Lekha

ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದಿ-ಕಾರ್ಪೊರೇಟ್ ನೀತಿಗಳನ್ನು ತಿರಸ್ಕರಿಸಿದ ಜನರು ಬಹುಮತದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ವಿಜಯಗೊಳಿಸಿದರು.  ಕೇವಲ ಐದು ಭರವಸೆಗಳಿಗೆ ಪ್ರಾಮುಖ್ಯತೆ ನೀಡದೆ ಕರ್ನಾಟಕದ ಜನತೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನೆರವೇರಿಸಲು ಮತ್ತು ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಎತ್ತಿಹಿಡಿಯಲು, ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆವು. ಬಜೆಟ್ 2023-24ರಲ್ಲಿ ಹಲವಾರು ಪ್ರಶಂಸನೀಯ ಅಂಶಗಳು ಕಂಡುಬಂದಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಬಜೆಟಿನಲ್ಲಿ ಮತ್ತು ಹಲವು ಅಂಶಗಳ ಕುರಿತು ಗಮನ ನೀಡಬೇಕು ಎಂದು ಹೇಳಲು ಇಚ್ಛಿಸುತ್ತೇವೆ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಕಾಯ್ದೆ, 2020ರನ್ನು ರಾಜ್ಯ ಸರ್ಕಾರವು ರದ್ದುಗೊಳಿಸುವ ಘೋಷಣೆಯು ಸ್ವಾಗತಾರ್ಹವಾಗಿದೆ. ಆದರೆ ಬಿಜೆಪಿ ಸರ್ಕಾರವು ಹಲವಾರು ಕಾಯ್ದೆಗಳಿಗೆ ತಂಡ ತಿದ್ದುಪಡಿಗಳನ್ನೂ ಸಹ ರದ್ದುಗೊಳಿಸುವುದು ಅಗತ್ಯವಾಗಿದೆ. ಅದರಲ್ಲಿ ಕಾರ್ಖಾನೆ (ಕರ್ನಾಟಕ ತಿದ್ದುಪಡಿ) ಕಾಯ್ದೆ, 2023, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ, ಕಾಯ್ದೆ, 2020, ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ, 2021, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿ ಸಂರಕ್ಷಣಾ ಕಾಯ್ದೆ, 2022, ಕರ್ನಾಟಕ ಕೈಗಾರಿಕಾ (ಸೌಲಭ್ಯ) (ತಿದ್ದುಪಡಿ) ಕಾಯ್ದೆ, 2020 ಹಾಗೂ ನ್ಯಾಯಯುತ ಪರಿಹಾರ ಮತ್ತು ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನಃಸ್ಥಾಪನೆ  ಕಾಯ್ದೆ, 2019 (ಈ ಕಾಯ್ದೆಯಲ್ಲಿರುವ ಜನ ವಿರೋಧಿ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು). ಭೂರಹಿತ ಜನರ ವಿರುದ್ಧ "ಭೂ ಕಬಳಿಕೆ"ಯ ಆರೋಪದ ಮೇರೆಗೆ  ಪ್ರಕರಣಗಳನ್ನು ಹಿಂಪಡೆಯುವ ಕುರಿತು ಮತ್ತು ಅವರಿಗೆ ಪಟ್ಟಗಳನ್ನು ನೀಡಿ "ಊಳುವವನಿಗೆ ಭೂಮಿ" ನೀತಿಯನ್ನು ಜಾರಿಗೊಳಿಸುವ ಕುರಿತು ಈ ಬಜೆಟ್ ಮೌನ ವ್ಯಕ್ತಪಡಿಸಿದೆ.

ಕೃಷಿ ಬಿಕ್ಕಟ್ಟಿನಿಂದ ಹೆಚ್ಚಾಗುತ್ತಿರುವ ರೈತ ಆತ್ಮಹತ್ಯೆಗಳು ಮತ್ತು ವಲಸೆಯು, ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿಹೆಚ್ಚಾಗಿದ್ದು, ಈ ಕುರಿತು ರಾಜ್ಯ ಸರ್ಕಾರವು ಕ್ರಮ ವಹಿಸಬೇಕಿದ್ದು ಉದ್ಯೋಗ ಖಾತ್ರಿ ಯೋಜನೆಗೆ ಮತ್ತಷ್ಟು ಬಜೆಟನ್ನು ಒದಗಿಸಬೇಕಿತ್ತು.

