ಭಾರತದ 71ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶದ ರೈತಾಪಿ ಮತ್ತು ಸಾಮಾನ್ಯ ಜನತೆ ತಮ್ಮ ಅಭೂತಪೂರ್ವ ಚಳುವಳಿಯ ಮೂಲಕ ಗಣತಂತ್ರ ವ್ಯವಸ್ಥೆಯ ಸ್ಫೂರ್ತಿಯನ್ನು ಪ್ರದರ್ಶಿಸಿದ್ದೇ ಅಲ್ಲದೆ, ಸಾರ್ವಭೌಮ ಪ್ರಜೆಗಳ ಪ್ರತಿರೋಧದ ದನಿ ಹಾಗೂ ಐಕ್ಯತೆಯನ್ನು ಪ್ರದರ್ಶಿಸಿದ್ದರು.

ಕರ್ನಾಟಕದಲ್ಲೂ ಬೆಂಗಳೂರು ಮತ್ತಿತರ ನಗರ, ಪಟ್ಟಣಗಳಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.  ಜನಸಾಮಾನ್ಯರು ಈ ಗಣತಂತ್ರ ನಮ್ಮದು ಎಂದು ಘೋಷಿಸುವ ಒಂದು ವಿಶಿಷ್ಟ ಸನ್ನಿವೇಶಕ್ಕೆ 2021ರ ಗಣರಾಜ್ಯೋತ್ಸವ ಸಾಕ್ಷಿಯಾಗಿತ್ತು. 
ಕೇಂದ್ರ ಸರ್ಕಾರ ರೈತರಿಗೆ ಮರಣಶಾಸನ ಎನ್ನಬಹುದಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ರೈತಾಪಿಯ ಮೇಲೆ ಪ್ರಹಾರ ನಡೆಸಿರುವ ಸಂದರ್ಭದಲ್ಲೇ ರಾಜ್ಯ ಯಡಿಯೂರಪ್ಪ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ಕೃಷಿಕರ ಭೂಮಿಯ ಹಕ್ಕುಗಳಿಗೇ ಸಂಚಕಾರ ತಂದಿದೆ. ದೇಶ ಎದುರಿಸುತ್ತಿರುವ ತೀವ್ರವಾದ ಕೃಷಿ ಬಿಕ್ಕಟ್ಟಿನ ಲಾಭ ಪಡೆಯುವ ಉದ್ದೇಶದಿಂದ ಮತ್ತು ದೇಶಾದ್ಯಂತ ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿ ತಮ್ಮ ಭೂಮಿಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಶ್ರೀಮಂತರಿಗೆ ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ತಿದ್ದುಪಡಿಯನ್ನು ಮಾಡಿದೆ. ಇದರೊಟ್ಟಿಗೆ ಕರ್ನಾಟಕ ಗೋ ಹತ್ಯೆ ನಿರ್ಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಗೂ ತಿದ್ದುಪಡಿ ಮಾಡಿದ್ದು 13 ವರ್ಷದ ಕೆಳಗಿನ ಎಮ್ಮೆ, ಹಸು ಮತ್ತು ದನದ ಮಾಂಸ ಸೇವನೆಯನ್ನೇ ನಿಷೇಧಿಸಲಾಗಿದೆ. ಇದು ಬಹುಸಂಖ್ಯಾತರ ಭಾವನೆಗಳನ್ನು ಸಾರ್ವತ್ರೀಕರಿಸುವ ಪ್ರಯತ್ನವಾಗಿದ್ದು, ಈ ನೂತನ ಶಾಸನದಿಂದ ದಲಿತರು ಮತ್ತು ಅಲ್ಪಸಂಖ್ಯಾತರು ತೀವ್ರ ಸಂಕಷ್ಟಕ್ಕೊಳಗಾಗುತ್ತಾರೆ.
