ಸಾರಾಂಶ ಮತ್ತು ಅನುವಾದ: ಪಿ.ಆರ್.ಎಸ್ ಮಣಿ
1913 ರಲ್ಲಿ, ಕಾರ್ಲ್ ಮಾರ್ಕ್ಸ್ ನ 30 ನೇ ಮರಣ ವಾರ್ಷಿಕೋತ್ಸವ ಸಂದರ್ಭದಲ್ಲಿ, ಲೆನಿನ್ "ಮಾರ್ಕ್ಸ್ ವಾದದ ಮೂರು ಮೂಲಗಳು ಮತ್ತು ಮೂರು ಭಾಗಗಳು" ಎಂಬ ಲೇಖನವನ್ನು ಬರೆದರು. ಮಾರ್ಕ್ಸ್‌ವಾದದ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಲು ಲೇಖನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ತತ್ವಶಾಸ್ತ್ರ, ರಾಜಕೀಯ ಆರ್ಥಿಕತೆ ಮತ್ತು ಸಮಾಜವಾದದ ಕುರಿತು ಅತ್ಯುತ್ತಮ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಿದ ನಂತರ ಮಾರ್ಕ್ಸ್ ತನ್ನ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಹತ್ತೊಂಬತ್ತನೆಯ ಶತಮಾನದಲ್ಲಿ ಅತ್ಯಂತ ಮುಂದುವರಿದ ತತ್ವಶಾಸ್ತ್ರ ಜರ್ಮನ್ ತತ್ವಶಾಸ್ತ್ರವಾಗಿತ್ತು. ಕೈಗಾರಿಕಾ ಕ್ರಾಂತಿಯು ನಡೆಯುತ್ತಿರುವಾಗ, ಇಂಗ್ಲೆಂಡ್ ರಾಜಕೀಯ ಆರ್ಥಿಕತೆಯನ್ನು ಅಧ್ಯಯನ ಮಾಡುವ ಸ್ಥಳವಾಗಿತ್ತು. ಅಂತೆಯೇ, ಫ್ರಾನ್ಸ್ ವರ್ಗ ಹೋರಾಟಗಳ ಕೇಂದ್ರವಾಗಿತ್ತು ಮತ್ತು ಆದ್ದರಿಂದ ಸಮಾಜವಾದಿ ಪ್ರಯೋಗಗಳಲ್ಲಿ ಪಾಠಗಳನ್ನು ನೀಡುವ ಸ್ಥಳವಾಯಿತು. ಮಾರ್ಕ್ಸ್ ಮತ್ತು ಏಂಗಲ್ಸ್ ಅವರು ಹತ್ತೊಂಬತ್ತನೆಯ ಶತಮಾನದಲ್ಲಿ ಜರ್ಮನ್ ತತ್ವಶಾಸ್ತ್ರ, ಇಂಗ್ಲಿಷ್ ರಾಜಕೀಯ ಆರ್ಥಿಕತೆ ಮತ್ತು ಫ್ರೆಂಚ್ ಸಮಾಜವಾದದಿಂದ ಪ್ರತಿನಿಧಿಸಲ್ಪಟ್ಟ ಅತ್ಯುತ್ತಮವಾದ ಉತ್ತರಾಧಿಕಾರಿಯಾಗಿ ಮಾರ್ಕ್ಸ್‌ವಾದವನ್ನು ಅಭಿವೃದ್ಧಿಪಡಿಸಿದರು.
ಈ ಸರಣಿಯ ಈ ಮೊದಲ ಭಾಗದಲ್ಲಿ, ನಾವು ಮಾರ್ಕ್ಸ್‌ವಾದದ ತತ್ತ್ವವನ್ನು ಪರಿಶೀಲಿಸೋಣ.
