿಂಸಾತ್ಮಕ ಧೋರಣೆಯನ್ನು ಅನುಮೋದಿಸಿತ್ತು. ಒಂದು ವಿಚಾರದಲ್ಲಿ ಬೋಸ್ ಮತ್ತು ಭಗತ್ ಸಿಂಗ್ ಗಾಂಧಿ ಮತ್ತು ನೆಹರೂ ಅವರೊಂದಿಗೆ ಸಹಮತ ಹೊಂದಿದ್ದುದೆಂದರೆ, ಹಿಂದೂ ಪರಮಾಧಿಕಾರದ ರಾಷ್ಟ್ರೀಯವಾದ ಮತ್ತು ಕೋಮುವಾದಿ ರಾಜಕಾರಣದ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದರು.
ಹಿಂಸೆ ಅಥವಾ ಅಹಿಂಸೆ ಎನ್ನುವ ಆಧಾರದ ಮೇಲೆ ಸ್ವಾತಂತ್ರ್ಯ ಸಂಗ್ರಾಮವನ್ನು ವ್ಯಾಖ್ಯಾನಿಸುವುದು ಹಳಸಲು ವಾದ. ಈ ಸುಲಭ ಮಾರ್ಗ ಅನುಸರಿಸುವುದಕ್ಕಿಂತಲೂ ಅವರ ನಿರ್ದಿಷ್ಟ ಸೈದ್ಧಾಂತಿಕ ಪ್ರಚೋದನೆಗಳು ಮತ್ತು ಕಾರ್ಯನೀತಿಗಳನ್ನು ಪರಾಮರ್ಶಿಸುವುದು ಅಗತ್ಯ. ಇಲ್ಲಿ ಪ್ರಶ್ನೆ ಉದ್ಭವಿಸುವುದು ಅವರು ಹಿಂಸೆಯನ್ನು ಅನುಮೋದಿಸಿದರೋ ಅಥವಾ ಅಹಿಂಸೆಯನ್ನೋ ಎನ್ನುವುದಕ್ಕಿಂತಲೂ, ಅವರು ಕೋಮುವಾದವನ್ನು, ಹಿಂದೂ ಪರಮಾಧಿಕಾರದ ರಾಷ್ಟ್ರೀಯತೆಯನ್ನು ತಿರಸ್ಕರಿಸಿದರೋ ಇಲ್ಲವೋ, ಎಷ್ಟರ ಮಟ್ಟಿಗೆ ತಿರಸ್ಕರಿಸಿದ್ದರು ಎಂದು ಪರಾಮರ್ಶಿಸುವುದು ಒಳಿತು. ಅಲ್ಲಿ ಬೋಸ್ ಮತ್ತು ಭಗತ್ ಸಿಂಗ್ ಗಾಂಧಿ, ನೆಹರೂ, ಮೌಲಾನಾ ಅಜಾದ್ ಅವರೊಡನೆ ನಿಲ್ಲುತ್ತಾರೆ. ಸೆಕ್ಯುಲರ್ ವಾದವನ್ನು ಪ್ರತಿಪಾದಿಸುತ್ತಾರೆ. ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಹೋರಾಟದಲ್ಲಿ ರಾಜಿಯಾಗದೆ ಹಿಂದೂ ಪರಮಾಧಿಕಾರದ ರಾಷ್ಟ್ರೀಯತೆಯೊಡನೆ ರಾಜಿಯಾಗಿದ್ದ ತಿಲಕ್ ಮತ್ತು ಲಾಲಾ ಲಜಪತ್ ರಾಯ್ ಅವರೊಡನೆ ನಿಲ್ಲುತ್ತಾರೆ. ಬ್ರಿಟೀಷರೊಡನೆ ರಾಜಿ ಮಾಡಿಕೊಳ್ಳುವುದರಲ್ಲಿ ವಿಶಿಷ್ಟವಾಗಿದ್ದ ಆರೆಸ್ಸೆಸ್ ತನ್ನ ಮುಸ್ಲಿಂ ವಿರೋಧಿ ದ್ವೇಷದ ಧೋರಣೆಯಲ್ಲಿ ಸ್ಪಷ್ಟವಾಗಿತ್ತು. ಹಾಗಾಗಿಯೇ ಆರೆಸ್ಸೆಸ್ ಏನೇ ಪ್ರಯತ್ನಿಸಿದರೂ, ಕಣ್ತಪ್ಪಿಸಿ ಸುಳ್ಳುಗಳನ್ನು ಹೆಣೆದರೂ ಸೂಕ್ಷ್ಮವಾಗಿ ಗಮನಿಸಿದಾಗ ವಾಸ್ತವ ಬಯಲಾಗುತ್ತದೆ. ಇದನ್ನು ಅರಗಿಸಿಕೊಳ್ಳಲಾಗುವುದೂ ಇಲ್ಲ.
1920ರ ದಶಕ
1921ರ ಕಾಂಗ್ರೆಸ್‍ನ ಅಹಮದಾಬಾದ್ ಸಮಾವೇಶದಲ್ಲಿ ಮೌಲಾನಾ ಹಸರತ್ ಮೊಹಾನಿ ಮೊದಲ ಬಾರಿಗೆ ಪೂರ್ಣ ಸ್ವರಾಜ್ ನಿರ್ಣಯವನ್ನು ಮಂಡಿಸಿದ್ದರು. ಆದರೆ ಗಾಂಧಿ ಮತ್ತು ಸಮಸ್ತ ಕಾಂಗ್ರೆಸ್ ಪಕ್ಷ ಈ ಆಗ್ರಹವನ್ನು ಅನುಮೋದಿಸಿದ್ದು 1929ರಲ್ಲಿ. 1920ರ ದಶಕದಲ್ಲಿ ಮತ್ತಾವ ಮಹತ್ತರ ಬೆಳವಣಗಳಾದವು? 1925ರಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಆರೆಸ್ಸೆಸ್‍ನ ಸ್ಥಾಪನೆಯಾಯಿತು.
