- ಕ್ಲಿಫ್ಟನ್ ಡಿ’ ರೊಜಾರಿಯೋ 

ಪ್ರಬಲವಾಗುತ್ತಿರುವ ಜಾತಿ ರಾಜಕಾರಣದ ಮೂಲ ಸತ್ವ ಇರುವುದು ಕೇವಲ ಮತಬ್ಯಾಂಕುಗಳನ್ನು ಹೆಚ್ಚಿಸುವುದೊಂದೇ ಅಲ್ಲ, ಬದಲಾಗಿ ಜಾತಿ ವರ್ಗೀಕರಣವನ್ನು ಮತ್ತಷ್ಟು ಗಟ್ಟಿಗೊಳಿಸಿ, ಸಮಾಜದ ಧೃವೀಕರಣ ಸಾಧಿಸುವ ಮೂಲಕ ಪ್ರಬಲ ಜಾತಿಗಳಿಗೆ ಒಂದು ಸುಭದ್ರ ನೆಲೆ ಒದಗಿಸುವುದು. ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಬಹಳ ಕಾಲದಿಂದಲೂ ತಮ್ಮ ರಾಜಕೀಯ ಪ್ರಾಬಲ್ಯವನ್ನು ಸಾಧಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಹಿಂದ ರಾಜಕಾರಣವೂ ರೂಪುಗೊಂಡಿದೆ. ಈ ಅಹಿಂದ ರಾಜಕಾರಣದ ರೂವಾರಿ, ರಾಜ್ಯದ ಪ್ರಥಮ ಹಿಂದುಳಿದ ವರ್ಗದ ಮುಖ್ಯಮಂತ್ರಿ ದೇವರಾಜ ಅರಸು. ಇದನ್ನು ಮತ್ತಷ್ಟು ವಿಸ್ತರಿಸಿದವರು ಸಿದ್ಧರಾಮಯ್ಯ. ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿಯ ಹಿಂದುತ್ವ ರಾಜಕಾರಣವೇ ಪ್ರಧಾನವಾಗಿದ್ದು, ಲಿಂಗಾಯತರು ಮತ್ತು ಇತರ ಹಿಂದೂಗಳನ್ನು, ಒಬಿಸಿ, ದಲಿತರು ಮತ್ತು ಆದಿವಾಸಿಗಳನ್ನು ದೃವೀಕರಿಸಲು ಯತ್ನಿಸಲಾಗುತ್ತಿದೆ. 

ಜಾತಿ ಸಂಘರ್ಷದ ನೆಲೆಗಳು :
ಇತ್ತೀಚೆಗೆ ಕರ್ನಾಟಕದಲ್ಲಿ ಮೂಲಭೂತವಾದಿ ಜಾತಿ ರಾಜಕಾರಣ ತನ್ನ ಆಧಿಪತ್ಯವನ್ನು ಸಾಧಿಸಲು ಯತ್ನಿಸುತ್ತಿರುವುದು ಕಂಡುಬರುತ್ತಿದೆ. ಬಿಜೆಪಿ ಸರ್ಕಾರವು ಎಲ್ಲ ಪ್ರಬಲ ಜಾತಿಗಳಿಗೂ ಒಂದೊಂದು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಸಾಕಷ್ಟು ಅನುದಾನವನ್ನೂ ನೀಡಿದೆ. ಬ್ರಾಹ್ಮಣ, ಮರಾಠ ಮತ್ತು ವೀರಶೈವ ಲಿಂಗಾಯತರಿಗೂ ಈ ನಿಗಮಗಳು ಸ್ಥಾಪಿತವಾಗಿವೆ. ಇತರ ಪ್ರಧಾನ ಮತ್ತು ಉಪಜಾತಿಗಳಾದ ಪಂಚಮಸಾಲಿಗಳು, ಕುರುಬರು ಮತ್ತು ವಾಲ್ಮೀಕಿ ನಾಯಕರೂ ಸಹ ಮರು ವರ್ಗೀಕರಣಕ್ಕೆ ಒತ್ತಾಯಿಸುತ್ತಿದ್ದು ತಮ್ಮ ಸಮುದಾಯಗಳಿಗೆ ವಿಶೇಷ ಮೀಸಲಾತಿ ನೀಡುವಂತೆ ಆಗ್ರಹಿಸುತ್ತಿವೆ. ಈ ಜಾತಿ ಗುಂಪುಗಳ ನೇತೃತ್ವವನ್ನು ಧಾರ್ಮಿಕ ನಾಯಕರು ವಹಿಸಿಕೊಂಡಿದ್ದು, ಎಲ್ಲ ರಾಜಕೀಯ ನಾಯಕರುಗಳ ಬೆಂಬಲದೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ಮತೀಯ ನಾಯಕರು ಮತ್ತು ರಾಜಕೀಯ ನಾಯಕರುಗಳ ಸಹಯೋಗದ ಪರಿಣಾಮ ಜಾತಿ ರಾಜಕಾರಣ ಒಂದು ಪ್ರಬಲ ಅಸ್ತ್ರವಾಗಿ ರೂಪುಗೊಳ್ಳುತ್ತಿದೆ.