ಮಾರ್ಕ್ಸ್‌ವಾದದ ತತ್ವಶಾಸ್ತ್ರವೆಂದರೆ ಭೌತವಾದ. ಇದು ಆದರ್ಶವಾದಕ್ಕೆ ವಿರುದ್ಧವಾಗಿದೆ. ಆದರ್ಶವಾದವನ್ನು ಹೆಗೆಲ್ ಸೇರಿದಂತೆ ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದರು. ಆದರ್ಶವಾದದ ಪ್ರಕಾರ, ಮನಸ್ಸು (ಪ್ರಜ್ಞೆ) ಭೌತಿಕ ಪ್ರಪಂಚದ "ಮೂಲ". ಭೌತಿಕ ಜಗತ್ತನ್ನು ನಮ್ಮ ಮನಸ್ಸು ಹೇಗೆ ಗ್ರಹಿಸುತ್ತದೆ ಎಂಬುದರ ಆಧಾರದ ಮೇಲೆ ವಸ್ತು ಪ್ರಪಂಚವು ಅಸ್ತಿತ್ವದಲ್ಲಿದೆ ಎಂದು ಅದು ಹೇಳುತ್ತದೆ. ಆದರ್ಶವಾದವು ನಮ್ಮ ನಂಬಿಕೆಗಳು ಮತ್ತು ಮೌಲ್ಯಗಳು ನಮ್ಮ ಸುತ್ತ ಏನಾಗುತ್ತಿದೆ ಎಂಬುದನ್ನು ರೂಪಿಸುತ್ತದೆ ಎಂದು ಹೇಳುತ್ತದೆ. ನಂಬಿಕೆಗಳು ನಮ್ಮನ್ನು ಮೊಢನಂಬಿಕೆಗಳತ್ತ ಮತ್ತು ಧರ್ಮಗಳ ವ್ಯವಸ್ಥೆಗೆ ಕರೆದೊಯ್ಯುತ್ತವೆ.
ಒಂದು ನಿರ್ದಿಷ್ಟ ಧರ್ಮವು ನಿಜವಾಗಿಯೂ ಅಸ್ತಿತ್ವದಲ್ಲಿರುವುದೆಲ್ಲವೂ ದೇವರು ಮತ್ತು ದೇವರ ಕಲ್ಪನೆಗಳು ಎಂದು ಕಲಿಸುತ್ತದೆ. ಇನ್ನೊಂದು ನಿರ್ದಿಷ್ಟ ಧರ್ಮದಲ್ಲಿ, ದೇವರು ನಿಖರವಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಜನಿಸಿದನೆಂದು ಜನರು ನಂಬುತ್ತಾರೆ ಮತ್ತು ಆದ್ದರಿಂದ ಇದು ನಿಜವಾಗಿದೆ ಎಂದು ಕಲಿಸುತ್ತದೆ. ಆದರ್ಶವಾದವು ವಸ್ತುಗಳ ಬಗ್ಗೆ ಒಬ್ಬರು ಏನು ಯೋಚಿಸುತ್ತಾರೆ ಎಂಬುದರ ಮೇಲೆ ಆಧಾರಿತವಾಗಿರುವುದರಿಂದ, ಅದಕ್ಕೆ ಯಾವುದೇ ಸಾಕ್ಷ್ಯದ ಅಗತ್ಯವಿಲ್ಲ. ಪ್ರಾಚೀನ ಚೀನೀ ತತ್ವಶಾಸ್ತ್ರದ ಪ್ರಕಾರ, ನೈಜ ಪ್ರಪಂಚವು ಮನಸ್ಸನ್ನು (ಪ್ರಜ್ಞೆಯನ್ನು) ರೂಪಿಸುವುದಿಲ್ಲ ಆದರೆ ಮನಸ್ಸು(ಪ್ರಜ್ಞೆ) ಜಗತ್ತಿಗೆ ತರ್ಕವನ್ನು ನೀಡುತ್ತದೆ.
ಪ್ರಾಯೋಗಿಕ ಅರ್ಥದಲ್ಲಿ, ಕೆಲವು ಜನರು, 'ಗ್ರಹಿಕೆ ವಾಸ್ತವ' ಎಂದು ಹೇಳುತ್ತಾರೆ. ನಿರ್ದಿಷ್ಟ ಧರ್ಮಕ್ಕೆ ಸೇರಿದ ಜನರು ಇನ್ನೊಂದು ಧರ್ಮಕ್ಕೆ ಸೇರಿದ ಜನರ ಬಗ್ಗೆ ಕೆಲವು ಗ್ರಹಿಕೆಯನ್ನು ಹೊಂದಿರಬಹುದು; ಮತ್ತು ಅವರು ತಮ್ಮ ಗ್ರಹಿಕೆಯನ್ನು ನಿಜವೆಂದು ನಂಬುತ್ತಾರೆ.