ಈ ಸಾಲಿನ ಬಜೆಟ್ ರಾಜ್ಯಾದ್ಯಂತ ಕಾರ್ಮಿಕರ ಉಳಿಯುವಿಕೆಯ ಬಿಕ್ಕಟ್ಟಿನ್ನು ಗುರುತಿಸಿದ್ದರೂ ಸಹ, ಕಾರ್ಮಿಕರು ಅನುಭವಿಸುತ್ತಿರುವ ಕೆಲಸದ ಮತ್ತು ವೇತನ ಅಭದ್ರತೆಯ ಬಗ್ಗೆ ಮೌನವಾಗಿದೆ. ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಇದರೊಂದಿಗೆ ಅಭದ್ರ ಉದ್ಯೋಗಗಳು ವ್ಯಾಪಕವಾಗಿದೆ. ಅದರಲ್ಲೂ ಗುತ್ತಿಗೆ ಕಾರ್ಮಿಕರು, ಗಿಗ್ ವರ್ಕರ್ಸ್, ಹಾಗು ಇತರೆ ನೂತನ ಸ್ವರೂಪಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಭದ್ರತೆ ಮತ್ತು ಉತ್ತಮ ಕೆಲಸದ ವಾತಾವರಣವನ್ನು ಒದಗಿಸಬೇಕು.

ಗುತ್ತಿಗೆ ಪದ್ಧತಿಯು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂಬ ನಮ್ಮ ಹಕ್ಕೊತ್ತಾಯವನ್ನು ನಾವು ಪುನರುಚ್ಚರಿಸುತ್ತೇವೆ. ಮೊದಲನೇ ಹೆಜ್ಜೆಯಾಗಿ ಎಲ್ಲಾ ಸರ್ಕಾರೀ ಇಲಾಖೆಗಳಲ್ಲಿ, ಕಂಪೆನಿಗಳಲ್ಲಿ ಮತ್ತು ಏಜೆನ್ಸಿಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಹಾಗೆಯೇ, ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ಕಾನೂನು ತಿದ್ದುಪಡಿಗಳನ್ನು ಹಿಂಪಡೆಯುವ ಕುರಿತು ಯಾವುದೇ ಉಲ್ಲೇಖ ಬಜೆಟಿನಲ್ಲಿ ಇರುವುದಿಲ್ಲ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತ್ಯೇಕವಾಗಿ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ರಸ್ತೆ ಗುಡಿಸುವ, ವಾಹನ ಚಾಲಕರ ಮತ್ತು ಸಹಾಯಕರನ್ನು ಖಾಯಮಾತಿ ಮಾಡುವ ಕುರಿತು ಉಲ್ಲೇಖವಿದ್ದರೂ ಸಹ, ಇದರ ಕುರಿತು ಬಜೆಟಿನಲ್ಲಿ ಯಾವುದೇ ಕ್ರಮವಹಿಸಿರುವುದಿಲ್ಲ. ಇದನ್ನು ಬಿಟ್ಟು, ಸಂವಿಧಾನಬಾಹಿರವಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮ ನಿಯಮಿತ (BSWMCL)ಗೆ ರೂ. 1000 ಕೋಟಿ ಮಂಜೂರಾತಿ ಮಾಡಲಾಗಿದೆ. ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಇಲಾಖೆಗಳನ್ನು ಸಬಲೀಕರಣಗೊಳಿಸಬಹುದಿತ್ತು.

ಗಿಗ್ ವರ್ಕರ್ಸ್ ಗೆ ವಿಮಾ ಯೋಜನೆ ನೀಡುವುದಲ್ಲದೆ ಅವರನ್ನು ಕಾರ್ಮಿಕರೆಂದು ಗುರುತಿಸಬೇಕು ಮತ್ತು ಕೆಲಸದ ಹಾಗೂ ವೇತನ ಭದ್ರತೆಯನ್ನು ಒದಗಿಸಬೇಕು.

"ಬ್ರಾಂಡ್ ಬೆಂಗಳೂರು" ಪ್ರತೀಕವನ್ನು ಎತ್ತಿಹಿಡಿಯಲು ಸಂಚಾರ ನಿಯಂತ್ರಣ, ಪರಿಸರ, ಇತ್ಯಾದಿಗಳನ್ನು ಒಳಗೊಂಡಂತೆ ನಗರದಲ್ಲಿ 9 ಸಮಸ್ಯೆಗಳ ಕುರಿತು ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಬಜೆಟನ್ನು ರೂಪಿಸಲಾಗಿದೆ. ಆದರೆ ನಗರದೊಳಗೆ ಎದ್ದುಕಾಣುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಕುರಿತು ಯಾವುದೇ ರೀತಿಯ ಯೋಜನೆಯನ್ನು ರೂಪಿಸಿರುವುದಿಲ್ಲ.

