- ವಿನೋದ್‌ ಮಿಶ್ರ

ಇತ್ತೀಚಿನ ದಿನಗಳಲ್ಲಿ ಅತಿ ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ವಿಚಾರ ಎಂದರೆ ಕಾಮ್ರೇಡ್‌ ಚಾರು ಮಜೂಂದಾರ್‌ ಪ್ರತಿಪಾದಿಸಿದ “ ನಿರ್ಮೂಲನ ”ದ ಪ್ರಶ್ನೆ. ಇದರಲ್ಲಿ ಮಾರ್ಕ್ಸ್‌ವಾದದ ಅಂಶ ಇಲ್ಲ ಎಂತಲೂ, ಇದು ಕೇವಲ ವ್ಯಕ್ತಿಗತ ಭಯೋತ್ಪಾದನೆಯೆಂದೂ, ಇದರಿಂದ ಕೇವಲ ನಷ್ಟವೇ ಹೆಚ್ಚಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ವೇಳೆ ಸಾಮೂಹಿಕ ಹೋರಾಟ ಮತ್ತು ಸಶಸ್ತ್ರ ಹೋರಾಟವನ್ನು ಒಂದಾಗಿಸುವ ಪ್ರಸ್ತಾವನೆಗಳೂ ಬರುತ್ತಿದ್ದು, ಈ ಕಾರಣಕ್ಕಾಗಿಯೇ ʼನಿರ್ಮೂಲʼದ ಹಾದಿಯನ್ನು ಖಂಡಿಸಬೇಕು ಎಂದು ಹೇಳಲಾಗುತ್ತಿದೆ.

ಮೊದಲು, ಸಶಸ್ತ್ರ ಹೋರಾಟ ಮತ್ತು ಸಮೂಹ ಹೋರಾಟಗಳನ್ನು ಒಂದುಗೂಡಿಸುವ ಬಗ್ಗೆ ಯೋಚಿಸೋಣ. ಈ ಪ್ರತಿಪಾದನೆಯನ್ನು ಎಲ್ಲದಕ್ಕೂ ಪರಿಹಾರ ಮಾರ್ಗವಾಗಿ ಪದೇ ಪದೇ ಉಚ್ಚರಿಸುವ ಮೂಲಕ, ತಮ್ಮ ಕಾರ್ಯಚಟುವಟಿಕೆಯಲ್ಲಿ ತೊಡಗಿರುವ ಮಾರ್ಕ್ಸ್‌ವಾದಿಗಳಿಗೆ ಇದು ಅಪ್ರಸ್ತುತ ಎಂದು ಹೇಳಲಾಗುತ್ತಿದೆ. ಚಾರಿತ್ರಿಕವಾದ ಸತ್ಯ ಏನೆಂದರೆ, ಎಲ್ಲ ಸಮೂಹ ಚಳುವಳಿಗಳೂ ಸಹ ತಮ್ಮ ಮುನ್ನಡೆಯ ಹಾದಿಯಲ್ಲಿ ಹೊಸ ರೂಪಗಳನ್ನು ಪಡೆಯುತ್ತಲೇ ಹೋಗುತ್ತವೆ. ಹಳೆಯದನ್ನು ತಿರಸ್ಕರಿಸುತ್ತಾ ಹೊಸತನ್ನು ಸೃಷ್ಟಿಸುತ್ತಾ ಮುನ್ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ಹೊಸ ಪರಿವರ್ತನೆಗೊಳಗಾಗುತ್ತಾ, ಹೊಸತಾದ ಮತ್ತು ಹಳೆಯ ಸ್ವರೂಪಗಳನ್ನು ಸರಿಹೊಂದಿಸಿಕೊಳ್ಳುತ್ತಲೇ ಸಾಗುತ್ತವೆ. ಕಮ್ಯುನಿಸ್ಟರಾಗಿ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸೂಕ್ತವಾದ ಹೋರಾಟದ ರೂಪಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಕಾಮ್ರೇಡ್‌ ಲೆನಿನ್‌ ಹೇಳುವಂತೆ, ತಾತ್ವಿಕವಾಗಿ ಬಲ ಮತ್ತು ಭೀತಿಯನ್ನು ತ್ಯಜಿಸದೆ, ನಾವು ಜನಸಮೂಹಗಳು ನೇರವಾಗಿ ಪಾಲ್ಗೊಳ್ಳುತ್ತಿರುವ ಹೊಸ ರೂಪದ ಹೋರಾಟಗಳನ್ನು ಬೆಳೆಸುವುದೇ ಅಲ್ಲದೆ ಈ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ವೀರೋಚಿತ ನಕ್ಸಲ್‌ಬಾರಿ ಹೋರಾಟದ ನಂತರದಲ್ಲಿ ತಲೆದೋರಿದ ನವ ಪರಿಷ್ಕರಣವಾದದಿಂದ ಹೊರಬಂದ ನಂತರ, ಸಮೂಹ ಚಳುವಳಿಗಳನ್ನು ಕಟ್ಟಲು ಎರಡು ವರ್ಷಗಳ ಕಾಲ ಕ್ರಾಂತಿಕಾರಿ ಚಟುವಟಿಕೆಗಳನ್ನು ಅನುಸರಿಸಿದ ನಂತರ, ಭಾರತದ ಕಮ್ಯುನಿಸ್ಟ್‌ ಕ್ರಾಂತಿಕಾರಿಗಳು ಇಂತಹ ಒಂದು ಸನ್ನಿವೇಶವನ್ನು ಎದುರಿಸುತ್ತಿದ್ದು, ಹೊಸ ರೂಪದ ಹೋರಾಟಗಳಿಗಾಗಿ ಹಾತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ, ಶ್ರೀಕಾಕುಲಂ ಹೋರಾಟದ ನಡುವೆಯೇ, ಸಮೂಹ ಬೆಂಬಲವನ್ನಾಧರಿಸಿದ “ ನಿರ್ಮೂಲನ ”ದ ಪರಿಕಲ್ಪನೆಯನ್ನೂ ರೂಪಿಸಲಾಯಿತು. ಇದು ಸಶಸ್ತ್ರ ಹೋರಾಟದ ಆರಂಭದ ದಿನಗಳನ್ನು, ಹಂತಹಂತವಾಗಿ ಸಮೂಹ ಹೋರಾಟಗಳನ್ನು ಕ್ರೋಢೀಕರಿಸುವ ಪ್ರಕ್ರಿಯೆಯೊಂದಿಗೆ ಮಿಲನಗೊಳಿಸಲು ಅಪೇಕ್ಷಿಸಿತ್ತು. ಕಾಮ್ರೇಡ್‌ ಚಾರು ಮಜುಂದಾರ್‌ ಅವರ ಮಾರ್ಗದಲ್ಲಿನ, ಸಶಸ್ತ್ರ ಚಟುವಟಿಕೆಯನ್ನು ಸಮೂಹ ಹೋರಾಟಗಳೊಡನೆ ಸಂಯೋಗಗೊಳಿಸುವ, ಆದರೆ ಒಂದು ಬಾರಿ ಒಂದು ಮಾರ್ಗಕ್ಕೆ ಮಾತ್ರ ಪ್ರಾಶಸ್ತ್ರಯ ನೀಡುವ, ಈ ಮೂಲ ದೃಷ್ಟಿಕೋನವೇ ಅವರ ಇಡೀ ಜೀವನದ ರಾಜಕೀಯ ಮಾರ್ಗವನ್ನು, ನಕ್ಸಲ್‌ಬಾರಿ ಹಿಂದಿನ ದಿನಗಳಿಂದ ಅವರ ಜೀವನದ ಕೊನೆಯವರೆಗೂ, ನಿರ್ಧರಿಸುತ್ತದೆ. ನಿಜವಾದ ಮುನ್ನಡೆಯ ದೃಷ್ಟಿಯಿಂದ ಅವರ ಪ್ರಯತ್ನಗಳ ಸಾಫಲ್ಯ ವೈಫಲ್ಯಗಳನ್ನು ಮೌಲ್ಯಮಾಪನ ಮಾಡುವುದು ಮುಖ್ಯವಾಗುತ್ತದೆ ಎನ್ನುವುದು ದಿಟ. ಆದರೆ ಅವರನ್ನು ಭಯೋತ್ಪಾದಕ ಎಂದು ಕರೆಯುವುದು ಅಸಂಬದ್ಧ ಮತ್ತು ಅವಿವೇಕತನವಾದೀತು. ಇದು ಗುಲಾಮೀ ಮನಸ್ಥಿತಿಯನ್ನು ತೋರುತ್ತದೆ. ಸಮೂಹ ಬೆಂಬಲದ ಸಮಗ್ರ ದೃಷ್ಟಿಕೋನದಿಂದ ನೋಡಿದಾಗ, ಈ ಸ್ವರೂಪದ ಹೋರಾಟವು, ಸಮೂಹ ಚಳುವಳಿಗಳೊಡನೆ ಒಂದಾಗುವ ಮೂಲಕ ಪ್ರದೇಶಾವಾರು ಅಧಿಕಾರ ಸ್ವಾಧೀನವನ್ನು ಗುರಿಯಾಗಿಸಿಕೊಂಡಿರುತ್ತದೆ.

