Lekha

ಕರಾವಳಿ ಕರ್ನಾಟಕದಾದ್ಯಂತ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಆವರಣ ಮತ್ತು ತರಗತಿಗಳಿಗೆ ಬರಬಾರದೆಂಬ ನಿಷೇಧವನ್ನು ಹೇರುವ ಮೂಲಕ ಗೊಂದಲದ ವಾತಾವರಣವನ್ನು ಸೃಷ್ಠಿಸಲಾಗಿದೆ.

ಹಿಜಾಬ್ ಧರಿಸುವುದು ಕಾಲೇಜುಗಳ ಸಮವಸ್ತ್ರ ನೀತಿಯನ್ನು ಉಲ್ಲಂಘಿಸುತ್ತದೆ ಎಂಬ ವಾದವು ಸತ್ಯಕ್ಕೆ ದೂರವಾದ್ದಾಗಿದೆ. ಏಕೆಂದರೆ ಹಿಂದೂ ವಿದ್ಯಾರ್ಥಿನಿಯರು ತಮ್ಮ ಸಮವಸ್ತ್ರದೊಂದಿಗೆ ತಮ್ಮ ಧಾರ್ಮಿಕ ನಂಬಿಕೆಗಳಾದ ಬಿಂದಿಗಳು, ಸಿಂಧೂರ ಮತ್ತು ತಾಳಿಗಳನ್ನು (ಮದುವೆಯಾಗಿದ್ದರೆ) ಧರಿಸುತ್ತಾರೆ; ಹಿಂದೂ ಬ್ರಾಹ್ಮಣ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ "ಜನಿವಾರ"ವನ್ನು ಧರಿಸುತ್ತಾರೆ; ಸಿಖ್ ಹುಡುಗರು ತಮ್ಮ ಸಮವಸ್ತ್ರದ ಜೊತೆಗೆ ಪೇಟವನ್ನು ಧರಿಸುತ್ತಾರೆ. ಇದಲ್ಲದೆ, ಕಾಲೇಜುಗಳಿಗೆ ಸಕಾರಣಯುಕ್ತವಲ್ಲದ ಸಮವಸ್ತ್ರ ಅಥವಾ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ಹಕ್ಕಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಮಾಡಿದ್ದಲ್ಲಿ ಅದು ವಿದ್ಯಾರ್ಥಿಗಳ ವೈಯುಕ್ತಿಕ ಮತ್ತು ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಉದಾಹರಣೆಗೆ, ನಾವು ಹಿಜಾಬ್ ನಿಷೇಧವನ್ನು ಪ್ರತಿಭಟಿಸಿದಂತಯೇ, ಕಾಲೇಜುಗಳು "ಅಸಭ್ಯ" ಎಂದು ಭಾವಿಸುವ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಮಹಿಳೆಯರನ್ನು ಶಿಕ್ಷಿಸುವ ಕಾಲೇಜುಗಳಲ್ಲಿನ ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಿರುವ ವಸ್ತ್ರ ಸಂಹಿತೆಯನ್ನು ಸಹ ನಾವು ಪ್ರತಿಭಟಿಸಬೇಕು. ಅಂತೆಯೇ, ಟ್ರಾನ್ಸ್ ಜೆಂಡರ್ ವಿದ್ಯಾರ್ಥಿಗಳು ತಮ್ಮ ಜನ್ಮದ ಲಿಂಗಕ್ಕಾನುಗುಣವಾಗಿ ಅಲ್ಲದೆ, ತಮ್ಮ ಲಿಂಗ ಅಭಿವ್ಯಕ್ತಿಗೆ ಅನುಗುಣವಾಗಿ ಸಮವಸ್ತ್ರವನ್ನು ಧರಿಸುವ ಹಕ್ಕನ್ನು ನಾವು ರಕ್ಷಿಸಬೇಕು. 

