- ಕ್ಲಿಫ್ಟನ್ ಡಿ’ ರೋಜಾರಿಯೋ

ಪೌರಕಾರ್ಮಿಕರಿಲ್ಲದ ನಗರ ಹೇಗಿರುತ್ತಾದೆಂದು ಒಮ್ಮೆ ಊಹಿಸಿಕೊಳ್ಳಿ, ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಮನೆಯ ಹೊರಗಿನ ಮೂಲೆ  ಮೂಲೆಗಳಲ್ಲಿ, ಎಲ್ಲೆಂದರಲ್ಲಿ ತುಂಬಿ ತುಳುಕುತ್ತಿರುವ ಕಸದ ರಾಶಿ ಕಣ್ಮುಂದೆ ಇದ್ದಾರೆ ಸಮಾಜದ ಸ್ವಸ್ಥ್ಯಾ ಏನಾಗುತ್ತದೆಂದು ಕಲ್ಪಿಸಿಕೊಳ್ಳಿ. ಊಹಿಸಿಕೊಳ್ಳುವುದು ಸಹ ಕಷ್ಟಸಾಧ್ಯ,  ಸರಿ ತಾನೇ? ಏಕೆಂದರೆ ರಾಜ್ಯದಾದ್ಯಂತ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ 50,000 ಕ್ಕೂ ಹೆಚ್ಚು ಪೌರಕಾರ್ಮಿಕರು ನಗರಗಳನ್ನು ಸ್ವಚ್ಛವಾಗಿಡುವುದಕ್ಕಾಗಿ, ಘನತ್ಯಾಜ್ಯವನ್ನ ತೆರವುಗೊಳಿಸಲು ಪ್ರತಿದಿನ ಅವಿರತವಾಗಿ ಶ್ರಮಿಸುತ್ತಾರೆ. ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗವು ಲಕ್ಷಗಟ್ಟಲೆ ಜೀವಗಳನ್ನು ಬಲಿ ತೆಗೆದುಕೊಂಡಾಗ ಮತ್ತು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಇರಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದಾಗಲೂ ಸಹ, ಪೌರಕಾರ್ಮಿಕರು ತಮ್ಮ ಜೀವವನ್ನು ಲೆಕ್ಕಿಸದೇ, ಅ ಇಡೀ ಸಮಯದಲ್ಲಿ ಕೆಲಸ ಮಾಡಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಚಪ್ಪಾಳೆ ತಟ್ಟಿ ಪುಷ್ಪವೃಷ್ಟಿಯನ್ನೇ ಪೌರಕಾರ್ಮಿಕರ ಮೇಲೆ ಸುರಿಸಿದರು. ಸದ್ಯಕ್ಕೆ ಕೋರನಾದಂತಹ ಸಂದಿಗ್ಧ ಸಮಯ ಕಳೆದಿದೆ, ಆದರೆ ಸಾಂಕ್ರಾಮಿಕ ರೋಗ ಮತ್ತು ಲಾಕ್‍ಡೌನ್‍ನ ಸಮಯದಲ್ಲಿ ಹಾಗೂ ಅದಕ್ಕೂ ಮೊದಲು ಪೌರಕಾರ್ಮಿಕರು ಎದುರಿಸುತ್ತಿದ್ದಂತಹ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾಗಿ ಉದ್ಯೋಗ,  ವೇತನ ಮತ್ತು ಸಾಮಾಜಿಕ ಭದ್ರತೆಯ ಕೊರತೆ, ಅಮಾನವೀಯ ಕೆಲಸದ ಪರಿಸ್ಥಿತಿಗಳು ಮತ್ತು ಜೀವನ ನಿರ್ವಹಣೆಯಲ್ಲಿನ ಸಂಧಿಗ್ಧ ಪರಿಸ್ಥಿತಿಗಳು ಈ ಕಾರ್ಮಿಕರನ್ನು ಸದಾ ಕಾಡುತ್ತಲೇ ಇದ್ದಾವೆ. 

