Lekha

ಕೊಪ್ಪಳ ಜಿಲ್ಲೆಯಾದ್ಯಂತ  ದಲಿತರ ಮೇಲಿನ ಈ ರೀತಿಯ ದೌರ್ಜನ್ಯ ಮತ್ತು ಹತ್ಯೆಗಳು ಪದೇಪದೇ ನಡೆಯುತ್ತಿವೆ. ಒಂದೆಡೆ ಜಾತಿಯೆಂಬುದಿಲ್ಲ, ಮೀಸಲಾತಿ ತೆಗೆಯಬೇಕು ಇತ್ಯಾದಿ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಸಾಂಕ್ರಾಮಿಕ ಕಾಲದಲ್ಲಿಯೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. ಪದೇ ಪದೇ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಅಮಾನುಷ ಘಟನೆ ವರದಿಯಾಗಿದ್ದು, ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೂನ್ 22 ರಾತ್ರಿ ಜರುಗಿದೆ. 

ಬರಗೂರು ಗ್ರಾಮದ ಕುರುಬ ಸಮುದಾಯದ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ದಲಿತ (ಮಾದಿಗ) ಸಮುದಾಯದ ಶ್ರೀ । ದಾನಪ್ಪ (23) ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದ್ದು ನಾಲ್ಕು ಜನರನ್ನು ಬಂಧಿಸಲಾಗಿದೆ. 

ಪ್ರಕರಣದ ಹಿನ್ನೆಲೆ

ಬರಗೂರು  ಗ್ರಾಮದ ಕುರುಬ ಸಮುದಾಯದ ಮರಿಬಸಪ್ಪನವರ ಎರಡನೇ ಮಗಳಾದ ಸುನೀತಾ (20) ಮತ್ತು ಮಾದಿಗ ಸಮುದಾಯದ ಕರಿ ಹನುಮಂತಪ್ಪನವರ ಎರಡನೇ ಮಗ ಶ್ರೀ । ದಾನಪ್ಪ (23) ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಪೋಷಕರಿಗೆ ತಿಳಿದು ಹುಡುಗಿಯ ತಂದೆ ಮರಿಬಸಪ್ಪ ಈ ಹಿಂದೆಯೇ ಹುಡುಗ ದಾನಪ್ಪನನ್ನು ಕರೆದು ಜಾತಿನಿಂದನೆ ಮಾಡಿದ್ದಲ್ಲದೆ, ಹಲ್ಲೆ ನಡೆಸಿ ಹುಡುಗಿಯ ತಂಟೆಗೆ ಬರಬಾರದೆಂದು ತಾಕೀತು ಮಾಡಿದ್ದರು ಎಂದು ಹುಡುಗನ ತಂದೆ ಕರಿ ಹನುಮಂತಪ್ಪ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ವಾರ ಹುಡುಗಿಯ ಮದುವೆ ನಿಗದಿಯಾಗಿದ್ದು, ಹಾಗಿದ್ದರೂ ಆಕೆ ದಾನಪ್ಪನೊಡನೆ ಮಾತನಾಡುತ್ತಿದ್ದಳು ಎಂದು ಆಕೆಯ ತಂದೆ ಮರಿಬಸಪ್ಪ ಜೂನ್ 22 ರ ರಾತ್ರಿ ಮಾತನಾಡುವುದಾಗಿ ದಾನಪ್ಪನನ್ನು ಕರೆಸಿಕೊಂಡಿದ್ದಾರೆ. ತದನಂತರ ಆತನನ್ನು ಬೆದರಿಸಿ, ಹೊಲದಲ್ಲೆಲ್ಲ ಅಟ್ಟಾಡಿಸಿಕೊಂಡು ಹೊಡೆದು ತೀವ್ರವಾಗಿ ಹಲ್ಲೆ ಮಾಡಿ ಹುಡುಗನ ಎಡಗಾಲು ಮುರಿದು ಕೊಲೆಗೈದಿದ್ದಾರೆ.