ಮತ್ತೊಂದೆಡೆ, ದಲಿತರ ಒಂದು ವರ್ಗ 2012ರ ಸದಾಶಿವ ಆಯೋಗದ ವರದಿಯನ್ನು ಅನುಷ್ಟಾನಗೊಳಿಸಲು ಒತ್ತಾಯಿಸುತ್ತಿದೆ. ಈ ಆಯೋಗ ನೀಡಿರುವ ಶಿಫಾರಸುಗಳ ಪೈಕಿ ಪರಿಶಿಷ್ಟ ಜಾತಿಗಳ ಮರುವರ್ಗೀಕರಣವಾಗಬೇಕಿದ್ದು, ಈಗಿನ ಮೀಸಲಾತಿ ಸೌಲಭ್ಯವನ್ನು ಎಲ್ಲ ಉಪಜಾತಿಗಳಿಗೂ ವಿಸ್ತರಿಸಲು ಆಗ್ರಹಿಸಲಾಗುತ್ತಿದೆ. 2020ರ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲೂ ಸಹ ಪರಿಶಿಷ್ಟ ಜಾತಿಗಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಶೇ 15 ರಿಂದ ಶೇ 17ಕ್ಕೂ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೂ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. 

ಎಲ್ಲ ಪ್ರಬಲ ಜಾತಿ ಸಮುದಾಯಗಳನ್ನೂ ಒಂದುಗೂಡಿಸಿರುವ ಒಂದು ಕಾರ್ಯಸೂಚಿ ಎಂದರೆ 2016ರ ಕಾಂತರಾಜ್ ಆಯೋಗದ ಶಿಫಾರಸುಗಳಿಗೆ ಇರುವ ವಿರೋಧ. ಸೋರಿಕೆಯಾಗಿರುವ ಈ ಆಯೋಗದ ವರದಿಯನ್ವಯ, ರಾಜ್ಯದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು ಶೇ 19.5, ಮುಸಲ್ಮಾನರು ಶೇ 16, ಲಿಂಗಾಯತರು ಶೇ 14, ಒಕ್ಕಲಿಗರು ಶೇ 11 ಮತ್ತು ಕುರುಬರು ಶೇ 7ರಷ್ಟಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗರೇ ಸಂಖ್ಯಾಬಲದಿಂದ ಬಲಿಷ್ಟ ಸಮುದಾಯಗಳು ಎಂಬ ನಂಬಿಕೆಯನ್ನು ಇದು ಹುಸಿ ಮಾಡಲಿದೆ. ಹಾಗಾಗಿ ಈ ಆಯೋಗದ ವರದಿ ಒಂದು ವೇಳೆ ಮಾನ್ಯತೆ ಪಡೆದರೆ ಅಹಿಂದ ರಾಜಕಾರಣಕ್ಕೆ ಮತ್ತಷ್ಟು ಪುಷ್ಟಿ ದೊರೆತಂತಾಗುತ್ತದೆ. ಕರ್ನಾಟಕದಲ್ಲಿ ಜಾತಿ ಗಣತಿಯ ಸುತ್ತ ನಡೆಯುತ್ತಿರುವ ರಾಜಕಾರಣವು, ಒಂದು ವೇಳೆ ಜಾತಿ ಗಣತಿಯನ್ನು ಕೈಗೊಂಡಲ್ಲಿ, ದೇಶವ್ಯಾಪಿಯಾಗಿ ಪ್ರಭಾವ ಬೀರುವ ಸಾಧ್ಯತೆಗಳಿವೆ. 

