Lekha

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಹೊರಬಂದಿದ್ದು, ಕೋವಿದ್ 19 ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಸೃಷ್ಟಿಸಿರುವ ಭೀಕರ ನೋವು ಸಂಕಟಗಳ ನಡುವೆಯೇ ಫಲಿತಾಂಶಗಳೂ ಪ್ರಕಟವಾಗಿವೆ.

 ಪಶ್ಚಿಮ ಬಂಗಾಲದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಿದ್ದು ಚಾರಿತ್ರಿಕ ಫ್ಯಾಸಿಸ್ಟ್ ವಿರೋಧಿ ತೀರ್ಪಿನ ಮೂಲಕ ಜನತೆ ಬಿಜೆಪಿಯ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. 2021ರ ಕರೆ (ಎಕುಶೇರ್ ದಾಕ್) ಮತ್ತು ಬಿಜೆಪಿಗೆ ಮತ ನೀಡುವುದಿಲ್ಲ ಎನ್ನುವ ಪ್ರಜೆಗಳ ಪ್ರಚಾರಾಂದೋಲನಗಳು ಫಲಕಾರಿಯಾಗಿದ್ದು ರೈತರ ಮುಷ್ಕರವೂ ಸಹ ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಿದೆ. ಈ ಜಾಗೃತಿಯ ಮೂಲಕವೇ ಬಿಜೆಪಿ ಮತ್ತು ಮೋದಿ ಸರ್ಕಾರದಿಂದ ಉಂ ಟಾಗುವ ಅಪಾಯಗಳನ್ನು ಜನತೆಗೆ  ಮನದಟ್ಟು ಮಾಡಲಾಗಿದ್ದು ಈ ಚಾರಿತ್ರಿಕ ಫಲಿತಾಂಶಕ್ಕೆ ಕಾರಣವಾಗಿದೆ.  ಮೋದಿ ಸರ್ಕಾರದ ಪೂರ್ಣ ಪ್ರಭಾವ, ಬಿಜೆಪಿಯ ಎಲ್ಲ ಉನ್ನತ ಮಟ್ಟದ ನಾಯಕರು ಮತ್ತು ಚುನಾವಣಾ ಆಯೋಗವನ್ನೂಸೇರಿದಂತೆ ಹಲವು ಸಾಂವಿಧಾನಿಕ ಸಂಸ್ಥೆಗಳ ಪಕ್ಷಪಾತ ಧೋರಣೆ, ಬಿಜೆಪಿಯಿಂದ ಇಸ್ಲಾಂ ಭೀತಿಯನ್ನು ಸೃಷ್ಟಿಸುವಂತಹ ಪ್ರಚೋದನಕಾರಿ ಭಾಷಣಗಳು ಇದಾವುದೂ ಬಿಜೆಪಿಗೆ ನೆರವಾಗಿಲ್ಲ. ಈ ಹಿನ್ನೆಲೆಯಲ್ಲಿ ಜಯಶಾಲಿಯಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಪಶ್ಚಿಮಬಂಗಾಲದಲ್ಲಿ ಬಿಜೆಪಿ ಏಕೈಕ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.  ಇದನ್ನುಸರಿಪಡಿಸುವುದು ನಮ್ಮ ತುರ್ತು. ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಂದುಗೂಡಿಸಿ ಪಶ್ಚಿಮ ಬಂಗಾಲದಲ್ಲಿ ಎಡರಂಗದ ಪುನಶ್ಚೇತನಕ್ಕಾಗಿ ಶ್ರಮಿಸಬೇಕಿದೆ.

ಕೇರಳದಲ್ಲಿ ಎಡರಂಗ ಪುನರಾಯ್ಕೆಯಾಗಿದ್ದು ನಿರ್ಣಾಯಕ ಫಲಿತಾಂಶದ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಇದು ಕೇಂದ್ರ ಸರ್ಕಾರದ ಬೇಜವಾಬ್ದಾರಿಯುತ ಅಸಮರ್ಪಕ ಆಡಳಿತಕ್ಕೆ ವ್ಯತಿರಿಕ್ತವಾಗಿ ಕಳೆದ ವರ್ಷದ ಕೋವಿದ್ 19 ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಿಸಿದ ಸರ್ಕಾರಕ್ಕೆ ಜನತೆ ನೀಡಿದ  ಸಕಾರಾತ್ಮಕ ಸ್ಪಂದನೆಯಾಗಿದೆ. ಈ ಗೆಲುವಿಗಾಗಿ ನಾವು ಸಿಪಿಐಎಂ ಮತ್ತು ಎಡರಂಗವನ್ನು ಅಭಿನಂದಿಸುತ್ತೇವೆ.