ದಿನಾಂಕ 22/06/2021 ರಂದು ರಾತ್ರಿ  ದಾನಪ್ಪ ಮತ್ತು ಆತನ ತಂದೆ ಕರಿಹನುಮಂತಪ್ಪ ಇವರುಗಳು ಮನೆಯಲ್ಲಿ ಮಾತನಾಡುತ್ತಾ ಕುಳಿತ್ತಿದ್ದ ಸಂದರ್ಭದಲ್ಲಿ.ಕುರುಬ ಸಮುದಾಯದ ಮರಿಬಸಪ್ಪ,  ಈತನು ದಾನಪ್ಪನನ್ನು ಕೆಲಸವಿದೆ ಬಾ ಎಂದು ಕರೆಯುತ್ತಾನೆ.ಹಾಗ ದಾನಪ್ಪನು ತಂದೆಗೆ ಹೇಳಿ ಅವರದು ಏನು ಕೆಲಸವಿದೆ ಕೆಳಿಬರುತ್ತೇನೆಂದು ಮನೆಯಿಂದ ಹೊರಹೋಗುತ್ತಾನೆ ಹೀಗೆ ಹೊರಹೋದ ಮಗ ವಾಪಸ್ ಬರುತ್ತಾನೆಂದು ರಾತ್ರಿ 12 ಗಂಟೆವರೆಗೆ ತಂದೆತಾಯಿಗಳು ಕಾಯುತ್ತಾ ಕೂಳಿತಿದ್ದರು. ಅವನು ಬಾರದಿದ್ದಾಗ ರಾತ್ರಿ ಎರಡು ಗಂಟೆಯವರೆಗೆ ಸಂಬಂಧಿಕರ ಜೊತೆಗೆ ಹುಡುಕಾಟ ನಡೆಸಿದ್ದಾರೆ ಆದರೆ ಆತ ಸಿಗಲೇ ಇದ್ದಾಗ, ಬೆಳಿಗ್ಗೆ ಹುಡುಕಿದರಾಯಿತು ಎಂದು ಮಲಗುತ್ತಾರೆ.

ಬೆಳಿಗ್ಗೆ 7.30  ರ ಸುಮಾರಿಗೆ ದಾನಪ್ಪ ಕೆಲಸ ಮಾಡುತ್ತಿದ್ದ ಮಾಲಿಕನಾದ ಯರಿಸ್ವಾಮಿ ತಂದಿ ಮಹಾದೇವಪ್ಪ ಈತನು ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ದಾನಪ್ಪನ ಶವ ನೋಡಿ ಕೂಡಲೇ ಹುಡುಗನ ಮನೆಯವರಿಗೆ ನಿಮ್ಮ ಮಗ ಕೊಲೆಯಾಗಿ ಬಿದ್ದಿದ್ದಾನೆ ಎಂದು ತಿಳಿಸುತ್ತಾನೆ. 

ಮನೆಯವರೆಲ್ಲ ಓಡಿ ಬಂದು ನೋಡಿದರೆ  ದಾನಪ್ಪ ಕೊಲೆಯಾಗಿ ಬಿದ್ದಿರುತ್ತಾನೆ ಆತನ ಎದೆ,ಕುತ್ತಿಗೆ,ಹೊಟ್ಟೆಯ ಮೇಲೆಲ್ಲಾ ಗಾಯದ ಗುರುತುಗಳಿರುತ್ತವೆ ಹಾಗೂ ಎಡಗಾಲು ಮುರಿದಿರುತ್ತದೆ.ಇದನ್ನು ಕಂಡು ಕಂಗಾಲಾದ ದಾನಪ್ಪನ ತಂದೆ ಕರಿಹನುಮಂತಪ್ಪ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ನಂತರ ಹುಡುಗಿ ಸುನೀತಾ, ಆಕೆಯ ತಂದೆ ಮರಿಬಸಪ್ಪ, ತಾಯಿ ಲಲಿತಮ್ಮ, ಆಕೆಯ ಅಕ್ಕನ ಗಂಡ ಹುಲುಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಸಂಶಯದಲ್ಲಿ ಗ್ರಾಮಸ್ಥರಾದ ಕೋರಪ್ಪ, ಯಮನಪ್ಪ ಮತ್ತು ನಿಂಗಪ್ಪ ಎಂಬುವವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. 

ದಲಿತ ಯುವಕನ ಕೊಲೆ ನಡೆದ ನಂತರ ಬರಗೂರು ಗ್ರಾಮದಲ್ಲಿ ಭಯಭೀತ ವಾತವಾರಣ ನಿರ್ಮಾಣವಾಗಿದೆ. ಇದು ಮರ್ಯಾದೆಹೀನ ಹತ್ಯೆಯಾಗಿದೆ. ಹಾಗಾಗಿ ಕೂಡಲೇ ಅಲ್ಲಿನ ದಲಿತರಿಗೆ ರಕ್ಷಣೆ ಒದಗಿಸಬೇಕು ಮತ್ತು ಗಲಭೆ ನಡೆಯದಂತೆ ತಡೆಯಲು ಶಾಂತಿ ಸಭೆ ನಡೆಸಬೇಕಿದೆ. ಕ್ಷೇತ್ರದ ಶಾಸಕರಾದ ದಲಿತ ಸಮುದಾಯದ ಬಸವರಾಜ್ ದಡೆಸಗೂರುರವರು ಗ್ರಾಮಕ್ಕೆ ಇನ್ನೂ ಬೇಟಿ ನೀಡದೆ ಇರುವುದು ದುರಂತ.