ಈ ಸಂಕಷ್ಟಗಳಿಂದ ನೊಂದಿರುವ ಪೌರಕಾರ್ಮಿಕರ ಉತ್ತಮ ಜೀವನಕ್ಕಾಗಿ, ಕರ್ನಾಟಕದಾದ್ಯಂತ ಇರುವ ಪೌರಕಾರ್ಮಿಕರ ಅನೇಕ ಸಂಘಟನೆಗಳು 1ನೇ ಜುಲೈ 2022 ರಿಂದ ಅನಿರ್ದಿಷ್ಠಾವಧಿಗೆ ಅಹೋರಾತ್ರಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾವೆ ಮತ್ತು ಪತ್ರಿಕೆಯ ಗೋಷ್ಠಿಯ ಮೂಲಕ ಘೋಷಿಸಿದ್ದಾವೆ. ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವುದು ಈ ಮುಷ್ಕರದ ಪ್ರಮುಖ ಹಕ್ಕೋತ್ತಾಯವಾಗಿದೆ. 

ಬಹುಪಾಲು ಪೌರಕಾರ್ಮಿಕರು ಗತಕಾಲದಿಂದ ಶೋಷಣೆಗೊಳಪಟ್ಟು ತುಳಿತಕ್ಕೊಳಗಾದ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಅದರಲ್ಲೂ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ ಎಂಬುವ ಅಂಶಗಳನ್ನು ಬಹುಮುಖ್ಯವಾಗಿ ಗಮನಿಸಬೇಕಾಗಿದೆ. ದಲಿತರಾಗಿ ಮತ್ತು ಮಹಿಳೆಯರಾಗಿ ಈ ಶೋಷಿತ ಸಮುದಾಯಗಳಿಂದ ಬಂದ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿಡುವ ಮೂಲಕ  ಎಲ್ಲಾ ಜನರ ಆರೋಗ್ಯವನ್ನು ಕಾಪಾಡುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತಿದ್ದಾರೆ, ಆದರೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಈ ಪೌರಕಾರ್ಮಿಕರು ದಲಿತರೆಂಬ ಕಾರಣಕ್ಕೆ ಅವರ ವಿರುದ್ಧ ತಾರತಮ್ಯ ಮತ್ತು ಅಸ್ಪøಶ್ಯತೆಯನ್ನು ಆಚರಿಸುತ್ತಾರೆ. ಪೌರಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯವ ನೀರಿನ ವ್ಯವಸ್ಥೆ ಇರುವುದಿಲ್ಲ, ಅಕ್ಕಪಕ್ಕದ ಮನೆಯವರನ್ನು ಕೇಳಿದರೆ ಕೆಲವು ಕೊಡಲು ನಿರಾಕರಿಸುತ್ತಾರೆ ಮತ್ತೇ ಕೆಲವರು ಶೌಚಾಲಯಕ್ಕೆ ಬಳಸುವ ಜಗ್‍ಗಳಲ್ಲಿ ನೀರು ನೀಡುತ್ತಾರೆ. ಘನತ್ಯಾಜ್ಯ ವಿಲೇವಾರಿಯ ಕೆಲಸವು ಅನೈರ್ಮಲೀಕರಣದಿಂದ ಕೂಡಿದ್ದು, ಈ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸೂಕ್ತ ರಕ್ಷಣಾತ್ಮಕ ಪರಿಕಾರಗಳನ್ನು ನೀಡಿರುವುದಿಲ್ಲ. ಅದು ಅಲ್ಲದೆ ಕಸಗೂಡಿಸುವ ಮತ್ತು ಮನೆ ಮನೆಗಳಿಂದ ಕಸ ಸಂಗ್ರಹಿಸಲು ಸೂಕ್ತ ಸಲಕರಣೆಗಳನ್ನು ಸಹ ನೀಡಿರುವುದಿಲ್ಲ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯು ಸಮಾಜದ ಸ್ವಸ್ಥ್ಯಾ ಕಾಪಾಡುವ ಪೌರಕಾರ್ಮಿಕರು ಹಲವಾರು ರೋಗ ರುಜನಿಗಳಿಗೆ ಅತಿಬೇಗ ತುತ್ತಾಗಿ ಸಮಾಜಕ್ಕಾಗಿ ಜೀವ ಬಿಡುತ್ತಾರೆ. ಹೀಗಾಗಿ ಪೌರಕಾರ್ಮಿಕರು ತಮ್ಮ ಬದುಕು ಸಂಕಷ್ಟದಲ್ಲಿರುವುದರಿಂದ ರಾಜ್ಯ ಸರ್ಕಾರ ಮತ್ತು ಸಮಾಜದ ಗಮನ ಸೆಳೆಯಲು ಮುಷ್ಕರದಂತಹ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದೋದಗಿದೆ.