ದೇಶಾದ್ಯಂತ ಉಲ್ಬಣಗೊಂಡಿದ್ದ ದುಡಿಯುವ ವರ್ಗಗಳ ಸಂಘರ್ಷಗಳ ಹಿನ್ನೆಲೆಯಲ್ಲಿ ಹಾಗೂ 1922-23ರಲ್ಲಿ ನಾಲ್ಕು ಕಮ್ಯುನಿಸ್ಟ್ ಗುಂಪುಗಳು ರಚನೆಯಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸ್ಥಾಪನೆಯಾಗಿತ್ತು. 1917ರ ರಷ್ಯಾದ ಬೋಲ್ಷೆವಿಕ್ ಕ್ರಾಂತಿಯ ಗಾಢ ಪ್ರಭಾವ ಮತ್ತು ಚೌರಿಚೌರಾ ಘಟನೆಗಳ ಹಿನ್ನೆಲೆಯಲ್ಲಿ ಗಾಂಧಿ ಅಸಹಕಾರ ಚಳುವಳಿಯನ್ನು ಹಠಾತ್ತನೆ ಹಿಂಪಡೆದುಕೊಂಡ ವಿವಾದಾಸ್ಪದ ನಿರ್ಧಾರ ಇವೆರೂ ಸಹ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಗೆ ಕಾರಣವಾದವು. ಅರಿಂದಮ್ ಸೆನ್ ತಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಮ್ಯುನಿಸ್ಟರು ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ :-
1920ರ ದಶಕದಲ್ಲಿ ಮತ್ತು 1930ರ ದಶಕದ ಆರಂಭದ ದಿನಗಳಲ್ಲಿ ಪೇಷಾವರ, ಕಾನ್ಪುರ, ಮೀರತ್ ಮತ್ತಿತರ ಪಿತೂರಿ ಪ್ರಕರಣಗಳನ್ನು ಆರೋಪಿಸಿ ಬ್ರಿಟೀಷ್ ಸರ್ಕಾರ ಮೊಕದ್ದಮೆಗಳನ್ನು ಹೂಡಲಾರಂಭಿಸಿದ್ದೇ, ಬ್ರಿಟೀಷರು ಕಮ್ಯುನಿಸ್ಟರನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣ ಸಿದ್ದುದಕ್ಕೆ ಸಂಕೇತವಾಗಿತ್ತು. ಇವುಗಳ ಪೈಕಿ ಪೇಷಾವರ ಪಿತೂರಿ ಮೊಕದ್ದಮೆ ಪ್ರಸಿದ್ಧಿಯಾಗಿತ್ತು. ದುಡಿಯುವ ವರ್ಗಗಳ ಹೋರಾಟಗಳು ಬಲಗೊಳ್ಳುತ್ತಿದ್ದುದನ್ನು ಕಂಡು ಬ್ರಿಟೀಷ್ ಆಡಳಿತ ಆತಂಕಕ್ಕೀಡಾಗಿತ್ತು. ಮೇಲಾಗಿ ಸೈಮನ್ ಆಯೋಗದ ವಿರುದ್ಧ ಆರಂಭವಾದ ಸಂಘರ್ಷ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟವನ್ನು ಪುನರಾರಂಭಿಸಿತ್ತು. ಭಗತ್ ಸಿಂಗ್ ಮತ್ತವನ ಸಂಗಾತಿಗಳು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದರು. ಕೆಲವು ಕಮ್ಯುನಿಸ್ಟ್ ನಾಯಕರು ರಾಷ್ಟ್ರೀಯ ನಾಯಕರಿಗೆ ಸಮೀಪವಾಗತೊಡಗಿದ್ದರು. ಈ ಸಂಘರ್ಷಗಳನ್ನು ಹತ್ತಿಕ್ಕಲು ಬ್ರಿಟೀಷ್ ಸರ್ಕಾರ 1929ರ ನಂತರ ದಮನಕಾರಿ ಕ್ರಮಗಳನ್ನು ಕೈಗೊಳ್ಳಲಾರಂಭಿಸಿತು. ಇವುಗಳಲ್ಲಿ ಪ್ರಮುಖವಾಗಿ ಮೀರತ್ ಪಿತೂರಿ ಮೊಕದ್ದಮೆ, ಸಾರ್ವಜನಿಕ ರಕ್ಷಣೆ ಮತ್ತು ವ್ಯಾಪಾರ ತಗಾದೆ ಕಾಯ್ದೆ ಮತ್ತು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಮೇಲಿನ ಮೊಕದ್ದಮೆ ಹಾಗೂ ಮರಣದಂಡನೆ ಮುಖ್ಯವಾದ ಘಟನೆಗಳಾಗಿದ್ದವು. ಮಾರ್ಚ್ 1929ರಲ್ಲಿ ಕೊಲ್ಕತ್ತಾ, ಬಾಂಬೆ ಮತ್ತು ಇತರ ಪ್ರಾಂತ್ಯಗಳಿಂದ 31 ಕಾರ್ಮಿಕ ನಾಯಕರನ್ನು (ಮೂವರು ಬ್ರಿಟೀಷರನ್ನೂ ಸೇರಿದಂತೆ) ಬಂಧಿಸಲಾಯಿತು. ಇವರನ್ನು ಮೀರತ್ ಪಿತೂರಿ ಮೊಕದ್ದಮೆಯಲ್ಲಿ ಆರೋಪಿಗಳಾಗಿ ಮೀರತ್‍ಗೆ ಕರೆತರಲಾಯಿತು.
ಆರೋಪಿತ ಕಮ್ಯುನಿಸ್ಟರು ತಮ್ಮ ಸಿದ್ಧಾಂತವನ್ನು, ಧ್ಯೇಯೋದ್ದೇಶಗಳನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ನ್ಯಾಯಾಲಯದ ಅಂಗಳವನ್ನು ಬಳಸಿಕೊಂಡರು. ಕಮ್ಯುನಿಸ್ಟರು ಮತ್ತು ರಾಷ್ಟ್ರೀಯ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುವ ಬ್ರಿಟೀಷರ ಪ್ರಯತ್ನಗಳು ವಿಫಲವಾದವು. ನೆಹರೂ, ಗಾಂಧಿ ಮತ್ತಿತರ ನಾಯಕರು ಮೀರತ್ ಸೆರೆಮನೆಗೆ ಭೇಟಿ ನೀಡಿದ್ದರು. ಆರೋಪಿ ಕಮ್ಯುನಿಸ್ಟರು ಇತರ ಸೆರೆಮನೆಗಳಲ್ಲಿದ್ದ ಸತ್ಯಾಗ್ರಹಿಗಳಿಗೂ ಸಂದೇಶವನ್ನು ರವಾನಿಸಿ ರಾಜಕೀಯ ನಿಲುವನ್ನು ಬೆಂಬಲಿಸಿದ್ದರು. ಈ ಸಂದರ್ಭದಲ್ಲೇ ಕಮ್ಯುನಿಸ್ಟರು ಬ್ರಿಟೀಷರ ಠಕ್ಕುತನ, ನೈತಿಕ ದೀವಾಳಿತನ ಮತ್ತು ಬ್ರಿಟೀಷ್ ನ್ಯಾಯ ವ್ಯವಸ್ಥೆ ಹೇಗೆ ನಾಗರಿಕತೆಯಿಂದ ಹೊರತಾಗಿದೆ ಎಂದು ನಿರೂಪಿಸಿದ್ದರು. ವಿಶ್ವದಾದ್ಯಂತ ಕಾರ್ಮಿಕರು ಈ ವಿಚಾರಣೆ ಮತ್ತು ಶಿಕ್ಷೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು. ರೊಮೇನ್ ರೋಲಾಂಡ್ ಮತ್ತು ಪ್ರೊ. ಆಲ್ಬರ್ಟ್ ಐನ್‍ಸ್ಟೀನ್ ಸಹ ಈ ವಿಚಾರಣೆಯ ವಿರುದ್ಧ ದನಿ ಎತ್ತಿದ್ದರು. ಕಾಂಗ್ರೆಸ್‍ನಲ್ಲಿದ್ದ ಪೂರ್ಣ ಸ್ವರಾಜ್‍ಗಾಗಿ ದನಿ ಎತ್ತಿದ್ದ ನಾಯಕರಿಗೆ, ವಸಾಹತು ಆಳ್ವಿಕೆಯಿಂದ ವಿಮೋಚನೆಗಾಗಿ ಮತ್ತು ಸಾಮಾಜಿಕಾರ್ಥಿಕ ಮನ್ವಂತರಕ್ಕಾಗಿ ಹೋರಾಡುತ್ತಿದ್ದ ಕಮ್ಯುನಿಸ್ಟರು ಮತ್ತಿತರ ಕ್ರಾಂತಿಕಾರಿಗಳಿಗೆ ಹೋಲಿಸಿದರೆ, ಆರೆಸ್ಸೆಸ್‍ಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರುವುದಕ್ಕೆ ಯಾವುದೇ ದಾಖಲೆಗಳನ್ನು ತೋರಿಸಲಾಗುವುದಿಲ್ಲ.