ಕೆಲವು ಪ್ರೇರಕ ಸಿದ್ಧಾಂತಗಳು ನೀವು ಅಂದುಕೊಂಡಂತೆ ಆಗಬಹುದು ಎಂದು ಹೇಳುತ್ತದೆ. ಅವರು ವ್ಯಕ್ತಿಯ ಸಾಮಾಜಿಕ-ಆರ್ಥಿಕ ಹಿನ್ನೆಲೆ, ಲಭ್ಯವಿರುವ ಅವಕಾಶಗಳು, ಲಭ್ಯವಿರುವ ಸಂಪನ್ಮೂಲಗಳು ಮತ್ತು ವ್ಯಕ್ತಿಯ ಸಾಮರ್ಥ್ಯದ ಬಗ್ಗೆ ಮಾತನಾಡುವುದಿಲ್ಲ. ಆದರ್ಶವಾದವನ್ನು ಎತ್ತಿಹಿಡಿಯುವ ಜನರು, ಸುನಾಮಿ ಅಥವಾ ಭೂಕಂಪದಂತಹ ನೈಸರ್ಗಿಕ ವಿಪತ್ತುಗಳನ್ನು ದೇವರ ಕೃತ್ಯಗಳಂತೆ ನೋಡುತ್ತಾರೆ. ಈ ವಿಪತ್ತುಗಳನ್ನು ಊಹಿಸುವಲ್ಲಿ ವಿಜ್ಞಾನದ ಪ್ರಗತಿಯನ್ನು ಮತ್ತು ಈ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಮಾನವ ಸಾಮರ್ಥ್ಯವನ್ನು ಅವರು ಪ್ರಶಂಸಿಸುವುದಿಲ್ಲ.
ಭೌತವಾದಿ ತತ್ವಶಾಸ್ತ್ರವು ಮೂಡನಂಬಿಕೆಗಳು, ಮಧ್ಯಕಾಲೀನ ನಂಬಿಕೆಗಳು ಮತ್ತು ಧರ್ಮವನ್ನು ಬೆಂಬಲಿಸುವ ವಿಚಾರಗಳ ವಿರುದ್ಧದ ಹೋರಾಟದಿಂದ ಹುಟ್ಟಿತು. ಭೌತವಾದಿ ತತ್ವಶಾಸ್ತ್ರವು ನೈಸರ್ಗಿಕ ವಿಜ್ಞಾನದಲ್ಲಿ ಇತ್ತೀಚಿನ ಸಂಶೋಧನೆಗಳನ್ನು ಆಧರಿಸಿದೆ. ಮಾರ್ಕ್ಸ್ ಮತ್ತು ಎಂಗಲ್ಸ್ ಭೌತವಾದಿ ತತ್ತ್ವಶಾಸ್ತ್ರವನ್ನು ಅಳವಡಿಸಿಕೊಳ್ಳಲು ಇನ್ನೊಬ್ಬ ಜರ್ಮನ್ ತತ್ವಜ್ಞಾನಿ ಲುಡ್ವಿಗ್ ಫ್ಯೂರ್‌ಬಾಕ್ ಅನ್ನು ಅಧ್ಯಯನ ಮಾಡಿದರು.
ದ್ವಂದ್ವಮಾನದ ನಿಯಮಗಳನ್ನು ಮೂಲತಃ ಹೆಗೆಲ್ ಆದರ್ಶವಾದಿ ಶೈಲಿಯಲ್ಲಿ ಕೇವಲ ಚಿಂತನೆಯ ನಿಯಮಗಳಂತೆ ಕಲ್ಪಿಸಿದ್ದರು. ಆದರೆ ಮಾರ್ಕ್ಸ್ ಮತ್ತು ಎಂಗೆಲ್ಸ್, ದ್ವಂದ್ವಮಾನವನ್ನು ಭೌತವಾದದ ತರ್ಕದ ಮೂಲಕ ಅಭಿವೃದ್ಧಿ ಪಡಿಸಿದರು. ದ್ವಂದ್ವಮಾನ ಎಂದರೇನು? ವಿಷಯಗಳನ್ನು ತಮ್ಮ ಚಲನೆಗಳು ಮತ್ತು ಬದಲಾವಣೆಗಳು, ಪರಸ್ಪರ ಸಂಬಂಧಗಳು ಮತ್ತು ಪರಸ್ಪರ ಕ್ರಿಯೆಗಳಲ್ಲಿ ದ್ವಂದ್ವಮಾನ ಪರಿಗಣಿಸುತ್ತದೆ. ದ್ವಂದ್ವಮಾನದ ಮೂರು ಪ್ರಮುಖ ನಿಯಮಗಳನ್ನು ಎಂಗಲ್ಸ್ ಚರ್ಚಿಸಿದ್ದಾರೆ: ನಿಯಮ1: ಪ್ರಮಾಣವು ಗುಣಮಟ್ಟವಾಗಿ ಬದಲಾಗುತ್ತದೆ ಮತ್ತು ಗುಣಮಟ್ಟವು ಪ್ರಮಾಣವಾಗಿ ಬದಲಾಗುತ್ತದೆ; ನಿಯಮ2: ಎದುರಾಳಿ ಅಂಶಗಳ ಅಂತರಪ್ರವೇಶ; ನಿಯಮ3: ನಿರಾಕರಣೆಯ ನಿರಾಕರಣೆ.