ಪೌರಕಾರ್ಮಿಕರು ಮುಷ್ಕರದಂತಹ ಕಠಿಣಕ್ರಮಕ್ಕೆ ಏಕೆ ಮುಂದಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು ಅವರ ಕೆಲಸದ ಪರಿಸ್ಥಿತಿಗಳು, ಸೇವಾ ಸೌಲಭ್ಯಗಳ ಪರಿಸ್ಥಿತಿಗಳು ಮತ್ತು ಅವರ ಜೀವನದ ಇತರ ಅಂಶಗಳನ್ನು ನೋಡಬೇಕಾಗಿದೆ. ಮೇ 2016 ರ ಹಿಂದೆಯೇ ಎಲ್ಲಾ ಪೌರಕಾರ್ಮಿಕರ ಸೇವೆಗಳನ್ನು ಮಾರ್ಚ್ 2017 ರೊಳಗೆ  ಖಾಯಂಗೊಳಿಸಲು ಅಂದಿನ  ಸರ್ಕಾರದ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ ಇಲ್ಲಿಯ ತನಕ ಯಾವುದೇ ಪ್ರಕ್ರೀಯೆ ನಡೆಯದೇ ಇರುವುದನ್ನು ಗಮನಿಸಿದರೆ, ಪೌರಕಾರ್ಮಿಕರ ಬವಣೆಗಳು ಏನೆಂದು ಸ್ಪಷ್ಟವಾಗಿ ತಿಳಿಯುತ್ತವೆ.

ಇಂದು, ರಾಜ್ಯದಲ್ಲಿರುವ 288 ನಗರ ಸ್ಥಳೀಯ ಸಂಸ್ಥೆಗಳಲ್ಲಿ 54,512 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ, ಅವರಲ್ಲಿ 10,755 ಖಾಯಂ ಪೌರಕಾರ್ಮಿಕರು ಮಾತ್ರ ವೇತನ ಶ್ರೇಣ ಯ ಪ್ರಕಾರ ವೇತನವನ್ನು ಪಡೆಯುತ್ತಿದ್ದಾರೆ, ವಾರದ ರಜೆ, ಸರ್ಕಾರಿ ಘೋಷಿತ ರಜಾದಿನಗಳು ಮತ್ತು ಇತರೆ ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ನಿವೃತ್ತಿ ಸೇವಾ ಸೌಲಭ್ಯಗಳನ್ನು ಹೊಂದಿದ್ದಾರೆ. ಉಳಿದವರು ನೇರ-ಪಾವತಿ ಪೌರಕಾರ್ಮಿಕರು, ಇವರಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ವೇತನವನ್ನು ಪಾವತಿಸಲಾಗುತ್ತದೆ ಮತ್ತು ಗುತ್ತಿಗೆ ಪೌರಕಾರ್ಮಿಕರು. ಈ ಕೊನೆಯ ಎರಡು ವರ್ಗದ ಕಾರ್ಮಿಕರಿಗೆ ಕೇವಲ ಕನಿಷ್ಠ ವೇತನವನ್ನು ನೀಡಲಾಗುತ್ತದೆ (ತಿಂಗಳಿಗೆ ಸುಮಾರು ರೂ. 12,000/-) ಮತ್ತು ರಜೆ, ವಾರದ ರಜೆ, ಸರ್ಕಾರಿ ಘೋಷಿತ ರಜಾದಿನಗಳು, ಗ್ರಾಚ್ಯುಟಿ, ನಿವೃತ್ತಿ ಸೌಲಭ್ಯಗಳು ಸೇರಿದಂತೆ ಇತರ ಎಲ್ಲಾ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಅದರಲ್ಲೂ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ, ಏಕೆಂದರೆ, ಗುತ್ತಿಗೆದಾರರು ಪೌರಕಾರ್ಮಿಕರಿಗೆ ನೀಡುವ ಕನಿಷ್ಠ ವೇತನವನ್ನು ಸಹ ದೋಚುತ್ತಿದ್ದಾರೆ ಮತ್ತು ಅತ್ಯಲ್ಪ ವೇತವನ್ನು ನೀಡುತ್ತಿದ್ದಾರೆ. 