ಈ ಹೋರಾಟವೇ ಭಾರತದ ವಿವಿಧ ಪ್ರದೇಶಗಳಲ್ಲಿ ರೈತ ಪಡೆಗಳನ್ನು ರೂಪಿಸಲು ನೆರವಾಗಿದೆ ಮತ್ತು ಸಾಮೂಹಿಕ ಉತ್ಕರ್ಷಕ್ಕೂ ಕಾರಣವಾಗಿದೆ. ಈ ಉತ್ಕರ್ಷಗಳನ್ನೇ ಕ್ರಾಂತಿಕಾರಿ ಸಮಿತಿಗಳ ಮೂಲಕ ಸಂಘಟಿಸಿ, ಕೃಷಿ ಸುಧಾರಣೆಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಾರ್ಗದಲ್ಲೇ ರೈತ ಪಡೆಗಳನ್ನು ಗೆರಿಲ್ಲಾ ಚಟುವಟಿಕೆಯಾಗಿ ರೂಪಿಸಿ ಪೊಲೀಸರ ವಿರುದ್ಧ, ಅರೆ ಸೇನಾಪಡೆಗಳ ವಿರುದ್ಧ ಮತ್ತು ಸೇನೆಯ ವಿರುದ್ಧವೂ ಹೋರಾಡುವ ಮೂಲಕ ಅಧಿಕಾರವನ್ನು ಪಡೆಯಲು ಯೋಚಿಸಲಾಗಿತ್ತು. ಇದು “ ನಿರ್ಮೂಲನಾ ಮಾರ್ಗ ” ದ ಒಟ್ಟಾರೆ ಪ್ರಕ್ರಿಯೆ ಮತ್ತು ಫಲಿತಾಂಶವೂ ಆಗಿತ್ತು. ಈ ಮಾರ್ಗದ ಸಾಧನೆಗಳು ಹಲವು. ಭೋಜ್‌ಪುರ ಈ ದಿನದವರೆಗೂ ಪ್ರಸ್ತುತವಾಗಿ ಉಳಿದಿರುವುದೇ ಇದಕ್ಕೆ ಸಾಕ್ಷಿ. ಆದರೆ ಇದರ ನೇತ್ಯಾತ್ಮಕ ಅಂಶಗಳನ್ನೂ ನಾವು ಗಮನಿಸಬೇಕು. ಕಾಲ ಕಳೆದಂತೆ ಈ ಭಾಗವೇ ಪ್ರಧಾನವಾಗಿ ಪರಿಣಮಿಸಿತ್ತು. ಅನೇಕ ಪ್ರದೇಶಗಳಲ್ಲಿ ನಿರ್ಮೂಲನವನ್ನು ಒಂದು ಚಳುವಳಿಯ ರೂಪದಲ್ಲಿ ನಡೆಸಲಾಯಿತು, ಅನಗತ್ಯವಾದ ಮತ್ತು ವಿವೇಚನಾರಹಿತ ಕೊಲೆಗಳಲ್ಲಿ ಪರ್ಯವಸಾನ ಹೊಂದಿತ್ತು. ತತ್ಪರಿಣಾಮ ಇದು ರೈತರ ವರ್ಗ ಹೋರಾಟದಿಂದ ಪ್ರತ್ಯೇಕವಾಗಿದ್ದೇ ಅಲ್ಲದೆ ಪೊಲೀಸರ ದಬ್ಬಾಳಿಕೆಯ ವಿರುದ್ಧ ಯಾವುದೇ ಪ್ರತಿರೋಧವನ್ನು ಸೃಷ್ಟಿಸಲಾಗದೆ, ನಮ್ಮ ಹೋರಾಟದ ಪ್ರದೇಶಗಳೆಲ್ಲವೂ ನಿರ್ನಾಮವಾದವು. ನಿರ್ಮೂಲನೆಯ ಅತ್ಯುತ್ಸಾಹಿ ಬೆಂಬಲಿಗರು- ಆಶಿಮ್‌ನಿಂದ ದೀಪಕ್‌ವರೆಗೆ ಮತ್ತು ಕೊನೆಯದಾಗಿ  ಮಹದೇವ್‌ವರೆಗೆ_ ಈ ಪ್ರಮಾದಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದರು. ಹಂತಹಂತವಾಗಿ ಎಡ ಅವಕಾಶವಾದಿ ಮಾರ್ಗವನ್ನು ರೂಪಿಸಿದರು. ಇದು ಜನತೆಗೆ ಮತ್ತು ಕ್ರಾಂತಿಗೆ ಅಪಾರ ಹಾನಿಯನ್ನುಂಟುಮಾಡಿತ್ತು.

ಈ ಅವಧಿಯನ್ನು ವಿಶ್ವದಾದ್ಯಂತ ತಕ್ಷಣದ ಹಾಗೂ ಸಾಮಾನ್ಯವಾದ ಕ್ರಾಂತಿಕಾರಿ ಸನ್ನಿವೇಶ ಎಂದು ಗುರುತಿಸಲಾಯಿತಲ್ಲದೆ ಸಾಮಾನ್ಯವಾದ ಒಂದು ಕ್ರಾಂತಿಕಾರಿ ಆಕ್ರಮಣವನ್ನು ಯೋಜಿಸಲಾಯಿತು. ಈ ರೀತಿಯಲ್ಲಿ ಕ್ರಾಂತಿಕಾರಿ ಸನ್ನಿವೇಶವನ್ನು ಉತ್ಪ್ರೇಕ್ಷಿತವಾಗಿ ಅಂದಾಜು ಮಾಡಿದ್ದರಿಂದ ಆತುರತೆ, ದುಡುಕುವಿಕೆ ಹೆಚ್ಚಾಗಿ, ವ್ಯಕ್ತಿನಿಷ್ಠ ಶಕ್ತಿಗಳ ಪರಿಸ್ಥಿತಿಯನ್ನು ಪರಿಗಣಿಸಲಾಗಲಿಲ್ಲ. ಹಾಗಾಗಿ ಪ್ರಮಾದಗಳು ತೀವ್ರವಾಗತೊಡಗಿದ್ದವು. ಆಳುವ ವರ್ಗಗಳು ತೀವ್ರತೆರನಾದ ಆರ್ಥಿಕ ಸಂಕಷ್ಟಗಳಲ್ಲಿ ಮತ್ತು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಈ ಸನ್ನಿವೇಶವು ನಮಗೆ ಅನುಕೂಲವಾಗಿದ್ದುದು ನಿಜವೇ ಆದರೂ, ಸಾಧ್ಯವಿದ್ದೆಡೆಯೆಲ್ಲಾ ಶ್ರಮಜೀವಿಗಳು ರೈತರನ್ನು ಸಶಸ್ತ್ರ ಹೋರಾಟಕ್ಕೆ ಪ್ರೇರೇಪಿಸುವ ಮೂಲಕ ರಾಜಕೀಯ ಅಧಿಕಾರವನ್ನು ಹಿಡಿಯುವ ಪ್ರಯತ್ನ ಮಾಡಬೇಕಿತ್ತು. ಆದರೆ ಭಾರತದ ಕ್ರಾಂತಿಯ ಮಾರ್ಗದಲ್ಲಿನ ಅಸಮಾನ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಸಾಮಾನ್ಯ ಕಾರ್ಯಕ್ರಮದ ಹೊರತಾಗಿಯೂ, ಮೂಲ ಕಾರ್ಯತಂತ್ರದ ಪಥವು ಸರಿಯಾಗಿಯೇ ಇದ್ದರೂ, ಕ್ರಾಂತಿಕಾರಿ ಸನ್ನಿವೇಶದ ಉತ್ಪ್ರೇಕ್ಷಿತ ಅಂದಾಜು ಮಾಡುವ ಮೂಲಕ, ಭಾರತದ ಕ್ರಾಂತಿನ ಅಸಮಾನ ಬೆಳವಣಿಗೆಯ ಪ್ರಕ್ರಿಯೆಯನ್ನು ಪರಿಗಣಿಸದೆ, ಕೆಲವು ಪ್ರದೇಶಗಳಿಗೆ ಮಾತ್ರವೇ ಸೂಕ್ತವಾಗಿದ್ದ ಹೋರಾಟದ ಸ್ವರೂಪ ಮತ್ತು ಮುನ್ನಡೆಯ ಮಾರ್ಗವನ್ನು ಸಾಮಾನ್ಯೀಕರಿಸಿ ದೇಶಾದ್ಯಂತ ಅನುಸರಿಸಲಾಯಿತು. ಅದನ್ನೂ ಚಳುವಳಿಯ ರೂಪದಲ್ಲಿ ಮುನ್ನಡೆಸಲಾಯಿತು. ಇವು  ಖಂಡಿತವಾಗಿಯೂ ಗಂಭೀರ ಸ್ವರೂಪದ ಎಡಪಂಥೀಯ ಪಥಭ್ರಷ್ಟತೆಯಾಗಿತ್ತು. ವಸ್ತುನಿಷ್ಠ ಬೆಳವಣಿಗೆಯ ನಿಯಮವೂ ನಮಗೆ ಪಾಠಕಲಿಸಿತ್ತು. ಸಮೂಹ ಉತ್ಕರ್ಷತೆಯು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿ ಒಂದು ಪ್ರದೇಶದಲ್ಲಿ ಮಾತ್ರವೇ ಮುಂದುವರೆಯುವಂತಾಯಿತು.