ಒಂದು ಉದಾಹರಣೆಯ ಮೂಲಕ ನಾವು ಮೊದಲ ನಿಯಮವನ್ನು ಅರ್ಥಮಾಡಿಕೊಳ್ಳಬಹುದು. ನಾವು ನೀರನ್ನು ಬಿಸಿ ಮಾಡಿದಾಗ, ಅದು 100 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಲುಪುವವರೆಗೆ ನೀರಾಗಿರುತ್ತದೆ. ಆ ಸಮಯದಲ್ಲಿ, ನೀರು ಹಬೆಯಾಗುತ್ತದೆ. ನಮ್ಮ ರಾಜಕೀಯ ಚಳುವಳಿಯಲ್ಲಿ ನಾವು ಕೆಲವೇ ಜನರನ್ನು ಹೊಂದಿರುವಾಗ ನಮ್ಮ ವ್ಯಾಪ್ತಿ ಸೀಮಿತವಾಗಿರುತ್ತದೆ. ನಾವು ನಿರ್ಣಾಯಕ ಜನಸಮೂಹವನ್ನು ಪಡೆದಾಗ, ನಮ್ಮ ರಾಜಕೀಯ ಶಕ್ತಿಯು ಬೇರೆ ಮಟ್ಟವನ್ನು ತಲುಪುತ್ತದೆ. ಅದೇ ರೀತಿ, ನಾವು ಕಡಿಮೆ ಒಡನಾಡಿಗಳನ್ನು ಹೊಂದಿದ್ದರೂ, ಅವರು ಉನ್ನತ ಮಟ್ಟದ ಗುಣಮಟ್ಟ, ಬದ್ಧತೆ ಮತ್ತು ಸಾಮರ್ಥ್ಯ ಹೊಂದಿದ್ದರೆ ಅಂತಹ ತಂಡವು ಹೆಚ್ಚಿನ ಸಂಖ್ಯೆಯ ರಾಜಕೀಯ ಶಕ್ತಿಗಳನ್ನು ಆಕರ್ಷಿಸುತ್ತದೆ.
ದ್ವಂದ್ವಮಾನದ ಎರಡನೇ ನಿಯಮವನ್ನು ಅರ್ಥಮಾಡಿಕೊಳ್ಳಲು, ನಾವು ವಸ್ತು ಮತ್ತು ಚಲನೆಯನ್ನು ಅರ್ಥಮಾಡಿಕೊಳ್ಳಬೇಕು. ದ್ವಂದ್ವಮಾನದ ಪ್ರಕಾರ ಎಲ್ಲವೂ ಚಲನೆಯಲ್ಲಿದೆ. ಜೀವಕೋಶಗಳು, ಸಸ್ಯಗಳು, ಮರಳು, ಕಲ್ಲುಗಳು, ಮನುಷ್ಯರು ಸೇರಿದಂತೆ ಜೀವಿಗಳು ನಿರಂತರ ಚಲನೆಯಲ್ಲಿವೆ. ನಮ್ಮ ದೇಹದಲ್ಲಿನ ಕೋಶಗಳು ನಿರಂತರವಾಗಿ ತಮ್ಮನ್ನು ನವೀಕರಿಸಿಕೊಳ್ಳುತ್ತವೆ. ನಾವು ಹೊಸ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಬೌದ್ಧಿಕವಾಗಿ ಬೆಳೆಯುತ್ತೇವೆ. ಸೌರಮಂಡಲದಲ್ಲಿ, ಸೂರ್ಯ ಮತ್ತು ಗ್ರಹಗಳು ಏಕಕಾಲದಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಯ ಬಲಗಳಿಂದಾಗಿ ಸ್ಥಿರವಾಗಿರುತ್ತವೆ.