ಆದರೂ ಎಲ್ಲಾ ಪೌರಕಾರ್ಮಿಕ ವರ್ಗಗಳಲ್ಲಿರುವ ಒಂದು ಸಾಮಾನ್ಯ ಲಕ್ಷಣವೆಂದರೆ ಅಮಾನವೀಯ ಕೆಲಸದ ಪರಿಸ್ಥಿತಿ. ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಸಂಭ್ರಮಿಸುತ್ತಿದೆ, ಆದರೆ ರಾಜ್ಯದಾದ್ಯಂತ ಪೌರಕಾರ್ಮಿಕರು ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ಬೀದಿ ಕಸಗೂಡಿಸುವುದು ಮತ್ತು ಕಸ ಸಂಗ್ರಹಣೆ ಮಾಡುವ ಅನೈರ್ಮಲೀಕರಣ ಕೆಲಸವನ್ನು ಮಾಡುತ್ತಿದ್ದಾರೆ. ಕೊಳೆತುನಾರುವ ಕಸವನ್ನು ಬರೀ ಕೈಗಳಿಂದಲೇ ಎತ್ತುವಂತೆ ಬಲವಂತ ಪಡಿಸಲಾಗುತ್ತದೆ ಮತ್ತು ಅದನ್ನು ಸಾಗಿಸಲು ಮುರಿದ ಬಿದ್ದಿರುವ ತಳ್ಳುವ ಗಾಡಿಗಳನ್ನು ನೀಡಿದ್ದಾರೆ. ಇದರಿಂದಾಗಿ ಪೌರಕಾರ್ಮಿರು ಬೆನ್ನುನೋವು ಮತ್ತು ಸೊಂಟನೋವಿನಿಂದ ನರಕ ಯಾತನೆ ಅನುಭವಿಸುತ್ತಾರೆ. ಬೆಂಗಳೂರು ಮಹಾನಗರದಂತಹ ವಾಹನ ದಟ್ಟನೆ ಇರುವು ರಸ್ತೆಗಳಲ್ಲಿ ಪೌರಕಾರ್ಮಿಕರು ಮುರಿದ ತಳ್ಳುವಗಾಡಿಗಳ ಮೂಲಕ ಕಸ ಸಾಗಿಸುವಾಗ ಹಲವಾರು ಅಪಘಾತಗಳು ಸಂಭವಿಸಿದ್ದಾವೆ, ಆದರೂ ಅಪಘಾತಕ್ಕೊಳಗಾದ ಪೌರಕಾರ್ಮಿಕರಿಗೆ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. 

ಪಟ್ಟಣಗಳು ​​ಮತ್ತು ನಗರಗಳನ್ನು ಸ್ವಚ್ಛವಾಗಿಡಲು ಹಾಗೂ ಜನರ ಆರೋಗ್ಯವನ್ನು ರಕ್ಷಿಸಲು ಪೌರಕಾರ್ಮಿಕರು ಪ್ರತಿದಿನ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2.30 ರವರೆಗೆ ಕೆಲಸ ಮಾಡುತ್ತಾರೆ. ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ, ಇತರ ನಗರ ಸ್ಥಳೀಯ ಸಂಸ್ಥೆಗಳಡಿಯಲ್ಲಿ ಬರುವ ಪೌರಕಾರ್ಮಿಕರು ಗೂಡಿಸುವುದು ಸೇರಿದಂತೆ ಮ್ಯಾನ್‍ಹೋಲ್‍ಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಎರಡು ಕೆಲಸಗಳನ್ನು ಮಾಡುತ್ತಾರೆ. ಇದಲ್ಲದೆ, ಪೌರಕಾರ್ಮಿಕರು ಬೀದಿ ಗೂಡಿಸುವ ಮತ್ತು ಮನೆ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸಗಳ ಜೊತೆಗೆ ರಸ್ತೆಗಳಲ್ಲಿ ಬಿದ್ದಿರುವ ಮಾನವರ ಮಲಮೂತ್ರ ಮಿಶ್ರಿತ ತ್ಯಾಜ್ಯ ಮತ್ತು ಸತ್ರ ಪ್ರಾಣ ಗಳನ್ನು ಬರೀ ಕೈಯಿಂದ ತೆರವುಗೊಳಿಸುವಂತೆ ಒತ್ತಾಯಕ್ಕೊಳಪಡುತ್ತಾರೆ. ನಗರ ಪ್ರದೇಶಗಳಲ್ಲಿ ಮಾನವರ ಮಲ ಮೂತ್ರವನ್ನು ತೆರೆದ ಚರಂಡಿಗಳಿಗೆ ಬಿಡಲಾಗುತ್ತದೆ, ಇದು ಎಲ್ಲಾ ನಗರಗಳಲ್ಲೂ ಸಹ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ ಹಾಗೆಯೇ ಸೂಕ್ತ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ಜನರು ಬಯಲಿನಲ್ಲಿ  ಮಲಮೂತ್ರ ವಿಸರ್ಜನೆ ಮಾಡುತ್ತಾರೆ, ಇವುಗಳನ್ನು ಸಹ ಪೌರಕಾರ್ಮಿಕರಿಂದಲೇ ಸ್ವಚ್ಛಗೊಳಿಸಲಾಗುತ್ತದೆ. ಈ ರೀತಿಯ ಕೆಲಸ ಮಲಹೊರುವ ಪದ್ಧತಿಯೇ ಹೊರತು ಬೇರೇನೂ ಅಲ್ಲ.