ಜಿಲ್ಲೆಯಲ್ಲಿ ಪದೇ ಪದೇ ಜಾತಿ ದೌರ್ಜನ್ಯದ ಘಟನೆಗಳು ವರದಿಯಾಗುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸಮಾಜ ಕಲ್ಯಾಣ ಇಲಾಖೆಯಾಗಲಿ ಯಾವುದೇ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸರ್ಕಾರ ರಾಜ್ಯದಲ್ಲಿ ನಡೆಯುವ ದಲಿತರು ಮತ್ತು ಶೋಷಿತರ ಮೇಲಿನ ಕೊಲೆ, ಶೋಷಣೆ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. 

ಘಟನೆ ನಡೆದ ನಂತರದ ಕ್ರಮಗಳಿಗಿಂತ ಇಂತಹ ಅಮಾನುಷ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕಿದೆ.  ಕಕ್ಕರಗೋಳ ಗ್ರಾಮದ ದಲಿತ ಯುವಕ ರಾಘವೇಂದ್ರನ ಬರ್ಬರ ಕೊಲೆ ನಡೆದು ಒಂದು ವರ್ಷವಾಗಿದೆ. ಇತ್ತೀಚೆಗೆ ಜಿಲ್ಲೆಯ ಹೊಸಳ್ಳಿಯಲ್ಲಿ ದಲಿತರಿಗೆ ಕ್ಷೌರ ಮಾಡದೆ ಹಲ್ಲೆ ನಡೆಸಿದ್ದಕ್ಕೆ ಅವರು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂತಹ ಹತ್ತಾರು ಘಟನೆಗಳು ನಡೆಯುತ್ತಲೇ ಇವೆ. ಹಾಗಾಗಿ ಸರ್ಕಾರವೇ ಈ ಜಾತಿ ದೌರ್ಜನ್ಯ ಕೊನೆಗೊಳಿಸಲು ಯತ್ನಿಸಬೇಕಿದೆ. ಆ ಮೂಲಕ ಶಾಂತಿ-ಸಾಮರಸ್ಯ ಕಾಪಾಡಬೇಕಿದೆ.

ಕೊಪ್ಪಳ ಜಿಲ್ಲೆಯಲ್ಲಿ ಜಾತಿ ದೌರ್ಜನ್ಯ ಪ್ರಕರಣಗಳು ಅತಿಹೆಚ್ಚಾಗಿದ್ದು, ಜಾತಿ ಆಚಾರಗಳನ್ನು ಇಂದಿಗೂ ಪಾಲಿಸಲಾಗುತ್ತಿದೆ. ಹಾಗಾಗಿ, ಜಾತಿ ದೌರ್ಜನ್ಯ ತಡೆಗಟ್ಟುವ ಕಾಯ್ದೆ ಕಲಂ 17ರ ಅನ್ವಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ರಾಜ್ಯ ಸರ್ಕಾರವು ಅಲ್ಲಿ ವಾಸವಾಗಿರುವ ದಲಿತ ಸಮುದಾಯದವರಿಗೆ ಅಧಿಕೃತ ರಕ್ಷಣೆಯನ್ನು ನೀಡಬೇಕು. ಶ್ರೀ । ದಾನಪ್ಪ ಅವರ ಕುಟುಂಬಕ್ಕೆ ಮತ್ತು ನೆರೆಹೊರೆಯವರಿಗೆ ಪೊಲೀಸ್ ರಕ್ಷಣೆಯನ್ನು ನೀಡಬೇಕು ಮತ್ತು ಸಂತ್ರಸ್ಥರಿಗೆ ಕೂಡಲೇ ಪರಿಹಾರವನ್ನು ನೀಡಬೇಕು. ಕೊಪ್ಪಳ ಜಿಲ್ಲಾಡಳಿತವು ಶೀಘ್ರದಲ್ಲೇ ಜಾತಿ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ಜಾತಿ ದೌರ್ಜನ್ಯಕ್ಕೆ ಒಳಗಾದವರಿಂದ ದೂರುಗಳನ್ನು ಪಡೆಯಲು ಸಹಾಯವಾಣಿಯನ್ನು ಸ್ಥಾಪಿಸಬೇಕು. 

ಈ ಕ್ರಮಗಳಿಗೆ ಜಿಲ್ಲಾಡಳಿತ, ಶಾಸಕರು ಮತ್ತು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು. ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸಿ ಸಮರ್ಪಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಬೇಕು. ಆ ಮೂಲಕ ಈ ರೀತಿಯ ಘಟನೆಗಳು ನಡೆಯದಂತೆ ತಡೆಯಬೇಕು.