ಅಷ್ಫಾಖುಲ್ಲಾ ಎಚ್ಚರಿಕೆ
ಕಾಕೋರಿ ಹುತಾತ್ಮರಾದ ರಾಮಪ್ರಸಾದ್ ಬಿಸ್ಮಿಲ್, ಅಷ್ಫಾಖುಲ್ಲಾ ಖಾನ್, ರಾಜೇಂದರ್ ಲಹಿರಿ ಮತ್ತು ರೋಷನ್ ಸಿಂಗ್ ತಮ್ಮ ಗಲ್ಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಹಿಂದೂಗಳು ಶುದ್ಧಿ ಚಳುವಳಿಯ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮರುಮತಾಂತರಗೊಳಿಸುವ ಮೂಲಕ ದ್ವೇಷದ ವಿಷಬೀಜ ಬಿತ್ತುತ್ತಿರುವುದರ ವಿರುದ್ಧ ಮತ್ತು, ಈ ಶುದ್ಧಿ ಚಳುವಳಿಗೆ ಪ್ರತಿಯಾಗಿ ಮುಸ್ಲಿಮರು ಇಸ್ಲಾಂ ಪ್ರಚಾರ ಮಾಡಲು ತಬ್ಲೀಗಿ ಚಳುವಳಿಯನ್ನು ಹಮ್ಮಿಕೊಂಡಿದ್ದುದು, ಈ ನಾಲ್ವರು ಹುತಾತ್ಮರಿಗೆ ತೀವ್ರ ಖೇದ ಉಂಟುಮಾಡಿತ್ತು. 1927ರ ಡಿಸೆಂಬರ್ 19ರಂದು ಗಲ್ಲುಶಿಕ್ಷೆಗೊಳಗಾಗುವ ಮೂರು ದಿನಗಳ ಮುನ್ನ ಅಷ್ಫಾಖ್ ತನ್ನ ಪತ್ರವೊಂದನ್ನು ರಹಸ್ಯವಾಗಿ ಫೈಜಾಬಾದ್ ಸೆರೆಮನೆಯಿಂದ ರವಾನಿಸಿದ್ದ. ಈ ಪತ್ರದಲ್ಲಿ ಅಷ್ಫಾಖ್, “ಹಿಂದೂಗಳು ಮತ್ತು ಮುಸ್ಲಿರು ಸೌಹಾರ್ದಯುತವಾಗಿ ಐಕ್ಯತೆಯಿಂದ ಬಾಳಬೇಕು ಇಲ್ಲವಾದರೆ, ನೀವು ದೇಶದ ದುಸ್ಥಿತಿಗೆ ಕಾರಣರಾಗುತ್ತೀರಿ, ದೇಶದ ಗುಲಾಮಗಿರಿಗೆ ನಿಮ್ಮನ್ನು ಹೊಣೆ ಮಾಡಲಾಗುತ್ತದೆ ” ಎಂದು ಎಚ್ಚರಿಕೆ ನೀಡಿದ್ದ. ಈ ಪತ್ರದಲ್ಲಿ ಒಂದು ಚುಟುಕು ಕವಿತೆಯಲ್ಲಿ “ಈ ಕಲಹಗಳನ್ನು ಬಿಟ್ಟುಬಿಡಿ ಪರಸ್ಪರ ಹತ್ತಿರವಾಗಿ ನಿಮ್ಮ ಹಿಂದೂ ಮತ್ತು ಮುಸ್ಲಿಂ ವೈವಿಧ್ಯತೆಯೇ ಒಂದು ಅಚ್ಚರಿಯಾಗಿ ಕಾಣುತ್ತದೆ” ಎಂದು ಹೇಳಿದ್ದ.
ನೇತಾಜಿ ಪ್ರತಿರೋಧದ ಸೇನೆಯನ್ನು ರಚಿಸಿದ್ದರು ಹಿಂದೂ ಮಹಾಸಭಾ ಬ್ರಿಟೀಷ್ ಸೇನೆಯಲ್ಲಿ ಸೇರಿತ್ತು
ಭಾರತದಲ್ಲಿ ಬ್ರಿಟೀಷ್ ವಸಾಹತು ಆಳ್ವಿಕೆಯ ವಿರುದ್ಧ ನೇತಾಜಿ ಬೋಸ್ ಅಝಾದ್ ಹಿಂದ್ ಸೇನೆಯನ್ನು ಸ್ಥಾಪಿಸುವ ಮೂಲಕ ಸವಾಲೆಸೆದಿದ್ದರು. ಜಪಾನ್ ಮತ್ತು ಫ್ಯಾಸಿಸ್ಟ್ ಜರ್ಮನಿಯೊಡನೆ ಕೈಜೋಡಿಸಿದ್ದಕ್ಕಾಗಿ ಬೋಸ್ ಅವರನ್ನು ಟೀಕಿಸಬಹುದಾದರೂ, ಬೋಸ್ ಸೆಕ್ಯುಲರ್ ಆಗಿದ್ದರು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅವರ ಪ್ರಬಂಧ “ಮುಕ್ತ ಭಾರತ ಮತ್ತು ಅವಳ ಸಮಸ್ಯೆಗಳು ” ಪ್ರಬಂಧದಲ್ಲಿ ಬೋಸ್, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿರುವುದು ಬ್ರಿಟೀಷರು, ಬ್ರಿಟೀಷರು ನಿರ್ಗಮಿಸಿದರೆ ಕೋಮು ಘರ್ಷಣೆ ಇಲ್ಲವಾಗುತ್ತದೆ ಎಂದು ಹೇಳಿದ್ದರು. ವ್ಯಕ್ತಿಗತವಾಗಿ ಮತ್ತು ಎಲ್ಲ ಗುಂಪುಗಳಿಗೂ ಮತೀಯ ಹಾಗೂ ಸಾಂಸ್ಕøತಿಕ ಸ್ವಾತಂತ್ರ್ಯ ಲಭಿಸಬೇಕು ಎಂದು ಪ್ರತಿಪಾದಿಸಿದ್ದ ಬೋಸ್, ಯಾವುದೇ ಪ್ರಭುತ್ವದ ಮತವನ್ನು ಅನುಮೋದಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆಝಾದ್ ಹಿಂದ್ ಸೇನೆಯ ನಾಯಕರಾದ ಶಾ ನವಾಜ್ ಖಾನ್, ಪ್ರೇಮ್ ಸೆಹಗಲ್, ಗುರುಭಕ್ಷ್ ಸಿಂಗ್ ಧಿಲ್ಲನ್, ಅಬ್ದುಲ್ ರಷೀದ್, ಶಿಂಘಾರಾ ಸಿಂಗ್, ಫತೇಹ್ ಖಾನ್, ಕ್ಯಾಪ್ಟನ್ ಮುನಾವರ್ ಖಾನ್ ಅವನ್, ಇವರೆಲ್ಲರ ವಿಚಾರಣೆ ಮತ್ತು ಶಿಕ್ಷೆಯೇ ವಸಾಹತು ವಿರೋಧಿ ಐಕ್ಯತೆಗೆ ಸ್ಪೂರ್ತಿಯಾಗಿ ಪರಿಣಮಿಸಿತ್ತಲ್ಲದೆ ಕೋಮುವಾದಿ ರಾಜಕಾರಣದ ನಿರಾಕರಣೆಯೂ ಆಗಿತ್ತು.