ಜಾತಿ, ವರ್ಗ ಧೃವೀಕರಣ ಮತ್ತು ಬಡತನ :
ಇದು ಕೇವಲ ಜನಸಂಖ್ಯಾವಾರು ಪ್ರಾತಿನಿಧಿತ್ವದ ಪ್ರಶ್ನೆಯಲ್ಲ. ಸಮಾಜದಲ್ಲಿ  ಬಡತನದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕೆಲವು ಅಂದಾಜುಗಳ ಪ್ರಕಾರ ಗ್ರಾಮೀಣ ಜನಸಂಖ್ಯೆಯ ಶೇ 51 ರಿಂದ 56ರಷ್ಟು, ನಗರ ಜನಸಂಖ್ಯೆಯ ಶೇ 40 ರಿಂದ 43ರಷ್ಟು ಜನರು ಬಡತನದಿಂದ ಬಳಲುತ್ತಿದ್ದಾರೆ. ಆರ್ಥಿಕ ಸ್ಥಾನಮಾನ, ಆದಾಯ ಮತ್ತು ಸಂಪತ್ತಿನ ಅಸಮಾನತೆ ಇದು ಜಾತಿ ಶ್ರೇಣೀಕರಣದಂತೆಯೇ ಪ್ರಭಾವ ಬೀರುತ್ತದೆ. ಬಡ ಜನತೆಯ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳೇ ಅಧಿಕ ಪ್ರಮಾಣದಲ್ಲಿದ್ದಾರೆ. ಪ್ರಬಲ ಜಾತಿಗಳು ಹೆಚ್ಚಾಗಿ ಸಾಮಾಜಿಕ ಉನ್ನತಿ ಪಡೆದಿವೆ. ವರ್ಗದ  ಮೇಲ್ ಚಲನೆಯೂ ಜಾತಿಯನ್ನೇ ಆಧರಿಸಿರುತ್ತದೆ. 

ನವ ಉದಾರವಾದದ ಆರ್ಥಿಕ ನೀತಿಗಳು ಜಾತಿ ಮತ್ತು ವರ್ಗದ ಸಂಬಂಧಗಳನ್ನು ಸಡಿಲಗೊಳಿಸಲು ವಿಫಲವಾಗಿದ್ದು, ಜಾತಿ ಅಧೀನತೆಯನ್ನು ಮತ್ತಷ್ಟು ಹೆಚ್ಚಿಸಿದೆ, ತನ್ಮೂಲಕ ವರ್ಗ ಮೇಲ್ ಚಲನೆಗೆ ನಿರ್ಬಂಧಗಳನ್ನು ಒಡ್ಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕಾರ್ಥಿಕ ಗಣತಿಯನ್ನು ಕೈಗೊಳ್ಳುವುದರಲ್ಲಿ ವಿಫಲವಾಗಿರುವುದರಿಂದ, ಹಲವಾರು ಜಾತಿ ಸಮುದಾಯಗಳ ಆರ್ಥಿಕ ಸ್ಥಿತ್ಯಂತರಗಳು ತಿಳಿಯದಂತಾಗಿದೆ. ರಾಜಕೀಯದಲ್ಲಿ ಪ್ರಬಲ ಜಾತಿಗಳ ಹಿತಾಸಕ್ತಿಗಳ ಮೇಲುಗೈ ಇರುವುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಮೇಲ್ ಜಾತಿಗಳಿಗೆ ಶೇ 10 ಮೀಸಲಾತಿ ಸೌಲಭ್ಯ
ಎಸ್‍ಸಿ/ಎಸ್‍ಟಿ/ಒಬಿಸಿ ಕೋಟಾಗಳಡಿ ಮೀಸಲಾತಿ ಸೌಲಭ್ಯಕ್ಕೆ ಅರ್ಹವಾಗದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡುವ ಮೂಲಕ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೀತಿ, ಪ್ರಬಲ ಜಾತಿಗಳನ್ನು ತುಷ್ಟೀಕರಿಸುವುದೇ ಆಗಿದ್ದು, ಜಾತಿ ಗಣತಿಯನ್ನು