ಬಿಜೆಪಿಯ ನೆರಳಿನಲ್ಲೇ ಆಡಳಿತ ನಡೆಸುತ್ತಿದ್ದ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವನ್ನು ಪದಚ್ಯುತ ಗೊಳಿಸುವ ಮೂಲಕ ತಮಿಳುನಾಡಿನ ಜನತೆ ಡಿಎಂಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ, ಎಐಎಡಿಎಂಕೆ ದುರಾಡಳಿತಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಆದಾಗ್ಯೂ ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿ ಒಂದು ನೆಲೆ ಕಂಡುಕೊಳ್ಳುವ ಸೂಚನೆಗಳನ್ನು ಕಾಣಬಹುದಾಗಿದೆ. ಎರಡು ಕ್ಷೇತ್ರಗಳಲ್ಲಿ ಜಯಗಳಿಸಿರುವ ಬಿಜೆಪಿ ಇನ್ನೆರಡು ಕ್ಷೇತ್ರಗಳಲ್ಲಿ ಎರಡನೆ ಸ್ಥಾನ ಪಡೆದಿದೆ. ಎಐಎಡಿಎಂಕೆ ಪಕ್ಷದ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತಿರುವುದೂ ಸ್ಪಷ್ಟವಾಗಿ ಕಾಣುತ್ತಿದೆ. ಈ ಎಚ್ಚರಿಕೆಯ ಸಂದೇಶವನ್ನು ತಮಿಳುನಾಡಿನ ಜನತೆ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಆರಂಭದಲ್ಲೇ ಗ್ರಹಿಸಿ ರಾಜ್ಯದಲ್ಲಿ ಬಿಜೆಪಿ ತಲೆಎತ್ತುವುದನ್ನು ತಡೆಗಟ್ಟಬೇಕಿದೆ.

ಪುದುಚೆರಿಯಲ್ಲಿ ಎಐಎನ್  ಆರ್ ಸಿ –ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸಿದೆ. ಪುದುಚೆರಿಯ ಬಹುಮುಖಿ ಸಂಸ್ಕೃತಿಯ ವೈವಿಧ್ಯತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ ಜನತೆ ಜಾಗೃತರಾಗಬೇಕಿದೆ. ಈ ಕೇಂದ್ರಾಡಳಿತ ಪ್ರದೇಶವನ್ನು ಬಿಜೆಪಿ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಭದ್ರ ನೆಲೆಸುವ ಒಂದು ವೇದಿಕೆಯಂತೆ ಬಳಸುವ ಸಾಧ್ಯತೆಗಳಿದ್ದು ಇದರ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಿದೆ.

ಅಸ್ಸಾಂನಲ್ಲಿ ಬಿಜೆಪಿ ಎರಡನೆ ಬಾರಿ  ಸ್ಪ್ಟಬಹುಮತ ಗಳಿಸಿದೆ.ಇಲ್ಲಿಯೂ ಕೆಲವು ಅಂಶಗಳು ಆಶಾದಾಯಕವಾಗಿ ಕಾಣುತ್ತಿದೆ. ಸಿಎಎ ವಿರೋಧಿ ಹೋರಾಟದಲ್ಲಿ ಮತ್ತು ಕೃಷಿ ರೈತರ ಮುಷ್ಕರದಲ್ಲಿ ಸಕ್ರಿಯವಾಗಿದ್ದ ಅಖಿಲ್ ಗೊಗೊಯಿ ಗೆಲುವು ಸಾಧಿಸಿರುವುದು ಜನಪರ ಹೋರಾಟಗಳ ಗೆಲುವು ಎಂದೇ ಹೇಳಬಹುದು. ಯುಎಪಿಎ ಕರಾಳ ಶಾಸನದಡಿ ಬಂಧಿತರಾಗಿ, ಜೈಲಿನಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಗೊಗೊಯಿ ಅವರ ಗೆಲುವು ಪ್ರಜಾತಂತ್ರ ಚಳುವಳಿಗೆ ಆಶಾದಾಯಕವಾಗಿದೆ.

ಕೋವಿದ್ 19 ಸಾಂಕ್ರಾಮಿಕ ಭಾರತದ ಮೂಲೆ ಮೂಲೆಗಳನ್ನೂ ತಲುಪುತ್ತಿದ್ದು ದೇಶಾದ್ಯಂತ ಸಾವು ನೋವುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೊಸದಾಗಿ ಚುನಾಯಿತವಾದ ರಾಜ್ಯ ಸರ್ಕಾರಗಳು ಕೂಡಲೇ ಪರಿಹಾರ ಮಾರ್ಗಗಳನ್ನು ಕೈಗೊಂಡು,ಕೋವಿದ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದೇ ಅಲ್ಲದೆ  ಕೋವಿದ್ ಸೋಂಕಿತರಿಗೆ ಸೂಕ್ತ ಆರೋಗ್ಯ ಸೇವೆ ಸಲ್ಲಿಸುವತ್ತ ಸಕ್ರಿಯವಾಗಬೇಕಿದೆ.