ಈ ಕಾಯ್ದೆಯ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರು ಸಾಕಾಣಿಕೆ, ಹೈನುಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ಆಹಾರ ಸೇವನೆಯನ್ನೇ ನಂಬಿ ಬದುಕುತ್ತಿರುವ ಜನರ ಜೀವನೋಪಾಯಕ್ಕೇ ಸಂಚಕಾರ ಎದುರಾಗಿದ್ದು, ಜಾನುವಾರು ಸಾಕಾಣಿಕೆ ಮಾಡುವವರು, ಹೈನುಗಾರಿಕೆಯನ್ನು ಅವಲಂಬಿಸುವವರು, ಕಸಾಯಿ ಖಾನೆಯನ್ನು ನಿರ್ವಹಿಸುವವರು ಮತ್ತು ಚರ್ಮೋದ್ಯೋಗದಲ್ಲಿ ತೊಡಗಿರುವವರು ಸಂಕಷ್ಟಕ್ಕೀಡಾಗಲಿದ್ದಾರೆ.ಇದು ಗೋಮಾಂಸ ಸೇವಿಸುವ ಜನತೆಯ ಮೇಲೆ ಮತ್ತು ಕರ್ನಾಟಕದ ಜನತೆಯ ಆಹಾರ ಸಂಸ್ಕೃತಿಯ ಮೇಲೆ ನೇರ ಪ್ರಹಾರವಾಗಿದ್ದು, ದನದ ಮಾಂಸದ ಮೂಲಕ ಪೌಷ್ಟಿಕ ಆಹಾರ ಪಡೆಯುತ್ತಿದ್ದ ಕೋಟ್ಯಂತರ ಜನತೆಯ ಪೌಷ್ಟಿಕತೆಯ ಮೇಲೆ ಪ್ರಹಾರ ಮಾಡಿದಂತಾಗಿದೆ.


ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಜೆಡಿಎಸ್ ಪಕ್ಷದ ಬೆಂಬಲದಿಂದಲೇ ರಾಜ್ಯ ಸರ್ಕಾರ ಈ ಶಾಸನವನ್ನು ಜಾರಿಗೊಳಿಸಿದ್ದು, ಜೆಡಿಎಸ್ ಪಕ್ಷದ ಅವಕಾಶವಾದಿ ರಾಜಕಾರಣ ಎಲ್ಲೆಡೆ ಖಂಡನೆಗೊಳಗಾಗಿದೆ. ರಾಮಮಂದಿರದ ಗೇಣಿಗೆ ನೀಡದಿರುವವರ ಮನೆಯನ್ನು ಗುರುತು ಮಾಡುವ ಸಂಘಪರಿವಾರದ ನಡೆಯನ್ನು ಖಂಡಿಸುತ್ತಿರುವ ಕುಮಾರಸ್ವಾಮಿಯವರು ಬಿಜೆಪಿಯ ಈ ನಡವಳಿಕೆಯನ್ನು ಹಿಟ್ಲರನ ನಾಜಿ ಪಡೆಗಳ ಚಟುವಟಿಕೆಗಳಿಗೆ ಹೋಲಿಸುವ ಮೂಲಕ ವಿಷಯಾಂತರ ಮಾಡುತ್ತಿರುವುದು ಸ್ಪಷ್ಟ. ಆರೆಸ್ಸೆಸ್ ರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಕಾರ್ಯಾಚರಣೆಯ ಮೂಲಕ ಕರ್ನಾಟಕದಲ್ಲಿ ಕೋಮು ಸಾಮರಸ್ಯವನ್ನು ಹಾಳುಮಾಡುತ್ತಿದ್ದು ಇದನ್ನು ವಿರೋಧಿಸುವುದೇ ಅಲ್ಲದೆ ರಾಜ್ಯದ ಜನತೆ ಸಂಘಪರಿವಾರದ ಈ ಪಿತೂರಿಯನ್ನು ವಿಫಲಗೊಳಿಸಬೇಕಿದೆ.