ಹಿಜಾಬ್‍ಗಳನ್ನು ತೆಗೆಯದಿದ್ದಾರೆ, ಶಿಕ್ಷಣ ಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತೀರೆಂಬ ಭಯವನ್ನುಂಟುಮಾಡುವುದು ಸಹ ಹಿಜಾಬ್ ಧರಿಸುವಂತೆ ಒತ್ತಾಯಿಸುವ ಪಿತೃ ಪ್ರಧಾನ ವ್ಯವಸ್ಥೆಯ ರೂಪವೇ ಆಗಿದೆ. ಇಸ್ಲಾಮ್‍ಗೆ ಹಿಜಾಬ್ ಅಗತ್ಯವೇ ಅಥವಾ ಇಲ್ಲವೇ ಎಂಬುದು ಅಪ್ರಸ್ತುತವಾಗಿದೆ. ಸಾಮಾಜದಲ್ಲಿರುವ ವಾಸ್ತವ ಸಂಗತಿಯೆಂದರೆ ಮುಸ್ಲಿಂ ಮಹಿಳೆಯರು ಹಿಜಾಬ್‍ಗಳನ್ನು ವ್ಯಾಪಕವಾಗಿ ಧರಿಸುತ್ತಾರೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಜಾಬ್ ಮೇಲೆ ನಿಷೇಧ ಹೇರುವುದು 

ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕಾದ ಖಾಸಗಿತನ ಮತ್ತು ದೈಹಿಕ ಸಮಗ್ರತೆ ಮತ್ತು ಇದರ ಜೊತೆಯಲ್ಲಿ ಅವರ ಉಡುಗೆಯ ಆಯ್ಕೆ, ಮುಸ್ಲಿಂ ಮಹಿಳೆಯರ ಶಿಕ್ಷಣ ಮತ್ತು ಧರ್ಮವನ್ನು ಮುಕ್ತವಾಗಿ ಆಚರಿಸುವ ಅವರ ಹಕ್ಕನ್ನು ಉಲ್ಲಂಘಿಸುತ್ತದೆ. 

"ಪಿತೃಪ್ರಧಾನ ಹಿಜಾಬ್ ವ್ಯವಸ್ಥೆ" ಗೆ ಸ್ತ್ರೀ ವಿರೋಧಿ ಎಂಬ ರೂಪವನ್ನು ಕೊಟ್ಟು ಕೋಮು ತಾರತಮ್ಯ ಮತ್ತು ಬಹಿಷ್ಕಾರವನ್ನು ಆಚರಿಸಲಾಗುತ್ತಿದೆ. ಅದೇ ಸಂಘ ಶಕ್ತಿಗಳು ಆನ್ ಲೈನ್‍ನಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜು ಮಾಡುತ್ತಿದ್ದಾಗ ಸಂತೋಷದಿಂದ ಭಾಗವಹಿಸುತ್ತಾರೆ ಮತ್ತು ಹಿಂದೂ-ಪರಮಾಧಿಕಾರ ಹೊಂದಿರುವ ಸಮಾವೇಶಗಳಲ್ಲಿ ಭಾಷಣಕಾರರು ಮುಸ್ಲಿಂ ಮಹಿಳೆಯರ ಮೇಲೆ ಸಾಮೂಹಿಕ ಲೈಂಗಿಕ ಗುಲಾಮಗಿರಿಗೆ ಮತ್ತು ಅತ್ಯಾಚಾರಕ್ಕೆ ಕರೆ ನೀಡುವಾಗ ಚಪ್ಪಾಳೆ ತಟ್ಟಿ  ಹುರಿದುಂಬಿಸುತ್ತಾರೆ.

ಸಾಂವಿಧಾನಿಕ ನೈತಿಕತೆಯ ತತ್ವಗಳು ಸ್ಪಷ್ಟವಾಗಿದ್ದಾವೆ: ಧರ್ಮವನ್ನು ಆಚರಣೆ ಮಾಡಲು ಸಾಂವಿಧಾನಿಕ ಸ್ವಾತಂತ್ರ್ಯವಿದೆ ಎಂದರೆ ವ್ಯಕ್ತಿಗಳು ತಮ್ಮ ಸ್ವಂತ ಧರ್ಮವನ್ನು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವ್ಯಾಖ್ಯಾನಿಸಲು ಮತ್ತು ಆಚರಣೆ ಮಾಡಲು ಸ್ವಾತಂತ್ರ್ಯವಿದೆ ಎಂದರ್ಥ. 