ಇದಕ್ಕೆ ವ್ಯತಿರಿಕ್ತವಾಗಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ಎರಡನೆ ಮಹಾಯುದ್ಧದಲ್ಲಿ ಬ್ರಿಟೀಷ್ ಸೇನೆಗೆ ನೇಮಕಗೊಳ್ಳುತ್ತಾರೆ :
“ಭಾರತದ ರಕ್ಷಣೆಯ ಬಗ್ಗೆ ಹೇಳುವುದಾದರೆ, ಹಿಂದೂಸ್ತಾನವು ಯಾವುದೇ ಹಿಂಜರಿಕೆಯಿಲ್ಲದೆ, ಪರಸ್ಪರ ಸಹಕಾರದ ಧೋರಣೆಯೊಂದಿಗೆ, ಭಾರತ ಸರ್ಕಾರದ ಪ್ರಯತ್ನಗಳೊಡನೆ, ಅದು ಹಿಂದೂ ಹಿತಾಸಕ್ತಿಗಳಿಗೆ ಅನುಗುಣವಾಗಿದ್ದಲ್ಲಿ, ಕೈಜೋಡಿಸಬೇಕಿದೆ. ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಹೆಚ್ಚಿನ ಜನರು ನೇಮಕವಾಗುವ ಮೂಲಕ ಹೆಚ್ಚಿನ ಜನರು ಶಸ್ತ್ರಾಸ್ತ್ರಗಳನ್ನು ಹೊಂದಿ, ಯುದ್ಧಕಲೆಯ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕಿದೆ, ಹಾಗಾಗಿ ಹಿಂದೂ ಮಹಾಸಭಾ ಬಂಗಾಲ ಮತ್ತು ಅಸ್ಸಾಂ ಪ್ರಾಂತ್ಯಗಳಲ್ಲಿನ ಹಿಂದೂಗಳನ್ನು ಪರಿಣಾಮಕಾರಿಯಾಗಿ ಹುರಿದುಂಬಿಸಿ, ಒಂದು ಕ್ಷಣವೂ ತಡ ಮಾಡದೆ ಸೇನಾ ಪಡೆಗಳಲ್ಲಿ ಎಲ್ಲ ಶಸ್ತ್ರಗಳನ್ನೂ ಬಳಸಲು ಸಜ್ಜಾಗಬೇಕು” ಎಂದು ಸಾವರ್ಕರ್ ಹೇಳುತ್ತಾರೆ. (ವಿ ಡಿ ಸಾವರ್ಕರ್, ಸಮಗ್ರ ಸಾವರ್ಕರ್ ವಾಜ್ಞಯ ಹಿಂದೂ ರಾಷ್ಟ್ರ ದರ್ಶನ ಸಂಪುಟ 6 ಮಹಾರಾಷ್ಟ್ರ ಪ್ರಾಂತ್ಯ ಹಿಂದೂ ಸಭಾ ಪೂನಾ 1963 ಪು 460)
ಹಿಂದೂ ಮಹಾಸಭಾದ ಮತ್ತೋರ್ವ ಮತಾಂಧ ಮತ್ತು ಪ್ರಸ್ತುತ ಸಂಘಪರಿವಾರದ ಅಪ್ರತಿಮ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಪಶ್ಚಿಮ ಬಂಗಾಲದ ವಿತ್ತ ಸಚಿವರಾಗಿದ್ದು, ಬಂಗಾಲದ ಪ್ರಧಾನಮಂತ್ರಿ ಮುಸ್ಲಿಂ ಲೀಗ್‍ನ ಫಜಲುಲ್ ಹಕ್ ಅವರ ನಂತರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದರು. ಲೀಗ್ ಮತ್ತು ಹಿಂದೂ ಸಭಾ ಎರಡೂ, ಕೋಮುವಾದಿ ರಾಜಕಾರಣದಲ್ಲಿ ತೊಡಗಿದ್ದ ವಿರೋಧಿ ಬಣಗಳಾಗಿದ್ದರೂ, ಬ್ರಿಟೀಷರ ಯುದ್ಧ ಸಿದ್ಧತೆಗೆ ಕೈಜೋಡಿಸಿದ್ದರು. ಕ್ವಿಟ್ ಇಂಡಿಯಾ ಚಳುವಳಿಗೆ ಬೆಂಬಲಿಸುತ್ತಾ ಭಾರತದ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ಸಲ್ಲಿಸಿದಾಗ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ರಾಜೀನಾಮೆ ನೀಡಲು ನಿರಾಕರಿಸಿದ್ದವು. 1942ರ ಜುಲೈ 26ರಂದು ಮುಖರ್ಜಿ ಬಂಗಾಲದ ಬ್ರಿಟೀಷ್ ಗವರ್ನರ್ ಜಾನ್ ಹರ್ಬರ್ಟ್‍ಗೆ ಬರೆದ ಪತ್ರದಲ್ಲಿ “ ಯುದ್ಧದ ಸಂದರ್ಭದಲ್ಲಿ ಯಾರೇ ಆದರೂ ಜನತೆಯ ಭಾವನೆಗಳನ್ನು ಕೆರಳಿಸಲು ಯತ್ನಿಸಿದರೆ, ಅಂತರಿಕವಾಗಿ ಪ್ರಕ್ಷುಬ್ಧತೆ ಸೃಷ್ಟಿಸಲು ಯತ್ನಿಸಿದರೆ ಅಥವಾ ಅಭದ್ರತೆಯನ್ನು ಸೃಷ್ಟಿಸಿದರೆ, ಅದನ್ನು ವಿರೋಧಿಸಿ ಅಂದಿನ ಸರ್ಕಾರಗಳು ಅಂತಹ ಪ್ರತಿರೋಧಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ” ಎಂದು ಬರೆಯುತ್ತಾರೆ.
ಭಾರತದ ಧ್ವಜವನ್ನು ಅವಹೇಳನ ಮಾಡಿದ್ದ ಆರೆಸ್ಸೆಸ್
ಓರ್ವ ಮುಸ್ಲಿಂ ದಂಪತಿ ರಾಷ್ಟ್ರ ಧ್ವಜದ ವಿನ್ಯಾಸವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲೇ ಆಗಸ್ಟ್ 1947ರಂದು ಆರೆಸ್ಸೆಸ್ ಮುಖವಾಣ ಪತ್ರಿಕೆ ಆರ್ಗನೈಸರ್ ತನ್ನ ಸಂಪಾದಕೀಯದಲ್ಲಿ ರಾಷ್ಟ್ರಧ್ವಜವನ್ನು ಅವಹೇಳನ ಮಾಡುತ್ತಾ ಹೀಗೆ ಹೇಳಿತ್ತು : “ ಅದೃಷ್ಟವಶಾತ್ ಅಧಿಕಾರಕ್ಕೆ ಬಂದಿರುವ ಜನರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ನೀಡಬಹುದು ಆದರೆ ಹಿಂದೂಗಳು ಅದನ್ನು ಎಂದೂ ಒಪ್ಪುವುದಿಲ್ಲ, ಗೌರವಿಸುವುದೂ ಇಲ್ಲ. ಮೂರರ ಸಂಖ್ಯೆಯೇ ಅಶುಭದ ಸಂಕೇತವಾಗಿದ್ದು , ಮೂರು ಬಣ್ಣಗಳಿರುವ ಧ್ವಜವು ಮಾನಸಿಕವಾಗಿ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಇದು ದೇಶಕ್ಕೆ ಹಾನಿಕಾರಕವಾಗಿರುತ್ತದೆ.”