ಡಾ.ಬಿ.ಆರ್. ಅಂಬೇಡ್ಕರ್ ರವರು "ಜಾತಿ ಕೇವಲ ಕೆಲಸದ ಆಧಾರದ ಮೇಲೆ ಮಾಡಿದ ವಿಭಜನೆಯಲ್ಲ, ಅದು ಕಾರ್ಮಿಕರ ವಿಭಜನೆ" ಎಂದು ಸ್ಪಷ್ಟವಾಗಿ ಘೋಷಿಸಿದರು. ಬಹುಪಾಲು ಪೌರಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರು ಮತ್ತು ಈ ಕೆಲಸವನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡವರಲ್ಲ. ಆದರೆ ಅವರ ಹುಟ್ಟಿನಿಂದಲೇ, ಅಳಿಸಲಾಗದ ಜಾತಿಯ ಕಳಂಕದಿಂದಾಗಿ, ಭಾರತೀಯ ಜಾತಿ ವ್ಯವಸ್ಥೆಯ ದುಷ್ಟ ಶಕ್ತಿಯು ಪೌರಕಾರ್ಮಿಕರು ವಂಶ ಪರಂಪರ್ಯವಾಗಿ ಈ ವೃತ್ತಿಯನ್ನೇ ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳುವಂತೆ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣಮಾಡಿದೆ ಮತ್ತು ಬಲವಂತಪಡಿಸುತ್ತದೆ. ಜಾತಿ ವ್ಯವಸ್ಥೆಯಿಂದ ಕೂಡಿದ ಸಮಾಜ ಮತ್ತು ಆಡಳಿತ ನಡೆಸುವ ಪ್ರಾಬಲ್ಯ ಜಾತಿಗಳು ದಲಿತರಿಂದ ಅನೈರ್ಮಲೀಕರಣ ಕೆಲಸವನ್ನು ಮಾಡುವಂತೆ ಒತ್ತಾಯಪಡಿಸುತ್ತಾರೆ. ಹೀಗಾಗಿ, ಊಳಿಗಮಾನ್ಯ ಜಾತಿವಾದಿ ಸಮಾಜವು ಅಸ್ಪೃಶ್ಯ ಸಮುದಾಯವನ್ನು ಕಸಗೂಡಿಸುವವರು ಮತ್ತು ನೈರ್ಮಲೀಕರಣ ಕೆಲಸ ಮಾಡುವವರು ಎಂದು ಪರಿಗಣ ಸಿದೆ. 