ಈ ಹಿನ್ನೆಲೆಯಲ್ಲಿ, ನಮ್ಮ ಪಕ್ಷದ ಮೊದಲ ಮಹಾಧಿವೇಶನದ ಘೋಷಣೆ – “ ವರ್ಗ ಹೋರಾಟ, ನಿರ್ಮೂಲನ ನಮ್ಮ ಎಲ್ಲ ಸಮಸ್ಯೆಗಳನ್ನೂ ನಿವಾರಿಸುತ್ತವೆ ” ಖಂಡಿತವಾಗಿಯೂ ತಪ್ಪಾಗಿತ್ತು. ಆದರೆ, ಕೆಲವು ಪ್ರದೇಶಗಳಲ್ಲಿ ಸಮೂಹ ಹೋರಾಟಗಳೊಡನೆ ನಿರ್ಮೂಲನೆಯೂ ಇದ್ದುದರಿಂದ, ಇಂತಹ ಉತ್ಕರ್ಷಗಳನ್ನು ಆಯೋಜಿಸುವಾಗ ಕ್ರಾಂತಿಕಾರಿ ಸಮಿತಿಗಳನ್ನು ರಚಿಸಿ, ಕೃಷಿ ಸುಧಾರಣೆಯ ಘೋಷಣೆಗಳೊಂದಿಗೆ, ಗೆರಿಲ್ಲಾ ಪಡೆಗಳೊಳಗಿನಿಂದಲೇ ಕೆಂಪು ಸೇನೆಯನ್ನು ರಚಿಸುವ ಪ್ರಯತ್ನಗಳು, ನಮ್ಮ ಕ್ರಾಂತಿಕಾರಿ ಅನುಭವಗಳ ಅಮೂಲ್ಯ ಭಂಡಾರವಾಗಿ ಸದಾ ಸ್ಮರಣೀಯವಾಗಿರುತ್ತವೆ. ಇದನ್ನು ಆಧರಿಸಿಯೇ, ಅಷ್ಟೇನೂ ಪ್ರಜ್ಞಾವಂತರಲ್ಲದ ಕಮ್ಯುನಿಸ್ಟ್‌ ಕ್ರಾಂತಿಕಾರಿಗಳ ಪ್ರಯತ್ನದೊಂದಿಗೆ ಪಕ್ಷದ ನಾಯಕತ್ವವು ಸಂಘಟಿಸಿದ ಭೋಜ್‌ಪುರ ರೈತ ಹೋರಾಟವನ್ನು ಅತಿ ಹೆಚ್ಚಿನ ತ್ಯಾಗ ಬಲಿದಾನಗಳ ನಡುವೆಯೂ ನಿರ್ವಹಿಸಲು ಸಾಧ್ಯವಾಗಿತ್ತು. ಇಂದು ಈ ಹೋರಾಟವೇ ವ್ಯಾಪಕವಾಗಿ ಇತರ ಪ್ರದೇಶಗಳಿಗೆ, ವಿಭಿನ್ನ ಸ್ವರೂಪಗಳಲ್ಲಿ ಹರಡುತ್ತಿದೆ. ಚಾರು ಮಜುಂದಾರ್‌ ಅವರ ಈ ಭವ್ಯ ಪರಂಪರೆಯು ಭಾರತದ ಕೋಟ್ಯಂತರ ಶೋಷಿತ ಜನತೆಯ ಹೃದಯದಲ್ಲಿ ಜೀವಂತಿಕೆಯಿಂದಿರುವುದರಿಂದಲೇ ಈ ಮಾರ್ಗವನ್ನು ಭಾರತದಲ್ಲಿ ಏಕಮಾತ್ರ ಕ್ರಾಂತಿಕಾರಿ ಮಾರ್ಗ ಎಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಶೈಕ್ಷಣಿಕ ವಲಯದ ಅನೇಕ ಮಾರ್ಕ್ಸ್‌ವಾದಿಗಳು ಮತ್ತು ಅವಕಾಶವಾದಿ ನಾಯಕರು “ ಸಶಸ್ತ್ರ ಹೋರಾಟ ಮತ್ತು ಸಮೂಹ ಹೋರಾಟದ ಸಂಯೋಗ ”ದ ಮಂತ್ರವನ್ನು ಜಪಿಸುತ್ತಲೇ ಇದ್ದರೆ ಹೊರತು, ಸಶಸ್ತ್ರ ಹೋರಾಟ ಅಥವಾ ಸಂಯೋಜಿತ ಹೋರಾಟ ಒತ್ತಟ್ಟಿಗಿರಲಿ, ವಿಶಾಲ ಜನಸಮೂಹಗಳನ್ನು ತಲುಪವುದರಲ್ಲೂ ಅಥವಾ ಮಹತ್ವಯುತವಾದ ಒಂದೇ ಒಂದು ಸಮೂಹ ಹೋರಾಟವನ್ನು ರೂಪಿಸುವಲ್ಲೂ ಸಹ  ಯಶಸ್ವಿಯಾಗಲಿಲ್ಲ. ಕೆಲವು ಸ್ವಘೋಷಿತ ಮಾರ್ಕ್ಸ್‌ವಾದಿಗಳು ಪ್ರದರ್ಶಿಸಿದ, ಜಗತ್ತಿನಲ್ಲಿ ಎಲ್ಲವನ್ನೂ ಮಾಡುವ ಮತ್ತು ಎಲ್ಲವನ್ನೂ ಸಂಯೋಜಿತಗೊಳಿಸುವ, ಪುಸ್ತಕ ಪಾಂಡಿತ್ಯದ ಧೋರಣೆಯು ಪರಿಹಾರ ಎನಿಸಿಕೊಳ್ಳಲಿಲ್ಲ ಬದಲಾಗಿ ಪರಿಹಾರದ ಅಪಹಾಸ್ಯವಾಗಿತ್ತು. ಯಾವುದೇ ರೀತಿಯ ಮೂರ್ತ ಅನುಭವವಿಲ್ಲದ, ಸಂಪೂರ್ಣ ಶೈಕ್ಷಣಿಕ ಪ್ರಯತ್ನ ಮಾತ್ರವಾಗಿತ್ತು. ಕ್ರಾಂತಿಕಾರಿ ಮಾರ್ಗವು ಒಂದು ಪ್ರಕ್ರಿಯೆಯಲ್ಲಿ ಮಾತ್ರವೇ ರೂಪುಗೋಳುತ್ತದೆ. ಪಕ್ಷವು ಆರಂಭದಲ್ಲಿ ಹಳೆಯ ಮಾದರಿಯ ಹೋರಾಟಗಳನ್ನು ನಿರಾಕರಿಸುತ್ತಲೇ ಹೊಸ ಮತ್ತು ಹಳೆಯ ರೂಪದ ಹೋರಾಟಗಳನ್ನು ಪುನರ್‌ ಸಂಯೋಜಿಸುವ ಒಂದು ಪ್ರಕ್ರಿಯೆಯ ಮೂಲಕ ಹೊಸ ಪ್ರಯತ್ನಗಳನ್ನು ಮಾಡಲು ಸಾಧ್ಯವಾಗಿತ್ತು. ದುಡಿಯುವ ವರ್ಗಗಳ ಹೋರಾಟಗಳ ಬಗ್ಗೆ ಹೇಳುವುದಾದರೆ, ಕಾಮ್ರೇಡ್‌ ಚಾರು ಮಜುಂದಾರ್‌, ಹಳೆಯ ಹೋರಾಟದ ಮಾರ್ಗಗಳನ್ನು ನಿರಾಕರಿಸಿದೆಯೇ ಹೊಸ ರೂಪದ ಹೋರಾಟಗಳನ್ನು ಬೆಳೆಸಲು ಸೂಚನೆ ನೀಡಿದ್ದರು. ಹಾಗೆಯೇ ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನು ತಿರಸ್ಕರಿಸದೆ, ರಾಜಕೀಯ ಹೋರಾಟಗಳನ್ನು ಬೆಳೆಸುವಂತೆ ಹೇಳಿದ್ದರು.

ವಿದ್ಯಾರ್ಥಿ ಯುವ ಜನರ ಚಳುವಳಿಗಳ ಬಗ್ಗೆ ಕಾಮ್ರೇಡ್‌ ಚಾರು ಮಜುಂದಾರ್‌, ಭಾರತದ ಕಮ್ಯುನಿಸ್ಟ್‌ ಚಳುವಳಿಯಲ್ಲಿ ಮೊಟ್ಟಮೊದಲಿಗರಾಗಿ, ಈ ಚಳುವಳಿಗಳನ್ನು ಕಾರ್ಮಿಕರ ಮತ್ತು ರೈತರ ಹೋರಾಟದೊಡನೆ ಸಮನ್ವಯಗೊಳಿಸಲು ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರನ್ನು ಕ್ಯಾಂಪಸ್‌ಗಳಿಂದ ಹೊರತರಬೇಕೆಂದೂ ಕರೆ ನೀಡಿದ್ದರು. ಈ ಕರೆಗೆ ಅತ್ಯುತ್ಸಾಹದೊಂದಿಗೆ ಸ್ಪಂದಿಸಿದ ವಿದ್ಯಾರ್ಥಿ ಯುವಜನರು ಹಳೆಯ ಮೌಲ್ಯಗಳ ವಿರುದ್ಧ, ಹಳೆಯ ಶಿಕ್ಷಣ ಮತ್ತು ಸಂಸ್ಕೃತಿಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೇಲಾಗಿ ಚೀನಾದ ಯುವಜನರ ರೆಡ್‌ ಗಾರ್ಡ್‌ ಚಳುವಳಿಯಿಂದ ಮತ್ತು ಫ್ರಾನ್ಸ್‌ನ ನ್ಯೂ ಲೆಫ್ಟ್‌ ಹೋರಾಟದಿಂದ ತಮ್ಮ ಚಳುವಳಿಯನ್ನು ವಿಭಿನ್ನವಾಗಿಯೇ ನೋಡುವ ಮೂಲಕ ಕಾಮ್ರೇಡ್‌ ಚಾರು ಮಜುಂದಾರ್‌ ಈ ಹೋರಾಟಗಳ ಇತಿಮಿತಿಗಳನ್ನು ಎತ್ತಿ ತೋರಿಸಿದ್ದೇ ಅಲ್ಲದೆ, ತಮ್ಮ ಚಳುವಳಿಗಳನ್ನು ತಳಮಟ್ಟದ ಮತ್ತು ರೈತ ಹೋರಾಟಗಳೊಡನೆ ಸಮನ್ವಯಗೊಳಿಸಲು ಕರೆ ನೀಡಿದ್ದರು. ಅದೇ ವೇಳೆ, , 19 ಮತ್ತು 20ನೆಯ ಶತಮಾನದ ಭಾರತದ ಚರಿತ್ರೆಯನ್ನು ಅಧ್ಯಯನ ಮಾಡುವಂತೆ ಬುದ್ಧಿಜೀವಿಗಳಿಗೆ ಕರೆ  ನೀಡಿದ್ದರು. ಈ ನಿಟ್ಟಿನಲ್ಲಿ ದೇಶದ ಅನೇಕ ಪ್ರಗತಿಪರ, ಕ್ರಾಂತಿಕಾರಿ ಬುದ್ಧಿಜೀವಿಗಳು ಅಧ್ಯಯನವನ್ನು ಕೈಗೆತ್ತಿಕೊಂಡು ಮುನ್ನಡೆ ಸಾಧಿಸಿದ್ದಾರೆ.

ಆ ದಿನಗಳಲ್ಲಿ ನಮ್ಮ ತಪ್ಪುಗಳಿಗೆ ಚೀನಾದ ಕಮ್ಯುನಿಸ್ಟ್‌ ಪಕ್ಷಗಳ ವಿಶ್ಲೇಷಣೆಗಳನ್ನು ದೂಷಿಸುವುದಾಗಲೀ ಅಥವಾ ಎಲ್ಲ ತಪ್ಪುಗಳನ್ನೂ ತೊಡೆದುಹಾಕುವ ಭರವಸೆಯೊಂದಿಗೆ ಸಂಯೋಜನೆಯ ಮಾರ್ಗದ ಪುಸ್ತಕ ಪಾಂಡಿತ್ಯ ಧೋರಣೆಯನ್ನು ತಳೆಯುವುದಾಗಲೀ, ಇವೆರೂ ಸಹ ಆರೋಗ್ಯಕರ ಚಿಂತನೆಯಲ್ಲ. ಯಾವುದೇ ಕ್ರಾಂತಿಕಾರಿ ಉತ್ಕರ್ಷವು ಎಡ ಮತ್ತು ಬಲ ಪಥಭ್ರಷ್ಟತೆಯನ್ನು ಉಂಟುಮಾಡುವುದು ಸಹಜ. “ ಬಲಪಂಥವು ತನ್ನ ಭೂತಕಾಲದ ಚರಿತ್ರೆಯಿಂದ ವಿಮುಖವಾಗಲು ಬಯಸುವುದಿಲ್ಲ ” “ ಎಡಪಂಥವು ವರ್ತಮಾನದೊಡನೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.”. ನಮ್ಮ ತಪ್ಪುಗಳಿಗೆ ನಾವೇ ಕಾರಣರಾಗಿರುತ್ತೇವೆ. ಯಾವುದೇ ಕ್ರಾಂತಿಕಾರಿ ಉತ್ಕರ್ಷದಲ್ಲಿ ಪ್ರಮಾದಗಳು ಸಂಭವಿಸುವುದನ್ನು ತಪ್ಪಿಸಲಾಗುವುದಿಲ್ಲ. ಈ ತಪ್ಪುಗಳನ್ನು ಆಧರಿಸಿಯೇ ಕಮ್ಯುನಿಸ್ಟರು ಪಾಠ ಕಲಿತು, ನಾಯಕರಿಗೆ, ಕಾರ್ಯಕರ್ತರಿಗೆ ತರಬೇತಿ ನೀಡಬೇಕಾಗುತ್ತದೆ. ಮತ್ತಾವುದೇ ದಾರಿ ಇರುವುದೂ ಇಲ್ಲ.