ಕೈಗೊಂಡರೆ ಈ ಅಂಶ ಸಾಬೀತಾಗುತ್ತದೆ. ಕರ್ನಾಟಕದಲ್ಲಿ ಬ್ರಾಹ್ಮಣರು, ವೈಶ್ಯರು ಮುಂತಾದ ಪ್ರಬಲ ಸಮುದಾಯಗಳು ಜನಸಂಖ್ಯೆಯ ಆಧಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಹೊಂದದಿದ್ದರೂ, ಈ ಸಮುದಾಯಗಳಿಗೆ ಹೊಸ ನೀತಿಯ ಅನುಸಾರ ಶೇ 10ರಷ್ಟು ಮೀಸಲಾತಿ ಸೌಲಭ್ಯವನ್ನು ಒದಗಿಸಲಾಗಿದೆ. ಮುಸ್ಲಿಮರು, ಕ್ರೈಸ್ತರು ಮತ್ತು ಜೈನರಿಗೆ ಜಾರಿಯಲ್ಲಿರುವ ಮೀಸಲಾತಿ ಸೌಲಭ್ಯದಡಿಯೇ ಅವಕಾಶಗಳು ಲಭಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ವರ್ಗೀಕರಿಸಲು ಅನುಸರಿಸಲಾಗಿರುವ ಆರ್ಥಿಕ ಮಾನದಂಡಗಳೆಂದರೆ 8 ಲಕ್ಷ ರೂಗಳ ಗರಿಷ್ಟ ವಾರ್ಷಿಕ ಆದಾಯ, ಐದು ಎಕರೆ ಭೂಮಿಯ ಒಡೆತನ, 1000 ಚದರಡಿಗಿಂತಲೂ ಕಡಿಮೆ ಅಳತೆಯ ಸ್ವಂತ ಮನೆ, ಪುರಸಭಾ ವಲಯಗಳಲ್ಲಿ ನೂರು ಗಜಕ್ಕಿಂತಲೂ ಕಡಿಮೆ ಇರುವ ವಸತಿ ನಿವೇಶನ ಇತ್ಯಾದಿ. ಈ ನಿಯಮಗಳ ಅನುಸಾರ ಮುಂದುವರೆದ ಜಾತಿಗಳ ಮಧ್ಯಮ ವರ್ಗಗಳು ಹೆಚ್ಚು ಲಾಭ ಪಡೆಯಬಹುದಾಗಿದೆ. 

ಜಾತಿ ಮುಕ್ತ ಮತಗಳು ? :
ಜಾತಿ ಗಣತಿಯ ಸುತ್ತ ನಡೆಯುತ್ತಿರುವ ಚರ್ಚೆಯಲ್ಲಿ ಗಮನ ಸೆಳೆಯುವ ಅಂಶವೆಂದರೆರ, ಇಸ್ಲಾಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳಲ್ಲೂ ಸಹ ಜಾತಿ ಶ್ರೇಣೀಕರಣ ಇರುವುದು. ಸಮುದಾಯಗಳು ಯಾವುದೇ ಮತಕ್ಕೆ ಸೇರಿದ್ದರೂ ಸಹ ಎಲ್ಲ ಸಮುದಾಯಗಳಲ್ಲೂ ಜಾತಿ ಪದ್ಧತಿ ಪ್ರಧಾನವಾಗಿದೆ ಎಂದು ರಂಗನಾಥ್ ಮಿಶ್ರಾ ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಈ ಮತಗಳ ಗುಂಪುಗಳಲ್ಲಿ ದಲಿತರು ಮತ್ತು ಆದಿವಾಸಿಗಳು ಮೂರು ರೀತಿಯ ಜಾತಿ ತಾರತಮ್ಯಗಳನ್ನು ಎದುರಿಸುತ್ತಾರೆ. ಮೊದಲನೆಯದು ಪುರೋಹಿತಶಾಹಿಯಿಂದ, ನಂತರ ಸಮಾಜದಿಂದ ಹಾಗೂ ಸರ್ಕಾರದಿಂದ. ಹಾಗಾಗಿ ಜಾತಿ ಗಣತಿಯನ್ನು ಹಿಂದೂ ಮತಕ್ಕೆ ಮಾತ್ರವೇ ಸೀಮಿತಗೊಳಿಸದೆ ಎಲ್ಲ ಮತಗಳಿಗೂ ವಿಸ್ತರಿಸಲು ಆಗ್ರಹಿಸಲಾಗುತ್ತಿದೆ. 