ಐಪಿಡಿ ಸಾಲಪ್ಪ ಸಮಿತಿಯ ವರದಿಯನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕು. ಸಾಲಪ್ಪ ಸಮಿತಿಯು, “ಕಸಗೂಡಿಸುವವರು ಮತ್ತು ನೈರ್ಮಲೀಕರಣ ಕೆಲಸ ಮಾಡುವವರ ಜೀವನ ಮತ್ತು ಕೆಲಸದ ಪರಿಸ್ಥಿತಿಗಳ ಸುಧಾರಣೆಯ ಕುರಿತು’’ ವರದಿಯನ್ನು ಏಪ್ರಿಲ್ 1976 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಕೆಲಸವು ಶಿಫಾರಸ್ಸುಗಳನ್ನು ಮಾಡಿದೆ. ಅವುಗಳು :  ತಾತ್ಕಾಲಿಕವಾಗಿ ಉದ್ಯೋಗದಲ್ಲಿರುವ ಮತ್ತು ಒಂದು ವರ್ಷಕ್ಕೆ ಕಡಿಮೆಯಿಲ್ಲದೆ ಸೇವೆಯಲ್ಲಿ ತೊಡಗಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು, ನಗರ ಸ್ಥಳೀಯ ಸಂಸ್ಥೆಗಳು ಪ್ರತಿ 1,000 ಜನಸಂಖ್ಯೆಗೆ ಇಬ್ಬರು ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕೆಂದು, ಪೌರಕಾರ್ಮಿಕರಿಗೆ ಮೇಲ್ವಿಚಾರಕ ಸಿಬ್ಬಂದಿಯಿಂದ  ಮತ್ತು ಸಾರ್ವಜನಿಕರಿಂದ ಆಗುವಂತಹ ನಿಂದನೆ ಮತ್ತು ಅವಮಾನಗಳನ್ನು ನಿಲ್ಲಿಸಬೇಕೆಂದು,  ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಬೇಕೆಂದು, ಸೂಕ್ತ ವೇತನ, ವಾರದ ರಜೆ/ ಸರ್ಕಾರಿ ಘೋಷಿತ ರಜೆ/ ಇತರೆ ರಜಾ ದಿನಗಳು, ಸಮವಸ್ತ್ರಗಳು, ರಕ್ಷಣಾತ್ಮಕ ಪರಿಕಾರಗಳು ಮತ್ತು ಶುಚಿಗೊಳಿಸಲು ಬೇಕಾಗಿರುವ ಎಲ್ಲಾ ಸಾಧನಗಳನ್ನು ಒದಗಿಸಬೇಕೆಂದು ಹಾಗೂ ಪಿಂಚಣ , ಗ್ರಾಚ್ಯುಟಿ,  ಜೀವ ವಿಮಾ ಯೋಜನೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ. ಮುಖ್ಯವಾಗಿ, ಯಾವುದೇ ಪುರಸಭೆಯಲ್ಲಿ ಪೌರಕಾರ್ಮಿಕರ ಸಂಖ್ಯೆ 200 ಕ್ಕಿಂತ ಕಡಿಮೆಯಿಲ್ಲದಿರುವಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿಗಳನ್ನು ನೇಮಿಸಲು ಸಮಿತಿ ಶಿಫಾರಸು ಮಾಡಿದೆ. ಐ.ಪಿ.ಡಿ. ಸಾಲಪ್ಪ ಸಮಿತಿಯು ಸಂಶೋಧನೆ ನಡೆಸಿ ಮಾಡಿದ ಶಿಫಾರಸ್ಸುಗಳು ಅರ್ಧ ಶತಮಾನದ ನಂತರವೂ ಸಹ ಯಾವುದೇ ಪ್ರಗತಿಯನ್ನು ಕಾಣದೆ ಅದೇ ಸ್ಥಿತಿಯಲ್ಲಿದ್ದಾವೆ ಎನ್ನುವುದನ್ನು ಗಮನಿಸಿದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಡಳಿತರೂಢ ಸರ್ಕಾರಗಳು ಮಾಡಿದ ಮಹಾ ದ್ರೋಹವಾಗಿದೆ.