ಅನಿಯೋಜಿತ ಲಾಕ್‍ಡೌನ್‍ನಿಂದ ಈಗಾಗಲೇ ತತ್ತರಿಸಿಹೋಗಿರುವ ಭಾರತದ ಪ್ರಜೆಗಳು ಈ ಹೊಸ ಕಾಯ್ದೆಗಳಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಮತ್ತೊಂದೆಡೆ ಕುಸಿಯುತ್ತಿರುವ ಆರ್ಥಿಕತೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಅವಶ್ಯ ವಸ್ತುಗಳ ಬೆಲೆಗಳು ಕೋಟ್ಯಂತರ ಜನತೆಯ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ವಿಷಮ ಸನ್ನಿವೇಶದಲ್ಲೇ ಕರ್ನಾಟಕದಲ್ಲಿ ಜಾತಿ ರಾಜಕಾರಣದ ಮೂಲಭೂತವಾದ ತಲೆದೋರಿದೆ. ಮರಾಠರು, ಕಾಡುಗೊಲ್ಲರು, ವೀರಶೈವ ಲಿಂಗಾಯತರು ಮುಂತಾದ ಜಾತಿಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸುವ ಮೂಲಕ ಜಾತಿ ರಾಜಕಾರಣವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ಜಾತಿ ವ್ಯವಸ್ಥೆಯನ್ನು ಸಾಂಸ್ಥೀಕರಣಗೊಳಿಸುವ ಅಪಾಯಕಾರಿ ಹೆಜ್ಜೆಯಾಗಿದೆ.  ಈ ಸನ್ನಿವೇಶದ ಲಾಭ ಪಡೆದು ಅನೇಕ ಜಾತಿ, ಉಪಜಾತಿಗಳು ಈಗ ವಿಶೇಷ ಸ್ಥಾನಮಾನಗಳಿಗಾಗಿ, ಮೀಸಲಾತಿ ಸೌಲಭ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿವೆ. ಪಂಚಮ ಸಾಲಿಗಳಿಗೆ 3ಬಿ ಪ್ರವರ್ಗದಿಂದ  2ಎ ಪ್ರವರ್ಗಕ್ಕೆ ವರ್ಗಾಯಿಸಲು ಒತ್ತಡ ಹೆಚ್ಚಾಗುತ್ತಿದ್ದು, ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದೆ. 

ಅನೇಕ ಇತರ ಜಾತಿಗಳು, ಉಪಜಾತಿಗಳು ಈ ಹೋರಾಟಗಳಲ್ಲಿ ತೊಡಗಿದ್ದು, ವಿವಿಧ ಜಾತಿ ಗುಂಪುಗಳಿಗೆ ಸೇರಿದ ಮಠಾಧೀಶರು ಈ ಹೋರಾಟಗಳ ನೇತೃತ್ವ ವಹಿಸಿದ್ದಾರೆ. ಎಲ್ಲ ಪಕ್ಷಗಳ ರಾಜಕೀಯ ಮುಖಂಡರೂ ಇವರೊಡನೆ ಶಾಮೀಲಾಗುತ್ತಿದ್ದಾರೆ. ಆರೆಸ್ಸೆಸ್ ಅನುಸರಿಸಿದ ಜಾತಿ ಸಮೀಕರಣದ ರಾಜಕಾರಣ ಬಿಜೆಪಿಗೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ರಾಜಕೀಯವಾಗಿ ಲಾಭದಾಯಕವಾಗಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕಕ್ಕೆ ಜಾತಿ ರಾಜಕಾರಣ ಹೊಸತೇನಲ್ಲ ಆದರೂ ಧಾರ್ಮಿಕ ಮತ್ತು ರಾಜಕೀಯ ನಾಯಕರ ಮೈತ್ರಿಕೂಟ ಹೊಸ ರಾಜಕೀಯ ಪರಂಪರೆಯನ್ನು ಹುಟ್ಟುಹಾಕುತ್ತಿದ್ದು, ಮೀಸಲಾತಿ ಸೌಲಭ್ಯವನ್ನು ಮೂಲೆಗುಂಪು ಮಾಡಲು ಈ ಜಾತಿ ರಾಜಕಾರಣ ಪ್ರಬಲ ಅಸ್ತ್ರವಾಗಿ ಪರಿಣಮಿಸಲಿದೆ. ಇದು ಆರೆಸ್ಸೆಸ್‍ನ ದೀರ್ಘಕಾಲಿಕ ಕಾರ್ಯಸೂಚಿಯೂ ಆಗಿದೆ. ಈ ನಡುವೆ ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿ ನೆನೆಗುದಿಗೆ ಬಿದ್ದಿದ್ದು ಅದನ್ನು ಈವರೆಗೂ ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ. ಕೆಲವು ವರದಿಗಳ ಪ್ರಕಾರ ಜನಗಣತಿಯ ಆಧಾರದಲ್ಲಿ ಹೇಳುವುದಾದರೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಹೋಲಿಸಿದರೆ ಎಸ್‍ಸಿ, ಎಸ್‍ಟಿ ಮತ್ತು ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಾಗಾಗಿಯೇ ಈ ವರದಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡಲಾಗುತ್ತಿದೆ. ಈ ನಡುವೆ ಸಾಚಾರ ಸಮಿತಿ ವರದಿಯನ್ನೂ ನಿರ್ಲಕ್ಷಿಸಲಾಗಿದ್ದು, ಈ ವರದಿಯಲ್ಲಿ ಮುಸ್ಲಿಂ  ಸಮುದಾಯ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಲಾಗಿದೆ. ಪ್ರಬಲ ಜಾತಿಗಳ ಮೀಸಲಾತಿ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲೇ ಸರ್ಕಾರಿ ನೌಕರಿಯ ಅವಕಾಶಗಳು ಕ್ಷೀಣಿಸುತ್ತಿದ್ದು ಇನ್ನೂ ಕ್ಷೀಣಿಸುವ ಸಾಧ್ಯತೆಗಳಿವೆ.
ದೆಹಲಿ ರೈತ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಿಸರವಾದಿ ದಿಶಾರವಿಯ ಬಂಧನ ಮತ್ತು ಆಕೆಯ ವಿರುದ್ಧ ಹೂಡಿಸುವ ಸುಳ್ಳು ಮೊಕದ್ದಮೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಎದುರಿಸಿದೆ. 

ರಾಜ್ಯದ ಒಬ್ಬ ಯುವ ಪರಿಸರವಾದಿಯನ್ನು ರಾತ್ರೋರಾತ್ರಿ ಬಂಧಿಸಿ ದೆಹಲಿಗೆ ಹೊತ್ತೊಯ್ದ ದೆಹಲಿ ಪೊಲೀಸರ ಕ್ರಮ ವ್ಯಾಪಕ ಖಂಡನೆಗೆ ಒಳಗಾಗಿದ್ದು, ಕರ್ನಾಟಕದ ಪೊಲೀಸರ ಗಮನಕ್ಕೂ ತರದೆ ಈ ಕ್ರಮ ಕೈಗೊಂಡಿರುವುದು ಅಕ್ಷಮ್ಯ ಮತ್ತು ಖಂಡನಾರ್ಹವಾಗಿದೆ. ಕಾರ್ಪೋರೇಟ್ ಪರ ಶಕ್ತಿಗಳ ಪರವಾಗಿಯೇ ಆಡಳಿತ ನಡೆಸುತ್ತಿರುವ  ಬಿಜೆಪಿ ಸರ್ಕಾರ ತನ್ನ ಕೋಮುವಾದಿ ಕಾರ್ಯಸೂಚಿಗೆ ಪೂರಕವಾಗಿ ಆಡಳಿತ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲೇ ಪ್ರಬಲ ಜಾತಿಗಳ ಒತ್ತಡವನ್ನೂ ಹೆಚ್ಚಿಸುತ್ತಿದೆ. ಮತ್ತೊಂದೆಡೆ ಜನಪರ ಆಂದೋಲನಗಳನ್ನು ಹತ್ತಿಕ್ಕಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿದೆ. ಕಾರ್ಪೋರೇಟ್ ವಿರೋಧಿ ಶಕ್ತಿಗಳು, ಫ್ಯಾಸಿಸಂ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳು ಈ ಸಂದರ್ಭದಲ್ಲಿ ಒಂದಾಗಿ ಜನಸಾಮಾನ್ಯರ ಮೇಲೆ ನಡೆಯುತ್ತಿರುವ ಫ್ಯಾಸಿಸ್ಟ್ ಕಾರ್ಪೋರೇಟ್ ಪ್ರಹಾರದ ವಿರುದ್ಧ ದಿಟ್ಟ ಹೋರಾಟ ನಡೆಸಲು ಸಜ್ಜಾಗಬೇಕಿದೆ.