ಮೀಸಲಾತಿ ಮತ್ತು ಜಾತಿ ಗಣತಿಗೆ ಆರೆಸ್ಸೆಸ್ ವಿರೋಧ :
ಜಾತಿ ವ್ಯವಸ್ಥೆಯನ್ನು ಸದಾ ಎತ್ತಿಹಿಡಿಯುವ ಆರೆಸ್ಸೆಸ್ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತದೆ.  ಮೀಸಲಾತಿ ನೀಡುವುದರಿಂದ ಪ್ರತ್ಯೇಕತಾ ಭಾವನೆಗಳು ಹೆಚ್ಚಾಗುತ್ತವೆ ಮತ್ತು ಸಮಾಜದಲ್ಲಿ ಸಂಘರ್ಷ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಆರೆಸ್ಸೆಸ್ ಸಿದ್ದಾಂತಿಗಳು ಮಿಸಲಾತಿಯನ್ನು ವಿರೋಧಿಸುತ್ತಾರೆ. ಬದಲಾಗಿ ಮೀಸಲಾತಿ ಪರ ಮತ್ತು ವಿರೋಧ ಇರುವವರ ನಡುವೆ ಸೌಹಾರ್ದಯುತ ಸಂವಾದಕ್ಕೆ ಆರೆಸ್ಸೆಸ್ ಕರೆ ನೀಡುತ್ತದೆ. ಜಾತಿ ಗಣತಿಯ ಬಗ್ಗೆ ಆರೆಸ್ಸೆಸ್ ನಾಯಕ ಸುರೇಶ್ ಭೈಯ್ಯಾಜಿ ಜೋಷಿ (24-5-2010) ಹೀಗೆ ಹೇಳುತ್ತಾರೆ : “ ನಾವು ವರ್ಗಗಳ ನೋಂದಣ ಯನ್ನು ವಿರೋಧಿಸುವುದಿಲ್ಲ ಆದರೆ ಜಾತಿಗಳ ನೋಂದಣ ಯನ್ನು ವಿರೋಧಿಸುತ್ತೇವೆ.” ಜಾತಿ ಗಣತಿಯು ಜಾತಿರಹಿತ ಸಮಾಜದ ಪರಿಕಲ್ಪನೆಗೆ ತದ್ವಿರುದ್ಧವಾಗಿದೆ ಎಂದು ಹೇಳುವ ಜೋಷಿ,  ಇದು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಹೇಳುತ್ತಾರೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಮಾತನಾಡುತ್ತಾ “ ಭಾರತ ಸರ್ಕಾರವು ತನ್ನ ನೀತಿಗನುಗುಣವಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ, ಇನ್ನುಳಿದ ಜಾತಿ ಆಧಾರಿತ ಗಣತಿಯನ್ನು ಕೈಗೊಳ್ಳಲು ನಿರಾಕರಿಸಿದೆ” ಎಂದು ಹೇಳುತ್ತಾರೆ. ಆದರೆ ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಸೆಪ್ಟಂಬರ್ 2018ರಲ್ಲಿ ನೀಡಿದ್ದ ಹೇಳಿಕೆಗೆ ಇದು ತದ್ವಿರುದ್ಧವಾಗಿದ್ದು, 2021ರ ಜನಗಣತಿಯಲ್ಲಿ ಒಬಿಸಿಗಳ ಗಣತಿಯನ್ನೂ ನಡೆಸಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದ್ದುದನ್ನು ಇಲ್ಲಿ ಸ್ಮರಿಸಬಹುದು. 