ನಿರಾಕರಣೆಯ ನಿರಾಕರಣೆಯನ್ನು ಪ್ರಾಥಮಿಕವಾಗಿ ನೈಸರ್ಗಿಕ ವಿಜ್ಞಾನದ ಭಾಗವಾಗಿ ಚರ್ಚಿಸಲಾಗಿದೆ. ವಸ್ತುಗಳ ಅಭಿವೃದ್ಧಿಯು ಮೂರು ಹಂತಗಳಲ್ಲಿ ನಡೆಯುತ್ತದೆ: ವಸ್ತುವಿನ ಮೂಲ ಸ್ಥಿತಿ, ಅದರ ವಿರುದ್ಧದ ರೂಪಾಂತರ, ಮತ್ತು ಅದರ ವಿರುದ್ಧವಾಗಿ ಅದರ ವಿರುದ್ಧದ ರೂಪಾಂತರ. ಹಳೆಯದನ್ನು ನಿರಾಕರಿಸದಿದ್ದರೆ, ಹೊಸದರ ಜನನ ಮತ್ತು ಪಕ್ವತೆ ಅಸಾಧ್ಯ. ಯಾಂತ್ರಿಕ ಶಕ್ತಿಯು ಪರಿವರ್ತಿತ ಶಾಖ ಶಕ್ತಿಯನ್ನು ಪಡೆಯುತ್ತದೆ. ಆಟೋಮೊಬೈಲ್‌ಗಳಲ್ಲಿ ಬಳಸುವ ಎಂಜಿನ್‌ಗಳಲ್ಲಿ, ಶಾಖದ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ, ಚುನಾವಣಾ ಭಾಗವಹಿಸುವಿಕೆ, ಬಹಿಷ್ಕಾರ ಮತ್ತು ನಂತರ ಭಾಗವಹಿಸುವಿಕೆ ಒಂದು ಉದಾಹರಣೆಯಾಗಬಹುದು.
ಮಾರ್ಕ್ಸ್‌ನ ಐತಿಹಾಸಿಕ ಭೌತವಾದವು ವೈಜ್ಞಾನಿಕ ಚಿಂತನೆಯಲ್ಲಿ ಒಂದು ದೊಡ್ಡ ಸಾಧನೆಯಾಗಿದೆ. ಸಾಮಾನ್ಯವಾಗಿ ನಾವು ಇತಿಹಾಸದ ಬಗ್ಗೆ ಮಾತನಾಡುವಾಗ, ರಾಜರ ಆಳ್ವಿಕೆ ಮತ್ತು ದೇಶಗಳ ನಡುವಿನ ಯುದ್ಧಗಳ ಬಗ್ಗೆ ಮಾತನಾಡುತ್ತೇವೆ. ಐತಿಹಾಸಿಕ ಭೌತವಾದದ ಮೂಲಕ, ಮಾರ್ಕ್ಸ್ ನಮಗೆ ಇತಿಹಾಸವನ್ನು ವರ್ಗ ಹೋರಾಟಗಳ ಇತಿಹಾಸವಾಗಿ ನೋಡಲು ಕಲಿಸಿದರು. ಮಾರ್ಕ್ಸ್ ನಮಗೆ ಇತಿಹಾಸವನ್ನು ಊಳಿಗಮಾನ್ಯ ಪದ್ಧತಿಯಿಂದ ಬಂಡವಾಳಶಾಹಿ ಪದ್ಧತಿ ಮತ್ತು ಗುಲಾಮ ಸಮಾಜದಿಂದ ಊಳಿಗಮಾನ್ಯ ಪದ್ಧತಿಯ ಬೆಳವಣಿಗೆ ಎಂದು ನೋಡಲು ಕಲಿಸಿದರು.
ಮನುಷ್ಯನ ಜ್ಞಾನವು ಪ್ರಕೃತಿಯನ್ನು ಪ್ರತಿಬಿಂಬಿಸುತ್ತದೆ. ಮನುಷ್ಯನ ಸಾಮಾಜಿಕ ಜ್ಞಾನವು ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಮಾರ್ಕ್ಸ್ ವಾದಿ ತತ್ವಶಾಸ್ತ್ರವು ಕಾರ್ಮಿಕ ವರ್ಗಕ್ಕೆ ತಮ್ಮನ್ನು ತಾವೇ ಸಬಲೀಕರಣಗೊಳಿಸಲು ಶಕ್ತಿಯುತವಾದ ಜ್ಞಾನದ ಸಾಧನಗಳನ್ನು ಒದಗಿಸಿದೆ.