ಐತಿಹಾಸಿಕವಾಗಿ ತುಳಿತಕ್ಕೊಳಗಾದ ಮತ್ತು ಶೋಷಿತ ಸಮುದಾಯಗಳ, ವಿಶೇಷವಾಗಿ ದಲಿತರ ಉನ್ನತಿಗಾಗಿ  ವಿಸ್ತಾರವಾದ ಕಾರ್ಯವಿಧಾನದ ಮೂಲಕ, ಅವರಿಗಿರುವ ತಾರತಮ್ಯವನ್ನು ಪರಿಹರಿಸಲು, ಸಂವಿಧಾನದಲ್ಲಿ ಕಡ್ಡಾಯಗೊಳಿಸಿರುವುದು ಸಂವಿಧಾನ ರಚನಾಕಾರರ ಕಾಳಜಿಯನ್ನು ತೋರಿಸುತ್ತದೆ. ಅನುಚ್ಛೇದ 17 ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುತ್ತದೆ. ಅನುಚ್ಛೇದ 46 ರ ಪ್ರಕಾರ ರಾಜ್ಯವು ದುರ್ಬಲ ವರ್ಗದ ಜನರ ಶೈಕ್ಷಣ ಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯಿಂದ ಉತ್ತೇಜಿಸಲು ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸಲು ಬಯಸುತ್ತದೆ. ಹಾಗಾಗಿ ರಾಜ್ಯ ಸರ್ಕಾರವು ಪೌರಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಂವಿಧಾನಾತ್ಮಕ ಜವಾಬ್ದಾರಿಯನ್ನು ಹೊಂದಿದೆ. ಇದಲ್ಲದೆ, ಭಾರತದಲ್ಲಿನ ಸಮಾನತೆಯ ನ್ಯಾಯತತ್ವದ ಪ್ರಕಾರ ಔಪಚಾರಿಕ ಸಮಾನತೆಯಿಂದ ವಸ್ತುನಿಷ್ಠ ಸಮಾನತೆಗೆ ಪರಿವರ್ತಿಸುವ ದೃಷ್ಟಿಯಿಂದ ವಿಶೇಷವಾಗಿ ಈ ಕಾರ್ಮಿಕರನ್ನು ಖಾಯಂಗೊಳಿಸಲು ಸರ್ಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ರಚನಾತ್ಮಕ ಅಸಮಾನತೆಗಳನ್ನು ನಿವಾರಿಸುವುದಕ್ಕಾಗಿ ಸಂವಿಧಾನದಲ್ಲಿ ವಿಶೇಷ ನಿಬಂಧನೆಗಳನ್ನು ಸೇರಿಸಿಲಾಗಿದೆ, ಇಲ್ಲವಾದಲ್ಲಿ ನಿಜವಾದ ಅಥವಾ ವಾಸ್ತವಿಕ ಸಮಾನತೆ ಭ್ರಮೆಯಾಗಿ ಉಳಿಯುತ್ತದೆ. ಸಂವಿಧಾನದ ಅನುಚ್ಛೇಧ 15(4) ಕೆಲವು ವರ್ಗಗಳನ್ನು ವಿಶೇಷವಾಗಿ ಗುರುತಿಸಿ, ಅ ಮೂಲಕ ವಸ್ತುನಿಷ್ಠ ಸಮಾನತೆಯನ್ನು ಸಾಧಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಹೀಗಾಗಿ  ಸಮಾಜದಲ್ಲಿ ತಳಮಟ್ಟದಲ್ಲಿರುವ ಪೌರಕಾರ್ಮಿಕರನ್ನು ಮೇಲಕ್ಕೇತ್ತಲು ಅದರಲ್ಲೂ ದಲಿತ ಮಹಿಳೆಯರೇ ಹೆಚ್ಚಾಗಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಕರ್ನಾಟಕ ಸರ್ಕಾರಕ್ಕೆ ವಿಶೇμÁಧಿಕಾರವಿದ್ದು, ಅದನ್ನು ಪೌರಕಾರ್ಮಿಕರ ಪರವಾಗಿ ಚಲಾಯಿಸಬೇಕಾಗಿದೆ.  