28 ವರ್ಷದ ಸುರಯ್ಯ ತಯಾಬ್ಜಿ ಮತ್ತು ಆಕೆಯ ಪತಿ ಬದ್ರುದ್ರಿನ್ ತಯಾಬ್ಜಿ ಅದೇ ದಿನದಂದು ರಾಷ್ಟ್ರಧ್ವಜದ ವಿನ್ಯಾಸವನ್ನು ನಿರ್ಧರಿಸುವುದರ ಹಿಂದೆ ಒಂದು ಕುತೂಹಲಕಾರಿ ಸಂಗತಿ ಇದೆ. ಅವರ ಮಗಳು ಲೈಲಾ ತಯಾಬ್ಜಿ ಸ್ವಾತಂತ್ರ್ಯ ಲಭಿಸುವ ಕೆಲವೇ ದಿನಗಳ ಮುನ್ನ ನೆಹರೂ ಅವರ ಕೋರಿಕೆಯ ಮೇರೆಗೆ ಆಕೆಯ ತಂದೆ ಬದ್ರುದ್ದಿನ್ ತಯಾಬ್ಜಿಗೆ ಒಂದು ಪತ್ರ ಬರೆಯುತ್ತಾಳೆ. ಆಕೆಯ ತಂದೆ ಧ್ವಜ ಸಮಿತಿಯೊಂದನ್ನು ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ರಚಿಸಿ ಎಲ್ಲ ಶಾಲೆಗಳಿಗೂ ತಮ್ಮದೇ ಆದ ವಿನ್ಯಾಸವನ್ನು ರಚಿಸುವಂತೆ ಕೋರುತ್ತಾರೆ. ನೂರಾರು ವಿನ್ಯಾಸಗಳು ಬರುತ್ತವೆ. ಇವುಗಳಲ್ಲಿ ಬಹುಪಾಲು ವಿನ್ಯಾಸಗಳು ಬ್ರಿಟೀಷ್ ಲಾಂಛನದಿಂದ ಸ್ಪೂರ್ತಿ ಪಡೆದಂತಿರುತ್ತದೆ. ಬ್ರಿಟೀಷ್ ಸಾಮ್ರಾಜ್ಯ ಚಿಹ್ನೆಯ ಬದಿಯಲ್ಲಿರುವ ಯೂನಿಕಾರ್ನ್ ಜಾಗದಲ್ಲಿ ಸಿಂಹದ ಬದಲು ಆನೆ, ಹುಲಿ, ಹಂಸ ಮತ್ತು ಜಿಂಕೆಯ ಚಿತ್ರಗಳಿರುತ್ತವೆ. ಬ್ರಿಟೀಷ್ ಕಿರೀಟದ ಬದಲು ತಾವರೆ ಹೂವಿನ ಚಿತ್ರ ಅಥವಾ ಕಳಶ ಅಥವಾ ಅಂತಹುದೇ ಚಿತ್ರಗಳಿರುತ್ತವೆ.
ನೆಹರೂ ಮತ್ತಿತರು ಆತಂಕದಿಂದಿರುವಾಗಲೇ ಆಕೆಯ ತಂದೆ ತಾಯಿ ಸಿಂಹದ ತಲೆ ಮತ್ತು ಚರಕವನ್ನು ಅಶೋಕ ಸ್ತಂಭದ ಮೇಲಿರಿಸುವ ಚಿತ್ರ ಬಿಡಿಸುತ್ತಾರೆ. ಇಬ್ಬರೂ ಆ ಚಿತ್ರವನ್ನಷ್ಟೇ ಅಲ್ಲದೆ ಆ ಕಾಲಘಟ್ಟದ ಮೌಲ್ಯಗಳನ್ನು ಮೆಚ್ಚಿದವರಾಗಿರುತ್ತಾರೆ. ತಾಯಿ ಸುರಯ್ಯ ಸಿದ್ಧಪಡಿಸಿದ ವಿನ್ಯಾಸದ ಕರಡನ್ನು ವೈಸ್‍ರೀಗಲ್ ಲಾಜ್ (ಈಗ ರಾಷ್ಟ್ರಪತಿ ಭವನ)ನಲ್ಲಿರುವ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ. ಇದು ಎಲ್ಲರನ್ನೂ ಪ್ರಭಾವಿಸಿ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ಆಗಿನಿಂದಲೂ ನಾಲ್ಕು ಸಿಂಹದ ತಲೆಗಳ ( ಅಶೋಕನ ರಾಜಧಾನಿ) ಲಾಂಛನವನ್ನು ಅಂಗೀಕರಿಸಲಾಗಿದೆ. ಇಂದು ನಾವು ನೋಡುತ್ತಿರುವ ಭಾರತದ ಧ್ವಜದ ವಿನ್ಯಾಸವನ್ನು ಸಿದ್ಧಪಡಿಸಿದವರು ಸುರಯ್ಯ ಮತ್ತು ಬದ್ರುದ್ದಿನ್ ತಯಾಬ್ಜಿ ದಂಪತಿ. ಪಿಂಗಳಿ ವೆಂಕಯ್ಯ ಸಿದ್ಧಪಡಿಸಿದ್ದ ವಿನ್ಯಾಸದಲ್ಲಿದ್ದ ಚರಕದ ಬದಲು ಅಶೋಕ ಚಕ್ರವನ್ನು ಅಳವಡಿಸಲಾಗಿದೆ. ಈ ಕುರಿತು ಲೈಲಾ: “ ನನ್ನ ತಾಯಿಯ ಮೇಲ್ವಿಚಾರಣೆಯಲ್ಲಿ ಕನಾಟ್ ಪ್ಲೇಸ್‍ನಲ್ಲಿದ್ದ ಎಡ್ಡಿ ಟೈಲರ್ಸ್ ಮತ್ತು ಡ್ರೇಪರ್ಸ್ ಸಿದ್ಧಪಡಿಸಿದ್ದ ಈ ಧ್ವಜ ರೈಸಿನಾ ಹಿಲ್ ಮೇಲೆ ಹಾರಾಡುವುದನ್ನು ನನ್ನ ತಂದೆ ನೋಡಿದ್ದರು. ” ಎಂದು ಹೆಮ್ಮೆಯಿಂದ ನೆನೆಯುತ್ತಾರೆ. ಈ ವೈಯಕ್ತಿಕ ಆಸಕ್ತಿ ಮತ್ತು ಬದ್ಧತೆಯಿಂದ ಸಿದ್ಧಪಡಿಸಿದ ವಿವರಗಳೇ ತ್ರಿವರ್ಣ ಧ್ವಜದ ವೈಶಿಷ್ಟ್ಯವಾಗಿ ಕಾಣುತ್ತದೆ. ಲೈಲಾ ಹೇಳುವಂತೆ, ವಿಭಜನೆಯ ಕರಾಳ ನೆನಪುಗಳ ನಡುವೆಯೂ, ಅಂದು ಪರಸ್ಪರ ಸ್ಪಂದನೆ ಮತ್ತು ಐಕ್ಯತೆ ಇತ್ತು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ವೈವಿಧ್ಯಮಯ ಜನರನ್ನು ಒಂದಾಗಿಸಿತ್ತು. ಎಲ್ಲರ ಧ್ಯೇಯ ಭಾರತೀಯತೆಯೇ ಆಗಿತ್ತೇ ಹೊರತು, ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ.
ವಿಭಜನೆಗೆ ಒತ್ತಾಯಿಸಿದವರಾರು-ವಿರೋಧಿಸಿದವರಾರು?
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 14ರ ದಿನವನ್ನು ವಿಭಜನೆಯ ಕರಾಳತೆಯನ್ನು ಸ್ಮರಿಸುವ ದಿನವನ್ನಾಗಿ ಅಚರಿಸಲು ಕರೆ ನೀಡಿದ್ದಾರೆ. ಇದು ವಿಭಜನೆಯ ಸಂದರ್ಭದಲ್ಲಿ ನಡೆದ ಹತ್ಯಾಕಾಂಡ, ಹಿಂಸಾಕೃತ್ಯಗಳಿಗೆ ಕೇವಲ ಪಾಕಿಸ್ತಾನವನ್ನು ಮತ್ತು ಮುಸ್ಲಿಮರನ್ನು ದೂಷಿಸುವ ಮತ್ತು ಹಿಂದೂಗಳಲ್ಲಿ ದ್ವೇಷ ಭಾವನೆಯನ್ನು ಬಿತ್ತುವುದರ ಮೂಲಕ ಅದೇ ರೀತಿಯ ಹಿಂಸಾತ್ಮಕ ಮಾರ್ಗ ಅನುಸರಿಸಲು ಪ್ರಚೋದಿಸುವ ಒಂದು ತಂತ್ರವಾಗಿದೆ. ಈ ದ್ವೇಷಪೂರಿತ ಕೃತ್ಯಗಳ ತಯಾರಿಯನ್ನು ಹರಿಯಾಣ ಮತ್ತು ದೆಹಲಿಯಲ್ಲಿ ನಡೆದ ರ್ಯಾಲಿಗಳಲ್ಲಿ ಗುರುತಿಸಬಹುದು. ಈ ರ್ಯಾಲಿಗಳಲ್ಲಿ ಬಿಜೆಪಿ ನಾಯಕರು ಮತ್ತು ಹಿಂದೂ ಪರಮಾಧಿಕಾರವನ್ನು ಪ್ರತಿಪಾದಿಸುವ ಹಿಂದೂ ಮತಾಂಧ ಸಂಘಟನೆಗಳು ಭಾಗವಹಿಸಿದ್ದು ಯಾವುದೇ ನಿಯಂತ್ರಣವಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮಹಿಳಾ ಪತ್ರಕರ್ತರನ್ನು ಅಪಮಾನಿಸುವ ಹಿಂದೂ ಮತಾಂಧರ ಕೃತ್ಯಗಳು ಅಡೆತಡೆಯಿಲ್ಲದೆ ಸಾಗುತ್ತಿವೆ.
ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಯ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಗಾಂಧಿಯ ವಿರುದ್ಧ ದ್ವೇಷ ಕಾರುತ್ತಿದ್ದುದೇ ಅಲ್ಲದೆ ವಿಭಜನೆಗೆ ಗಾಂಧಿಯೇ ಕಾರಣ ಎಂದು ದೂಷಿಸುತ್ತಿದ್ದವು. ಈ ದ್ವೇಷ ಭಾವನೆಯೇ ತೀವ್ರಗಾಗಿ ನಾಥುರಾಮ್ ಗೋಡ್ಸೆಗೆ ಪ್ರಚೋದನೆಯನ್ನು ನೀಡಿದ್ದು ಗಾಂಧೀಜಿಯ ಹತ್ಯೆ ನಡೆದಿತ್ತು. ಈಗ ಮೋದಿ ಆಳ್ವಿಕೆಯಲ್ಲಿ ಗಾಂಧೀಜಿಯನ್ನು ಶೌಚಾಲಯ ಸ್ವಚ್ಚಗೊಳಿಸುವ, ಸ್ವಚ್ಚತೆಯ ಸಂಕೇತವಾಗಿ ಮಾಡಲಾಗಿದ್ದು, ನೆಹರೂ ಅವರನ್ನು ವಿಭಜನೆಯ ಮೂಲ ಕಾರಣಕರ್ತರೆಂದು ಬಿಂಬಿಸಲಾಗುತ್ತಿದೆ. ಸರ್ದಾರ್ ಪಟೇಲ್ ವಿಭಜನೆಯನ್ನು ವಿರೋಧಿಸಿದ್ದರು ಎಂದು ಪ್ರಚಾರ ಮಾಡಲಾಗುತ್ತಿದೆ. ವಾಸ್ತವ ಎಚಿದರೆ, ದೇಶದ ವಿಭಜನೆಗಾಗಿ ಮೌಂಟ್ ಬ್ಯಾಟನ್ ಸಲ್ಲಿಸಿದ ಪ್ರಸ್ತಾವನೆಯನ್ನು ಮೊದಲು ಪಟೇಲ್ ಅನುಮೋದಿಸಿದ್ದರು.
ಎರಡು ರಾಷ್ಟ್ರಗಳ ಆಗ್ರಹ – ಜಿನ್ನಾಗಿಂತಲೂ ಮುನ್ನ ಸಾವರ್ಕರ್ ಮಾಡಿದ್ದರು
1937ರಲ್ಲಿ ಅಹಮದಾಬಾದ್‍ನ ಕರ್ನಾವತಿಯಲ್ಲಿ ನಡೆದ ಹಿಂದೂಮಹಾಸಭಾ ಸಮಾವೇಶದಲ್ಲಿ ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ ಸಾವರ್ಕರ್ “ಭಾರತವನ್ನು ಇಂದು ಏಕೀಕೃತ ಮತ್ತು ಏಕರೂಪಿ ರಾಷ್ಟ್ರ ಎಂದು ಹೇಳಲಾಗುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿ ಎರಡು ರಾಷ್ಟ್ರಗಳಿವೆ. ಹಿಂದೂಗಳ ಮತ್ತು ಮುಸಲ್ಮಾನರ ದೇಶಗಳು ಇಲ್ಲಿವೆ ” ಎಂದು ಹೇಳಿದ್ದರು (ಸಮಗ್ರ ಸಾವರ್ಕರ್ ವಾಜ್ಞಯ ಸಂಪುಟ 6 ಮಹಾರಾಷ್ಟ್ರ ಪ್ರಾಂತೀಯ ಹಿಂದೂಸಭಾ ಪ್ರಕಟಣೆ 1963-65 ಪುಟ 296)
ಜಿನ್ನಾ ಪಾಕಿಸ್ತಾನದ ಸ್ಥಾಪನೆಗೆ ಮತ್ತು ಎರಡು ದೇಶಗಳ ಪ್ರಸ್ತಾವನೆಯನ್ನು ಮಂಡಿಸಿದ್ದು 1940ರಲ್ಲಿ ವಿಭಜನೆಗಾಗಿ ಶ್ಯಾಂ ಪ್ರಸಾದ್ ಮುಖರ್ಜಿ ಪ್ರಚಾರ ಮಾಡಿದ್ದರು
ಪ್ರೊಫೆಸರ್ ಶಮ್ಸುಲ್ ಇಸ್ಲಾಂ ಸ್ಪಷ್ಟವಾಗಿ ನಿರೂಪಿಸುವಂತೆ “ ವಾಸ್ತವವಾಗಿ ಮುಖರ್ಜಿ 1944ರಿಂದಲೇ ದೇಶದ ವಿಭಜನೆಯನ್ನು ಬೆಂಬಲಿಸಿದ್ದರು. ಒಮ್ಮೆ ಬಂಗಾಲದ ವಿಭಜನೆಯನ್ನು ಪ್ರಸ್ತಾಪಿಸಿದಾಗ ಅವರು ಜನರ ವಿರೋಧಕ್ಕೆ ಮಣ ದು ಸುಮ್ಮನಾಗಬೇಕಾಗಿತ್ತು. 1947ರ ಮೇ 2ರಂದು ಮುಖರ್ಜಿ ಅಂದಿನ ವೈಸರಾಯ್ ಲೂಯಿಸ್ ಮೌಂಟ್ ಬ್ಯಾಟನ್ ಅವರಿಗೆ ಬರೆದ ಪತ್ರದಲ್ಲಿ ಭಾರತದ ಏಕೀಕೃತವಾಗಿ ಉಳಿದರೂ ಬಂಗಾಲವನ್ನು ವಿಭಜಿಸುವಂತೆ ಕೋರಿದ್ದರು. ಬಂಗಾಲದ ಪ್ರಧಾನ ಮಂತ್ರಿ ಹುಸ್ಸೇನ್ ಸುಹ್ರಾವರ್ದಿ, ಸುಭಾಷ್ ಬೋಸ್ ಸೋದರ ಶರತ್ ಚಂದ್ರ ಬೋಸ್ ಮತ್ತು ಕಿರಣ್ ಶಂಕರ್ ರಾಯ್ ಅವರು ಒಂದು ವೇಳೆ ಸ್ವತಂತ್ರ ಬಂಗಾಲ ಸ್ಥಾಪಿಸುವಂತೆ ಆಗ್ರಹಿಸಿದರೂ ಮುಖರ್ಜಿ ಏಕೀಕೃತ ಬಂಗಾಲವನ್ನು ವಿರೋಧಿಸಿದ್ದರು. ಇದರ ಬದಲಾಗಿ ಎರಡು ರಾಷ್ಟ್ರಗಳ ತತ್ವವನ್ನಾಧರಿಸಿ ಬಂಗಾಲವನ್ನು ಮತಾಧಾರಿತ ವಿಭಜನೆ ಮಾಡಲು ಆಗ್ರಹಿಸಿದ್ದರು ”.