ಸಂಘಪರಿವಾರದ ಗುಂಪುಗಳು ಎಲ್ಲಾ ರೀತಿಯ ಕೋಮು ದ್ವೇಷದ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ಕರಾವಳಿ ಕರ್ನಾಟಕದಲ್ಲಿ ಈ ಹಿಜಾಬ್‍ಗಳ ನಿಷೇಧವು ನಡೆಯುತ್ತಿದೆ ಎಂಬುದನ್ನು ನಾವು ಮರೆಯುವಂತಿಲ್ಲ – ಈ ಪ್ರದೇಶದಲ್ಲಿ ಮುಸ್ಲಿಮರನ್ನು ಹಿಂದೂಗಳಿಂದ ಪ್ರತ್ಯೇಕಿಸಲು ಪ್ರಯತ್ನಿಸಲಾಗುತ್ತಿದೆ, ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡುವ ಹಿಂದೂ ವಿದ್ಯಾರ್ಥಿನಿಯರನ್ನು ಬೆದರಿಸುವುದು; ಕಾಲೇಜು ಬಸ್ಸಿನಿಂದ ಮುಸ್ಲಿಂ ಹುಡುಗ ಹುಡುಗಿಯರನ್ನು ಬಲವಂತವಾಗಿ ಇಳಿಸುವುದು; ಪರಸ್ಪರ ಸ್ನೇಹಿತರಾಗಿರುವ ಹಿಂದೂ ಹುಡುಗಿಯರು ಮತ್ತು ಮುಸ್ಲಿಂ ಹುಡುಗರನ್ನು ಹೊಡೆಯುವುದು ಸೇರಿದಂತೆ ಇತ್ಯಾದಿ ಅಪರಾಧಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದ್ದಾವೆ. 

ಹಿಜಾಬ್ ಧರಿಸಿರುವ ಮಹಿಳೆಯರನ್ನು ಮುಸ್ಲಿಂನವರು ನಡೆಸುವ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುವಂತೆ ಒತ್ತಡ ಹೇರುತ್ತಿರುವ ಕ್ರಮವು ಮುಸ್ಲಿಮರನ್ನು ಪ್ರತ್ಯೇಕಿಸುವ ದೊಡ್ಡ ಹುನ್ನಾರವನ್ನು ಹೊಂದಿದೆ. ಅಲ್ಲದೆ ಈ ಕ್ರಮದಿಂದ ಮುಸ್ಲಿಮರನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕುವುದು ಹಾಗೂ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಂವಹನದ ವ್ಯಾಪ್ತಿಯನ್ನು ಕಡಿಮೆ ಮಾಡುವುದರ ಮೂಲಕ ಹಿಂದೂಗಳ ಮೂಲಭೂತೀಕರಣವನ್ನು ಸಕ್ರಿಯಗೊಳಿಸುವುದಾಗಿರುತ್ತದೆ. 

ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ದಮನಿತ ಸಮುದಾಯಗಳ ಬಡ ಯುವಕ-ಯವತಿಯರನ್ನು ಮೂಲಭೂತವಾದಿಗಳನ್ನಾಗಿಸಲು ಸಂಘಪರಿವಾರದ ಪ್ರಯತ್ನ ನಡೆಯುತ್ತಿದೆ ಎಂಬುದನ್ನು ನಾವು ಗುರುತಿಸಬೇಕು. ಸಂಘಪರಿವಾರವು, ಚಾರಿತ್ರಿಕವಾಗಿ ಶಿಕ್ಷಣದ ನಿರಾಕರಣೆಗೊಳಪಟ್ಟಿದ್ದ ಈ ಯುವಜನರಿಗೆ ಹಿಂಧುತ್ವದ ಅಮಲು ತುಂಬಿ ಮೂಲಭೂತವಾದಿಗಳನ್ನಾಗಿಸುತ್ತಿದೆ ಮತ್ತು ತಮ್ಮ ಕೋಮುವಾದಿ ವಿಷಬೀಜ ಬಿತ್ತಲು ಇವರನ್ನು ಬಳಸಿಕೊಳ್ಳುತ್ತಿದೆ. 

ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಉಚ್ಛನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮುಸ್ಲಿಂ ಮಹಿಳೆಯರ ಖಾಸಗಿತನ, ಸ್ವಾಯತ್ತತೆ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಅಭಿವ್ಯಕ್ತಿಯಾಗಿ ಹಿಜಾಬ್ ಧರಿಸುವ ಅವರ ಹಕ್ಕನ್ನು ಎತ್ತಿ ಹಿಡಿಯಲು ಮಧ್ಯಪ್ರವೇಶಿಸಬೇಕೆಂದು ನಾವು ಒತ್ತಾಯಿಸುತ್ತೇವೆ. 

 

ರಾಜ್ಯ ಸಮಿತಿ, 
ಸಿಪಿಐ(ಎಂಎಲ್) ಲಿಬರೇಶನ್