ನಿರ್ಮೂಲನ ಹೋರಾಟದ ಸೇನಾ ಸ್ವರೂಪ, ಅಂದರೆ ಸೇನಾ ಮಾರ್ಗವು ರಾಜಕೀಯ ಮಾರ್ಗವನ್ನು ಸಾಕಾರಗೊಳಿಸಲು ಯೋಜಿಸಲಾಗಿತ್ತು. ಇಡೀ ಕ್ರಾಂತಿಕಾರಿ ಪ್ರಕ್ರಿಯೆಯನ್ನೇ ಕ್ರಾಂತಿಕಾರಿ ಸಮೂಹ ಮಾರ್ಗದೆಡೆಗೆ ಕೊಂಡೊಯ್ಯುವ ಉದ್ದೇಶದೊಂದಿಗೆ ರೂಪಿಸಲಾಗಿತ್ತು. ರೈತರ ನಡುವೆ ರಾಜಕೀಯ ಅಧಿಕಾರದ ಪ್ರಚಾರವು : “ ಅವರ  ಸ್ವಂತ ಗ್ರಾಮಗಳ ವಿಮೋಚನೆಗಾಗಿಯೇ ರೈತರನ್ನು ಕ್ರೋಢೀಕರಿಸಬೇಕು ಹಾಗೂ ಗ್ರಾಮದ ವ್ಯವಹಾರಗಳನ್ನು ಇತ್ಯರ್ಥ ಮಾಡುವ ನಿಟ್ಟಿನಲ್ಲಿ ನೀವುಗಳೇ ಪರಮಾಧಿಕಾರ ಹೊಂದುವಿರೇ ಹೊರತು ಭೂಮಾಲೀಕರಲ್ಲ ಎಂದು ಅವರಿಗೆ ಹೇಳಬೇಕು. ಭೂಮಿ ನಿಮ್ಮದು, ಕೆರೆ ನಿಮ್ಮದು, ಭೂಮಾಲೀಕರ ನಿರ್ಮೂಲನವಾದ ನಂತರ ಯಾರ ಭೂಮಿಯನ್ನು ಯಾರು ಉಳುಮೆ ಮಾಡುತ್ತಾರೆ ಎಂದು ಪೊಲೀಸರಿಗೂ ತಿಳಿಯುವುದಿಲ್ಲ ಇತ್ಯಾದಿ ಇತ್ಯಾದಿ,,, ” ಹೀಗೆ ರೈತರ ಮನಸ್ಥಿತಿಗೆ ಅನುಗುಣವಾಗಿ ಅವರನ್ನು ಉತ್ತೇಜಿಸುವ ಸಲುವಾಗಿ ಜನಪ್ರಿಯ ಸ್ವರೂಪಗಳನ್ನು ರೂಪಿಸಲಾಗುತ್ತಿತ್ತು. ಇದು ಕಾಮ್ರೇಡ್‌ ಚಾರು ಮಜುಂದಾರ್‌ ಅವರ ಮಹತ್ತರವಾದ ಕೊಡುಗೆ. ಇದು ಪರಿಷ್ಕರಣವಾದದ ಪ್ರಚಾರಕ್ಕೆ ತದ್ವಿರುದ್ಧವಾಗಿತ್ತು. ಕಾಮ್ರೇಡ್‌ ಚಾರು ಮಜುಂದಾರ್‌ ನಿರ್ಮೂಲನೆಯ ತತ್ವವನ್ನು ರೂಪಿಸುವಾಗ, ಜನಸಮೂಹಗಳನ್ನು ಹೇಡಿಗಳಂತೆ ನಿರಾಕರಿಸುತ್ತಾ, ಕೆಲವೇ ಮುಂಚೂಣಿ ನಾಯಕರನ್ನು ವ್ಯಕ್ತಿಗತ ಹೀರೋಗಳನ್ನಾಗಿ ಬಿಂಬಿಸುವ ರೀತಿಯಲ್ಲಿ ಯೋಚಿಸಲಿಲ್ಲ. ಬದಲಾಗಿ, ಜನಸಮೂಹಗಳಲ್ಲಿ ಅಂತರ್ಗತವಾಗಿ ಸುಪ್ತವಾಗಿರುವ ಅಪಾರ ಪ್ರಮಾಣದ ಚಲನಶೀಲ ಶಕ್ತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದರು. ಈ ಸ್ಫೂರ್ತಿಯೇ ಅವರ ಎಲ್ಲ ಲೇಖನಗಳಲ್ಲೂ ಪ್ರತಿಫಲಿಸುತ್ತಾ ಹೋಗುತ್ತದೆ. ಹಾಗಾಗಿಯೇ ಇಡೀ ಪಕ್ಷವೂ ಜನಸಮೂಹಗಳ ಮೇಲೆ ವಿಶ್ವಾಸ ಇರಿಸುವುದರೊಂದಿಗೇ ಮುನ್ನಡೆದಿದೆ. ಅವರ ವಿರೋಧಿಗಳಲ್ಲಿ ಈ ವಿಶ್ವಾಸದ ಕಿಂಚಿತ್ತು ಅಂಶವನ್ನೂ ಕಾಣಲಾಗುವುದಿಲ್ಲ. ಹಾಗಾಗಿಯೇ ಅವರು ಜನಸಮೂಹಗಳಲ್ಲಿ ವಿಶ್ವಾಸ ಇಲ್ಲದೆ ಯಾವುದೋ ಒಂದು ಬಂಡವಳಿಗ ಪಕ್ಷಗಳ ಹಿಂದೆ, ವೇದಿಕೆಗಳ ಹಿಂದೆ ನಡೆಯತ್ತಾರೆ.

ದೇಶದ ರಾಜಕಾರಣದಲ್ಲಿ ಭೂಹೀನ, ಬಡ ರೈತರನ್ನು ಮುಂಚೂಣಿಯಲ್ಲಿರಿಸುವುದು, (ಎಲ್ಲ ಬಂಡವಳಿಗ, ಪರಿಷ್ಕರಣವಾದಿ ಪಕ್ಷಗಳೂ, ರಾಜಕಾರಣಿಗಳೂ ಮತ್ತು ಅರ್ಥಶಾಸ್ತ್ರಜ್ಞರೂ ಇದನ್ನು ಅನುಮೋದಿಸುತ್ತಾರೆ), ತಕ್ಷಣದ ಕಾರ್ಯಸೂಚಿಯಲ್ಲಿ ಕೃಷಿ ಕ್ರಾಂತಿಯನ್ನು ಮುನ್ನೆಲೆಗೆ  ತರುವ ಮೂಲಕ ಕಾಂಗ್ರೆಸ್‌ ಸರ್ಕಾರದ ಭೂ ಸುಧಾರಣೆಯ ನೀತಿಗಳನ್ನು ಭೇದಿಸುವುದು, ಕಮ್ಯುನಿಸ್ಟ್‌ ಕ್ರಾಂತಿಕಾರಿಗಳ ಆಲೋಚನಾ ಮಟ್ಟವನ್ನು ಹೆಚ್ಚಿಸುವುದು, ಭಾರತದ ಶ್ರಮಜೀವಿಗಳನ್ನು ಪರಿಷ್ಕರಣವಾದಿ ರಾಜಕಾರಣದ ತುಣುಕುಗಳಿಂದ ಪಾರು ಮಾಡಿ ದೇಶದ ವಿಮೋಚನೆಯ ಕನಸನ್ನು ಸಾಕಾರಗೊಳಿಸುವುದು, ಅಂತಾರಾಷ್ಟ್ರೀಯ ಶ್ರಮಜೀವಿ ವರ್ಗದೊಡನೆ ಕೈಜೋಡಿಸುವುದು, ಭಾರತದ ಕಮ್ಯುನಿಸ್ಟ್‌ ಚಳುವಳಿಗೆ ಸಹಸ್ರಾರು ಸಂಖ್ಯೆಯ ಯುವಜನರನ್ನು ಸೇರಿಸುವುದು, ನಕ್ಸಲ್‌ಬಾರಿಯಲ್ಲಿ ಜನ್ಮ ತಳೆದರೂ ನಂತರದಲ್ಲಷ್ಟೇ ಒಂದು ಸ್ಪಷ್ಟ ಸ್ವರೂಪ ಪಡೆದ ( ಇದನ್ನು ಗುರುತಿಸಲು ಕನು ಸನ್ಯಾಲ್‌ ವಿಫಲರಾಗಿರುವುದರಿಂದಲೇ ತಮ್ಮ ವೈಫಲ್ಯದ ನಿಜವಾದ ಕಾರಣವನ್ನೂ ಗ್ರಹಿಸಲಾರದಂತಾಗಿದ್ದಾರೆ) ನಕ್ಸಲ್‌ವಾದದ ವಿದ್ಯಮಾನವನ್ನು ಭಾರತದಲ್ಲಿ ಒಂದು ರಾಷ್ಟ್ರವ್ಯಾಪಿ ರಾಜಕೀಯ ಪ್ರವೃತ್ತಿಯನ್ನಾಗಿ ರೂಪಿಸುವುದು ಮತ್ತು ಚಾರು ಮಜುಂದಾರ್‌ ಇಲ್ಲವಾದ ನಂತರವೂ ಮತ್ತೆ ಮತ್ತೆ ಉಗಮಿಸುವ ಮೂಲಕ ಸಿಪಿಐ ಎಂಎಲ್‌ ಪಕ್ಷವನ್ನು ಭಾರತದ ಶ್ರಮಜೀವಿಗಳ ಒಂದು ಕ್ರಾಂತಿಕಾರಿ ಪಕ್ಷವನ್ನಾಗಿ ರೂಪಿಸುವುದು, ಇವೆಲ್ಲವೂ ಚಾರು ಮಜುಂದಾರ್‌ ಅವರ ಮಹತ್ತರ ಕೊಡುಗೆಗಳು ಹಾಗೂ ಅವರ ಕ್ರಾಂತಿಕಾರಿ ಮಾರ್ಗದ ಪ್ರಮುಖ ಅಂಶಗಳೂ ಹೌದು.

ಆದರೆ ಭಾರತದಲ್ಲಿ ಕ್ರಾಂತಿಕಾರಿ ಸನ್ನಿವೇಶವನ್ನು ಅಂದಾಜು ಮಾಡುವಲ್ಲಿನ ಉತ್ಪ್ರೇಕ್ಷೆ , ಭಾರತೀಯ ಸನ್ನಿವೇಶಗಳ ವಸ್ತುನಿಷ್ಠ ಗ್ರಹಿಕೆಯ ಕೊರತೆ, ನಿರ್ಮೂಲನಾ ಹೋರಾಟದ ಸಾಮಾನ್ಯೀಕರಣ, ಪಕ್ಷದಲ್ಲಿನ ವಿಭಜನೆ ಮತ್ತು ವಿಘಟನೆ, ಬಾಂಗ್ಲಾದೇಶ ಘಟನೆಯ ಹಿನ್ನೆಲೆಯಲ್ಲಿ ಆಳುವ ವರ್ಗಗಳ ತಾತ್ಕಾಲಿಕ ಸುಸ್ಥಿರತೆ, ಭಾರತ ಸೋವಿಯತ್‌ ಸಂಘದ ಸೇನಾ ಒಡಂಬಡಿಕೆ, ಈ ಎಲ್ಲ ಕಾರಣಗಳಿಂದ ನಾವು ಶತ್ರುಪಾಳಯದ ದಬ್ಬಾಳಿಕೆಗೊಳಗಾಗಿ ಹಿನ್ನಡೆ ಅನುಭವಿಸಬೇಕಾಯಿತು.