ವಿಭಜನೆಯ ವಿರುದ್ಧ ಮುಸ್ಲಿಮರು
ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಹಿಂದೂಗಳ ಮತ್ತು ಮುಸಲ್ಮಾನರ ನಡುವೆ ಕಂದಕವನ್ನು ನಿರ್ಮಿಸುತ್ತಿದ್ದ ಸಂದರ್ಭದಲ್ಲೇ ದೇಶದಲ್ಲಿ ಅನೇಕಾನೇಕ ಪ್ರಗತಿಪರ ಮುಸ್ಲಿಮರು ವಿಭಜನೆಯ ಪ್ರಸ್ತಾವನೆಯನ್ನೇ ವಿರೋಧಿಸಿದ್ದರು. ಇವರಲ್ಲಿ ಪ್ರಮುಖವಾಗಿ ಮೌಲಾನಾ ಅಬುಲ್ ಕಲಂ ಅಜಾದ್ ಒಬ್ಬರು. ಈ ಪ್ರಸ್ತಾವನೆಯನ್ನು ಒಪ್ಪದಿರುವಂತೆ ಅಜಾದ್ ಸರ್ದಾರ್ ಪಟೇಲ್ ಅವರನ್ನು ಒತ್ತಾಯಿಸಿದ್ದರು. ತಮ್ಮ ಇಂಡಿಯಾ ವಿನ್ಸ್ ಫ್ರೀಡಂ ಪುಸ್ತಕದಲ್ಲಿ ಆಜಾದ್ “ಈ ಆಧಾರದ ಮೇಲೆ ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸಿ ಕೆಲ ಕಾಲ ಪ್ರಾಮಾಣ ಕವಾಗಿ ಅನುಸರಿಸಿದರೆ, ಕೋಮುವಾದಿ ಅನುಮಾನಗಳು ಮತ್ತು ಅಪಾರ್ಥಗಳನ್ನು ಹೋಗಲಾಡಿಸಲು ಸಾಧ್ಯ ಎಂದು ನನಗೆ ಮನದಟ್ಟಾಗಿತ್ತು. ಭಾರತದ ನೈಜ ಸಮಸ್ಯೆಗಳು ಆರ್ಥಿಕ ಸ್ವರೂಪದ್ದಾಗಿದ್ದವೇ ಹೊರತು, ಕೋಮುವಾದ ಅಲ್ಲ. ಭಿನ್ನಾಭಿಪ್ರಾಯಗಳಿದ್ದುದು ಸಮುದಾಯಗಳನ್ನು ಕುರಿತು ಅಲ್ಲ, ವರ್ಗಗಳನ್ನು ಕುರಿತು. ಒಮ್ಮೆ ಭಾರತ ಸ್ವತಂತ್ರವಾದರೆ ಹಿಂದೂಗಳು, ಮುಸಲ್ಮಾನರು, ಸಿಖ್ಖರು ಅವರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ, ಆಗ ಕೋಮುವಾದಿ ಕಂದರಗಳು ಇಲ್ಲವಾಗುತ್ತವೆ. ಪಟೇಲರು ವಿಭಜನೆಯ ಪರವಾಗಿದ್ದು, ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ ಎನ್ನುವುದನ್ನು ಗಮನಿಸಿದ್ದೇನೆ. ಅವರ ಬಳಿ ಎರಡು ಗಂಟೆಗಳ ಕಾಲ ವಾದ ಮಾಡಿದ್ದೇನೆ. ನಾವು ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೆ ಶಾಶ್ವತ ಸಮಸ್ಯೆಯನ್ನು ಸೃಷ್ಟಿಸಿದಂತಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿದ್ದೇನೆ. ವಿಭಜನೆಯ ಕೋಮು ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಬದಲಾಗಿ ಅದನ್ನು ಭಾರತದ ಶಾಶ್ವತ ಸಮಸ್ಯೆಯನ್ನಾಗಿ ಮಾಡುತ್ತದೆ ” ಎಂದು ಹೇಳುತ್ತಾರೆ.
ಮೌಲಾನ ಆಜಾದ್ ಎಷ್ಟು ದೂರದೃಷ್ಟಿ ಉಳ್ಳವರಾಗಿದ್ದರು. ಇಂದು ಆರೆಸ್ಸೆಸ್, ಬಿಜೆಪಿ ಮತ್ತು ಮೋದಿ ಸರ್ಕಾರ ವಿಭಜನೆಯ ನೋವುಗಳನ್ನು ಶಾಶ್ವತಗೊಳಿಸಲು ಸಜ್ಜಾಗುತ್ತಿದೆ. 1946ರ ಜುಲೈ 17ರಂದು ಆಜಾದ್ ವ್ಯಕ್ತಪಡಿಸಿದ ಆತಂಕಗಳು ಈಗ ನಿಜವಾಗುವ ಸಂಭವವನ್ನು ಎದುರಿಸುತ್ತಿದ್ದೇವೆ. “ಮುಸಲ್ಮಾನರು ಒಂದು ದಿನ ಜಾಗೃತರಾಗಿ ತಾವು ಪರಕೀಯರಾಗಿದ್ದೇವೆ, ವಿದೇಶಿಯರಾಗಿದ್ದೇವೆ, ಔದ್ಯೋಗಿಕವಾಗಿ, ಶಿಕ್ಷಣದಲ್ಲಿ, ಆರ್ಥಿಕವಾಗಿ ಹಿಂದುಳಿದಿದ್ದೇವೆ ಎಂಬುದನ್ನು ಗುರುತಿಸುತ್ತಾರೆ. ಮುಸ್ಲಿಮರು ಒಂದು ಪರಿಪೂರ್ಣ ಹಿಂದೂ ರಾಜ್‍ಗೆ ಅಧೀನರಾಗಿ ಇರಬೇಕಾಗುತ್ತದೆ ” ಎಂದು ಹೇಳಿದ್ದುದು ಅವರ ದಾರ್ಶನಿಕತೆಗೆ ಸಾಕ್ಷಿ.
ಅಲ್ಲಾ ಭಕ್ಷ್ “ ಕೋಮುವಾದಿಗಳನ್ನು ಪಂಜರದಲ್ಲಿರಿಸಿ ”
1940ರ ಏಪ್ರಿಲ್ 27ರಂದು ದೆಹಲಿಯಲ್ಲಿ ಆರಂಭವಾದ ಅಖಿಲ ಭಾರತ ಸ್ವತಂತ್ರ ಮುಸ್ಲಿಂ ಸಮಾವೇಶದಲ್ಲಿ 75 ಸಾವಿರ ಮುಸಲ್ಮಾನರು ಸೇರಿದ್ದರು ಎಂದು ಪತ್ರಿಕಾ ವರದಿಗಳು ಹೇಳುತ್ತವೆ. ಸಿಂಧ್ ಪ್ರಾಂತ್ಯದ ಪ್ರಮುಖ ಮುಸ್ಲಿಂ ನಾಯಕ ಅಲ್ಲಾ ಭಕ್ಷ್ ಮುಸ್ಲಿಂ ಲೀಗ್ ಮಾಡಿದ್ದ ವಿಭಜನೆಯ ಪ್ರಸ್ತಾವನೆಯನ್ನು ತಿರಸ್ಕರಿಸಲು ಅಲ್ಲಿ ನೆರೆದ ಜನರನ್ನು ಪ್ರಚೋದಿಸಿದ್ದರು. ಆ ದಿನ ವರದಿಗಾರರೊಡನೆ ಮಾತನಾಡುತ್ತಾ ಅಲ್ಲಾ ಭಕ್ಷ್ “ ಈ ಕೋಮುವಾದಿಗಳನ್ನು ಒಂದು ಪಂಜರದಲ್ಲಿ ಕೂಡಿ ಹಾಕುವುದು ಒಳಿತು, ಆಗ ಅವರು ಹಿಂದೂ ಮತ್ತು ಮುಸ್ಲಿಂ ಜನತೆಯ ನಡುವೆ ದ್ವೇಷ ಹರಡುವುದು ಸಾಧ್ಯವಾಗುವುದಿಲ್ಲ ” ಎಂದು ಹೇಳಿದ್ದರು.
