ಅಸಹಜ ಸಾವುಗಳೂ ಆಡಳಿತ ಕ್ರೌರ್ಯವೂ

By Lekha |

ಕೋವಿದ್ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ಆಡಳಿತ ವ್ಯವಸ್ಥೆಯನ್ನು ಮತ್ತು ಸರ್ಕಾರವನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಚುರುಕುಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದಲ್ಲಿ ಅಪರೂಪವೇ ಆಗಿರುವ ನಾಗರಿಕ ಹೊಣೆಗಾರಿಕೆ ಮತ್ತು ಮಾನವ ಸಂವೇದನೆ ಕೊಂಚವಾದರೂ ಕಾಣುವಂತಿರಬೇಕಿತ್ತು. ದಿನನಿತ್ಯ ಸಾವುಗಳನ್ನು ಎಣಿಸುವ ಅಧಿಕಾರ ಕೇಂದ್ರಗಳಲ್ಲಿ ಪ್ರತಿಯೊಂದು ಸಾವು ಮನಸನ್ನು ಪ್ರಕ್ಷುಬ್ಧಗೊಳಿಸುವ ವಿಕ್ಷಿಪ್ತತೆಯನ್ನು ಉಂಟುಮಾಡಬೇಕಿತ್ತು. ಇಡೀ ಸಮಾಜವೇ ಆರೋಗ್ಯದಿಂದಿದೆ ಎನ್ನುವ ಭ್ರಮೆಯಲ್ಲಿದ್ದ ಪ್ರಜೆಗಳಿಗೆ ಒಮ್ಮಿಂದೊಮ್ಮೆಲೆ ಸರಣಿ ಸಾವುಗಳು ಎದುರಾದಾಗ ನಮ್ಮ ಸಮಾಜ ಆಘಾತಕ್ಕೊಳಗಾಗಬೇಕಿತ್ತು.