ಬಜೆಟಿನಲ್ಲಿ ಲಿಂಗ ಸಮಾನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ, ಶಕ್ತಿ ಮತ್ತು ಗೃಹಲಕ್ಷ್ಮಿಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರೂ ಸಹ, ಮಹಿಳಾ ಕಾರ್ಮಿಕರ ಸಂರಕ್ಷಣೆಗಾಗಿ, ಅದರಲ್ಲೂ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕರ್ತೆಯರು, ಆಸ್ಪತ್ರೆ ಕಾರ್ಮಿಕರು, ಮತ್ತು ಇತರೆ ಸರ್ಕಾರೀ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಹೌಸ್ ಕೀಪಿಂಗ್ ಕಾರ್ಮಿಕರ ಕುರಿತು ಸುರಕ್ಶಿತ ಅಥವಾ ನ್ಯಾಯಯುತ ಕೆಲಸದ ವಾತಾವರಣದ ಕುರಿತು ಅಥವಾ ಖಾಯಮಾತಿ ಕುರಿತು ನಮೂದಿಸದಿರುವುದು ವಿಷಾಧನೀಯ.

ನೂತನ ಶಿಕ್ಷಣ ನೀತಿ, 2020ರನ್ನು ಮತ್ತು ಪಠ್ಯಕ್ರಮಗಳ ತಿದ್ದುಪಡಿಗಳನ್ನು ಹಿಂಪಡೆಯಲು ಹಾಗೂ ರಾಜ್ಯಕ್ಕೆ ಹೊಸ ನೀತಿಯನ್ನು ಜಾರಿಗೊಳಿಸಲು ತೆಗೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗಸಿತ್ತೇವೆ. ಆದರೆ ಈ ಹೊಸ ನೀತಿಯು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕು, ವೈಜ್ಞಾನಿಕ ಚಿಂತನೆಯನ್ನು ಬೆಂಬಲಿಸಬೇಕು, ಸರ್ವರನ್ನೂ ಒಳಗೊಳ್ಳುವಂತಹ, ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಬೇಕು. ಶಾಲಾ-ಕಾಲೇಜುಗಳ ಪಠ್ಯಕ್ರಮವು ಕೋಮುಸೌಹಾರ್ದತೆ ಮತ್ತು ಮೂಲಭೂತ ಕರ್ತವ್ಯಗಳನ್ನು ಉತ್ತೇಜಿಸಬೇಕು. ಸಮವಸ್ತ್ರವನ್ನು ನಿಯಂತ್ರಿಸುವ ನೆಪದಲ್ಲಿ ಹಿಜಾಬ್ ನಿಷೇಧವನ್ನು ಒಡ್ಡಿದ್ದ ನಿರ್ಧಾರವನ್ನು ಹಿಂಪಡೆಯಬೇಕು. ಹಿಜಾಬ್ ನಿಷೇಧದ ಕಾರಣ ಹಲವಾರು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಕಳೆದುಕೊಂಡವರನ್ನು ಮತ್ತೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಬೇಕು.

ಆದಿವಾಸಿಗಳ ಕುರಿತು ಕೆಲವು ಯೋಜನೆಗಳನ್ನು ಬಜೆಟಿನಲ್ಲಿ ಮಂಡನೆ ಮಾಡಿದ್ದು, ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನದ ಕುರಿತು ಮತ್ತು ಆದಿವಾಸಿಗಳನ್ನು ವಾನಪ್ರದೇಶಗಳಿಂದ ಒಕ್ಕಲೆಬ್ಬಿಸುತ್ತಿರುವುದನ್ನು ತಡೆಗಟ್ಟಲು ಯಾವುದೇ ರೀತಿಯ ಕ್ರಮವನ್ನು ಜರುಗಿಸಿರುವುದಿಲ್ಲ. ಆದಿವಾಸಿ ಸಮುದಾಯದವರಿಗೆ ವಸತಿಯನ್ನು ಕಲ್ಪಿಸುವುದಲ್ಲದೆ ಅವರಿಗೆ ಭೂಮಿ ಮಂಜೂರಾತಿಯನ್ನು ಮಾಡಬೇಕೆಂಬ ನಮ್ಮ ಹಕ್ಕೊತ್ತಾಯವನ್ನು ಪುನರುಚ್ಚರಿಸುತ್ತೇವೆ.