ನಿರ್ಮೂಲನೆಯ ಪರಿಕಲ್ಪನೆಯನ್ನು ಬಹುದೂರ ಕೊಂಡೊಯ್ಯಲಾಗಿದೆ ಮತ್ತು ಬಹುತೇಕ ಪ್ರಕರಣಗಳಲ್ಲಿ ಅದನ್ನು ಸಮೂಹ ಹೋರಾಟಗಳೊಡನೆ ಸಂಯೋಜಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಕಾಮ್ರೇಡ್‌ ಚಾರು ಮಜುಂದಾರ್‌ ಗ್ರಹಿಸಿದ್ದರು. ಹಾಗಾಗಿಯೇ ಅವರು ಪಕ್ಷದ ವಿಘಟನೆ ಮತ್ತು ಹಿನ್ನಡೆಯ ಸನ್ನಿವೇಶಗಳನ್ನು ಪರಾಮರ್ಶಿಸಿ ರಾಜಕೀಯವಾಗಿ ಏಕೀಕೃತ ಪಕ್ಷವನ್ನು ಕಟ್ಟಲು ಮತ್ತು ದುಡಿಯುವ ಜನರ, ವಿಶೇಷವಾಗಿ ಎಡಪಕ್ಷಗಳಿಗೆ ಸೇರಿದವರ, ಸಂಯುಕ್ತ ರಂಗವನ್ನೂ  ರಚಿಸುವ ಮೂಲಕ ಕಾಂಗ್ರೆಸ್‌ ಆಳ್ವಿಕೆಯ ವಿರುದ್ಧ ಹೋರಾಡಲು ಕರೆ ನೀಡಿದ್ದರು. ಸಾಮಾನ್ಯ ನೆಲೆಯಲ್ಲಿ ಏಕೀಕೃತ ಹೋರಾಟಗಳನ್ನಾಧರಿಸಿಯೇ ಸಂಯುಕ್ತ ವೇದಿಕೆಯನ್ನು ರೂಪಿಸಲು ಕರೆ ನೀಡಿದ್ದ ಕಾಮ್ರೇಡ್‌ ಚಾರು ಮಜುಂದಾರ್‌, ಕೆಲವು ಆಯ್ದ ಪ್ರದೇಶಗಳಲ್ಲಿ ಭೂ ಸುಧಾರಣೆಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದ್ದರು. ಹೊಸ ಸನ್ನಿವೇಶಗಳ ಹಿನ್ನೆಲೆಯಲ್ಲಿ ಇದು ಒಂದು ರೀತಿಯಲ್ಲಿ ಹಿಮ್ಮೆಟ್ಟುವ ನೀತಿಯಾಗಿತ್ತು. ಆದರೆ ಸುಯೋಜಿತ, ವ್ಯವಸ್ಥಿತ ಹಿಮ್ಮೆಟ್ಟುವಿಕೆಯನ್ನು ಸಂಘಟಿಸಲಾಗಲಿಲ್ಲ. ಮೊದಲನೆಯ ಕಾರಣವೆಂದರೆ, ಈ ಹಿಮ್ಮೆಟ್ಟುವಿಕೆಯನ್ನು ತಾತ್ಕಾಲಿಕ ವಿದ್ಯಮಾನವೆಂದೇ ಭಾವಿಸಲಾಗಿತ್ತು. ಹಾಗಾಗಿ ಶೀಘ್ರದಲ್ಲೇ ಸಮೂಹ ಹೋರಾಟಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯತಂತ್ರಗಳನ್ನು ಅಧರಿಸಲಾಗಿತ್ತು. ಎರಡನೆಯ ಕಾರಣವೆಂದರೆ, ಹಿಮ್ಮೆಟ್ಟುವಿಕೆಯ ನೀತಿ ಮತ್ತು ವಿಧಾನಗಳನ್ನು ಸ್ಪಷ್ಟವಾಗಿ, ಹೋರಾಟದ ಸ್ವರೂಪ ಮತ್ತು ಸಂಘಟನೆಯ ಸ್ವರೂಪದ ನೆಲೆಯಲ್ಲಿ ರೂಪಿಸಲಾಗಲಿಲ್ಲ.

ಹೋರಾಟದ ಹಿನ್ನಡೆಗಳು, ಪಕ್ಷದ ವಿಭಜನೆಗಳು, ಪಕ್ಷದ ಕೇಂದ್ರ ಸಮಿತಿಯ ಪುನರ್‌ ಸಂಘಟನೆಯಲ್ಲಿದ್ದ ಅಂತರಗಳು ಇವೆಲ್ಲದರ ನಡುವೆ ಕಾಮ್ರೇಡ್‌ ಚಾರು ಮಜುಂದಾರ್‌ ಅವರಿಗೆ ನಿಷ್ಠರಾಗಿದ್ದ ಪಕ್ಷದ ಕಾರ್ಯಕರ್ತರು ತಾತ್ಕಾಲಿಕ ಅವಧಿಗೆ ಕೇಂದ್ರ ಸಮಿತಿಯನ್ನು ಪುನಾರಚಿಸುವ ಸಂಪೂರ್ಣ ಅಧಿಕಾರವನ್ನು ನೀಡಿದ್ದರು. ಅವರ ಸುತ್ತಲೂ ಇದ್ದ ಕೆಲವರು ಈ ಬೆಳವಣಿಗೆಯನ್ನೇ ಸಾಮಾನ್ಯೀಕರಿಸುವ ಮೂಲಕ ತಮ್ಮದೇ ಆದ ಸ್ವ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ವ್ಯಕ್ತಿಗತ ಅಧಿಕಾರದ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ಇದು ಕೇಂದ್ರ ಸಮಿತಿಯ ಪುನರ್‌ ಸಂಘಟನೆಯ ಹಾದಿಯಲ್ಲಿ ಹಲವು ತೊಡಕುಗಳನ್ನು ಉಂಟುಮಾಡಿದ್ದೇ ಅಲ್ಲದೆ ಅಂತಿಮವಾಗಿ ಪಕ್ಷ ಮತ್ತು ಕಾಮ್ರೇಡ್‌ ಚಾರು ಮಜುಂದಾರ್‌ ಅವರಿಗೆ ವಿಶ್ವಾಸದ್ರೋಹ ಬಗೆದಂತಾಗಿತ್ತು.

ಒಟ್ಟಾರೆ ಹೇಳುವುದಾದರೆ, ಪಕ್ಷದ ಪ್ರಮುಖ ತಪ್ಪುಗಳನ್ನು ಹೀಗೆ ಗುರುತಿಸಬಹುದು : ಪಕ್ಷವು ನಿರ್ಮೂಲನೆಯ ಸ್ವರೂಪದ ಹೋರಾಟವನ್ನು ದೇಶವ್ಯಾಪಿಯಾಗಿ ಸಾಮಾನ್ಯೀಕರಿಸಿ ಒಂದು ಚಳುವಳಿಯ ಮಾದರಿಯಲ್ಲಿ ಕೈಗೆತ್ತಿಕೊಂಡಿತ್ತು. ಈ ಸ್ವರೂಪದ ಹೋರಾಟವನ್ನು ಸಮೂಹ ಹೋರಾಟಗಳೊಡನೆ ಸಂಯೋಜಿಸಿ ಒಂದು ಸುಸ್ಥಿರವಾದ, ಆಳವಾದ ನೀತಿಯನ್ನು ರೂಪಿಸುವಲ್ಲಿ ವಿಫಲವಾಗಿತ್ತು. ಆದರೂ ಕೆಲವೆಡೆ ಈ ಪ್ರಯೋಗವು ಯಶಸ್ವಿಯಾಗಿದ್ದೂ ಉಂಟು. ಗಂಭೀರವಾದ ಹಿನ್ನಡೆಯ ಲಕ್ಷಣಗಳು ಕಾಣುತ್ತಿರುವಾಗಲೂ ಪಕ್ಷವು ತನ್ನ ಸೇನಾ ಆಕ್ರಮಣವನ್ನು ಹಿಂದೆಗೆದುಕೊಂಡು, ರಾಜಕೀಯ ಆಕ್ರಮಣದತ್ತ ನಡೆಯುವ ನಿಟ್ಟಿನಲ್ಲಿ ಒಂದು ಸುಸಜ್ಜಿತ ನೀತಿಯನ್ನು ರೂಪಿಸಲಿಲ್ಲ. ಈ ತಪ್ಪುಗಳಿಗೆ ಹಲವು ಕಾರಣಗಳಿವೆ. ದೇಶದಲ್ಲಿ ವಿವಿಧೆಡೆ ಭುಗಿಲೇಳುತ್ತಿದ್ದ ಬಂಡಾಯಗಳನ್ನು ಶಾಶ್ವತ ಉತ್ಕರ್ಷಗಳೆಂದು ಭಾವಿಸುವ ಮೂಲಕ ದೇಶವ್ಯಾಪಿಯಾಗಿ ಕಾಣುತ್ತಿದ್ದ ಕ್ರಾಂತಿಕಾರಿ ಸನ್ನಿವೇಶವನ್ನು ಅಂದಾಜು ಮಾಡುವಲ್ಲಿ ಉತ್ಪ್ರೇಕ್ಷೆ ಹೆಚ್ಚಾಗಿತ್ತು. ಭಾರತದ ವಾಸ್ತವ ಸನ್ನಿವೇಶವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ. ವ್ಯಕ್ತಿನಿಷ್ಠ ಆಶಯಗಳಿಗನುಸಾರ ನಿರ್ದಿಷ್ಟ ಸಂದರ್ಭಗಳನ್ನೂ ಸಾಮಾನ್ಯೀಕರಿಸುವ ವಿಧಾನವೂ ತಪ್ಪಾಗಿತ್ತು. ಪಕ್ಷವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದುದರಿಂದ, ಪಕ್ಷದ ನಾಯಕತ್ವವು ಪರಿಷ್ಕರಣವಾದಿಗಳ ವಿಶ್ವಾಸದ್ರೋಹಕ್ಕೆ ಪ್ರತಿಕ್ರಯಿಸುವ ಭರದಲ್ಲಿ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುವಂತಾಯಿತು.  

ಕಾಮ್ರೇಡ್‌ ಚಾರು ಮಜುಂದಾರ್‌ ಹುತಾತ್ಮರಾಗುವುದರೊಂದಿಗೆ ಪರಿಸ್ಥಿತಿ ಸಂಕೀರ್ಣವಾಗತೊಡಗಿತ್ತು. ಐದು ವರ್ಷಗಳ ನಂತರವಷ್ಟೇ, 1977ರಲ್ಲಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗಿತ್ತು.