ಕೋಮುವಾದಿಗಳು ಆಳುವ ವರ್ಗಗಳಿಗೆ ಪ್ರಿಯವಾದುದನ್ನೇ ಮಾತನಾಡುತ್ತಾರೆ
ಅಜಂಘರ್‍ನಲ್ಲಿರುವ ಶಿಬ್ಲಿ ಕಾಲೇಜಿನ ಸಂಸ್ಥಾಪಕ ಶಿಬ್ಲಿ ನೊಮಾನಿ ಮುಸ್ಲಿಂ ಲೀಗ್‍ನ ವಿಭಜಕ ರಾಜಕಾರಣವನ್ನು ಬಯಲು ಮಾಡುತ್ತಾ, ಸಂಯುಕ್ತ ಭಾರತದ ಪರವಾಗಿ ಪ್ರಚಾರ ಮಾಡಿದವರಲ್ಲಿ ಪ್ರಮುಖರಾಗಿದ್ದರು. ತಮ್ಮ ಮುಸ್ಲಿಂ ಲೀಗ್ ಎಂಬ ಕವನದಲ್ಲಿ ಅವರ ವಿಡಂಬನಾತ್ಮಕ ಅಭಿವ್ಯಕ್ತಿ ಹೀಗಿದೆ :
ಇದು ಸರ್ಕಾರದಿಂದ ಉತ್ತೇಜನ ಪಡೆಯುತ್ತದೆ
ಶ್ರೀಮಂತರ ನಡುವೆ ಜನಪ್ರಿಯವಾಗಿದೆ
ಇದು ಸಮುದಾಯಗಳ ಪೋಷಕವಾಗಿದೆ
ಆಳುವವರಿಗೆ ಶರಣಾಗಿರುತ್ತದೆ.
ನಮ್ಮ ಪರಿಸ್ಥಿತಿಯನ್ನು ಆಳುವವರಿಗೆ ಮನದಟ್ಟು
ಮಾಡಲು ನಾನು ಲೀಗ್‍ನವರಿಗೆ ಕೋರಿದೆ
ಪೊಲೀಸ್ ದಬ್ಬಾಳಿಕೆಯ ಬಗ್ಗೆ
ನ್ಯಾಯಾಲಯದ ಮೊಕದ್ದಮೆಗಳ ಬಗ್ಗೆ
ರೈತರ ದುರ್ಭರ ಬದುಕಿನ ಬಗ್ಗೆ ;
ನನ್ನನ್ನು ಕೇಳಿದ ಮೇಲೆ ಲೀಗ್ ಹೇಳಿತ್ತು
ಆಳುವವರಿಗೆ ಪ್ರಿಯವಾದುದನ್ನು ಮಾತನಾಡುವುದೇ ನನ್ನ ಲಕ್ಷಣ !
ಇದೇ ಮಾತುಗಳನ್ನು ಹಿಂದೂಮಹಾಸಭಾ ಮತ್ತು ಆರೆಸ್ಸೆಸ್ ಬಗ್ಗೆಯೂ ಹೇಳಬಹುದಾಗಿತ್ತು.
ವಿಭಜನೆಯ ನಂತರ ಉರ್ದು ಕವಿತೆ
ಹಿಂದೂಗಳನ್ನು ಮತ್ತು ಮುಸಲ್ಮಾನರನ್ನು ವಿಭಜನೆ ವಿರುದ್ಧ ದನಿ ಎತ್ತುವಂತೆ ಪ್ರಚೋದಿಸುವ ಅನೇಕ ಉರ್ದು ಕವಿತೆಗಳು ರಚಿಸಲ್ಪಟ್ಟವು. ಪಾಕಿಸ್ತಾನವನ್ನು ಬಯಸುವವರಿಗೆ ಎಂಬ ತಮ್ಮ ಕವಿತೆಯಲ್ಲಿ ಶಮೀಮ್ ಕರ್ಬಾನಿ “ ಪಾಕಿಸ್ತಾನ- ಪವಿತ್ರ ಭೂಮಿ- ಎಂದರೆ ಅರ್ಥವೇನೆಂದು ಹೇಳಿ? ನಾವು ಮುಸ್ಲಿಮರು ಜೀವಿಸುತ್ತಿರುವ ಈ ಭೂಮಿ ಅಪವಿತ್ರವೇ ” ಎಂದು ಪ್ರಶ್ನಿಸಿದ್ದರು.
ಕರ್ಬಾನಿಯವರ ಭಾರತೀಯ ಯೋಧರು ಕವಿತೆಯಲ್ಲಿ ಕೋಮು ದ್ವೇಷದ ವಿರುದ್ಧ ಸಮರ ಸಾರಲು ಕರೆ ನೀಡಲಾಗಿತ್ತು : “ಗೋವು ಮತ್ತು ಧ್ವನಿವರ್ಧಕಗಳ ಬಗ್ಗೆ ಕಲಹ ನರಕಕ್ಕೆ ಹೋಗಲಿ ” ಎಂದು ಹೇಳಿದ್ದರು. ಹಮಾರಾ ಹಿಂದೂಸ್ತಾನ್ ಕವಿತೆಯಲ್ಲಿ ಕರ್ಬಾನಿ “ ನೀವು ಎಲ್ಲಿಯವರು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ಹಿಂದೂಸ್ತಾನ ಎಂದೇ ಹೆಮ್ಮೆಯಿಂದ ಹೇಳುತ್ತೇನೆ ” ಎಂದು ಹೇಳಿದ್ದರು. ಇಂತಹ ಅನೇಕ ಕವಿತೆಗಳನ್ನು ಶಂಸುಲ್ ಇಸ್ಲಾಂ ತಮ್ಮ ವಿಭಜನೆಯ ವಿರುದ್ಧ ಮುಸ್ಲಿಮರು ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಭಾರತದ ಸ್ವಾತಂತ್ರ್ಯದ 75ನೆಯ ವರ್ಷದಲ್ಲಿ ಈ ಬರಹಗಳನ್ನು ಮತ್ತು ದಾಖಲೆಗಳನ್ನು ಎರಡೂ ದೇಶಗಳಿಂದ ಸಂಗ್ರಹಿಸುವುದು ಬಹಳ ಮುಖ್ಯ. ಈ ಬರಹಗಳಲ್ಲಿ ವ್ಯಕ್ತಪಡಿಸಲಾಗಿರುವ ಹತಾಶೆ, ಆಕ್ರೋಶ ಮತ್ತು ವಿಭಜನೆಯ ಬಗ್ಗೆ ಇರುವ ಪರಿತಾಪಗಳನ್ನು ಸಂಗ್ರಹಿಸುವುದು ಮುಖ್ಯ. ಅಗ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಭಾರತದ ಜನತೆ ವಿಭಜನೆಯಿಂದ ಪಾಠ ಕಲಿಯುವುದೇ ಅಲ್ಲದೆ, ಕೋಮು ಹಿಂಸೆ ಮತ್ತು ತಾರತಮ್ಯಗಳನ್ನು ತಡೆಗಟ್ಟಲು ನೆರವಾಗುತ್ತದೆ. ಉಪಖಂಡವನ್ನು ಮತ್ತೊಮ್ಮೆ ಪ್ರಕ್ಷುಬ್ಧಗೊಳಿಸಬಹುದಾದ ಯುದ್ಧೋನ್ಮಾದದಿಂದ ರಕ್ಷಿಸಲು ನೆರವಾಗುತ್ತದೆ.