ಉಪಸಂಹಾರ :
ಮೋದಿ ಸರ್ಕಾರದ ದ್ವಂದ್ವ ನೀತಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು, ಜಾತಿ ಗಣತಿಯ ಮೂಲಕ ಸಾಮಾಜಿಕಾರ್ಥಿಕ ಸಮೀಕ್ಷೆಯನ್ನು ನಡೆಸುವ ಅವಶ್ಯಕತೆಯನ್ನು ಪ್ರತಿಪಾದಿಸುವುದು. ಜೂನ್ 2011ರಲ್ಲಿ ಆರಂಭವಾದ ಸಾಮಾಜಿಕಾರ್ಥಿಕ ಜಾತಿ ಗಣತಿ 2011, ಇದರ ವರದಿಯನ್ನು 2016ರಲ್ಲಿ ಪ್ರಕಟಿಸಲಾದರೂ ಅದರಲ್ಲಿ ಜಾತಿ ಆಧಾರಿತ ಅಂಕಿಅಂಶಗಳನ್ನು ಉಲ್ಲೇಖಿಸಿರಲಿಲ್ಲ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನೂ ವಿಸ್ತರಿಸಿ, ಸಾಮಾಜಿಕಾರ್ಥಿಕ ಜಾತಿ ಗಣತಿಯನ್ನು ನಡೆಸಲು ನಿರಾಕರಿಸುವ ಬಿಜೆಪಿ ಸರ್ಕಾರದ ನೀತಿಯು , ಆರೆಸ್ಸೆಸ್ ಪರಿಪಾಲಿಸುವ ಜಾತಿ ಆಧಾರಿತ ಮೀಸಲಾತಿಯನ್ನು ಅಲ್ಲಗಳೆಯುವುದೇ ಆಗಿದೆ. ಈ ಜಾತಿಗಣತಿಯು ವಿಭಿನ್ನ ಜಾತಿಗಳ ನೈಜ ಸಂಖ್ಯೆ ಪ್ರಮಾಣವನ್ನು ಸೂಚಿಸುತ್ತದೆ, ಎಸ್ ಸಿ, ಎಸ್‍ಟಿ ಮತ್ತು ಒಬಿಸಿಗಳಲ್ಲಿ ಅವಕಾಶವಂಚಿತ ಮತ್ತು ಶೋಷಿತರ ಸಂಖ್ಯೆಯನ್ನು ಸೂಚಿಸುತ್ತದೆ ಮತ್ತು ಮೇಲ್ಜಾತಿಗಳ ಪ್ರಾಬಲ್ಯವನ್ನು ನಿರೂಪಿಸುತ್ತದೆ ಎಂಬ ಕಾರಣಕ್ಕೆ ಆರೆಸ್ಸೆಸ್ ಜಾತಿ ಗಣತಿಯನ್ನು ವಿರೋಧಿಸುತ್ತದೆ. ಇದರ ನೇರ ಪರಿಣಾಮ ಎಂದರೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಜಾಗ್ರತೆಯಿಂದ ಜಾತಿ ಮೈತ್ರಿಕೂಟಗಳು ಭಂಗವಾಗುತ್ತವೆ. ಸಾಮಾಜಿಕ ಪ್ರಾಬಲ್ಯವಿಲ್ಲದ ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ಜಾತಿಗಳೊಡನೆ ಮಾಡಿಕೊಂಡಿರುವ ಮೈತ್ರಿಕೂಟಗಳಿಗೆ ಧಕ್ಕೆ ಉಂಟಾಗುತ್ತದೆ. ಈ ಜಾತಿಗಣತಿ ಬಹಿರಂಗಗೊಂಡರೆ, ಬಿಜೆಪಿ ಮತ್ತು ಆರೆಸ್ಸೆಸ್ ಅನುಸರಿಸುವ ಮೀಸಲಾತಿಯನ್ನೇ ನಿರಾಕರಿಸುವ  ಬ್ರಾಹ್ಮಣ್ಯದ ಕಾರ್ಯಸೂಚಿಗೂ ಧಕ್ಕೆ ಉಂಟಾಗುತ್ತದೆ ಏಕೆಂದರೆ ಈ ಗಣತಿಯ ವರದಿ ಬಹಿರಂಗವಾದರೆ ಇಡೀ ಮೀಸಲಾತಿ ಪದ್ಧತಿಯನ್ನೇ ಪುನಾರಚಿಸುವುದು ಅನಿವಾರ್ಯವಾಗುತ್ತದೆ.