ಕಾಮ್ರೇಡ್‌ ಚಾರು ಮಜೂಂದಾರ್‌ ಹುತಾತ್ಮರಾದ ನಂತರ, ಶರ್ಮ ಮತ್ತು ಮಹದೇವ್‌ 1972ರ ಡಿಸೆಂಬರ್‌ 5-6ರಂದು ಪಕ್ಷದ ಕೇಂದ್ರ ಸಮಿತಿಯೊಂದನ್ನು ರಚಿಸಿದರು. ಲಿನ್‌ ಪಿಯಾವೋ ಪ್ರಕರಣದ ಹಿನ್ನೆಲೆಯಲ್ಲಿ ಅವರು 1973ರ ಆರಂಭದಲ್ಲೇ ಪಕ್ಷದಿಂದ ದೂರವಾದರು. ಇಬ್ಬರೂ ಸಹ ತಮ್ಮದೇ ಕೇಂದ್ರ ಸಮಿತಿಯ ಹೆಸರಿನಲ್ಲಿ ತಮ್ಮ ಬಣದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ, ಅನಗತ್ಯವಾಗಿ, ಅನೀತಿಯುತವಾಗಿ ಕಾಮ್ರೇಡ್‌ ಚಾರು ಮಜುಂದಾರ್‌ ಅವರ ವೈಭವೀಕರಣವನ್ನು ಖಂಡಿಸತೊಡಗಿದರು. ಅದರಲ್ಲೂ ಮಹದೇವ್‌ ಎಲ್ಲ ರೀತಿಯ ಅಸಂಬದ್ಧತೆಗಳನ್ನೂ ಪ್ರದರ್ಶಿಸುತ್ತಾ ಚಾರು ಮಜುಂದಾರ್‌ ಅವರ ಪ್ರತಿಯೊಂದು ಮಾತಿನ ಶುದ್ಧತೆಯನ್ನು ರಕ್ಷಿಸುವ ನೆಪದಲ್ಲಿ ಪಕ್ಷವನ್ನು ಚೀನಾದ ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ನಿಲ್ಲಿಸಿ, ರೈತ ಹೋರಾಟದಿಂದ ವಿಮುಖವಾದ ಚಟುವಟಿಕೆಗಳನ್ನು ತೀವ್ರಗೊಳಿಸಿದರು. ಈ ರೀತಿಯಲ್ಲಿ ಮಹದೇವ್‌ ಕ್ರಾಂತಿಕಾರಿ ಶಕ್ತಿಗಳಿಗೆ, ವಿಶೇಷವಾಗಿ ಪಶ್ಚಿಮ ಬಂಗಾಲದಲ್ಲಿ, ಅಪಾರ ಹಾನಿ ಉಂಟುಮಾಡಿದ್ದೇ ಅಲ್ಲದೆ, ತಾವೂ ಸಹ ಅವನತಿಯತ್ತ ಸಾಗಿದರು.

ಈ ಬಿಕ್ಕಟ್ಟಿನ ಕ್ಷಣದಲ್ಲಿ ಬಿಹಾರ್‌ ರಾಜ್ಯ ಸಮಿತಿಯ ಸಂಗಾತಿಗಳು ಮತ್ತು ಪಶ್ಚಿಮ ಬಂಗಾಲದಲ್ಲಿ ಹೊಸದಾಗಿ ಸಂಘಟಿಸಲಾಗಿದ್ದ ರಾಜ್ಯ ಮುಂಚೂಣಿ ತಂಡದ ಸದಸ್ಯರು ಮಹದೇವ್-ಶರ್ಮ ಜೋಡಿಯ ವಿರುದ್ಧ ನಡೆಸಿದ ಸಂಘರ್ಷದ ಅನುಭವಗಳನ್ನು ಹಂಚಿಕೊಳ್ಳತೊಡಗಿದರು. ಹಾಗೆಯೇ ಬಿಹಾರದಲ್ಲಿ ಕಂಡುಬರುತ್ತಿದ್ದು ಹೊಸ ಉತ್ಕರ್ಷದ ಅನುಭವಗಳನ್ನು ಹಂಚಿಕೊಳ್ಳುವುದರೊಂದಿಗೆ, ಪಶ್ಚಿಮ ಬಂಗಾಲದಲ್ಲಿ ತೀವ್ರ ಹಿನ್ನಡೆಯ ಹೊರತಾಗಿಯೂ ಪಕ್ಷದ ಪುನರ್‌ ಸಂಘಟನೆಯಾದದ್ದನ್ನು ಹಂಚಿಕೊಂಡಿದ್ದರು. ಏತನ್ಮಧ್ಯೆ ದೆಹಲಿಯಲ್ಲಿದ್ದ ಸಂಗಾತಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಆಗ ಕಾಮ್ರೇಡ್‌ ಜವಹರ್‌ ಅವರ ನಾಯಕತ್ವದಲ್ಲಿ 1974ರ ಜುಲೈ  28ರಂದು ಕೇಂದ್ರ ಸಮಿತಿಯನ್ನು ಪುನಾರಚಿಸಲಾಯಿತು. ಅದೇ ವೇಳೆ ಬಿಹಾರದ ಭೋಜ್‌ಪುರ ಮತ್ತು ಪಾಟ್ನಾ ಪ್ರದೇಶಗಳಲ್ಲಿ ರೈತ ಹೋರಾಟವು ಜಾರಿಯಲ್ಲಿತ್ತು. ಪಶ್ಚಿಮ ಬಂಗಾಲದಲ್ಲಿ ರೈತ ಹೋರಾಟವನ್ನು ಪುನರ್‌ ಸಂಘಟಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ಹೋರಾಟಗಳಿಗೆ ಮಾರ್ಗದರ್ಶನ ನೀಡಿ ಮುನ್ನಡೆಸಲು ಮತ್ತು ಈಗಾಗಲೇ ಉಂಟಾಗಿದ್ದ ಹಿನ್ನಡೆಯನ್ನು ನಿವಾರಿಸಲು ಒಂದು ಕೇಂದ್ರದ ಅವಶ್ಯಕತೆಯನ್ನು ಮನಗಾಣಲಾಗಿತ್ತು. ಮಹದೇವ್‌, ಶರ್ಮ ಮತ್ತು ಸಂಗಾತಿಗಳಿಂದ ಕಾಮ್ರೇಡ್ ಚಾರು ಮಜುಂದಾರ್‌ ಅವರ ಮಾರ್ಗವನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವಂತೆಯೇ, ಅವರ ಕ್ರಾಂತಿಕಾರಿ ಮಾರ್ಗದ ಅಂತಃಸತ್ವವನ್ನು ಸಮರ್ಥಿಸುವುದು ಮತ್ತು ರಕ್ಷಿಸುವುದು ಪರಮಧ್ಯೇಯವಾಗಿತ್ತು. ನೂತನ ಕೇಂದ್ರ ಸಮಿತಿಯ ಘೋಷಿತ ಗುರಿಗಳು ಹೀಗಿದ್ದವು : (೧) ಕಾಮ್ರೇಡ್‌ ಚಾರು ಮಜುಂದಾರ್‌ ಅವರ ಕ್ರಾಂತಿಕಾರಿ ಮಾರ್ಗದ ಅಂತಃಸತ್ವವನ್ನು ಸಮರ್ಥಿಸುವುದು, ರಕ್ಷಿಸುವುದು. (೨) ಇದನ್ನು ಆಧರಿಸಿಯೇ ಪಕ್ಷವನ್ನು ರಾಜಕೀಯವಾಗಿ ಒಗ್ಗೂಡಿಸುವುದು ಮತ್ತು (೩) ಭಾರತದ ಕಮ್ಯುನಿಸ್ಟ್‌ ಕ್ರಾಂತಿಕಾರಿಗಳನ್ನು ಒಗ್ಗೂಡಿಸುವುದು.

ಆ ಸಂದರ್ಭದಲ್ಲಿ, ಕೇಂದ್ರ ಸಮಿತಿಯ ವ್ಯಾಪ್ತಿಯಲ್ಲಿನ ಚಟುವಟಿಕೆಗಳನ್ನು ಬಿಹಾರ, ಪಶ್ಚಿಮ ಬಂಗಾಲ, ದೆಹಲಿ ಮತ್ತು ಉತ್ತರಪ್ರದೇಶದ ಕೆಲವು ಪ್ರದೇಶಗಳಿಗೆ ಸೀಮಿತಗೊಳಿಸಲಾಗಿತ್ತು.  ಕೆಲ ಕಾಲದ ನಂತರ ಅಸ್ಸಾಂನ ಅನೇಕ ಸಂಗಾತಿಗಳು ಸೇರಿಕೊಂಡರು. ಆ ದಿನಗಳಲ್ಲಿ, ಆಂಧ್ರ, ತಮಿಳುನಾಡು ಮತ್ತು ಕೇರಳದ ಸಂಗಾತಿಗಳು ರೈತರ ನಡುವೆಯೇ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದು, ತೀವ್ರಗಾಮಿ ಹೋರಾಟಗಳನ್ನು ನಡೆಸುತ್ತಿದ್ದರು. ಪ್ರಚಲಿತ ಪ್ರವೃತ್ತಿಯ ವಿರುದ್ಧದ ಈ ಹೋರಾಟಗಳು ಮಹದೇವ್‌ ಮತ್ತು ಶರ್ಮ ಅವರ ಹೋರಾಟಗಳನ್ನೇ ಹೋಲುತ್ತಿದ್ದವು. ಈ ಸಂಗಾತಿಗಳನ್ನು ವಿವಿಧ ಹಂತಗಳಲ್ಲಿ ಪಕ್ಷದ ಸಮಿತಿಗಳಲ್ಲಿ ಸಂಘಟಿಸಲಾಗುತ್ತಿತ್ತು. ತಮಿಳುನಾಡಿನ ಸಂಗಾತಿಗಳು ವಿಶೇಷವಾಗಿ ಪಕ್ಷದ ರಾಜ್ಯ ಸಮಿತಿಯ ಅಡಿ ಸಂಘಟಿತರಾಗಿದ್ದರು. ಆದರೆ ಪುನರ್‌ ಸಂಘಟಿತ ಪಕ್ಷದ ಕೇಂದ್ರವು ಅವರೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲವಾಗಿ, ಕ್ರಾಂತಿಕಾರಿ ಮಾರ್ಗದಲ್ಲಿ ಪುನರ್‌ ಸಂಘಟನೆಯ ಪ್ರಕ್ರಿಯೆ ಮುಂದುವರೆಯುವುದು ಸಾಧ್ಯವಾಗಲಿಲ್ಲ. ದೇಶದ ಎಲ್ಲ ಭಾಗಗಳಲ್ಲೂ ಕ್ರಾಂತಿಕಾರಿ ಹೋರಾಟಗಳನ್ನು ದಮನಿಸಲಾಗುತ್ತಿತ್ತು. ಅನೇಕ ಸಂಗಾತಿಗಳು ಬಂಧಿಸಲ್ಪಟ್ಟರು ಅಥವಾ ಹತ್ಯೆಗೀಡಾದರು. ಕೊಂಚ ಸಮಯದ ನಂತರ ಮಹದೇವ್‌ ಮತ್ತು ಶರ್ಮ ಅವರ ಕೇಂದ್ರ ಸಮಿತಿಯೂ ವಿಘಟಿತವಾಗಿ ಅವನತಿ ಹೊಂದಿತ್ತುತ.  ಈ  ಪರಿಸ್ಥಿತಿಯಲ್ಲಿ, ಕ್ರಾಂತಿಕಾರಿ ದೃಷ್ಟಿಕೋನದೊಂದಿಗೆ ಪಕ್ಷವನ್ನು ಒಂದುಗೂಡಿಸಿ ಸಂಗ್ರಹಿಸುವ ನಿಟ್ಟಿನಲ್ಲಿ ಮತ್ತು ರೈತ ಹೋರಾಟಗಳನ್ನು ಕಟ್ಟುವ ಪ್ರಯತ್ನಗಳನ್ನು ಮುಂದುವರೆಸುವಲ್ಲಿ, ಕೇಂದ್ರ ಸಮಿತಿಯನ್ನು ರಚಿಸುವುದು ಏಕೈಕ ಮಾರ್ಗವಾಗಿ ಉಳಿದಿತ್ತು.