ಆದರೆ ಸರ್ಕಾರ ಸಾಮಾನ್ಯವಾಗಿ ಬಳಸುವ ವಾದವೆಂದರೆ ಉಮಾದೇವಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಕಾರ್ಮಿಕರನ್ನು ಖಾಯಂಗೊಳಿಸುವುದು "ಹಿಂಬಾಗಿಲ ಮೂಲಕ ನೇಮಕಾತಿ ಮಾಡುವ ಪ್ರಕ್ರೀಯೆಯಾಗಿದೆ” ಎಂದು ತಿಳಿಸಿದ್ದು, ಖಾಯಂಗೊಳಿಸುವ ಪ್ರಕ್ರೀಯೆಯನ್ನು ನಿಷೇಧಿಸಿದೆ ಎಂಬುದಾಗಿದೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ ಏಕೆಂದರೆ ಉಮಾದೇವಿ ಪ್ರಕರಣದಲ್ಲಿ ಸಂವಿಧಾನದ ಪರಿಚ್ಛೇದ 15(4)ರ ಅಡಿಯಲ್ಲಿ ರಾಜ್ಯಕ್ಕಿರುವ ಬಾಧ್ಯತೆಗಳನ್ನು ಕಡಿಮೆ ಮಾಡುವುದಿಲ್ಲ. ಇದಲ್ಲದೆ, ಉಮಾದೇವಿ ಪ್ರಕರಣವನ್ನು ಒಳಗೊಂಡಂತೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ತಡೆಯಲು ಯಾವುದೇ ಸಾರ್ವತ್ರಿಕ ನಿಯಮಗಳಿಲ್ಲ. ಇದಲ್ಲದೆ, ಉಮಾದೇವಿ ಪ್ರಕರಣದ ನಂತರದಲ್ಲಿ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಕೋರಿ ದಾಖಲಾದ ಪ್ರಕರಣಗಳಲ್ಲಿ, ಸರ್ವೋಚ್ಛ ನ್ಯಾಯಾಲಯವು ಖಾಯಂಗೊಳಿಸುವಂತೆ ನಿರ್ಧೇಶನ ನೀಡಿದಲ್ಲದೆ, ಉದ್ಯೋಗದಾತರು ತಮಗಾಗಿ ತಮ್ಮ ಜೀವಮಾನವೆಲ್ಲಾ ರಕ್ತ ಬೆವರು ಸುರಿಸಿ ದುಡಿದ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವುದನ್ನು ತಪ್ಪಿಸುವುದಕ್ಕಾಗಿ, ಉಮಾದೇವಿ ಪ್ರಕರಣವನ್ನು ಸಾಧನವನ್ನಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ. 

ಸಮಾಜದ ಸ್ವಾಸ್ಥ್ಯಕ್ಕಾಗಿ ಅನೈರ್ಮಲೀಕರಣದಿಂದ ಕೂಡಿದ ಕೆಲಸವನ್ನು ಮಳೆ, ಚಳಿ, ಗಾಳಿ, ಬಿಸಿಲು ಯಾವುದನ್ನು ಲೆಕ್ಕಿಸದೇ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಇಂದು ತಮ್ಮ ನ್ಯಾಯಬದ್ಧವಾದ ಖಾಯಂ ಕೆಲಸಕ್ಕಾಗಿ ಹಕ್ಕೋತ್ತಾಯ ಮಾಡುತ್ತಿದ್ದಾರೆ. ಹಾಲಿ ರಾಜ್ಯದಾದ್ಯಂತ ಕೆಲಸ ಮಾಡುತ್ತಿರುವ ಎಲ್ಲಾ ಪೌರಕಾರ್ಮಿರನ್ನು ಖಾಯಂಗೊಳಿಸಬೇಕೆ ವಿನಃ, ನೇಮಕಾತಿಯಲ್ಲ ಎಂಬುವುದು ಪೌರಕಾರ್ಮಿಕರ ದೊಡ್ಡ ಘೋಷಣೆಯಾಗಿದೆ. ವಾಸ್ತವಾಗಿ ಪೌರಕಾರ್ಮಿಕರ ಬದುಕು ತಾರತಮ್ಯ ಮತ್ತು ಶೋಷಣೆಗಳಿಂದ ಕೂಡಿರುವುದರಿಂದ ರಾಜ್ಯ ಸರ್ಕಾರವು ಪೌರಕಾರ್ಮಿಕರ ಹಕ್ಕೋತ್ತಾಯಗಳಿಗೆ  ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಸ್ಪಂದಿಸುವ ಜವಾಬ್ದಾರಿಯನ್ನು ಹೊಂದಿದೆ. ಕರೋನಾ ಸಾಂಕ್ರಮಿಕದ ವಿರುದ್ಧ ನಡೆದ ಹೋರಾಟದಲ್ಲಿ ಪೌರಕಾರ್ಮಿಕರು ಮುಂಚೂಣ ಯಲ್ಲಿದ್ದರೆಂದು ಹೆಮ್ಮೆಪಟ್ಟು ಚಪ್ಪಾಳೆ ತಟ್ಟಿ ಪೌರಕಾರ್ಮಿಕರ ಮೇಲೆ ಪುಷ್ಪವೃಷ್ಠಿ ಸುರಿಸಿದ ಸಾರ್ವಜನಿಕರು ಪೌರಕಾರ್ಮಿಕರ ನ್ಯಾಯಯುತವಾದ ಹಕ್ಕೋತ್ತಾಯಕ್ಕೆ ಬೆಂಬಲಿಸುವುದು ಅವರ ಬಾಧ್ಯತೆಯಾಗಿದೆ.