SCSP/TSP ಕಾಯ್ದೆ, 2013ರ ಕಲಂ 7D ರದ್ದತಿಯನ್ನು ಘೋಷಿಸಿರುವುದು ಸ್ವಾಗತಾರ್ಹ ಮತ್ತು SCSP/TSP ಯೋಜನೆಯಡಿ ಅನುದಾನವನ್ನು ಮಂಜೂರು ಮಾಡಿರುವುದು ದಲಿತ ಮತ್ತು ಆದಿವಾಸಿ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ಪ್ರಮುಖವಾಗಿದೆ. ಕರ್ನಾಟಕ ಪರಿಶಿಷ್ಠ ಜಾತಿ ಮತ್ತು ಪಂಗಡದ (ಭೂಮಿ ಹಸ್ತಾಂತರ ನಿಷೇಧ) ಕಾಯ್ದೆ, 1978ಗೆ ಸಮಯೋಚಿತವಾಗಿ ತಿದ್ದುಪಡಿಗಳನ್ನು ತರುವ ಸೂಚನೆಯನ್ನು ಬಜೆಟಿನಲ್ಲಿ ನೀಡಲಾಗಿದೆ. ಈ ತಿದ್ದುಪಡಿಗಳಲ್ಲಿ ಹಸ್ತಾಂತರವಾದ ಜಮೀನುಗಳನ್ನು ಅನುದಾನಿತರಿಗೆ ಒಡೆತನ ನೀಡುವುದು, ಮತ್ತು ಅನುದಾನಿತರ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮಾಡಬೇಕು. ರಾಜ್ಯದಲ್ಲಿ ಜಾತಿ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಜಾತಿ ದೌರ್ಜನ್ಯ ತಡೆಗಟ್ಟುವ ಕಾಯ್ದೆಯಾ ಕಟ್ಟುನಿಟ್ಟಾದ ಅನುಷ್ಠಾನ ಮತ್ತು ವಿಶೇಷ ಅಧಿವೇಶನ ನಡೆಸಿ ಜಾತಿ ವಿನಾಶ ಮತ್ತು ಜಾತಿ ದೌರ್ಜನ್ಯವನ್ನು ಮುಂಗಟ್ಟುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು.

ಧಾರ್ಮಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕ್ರೈಸ್ತರಿಗೆ ಪ್ರತ್ಯೇಕ ಮಂಡಳಿಯನ್ನು ನಿರ್ಮಿಸುವ ಕುರಿತು ಘೋಷಣೆಯನ್ನು ಬಜೆಟಿನಲ್ಲಿ ಮಾಡಲಾಗಿದೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಹೀಗಿದ್ದರೂ ಸಹ ದ್ವೇಷ ಪ್ರೇರಿತ ಅಪರಾಧಗಳು ಮತ್ತು ಸುಳ್ಳು ಸುದ್ದಿಗಳ ಹಬ್ಬುವಿಕೆಯ ಕಾರಣ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲು ಬಜೆಟಿನಲ್ಲಿ ಯಾವುದೇ ನಮೂದನೆ ಕಂಡುಬರದಿರುವುದು ವಿಷಾಧನೀಯ. ಮುಸಲ್ಮಾನರ 2B ಮೀಸಲಾತಿಯನ್ನು ಮರುಸ್ಥಾಪಿಸುವ ಕುರಿತು ಸಹ ಯಾವುದೇ ಮಂಡನೆ ಇರುವುದಿಲ್ಲ.

ರಾಜ್ಯದ ಜನತೆಗೆ ವಸತಿ ಕಲ್ಪಿಸುವುದು ಅಗತ್ಯ ಎಂದು ಬಜೆಟಿನಲ್ಲಿ ಗುರುತಿಸಿದ್ದರೂ ಸಹ, ಸಾರ್ವಜನಿಕ ವಸತಿ ಯೋಜನೆಗಳನ್ನು ಕಲ್ಪಿಸುವುದರೊಂದಿಗೆ ನಗರ ಪ್ರದೇಶಗಳಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ 'ಶೂನ್ಯ ಒಕ್ಕಲೆಬ್ಬಿಸುವಿಕೆ' ನೀತಿಯನ್ನು ಅಳವಡಿಸಲು ಕ್ರಮವಹಿಸಬೇಕು.

ಅಪೌಷ್ಟಿಕತೆಯನ್ನು ನೆರವೇರಿಸಲು 9 ಮತ್ತು 10ನೇ ತರಗತಿ ಮಕ್ಕಳಿಗೂ ವಾರಕ್ಕೆ ಎರಡು ಬಾರಿ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ಅಂತಹ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರವು ಮುಂದಾಗಿರುವುದು ಶ್ಲಾಘನಾರ್ಹ. ಶಾಲೆಗಳು ರಜೆಯಲ್ಲಿರುವಾಗಲೂ ಪೌಷ್ಟಿಕ ಆಹಾರವನ್ನು ಒದಗಿಸಬೇಕು ಮತ್ತು ನ್ಯಾಯಾಧೀಶ ಎನ್.ಕೆ. ಪಾಟೀಲ್ ಸಮಿತಿ ಮತ್ತು ನ್ಯಾಯಾಧೀಶ ವೇಣುಗೋಪಾಲ್ ಗೌಡ ಸಮಿತಿಗಳ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು.    

ಈ ಮೇಲ್ಕಂಡ ಕ್ರಮಗಳನ್ನು ಜರುಗಿಸಿ ಕರ್ನಾಟಕ ಜನತೆಯು ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಅನ್ಯಾಯಗಳನ್ನು ಪರಿಹರಿಸಬೇಕೆಂದು ನಾವು ಒತ್ತಾಯಿಸುತ್ತೇವೆ.