ಕೇಂದ್ರ ಸಮಿತಿಯನ್ನು ರಚಿಸುವುದೊಂದಿಗೆ, ಬಿಹಾರದಲ್ಲಿನ ರೈತ ಹೋರಾಟಕ್ಕೆ ಹೊಸ ಹುರುಪು ಬಂದಿತ್ತು. ಉತ್ತರ ಪ್ರದೇಶದ ಗಾಜಿಪುರ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ, ಪಶ್ಚಿಮ ಬಂಗಾಲದ ನಕ್ಸಲ್‌ಬಾರಿಯಲ್ಲಿ ಸಶಸ್ತ್ರ ಚಟುವಟಿಕೆಗಳು, ರೈತ ಹೋರಾಟಗಳನ್ನೂ ಸಂಘಟಿಸಲಾಗಿತ್ತು.  ಕಾಮ್ರೇಡ್‌ ಜವಹರ್‌ ಯಾವಾಗಲೂ ಪಕ್ಷದ ಹಿತಾಸಕ್ತಿಗಳಿಗೆ ಮತ್ತು ಕೇಂದ್ರ ಸಮಿತಿಯ ಸಾಮೂಹಿಕ ನಾಯಕತ್ವಕ್ಕೆ  ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು. ಭೋಜ್‌ಪುರದ ರೈತಹೋರಾಟವನ್ನು ಅವರು ಖುದ್ದಾಗಿ ಮುನ್ನಡೆಸಿದ್ದರು. ಸಮರ್ಥ ಸಂಘಟಕರು ಮತ್ತು ಕಮಾಂಡರ್‌ಗಳನ್ನು ರೂಪಿಸಿ, ತೀವ್ರವಾದ ವರ್ಘ ಹೋರಾಟಗಳು ಎದುರಾದಾಗ ತೀವ್ರಗಾಮಿ ಸೇನಾ ಚಟುವಟಿಕೆಗಳಿಗೆ ಮುಂದಾಳತ್ವ ವಹಿಸಲು ಅವರನ್ನು ಸಜ್ಜಾಗಿಸಿದ್ದರು. ಶತ್ರುಗಳು ಪಕ್ಷದ ಚಟುವಟಿಕೆಗಳನ್ನು ಸುತ್ತುವರಿಯುವುದನ್ನು ಭಂಗಗೊಳಿಸುವ ಸಲುವಾಗಿ ಚಲನೆಯಲ್ಲಿರುವ ಶತ್ರುಪಡೆಗಳ ವಿರುದ್ಧ ಆಕ್ರಮಣ ನಡೆಸಲು ಸಶಸ್ತ್ರ ಪಡೆಗಳನ್ನು ರಚಿಸುವ ಮೂಲಕ ಜನರಲ್ಲಿ ಉತ್ಸಾಹ ಹೆಚ್ಚಿಸಿದ್ದರು. ಹೋರಾಟದ ಈ ಭಾಗವು ಕಾಂಗ್ರೆಸ್‌ ವಿರೋಧಿ ಸಂಯುಕ್ತ ರಂಗದ ಒಂದು ಅಂಶ ಎಂದೇ ಪ್ರತಿಪಾದಿಸುತ್ತಿದ್ದರು.

ಆದರೆ ಕೇಂದ್ರ ಸಮಿತಿಯು ಮತ್ತು ವಿಶೇಷವಾಗಿ ಕಾಮ್ರೇಡ್‌ ಜವಹರ್‌ ಆಧ್ಯಾತ್ಮಿಕ  ನಿಲುವುಗಳನ್ನು ಹೊಂದಿದ್ದುದರಿಂದ . ವಿದ್ಯುಕ್ತವಾದ ಮತ್ತು ವ್ಯಕ್ತಿನಿಷ್ಠ ಧೋರಣೆಯನ್ನು ಅನುಸರಿಸುವ ಮೂಲಕ ಕೆಲವು ತಪ್ಪು ನಡೆಗಳಿಗೆ ಕಾರಣರಾದರು. ಒಟ್ಟಾರೆ ಸನ್ನಿವೇಶವನ್ನು ಗಣನೆಗೆ ತೆಗೆದುಕೊಳ್ಳದೆ, ನಿರ್ದಿಷ್ಟ ಸನ್ನಿವೇಶಗಳನ್ನೇ ಸಾಮಾನ್ಯೀಕರಿಸಲಾಯಿತು. ಹಾಗಾಗಿ ಕಾಮ್ರೇಡ್‌ ಜವಹರ್‌ ತಮ್ಮ ತತ್ವಶಾಸ್ತ್ರೀಯ  “ ಒಂದು ಎರಡಾಗಿ ವಿಭಜನೆಯಾಗುತ್ತದೆ ಆದರೆ ಎರಡು ಸಂಯೋಜಿತವಾಗಿ ಒಂದು ಆಗುವುದಿಲ್ಲ ” ಲೇಖನದಲ್ಲಿ ಸರಿಯಾದ ಮಾರ್ಗವನ್ನು ಯಾಂತ್ರಿಕವಾಗಿ ವ್ಯಾಖ್ಯಾನಿಸುವ ಮೂಲಕ ಇದು ಕೇವಲ ಮೂಲಭೂತ, ಅಭಿವೃದ್ಧಿಶೀಲ ಅಂಶಗಳನ್ನು ಮಾತ್ರ ಹೊಂದಿರುತ್ತದೆ ಎಂದು ಪ್ರತಿಪಾದಿಸಿದ್ದರು. ಇದು ತಾತ್ವಿಕ ನೆಲೆಯಲ್ಲಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಹಾದಿಗೆ ಮತ್ತಷ್ಟು ತೊಡಕುಗಳನ್ನುಂಟುಮಾಡಿತು.  ಚಲನೀಯ ಶತ್ರುಪಡೆಗಳ ಮೇಲೆ ನಡೆಸುವ ಆಕ್ರಮಣಗಳನ್ನು ಅವರು ಚಲನೀಯ ಸಮರದ ಆರಂಭದ ಹಂತ ಎಂದು ವ್ಯಾಖ್ಯಾನಿಸುವ ಮೂಲಕ ಅದನ್ನು ಸರ್ವವ್ಯಾಪಿಯಾಗಿ ಸಾಮಾನ್ಯೀಕರಿಸಿದರು. ಇದು ತಪ್ಪಾದ ಸೇನಾ ಮಾರ್ಗಕ್ಕೆ ಕಾರಣವಾದ ನಿರ್ಮೂಲನಾ ಮಾದರಿಯನ್ನು ಯಾಂತ್ರಿಕವಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನವಾಗಿತ್ತು. ಪೊಲೀಸರ ಮತ್ತು ಭೂಮಾಲೀಕರ ದಾಳಿಯ ವಿರುದ್ಧ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಪ್ರತಿರೋಧದ ಹೋರಾಟಗಳಿಗೆ ಕ್ರಾಂತಿಕಾರಿ ಸಮಿತಿಗಳ ನಾಯಕತ್ವವೇ ಮುಂದಾಳತ್ವ ವಹಿಸಿತ್ತು ಎನ್ನುವುದು ನಿರ್ವಿವಾದ ಅಂಶ. ಆದರೂ ಸಮೂಹ ಚಳುವಳಿಗಳನ್ನು ಮುನ್ನಡೆಸಲು ಒಂದು ಸುಸ್ಥಿರವಾದ, ದೀರ್ಘಕಾಲಿಕ ನೀತಿಯನ್ನು ರೂಪಿಸಲು ಸಾಧ್ಯವಾಗಲಿಲ್ಲ. ಈ ತಪ್ಪು ಚಿಂತನೆಗಳ ನಕಾರಾತ್ಮಕ ಪರಿಣಾಮಗಳು ಹಲವು ಪ್ರದೇಶಗಳಲ್ಲುಂಟಾದ ಗಂಭೀರ ಹಿನ್ನಡೆ ಮತ್ತು ನಷ್ಟಗಳ ಮೂಲಕ ಕಾಣಿಸಿಕೊಳ್ಳತೊಡಗಿದವು. ಹಾಗಾಗಿ ವಿಶಾಲ ತಳಹದಿಯ ಸಮೂಹ ಪ್ರಯತ್ನಗಳು ದುರ್ಬಲವಾಗತೊಡಗಿದವು. 1975ರ ನವಂಬರ್‌ನಲ್ಲಿ ಕಾಮ್ರೇಡ್‌ ಜವಹರ್‌ ಭೋಜ್‌ಪುರದ ಹೋರಾಟದಲ್ಲಿ ಹುತಾತ್ಮರಾದರು. ನಮ್ಮ ಪಕ್ಷವನ್ನು ನಾಶಪಡಿಸುವ ಉದ್ದೇಶದಿಂದಲೇ ಕೆಲವು ನಿರ್ಲಜ್ಜರು ಕಾಮ್ರೇಡ್‌ ಜವಹರ್‌ ಅವರನ್ನು ಭೋಜ್‌ಪುರದ ನಾಯಕನಂತೆ ವೈಭವೀಕರಿಸುವ ಮೂಲಕ, ಪಕ್ಷವನ್ನು ಪುನರ್‌ ಸಂಘಟಿಸುವಲ್ಲಿ, ಸಾಮೂಹಿಕ ನಾಯಕತ್ವವನ್ನು ರೂಪಿಸುವಲ್ಲಿ ಮತ್ತು ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಕೇಂದ್ರೀಕರಣ ನೀತಿಯನ್ನು ರೂಪಿಸುವಲ್ಲಿ ಅವರ ಕಾಣಿಕೆಯನ್ನು ನಿರ್ಲಕ್ಷಿಸಲಾರಂಭಿಸಿದರು. ಈ ಪ್ರಯತ್ನಗಳು ನಡೆಯದೆ ಹೋಗಿದ್ದಲ್ಲಿ ಭೋಜ್‌ಪುರ ಹೋರಾಟ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಹೀಗೆ ತಮ್ಮದೇ ಆದ ಬಣ ಹಿತಾಸಕ್ತಿಗಳಿಗಾಗಿ ಮಹಾನ್‌ ಕ್ರಾಂತಿಕಾರಿ ನಾಯಕನನ್ನು ಅಪಮಾನಿಸಿದ್ದರು.

1976ರ ಫೆಬ್ರವರಿಯಲ್ಲಿ ನಡೆದ ಪಕ್ಷದ ಎರಡನೆ ಮಹಾಧಿವೇಶನ, ಶತ್ರುಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಶಕ್ತಿಗಳನ್ನು ಸಂಘಟಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಅದು ಚಾಲ್ತಿಯಲ್ಲಿದ್ದ ರಾಜಕೀಯ ಮಾರ್ಗವನ್ನೇ ಸಮರ್ಥಿಸಿತ್ತು. ಹಾಗಾಗಿ 1976ರ ವರ್ಷದುದ್ದಕ್ಕೂ ನಾವು ಪಕ್ಷದ ಸಂಘಟನೆ ಮತ್ತು ಹೋರಾಟವನ್ನು ಕಠಿಣ ಪರಿಸ್ಥಿತಿಗಳ ನಡುವೆಯೂ ಕಾಪಾಡಿಕೊಂಡುಬಂದಿದ್ದೆವು. 1974-76ರ ಈ ಅವಧಿಯಲ್ಲಿ ಕಾಣುವ ನಮ್ಮ ಪ್ರಮುಖ ಹಿನ್ನಡೆಗಳೆಂದರೆ, ಮೊದಲನೆಯದಾಗಿ ವಿದ್ಯಾರ್ಥಿಗಳು, ಯುವಜನರು ಮತ್ತು ಬಿಹಾರದ ಎಲ್ಲ ವರ್ಗಗಳ ಜನರ ನಡುವೆ ಇದ್ದ ಕಾಂಗ್ರೆಸ್‌ ವಿರೋಧಿ ಉತ್ಕರ್ಷದೊಡನೆ ನಮಗೆ ಸಂಪರ್ಕ ಸಾಧಿಸಲಾಗಲಿಲ್ಲ. (ಈ ಉತ್ಕರ್ಷದ ನೇತೃತ್ವವನ್ನು ಆನಂತರ ಜಯಪ್ರಕಾಶ್‌ ನಾರಾಯಣ್‌ ವಹಿಸಿಕೊಂಡಿದ್ದರು ಅದು ಕ್ರಮೇಣ ನಿರ್ವೀರ್ಯವಾಗಿ ಅವನತಿ ಹೊಂದಿತ್ತು.) ಎರಡನೆಯದಾಗಿ, ನಾಯಕರ ಬಂಧನ ಮತ್ತು ಜನಸಮೂಹಗಳ ಮೇಲಿನ ದಬ್ಬಾಳಿಕೆಯಿಂದ ಚಳುವಳಿಯು ಪತನವಾದಾಗ, ಅಳಿದುಳಿದ ಶಕ್ತಿಗಳನ್ನು ಪುನರ್‌ ಸಂಘಟಿಸುವ ಮಾರ್ಗದರ್ಶನವನ್ನು ನೀಡಲು ಸಾಧ್ಯವಾಗಲಿಲ್ಲ. ನಮ್ಮ ಪ್ರದೇಶಗಳನ್ನು ಮಾದರಿಯಾಗಿ ಇಟ್ಟುಕೊಂಡೇ, ಕಾಂಗ್ರೆಸ್‌ ವಿರೋಧಿ ಸಂಯುಕ್ತ ರಂಗವನ್ನು ಕಟ್ಟುವ ರಾಜಕೀಯ ಮಾರ್ಗವನ್ನು ನಾವು ಮುಂದುವರೆಸಿದ್ದರೂ, ನಾವು ನಮ್ಮ ಮಾದರಿಯನ್ನು ಕಾಂಗ್ರೆಸ್‌ ವಿರೋಧಿ ಉತ್ಕರ್ಷದೊಡನೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹೀಗಾಗಲು ಕಾರಣವೇನೆಂದರೆ, ಕಾಮ್ರೇಡ್‌ ಚಾರು ಮಜುಂದಾರ್‌ ಅವರ ನಿಲುವುಗಳನ್ನು ಆಧರಿಸಿಯೇ ನಾವು ಸಂಯುಕ್ತ ರಂಗವನ್ನು ಬೆಳೆಸುವ ಯಾಂತ್ರಿಕವಾದ ಪರಿಕಲ್ಪನೆಯನ್ನು ಹೊಂದಿದ್ದೆವು.  ಈ ಯಾಂತ್ರಿಕ ಚೌಕಟ್ಟಿನಿಂದಾಚೆಗೆ ಅನಾವರಣಗೊಳ್ಳುತ್ತಿದ್ದ ವಾಸ್ತವ ಸನ್ನಿವೇಶವನ್ನು ಸಮರ್ಪಕವಾಗಿ ವಿಶ್ಲೇಷಣೆ ಮಾಡಲು ನಾವು ನಿರಾಕರಿಸಿದ್ದೆವು. ನಮ್ಮ ಭವಿಷ್ಯದ ಹಾದಿಗೆ ಇದರಿಂದ ಪಾಠ ಕಲಿತಂತಾಗಿತ್ತು.

1977ರ ಒಂದು ವರ್ಷದಲ್ಲಿ ರಾಷ್ಟ್ರೀಯ ಮತ್ತು ಅಂತಾರಾ಼ಷ್ಟ್ರೀಯ ಸನ್ನಿವೇಶಗಳಲ್ಲಿ ,ಹಾಗೆಯೇ ನಮ್ಮ ಚಳುವಳಿಯಲ್ಲೂ ಸಹ, ಮಹತ್ತರ ಬದಲಾವಣೆಗಳುಂಟಾದವು. ತಮಿಳುನಾಡು, ಆಂಧ್ರ, ಕೇರಳದಲ್ಲಿದ್ದ ಸಂಗಾತಿಗಳೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗಿತ್ತು. ಇದರು ಪಕ್ಷಕ್ಕೆ ಅಖಿಲಭಾರತ ಸ್ವರೂಪವನ್ನು ಒದಗಿಸಲು ನೆರವಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಗಳನ್ನು ದಿಟ್ಟತನದಿಂದ ಎದುರಿಸಿದ ಹೋರಾಟಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ರಂಗಗಳೂ ನಿಷ್ಕ್ರಿಯವಾಗಿದ್ದವು. ಹಾಗಾಗಿ ಪತ್ರಿಕೆಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ ಕೂಡಲೇ ಭೋಜ್‌ಪುರ ಪ್ರಮುಖ ಸುದ್ದಿಯಾಗಿ ಹೊರಹೊಮ್ಮಿತ್ತು. 1976ರ ವೇಳೆಗೆ, ಆಚರಣೆಯ ಮಟ್ಟದ ತತ್ವ ಜಿಜ್ಞಾಸೆಯು ತಾತ್ವಿಕ ನೆಲೆಯ ಆಧ್ಯಾತ್ಮಿಕತೆಯೊಡನೆ ಗಂಭೀರ ಸಂಘರ್ಷವನ್ನು ಎದುರಿಸಬೇಕಾಯಿತು. ಈ ಅವಶ್ಯ ಸನ್ನಿವೇಶಗಳ ನಡುವೆಯೇ ಪಕ್ಷದಲ್ಲಿ ಪ್ರಮುಖ ಬದಲಾವಣೆಗಳು ಅನಿವಾರ್ಯವಾಗಿತ್ತು. ಇದು ಆರಂಭವಾಗಿದ್ದು ಸಶಸ್ತ್ರ ಘಟಕಗಳಲ್ಲಿ ಪಕ್ಷದ ತಪ್ಪು ಚಿಂತನೆಗಳನ್ನು ಸರಿಪಡಿಸುವುದರೊಂದಿಗೇ ಆದರೂ, ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬದಲಾವಣೆಗಳ ಹಿನ್ನೆಲೆಯಲ್ಲಿ, ರೈತ ಹೋರಾಟಗಳ ಪುನರುಜ್ಜೀವನದ ಹಿನ್ನೆಲೆಯಲ್ಲಿ, ಪಕ್ಷದಲ್ಲಿ ವ್ಯಾಪಕವಾದ ಸುಧಾರಣೆಗಳ ಆಂದೋಲನವೇ ರೂಪುಗೊಂಡಿತ್ತು.

ಇದು ನಮ್ಮ ಗತ ಕಾಲವನ್ನು ಪುನರಾವಲೋಕನ ಮಾಡುವ ವಿಧಾನ. ನಮ್ಮ ಮೂಲ ಸಾಧನೆಗಳನ್ನು ಮತ್ತು ಪ್ರಮುಖ ಪ್ರಮಾದಗಳನ್ನು ನಾವು ಹೇಗೆ ಅಳೆಯುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅನೇಕ ಸಣ್ಣ ಪುಟ್ಟ ಅಂಶಗಳನ್ನು 1979ರ ಪಕ್ಷದ ಮಹಾಧಿವೇಶನದಲ್ಲಿ ಚರ್ಚಿಸಲಾಗಿದೆ. ವರ್ತಮಾನದ ಸಂದರ್ಭದಲ್ಲಿ ಅವೆಲ್ಲವೂ ಅಪ್ರಸ್ತುತ ಎನಿಸುತ್ತವೆ. ನಮ್ಮ ಈ ವಿಶ್ಲೇಷಣೆಯ ಮೂಲಕ, ನಾವು ನಡೆದುಬಂದ ಹಾದಿಯನ್ನು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಹೇಗೆ ನಮ್ಮ ಚಳುವಳಿಯ ಹಾದಿಯಲ್ಲಿ ವಿಭಿನ್ನ ಧೋರಣೆಗಳು ವಿಭಿನ್ನ ರೀತಿ ಅರಾಜಕತೆಯ ಪ್ರವೃತ್ತಿಗಳಿಗೆ, ಅವನತಿಯ ಮಾರ್ಗಗಳಿಗೆ ಕಾರಣವಾಗಿತ್ತು ಎನ್ನುವುದನ್ನು ಮನಗಾಣುತ್ತಲೇ, ನಾವು ನಡೆದುಬಂದ ಹಾದಿಯಿಂದ ಕಲಿತ ಪಾಠಗಳನ್ನು ಸಂಯೋಜಿಸುವ ಮೂಲಕ ಹೇಗೆ ವರ್ತಮಾನದ ಅಗತ್ಯತೆಗಳಿಗೆ ಸ್ಪಂದಿಸಿ ನಮ್ಮ ಕ್ರಾಂತಿಕಾರಿ ಹೋರಾಟವನ್ನು ಮುನ್ನಡೆಸುತ್ತೇವೆ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಿದೆ.