Lekha

ದಿನಾಂಕ 13/10/2021 ರಂದು ಮಂಗಳೂರಿನ ಏರ್‍ಪೋರ್ಟನಲ್ಲಿ, ಪತ್ರಕರ್ತರು ಧರ್ಮದ ರಕ್ಷಣೆಯ ಹೆಸರಲ್ಲಿ ಹೆಚ್ಚಾಗುತ್ತಿರುವ ಗೂಂಡಾಗಿರಿಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರನ್ನು ಪ್ರಶ್ನೆ ಮಾಡಿದಾಗ, ಕಾನೂನು ಪಾಲನೆ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಮೊರಾಲಿಟಿ ಅನ್ನೋದು ಸಮಾಜದಲ್ಲಿ ಬೇಕಲ್ವಾ, ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕೋಕೆ ಆಗುತ್ತಾ?, ಇವತ್ತು ನಾವು ನೈತಿಕತೆ ಇಲ್ಲದೆ ಬದುಕೋಕೆ ಆಗಲ್ಲ. ನಮ್ಮೆಲ್ಲಾರ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ನಿಂತಿರೋದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡುವ ಮೂಲಕ ಸಂಘಪರಿವಾರದವರು ಮಾಡುವ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡಿದ್ದಾರೆ. 
ಮುಖ್ಯಮಂತ್ರಿಗಳು ರಾಜ್ಯದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಸಮರ್ಥಿಸಿಕೊಂಡಿರುವುದು ಕಾನೂನುಗಳ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದೇಶದಾದ್ಯಂತ ಯುವಕ ಮತ್ತು ಯುವತಿಯರ ಮೇಲೆ ಗೂಂಡಾಗಿರಿಯನ್ನು ನಡೆಸಿ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗ ತೊಡಗಿವೆ. ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅರ್ಬಾಜ್ ಮತ್ತು ಕೊಪ್ಪಳದ ಬರಗೂರು ಗ್ರಾಮದ ದಾನಪ್ಪ ಎಂಬ ಯುವಕರು ತಮ್ಮದ್ದಲ್ಲದ ಧರ್ಮ ಮತ್ತು ಜಾತಿಗೆ ಸೇರಿದ ಯುವತಿಯರನ್ನು ಪ್ರೀತಿ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ಸಂಘಪರಿವಾರದ ಗೂಂಡಾಗಳೇ ಧರ್ಮ ರಕ್ಷಣೆಯ ಹೆಸರಲ್ಲಿ ಕೊಲೆ ಮಾಡಿದ್ದಾರೆ. ಧರ್ಮ ರಕ್ಷಣೆಯ ಹೆಸರಲ್ಲಿ ನಡೆಸುವ ಇಂತಹ ಗೂಂಡಾಗಳ ವರ್ತನೆಯನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿರುವುದು  ಮುಖ್ಯಮಂತ್ರಿ ಸ್ಥಾನಕ್ಕೆ ಮಾಡಿದ ಅಪಮಾನವಾಗಿರುತ್ತದೆ. ಸಾಂವಿಧಾನಿಕ ಸಿಂಧುತ್ವವಿಲ್ಲದ ಮತ್ತು ಅಸಂವಿಧಾನಿಕ ಸಮರ್ಥನೆಗಳನ್ನು ಮಾಡಿಕೊಳ್ಳುವ, ಮುಖ್ಯಮಂತ್ರಿ ಆ ಸ್ಥಾನಕ್ಕೆ ಅರ್ಹನಲ್ಲ. 
ರಾಜಕೀಯ ಪಕ್ಷಗಳ ಮತ್ತು ಸಂಘಟನೆಗಳ ಮೂಲಭೂತ ಗುರಿಯನ್ನು ಸಾಧಿಸಿಕೊಳ್ಳಲು ತಯಾರು ಮಾಡಿರುವ ಪುಂಡರ ಪಡೆಯೇ ಈ ಧರ್ಮ ರಕ್ಷಣೆ ಮಾಡುವ ಗೂಂಡಾಗಳು, ಹೀಗಾಗಿಯೇ ಇರಬೇಕು ಮುಖ್ಯಮಂತ್ರಿಗಳು ತಮ್ಮ ಪಟಾಲಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಅನ್ಯ ಧರ್ಮದವರನ್ನು ಒಟ್ಟಿಗೆ ಕಂಡರೆ ಸಾಕು, ಗೂಂಡಾಗಿರಿ ಮಾಡುವ ಪೊರ್ಕಿಗಳನ್ನು ಸಮರ್ಥಿಸಿಕೊಳ್ಳುವ ಪಾಡು ನಿಮಗೆ ಬರಬಾರದಿತ್ತು ಮುಖ್ಯಮಂತ್ರಿಗಳೇ. ಈ ರೀತಿಯ ಕೃತ್ಯಗಳು ಕಾನೂನು ಬಾಹಿರವಾದ ಕೃತ್ಯಗಳಲ್ಲದೆ ಮತ್ತೇನು ಅಲ್ಲ. ಇಂತಹ ಕೃತ್ಯಗಳಿಗೆ ನೈತಿಕತೆ ರಕ್ಷಣೆಯ ನಾಮಕರಣ ಮಾಡುವುದನ್ನು ನಮ್ಮ ಸಂವಿಧಾನವಾಗಲೀ ಅಥವಾ ಸಾಮಾನ್ಯ ಜ್ಞಾನವಿರುವ ಯಾವ ವ್ಯಕ್ತಿಯು ಸಹ ಒಪ್ಪಿಕೊಳ್ಳುವಂತಹವುದಲ್ಲ. 
ಧರ್ಮದ ರಕ್ಷಣೆಯಲ್ಲಿ ನಡೆಯುವ ಅಪರಾಧಿಕ ಕೃತ್ಯಗಳಿಗೆ ‘ನೈತಿಕತೆಯ ರಕ್ಷಣೆ’ ಎಂದು ನಾಮಕರಣ ಮಾಡುವ ಮುಖ್ಯಮಂತ್ರಿಗಳಿಂದ ಈ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ. ಇಂತಹ ಗೂಂಡಾಗಿರಿಯಲ್ಲಿ  ಭಾಗಿಯಾಗುವ ಗೂಂಡಾಗಳನ್ನು ಶಿಕ್ಷಿಸಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಬದಲು, ಅವರ ವರ್ತನೆಯನ್ನು ಸಮರ್ಥಿಸಿರುವುದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾನವ ಹಕ್ಕುಗಳು ಅದರಲ್ಲೂ ಮಹಿಳೆಯರ ಸ್ವಾತಂತ್ರವನ್ನು ಹರಣಮಾಡುವಂತಹ ಘಟನೆಗಳು ನಡೆಯಲು ಪ್ರಚೋದಿಸಿದಂತಾಗಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರವರು ರವರು "ಸಾಂವಿಧಾನಿಕ ನೈತಿಕತೆಯು ನೈಸರ್ಗಿಕ ಭಾವನೆಯಲ್ಲ. ಅದನ್ನು ಬೆಳೆಸಬೇಕು. ನಮ್ಮ ಜನರು ಇದನ್ನು ಇನ್ನೂ ಕಲಿಯಬೇಕಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.” ಎಂದು ಹೇಳಿದ್ದಾರೆ. ಅಂದರೆ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವ ಭಾವನೆಗಳನ್ನು ಜನರ ಮನಸ್ಸಲ್ಲಿ ಬೆಳೆಸಬೇಕೆ ವಿನಃ, ಸಂಘಪರಿವಾರದವರ ಅಥವಾ ಬಿಜೆಪಿಯ ಅಮಲು ತುಂಬಿರುವ ಹಿಂಧುತ್ವದ ನೈತಿಕತೆಯನ್ನಲ್ಲ ಎಂಬುವುದನ್ನು ಸರ್ಕಾರ ಮತ್ತು ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳಬೇಕಾಗಿದೆ. 
ಧರ್ಮ ರಕ್ಷಣೆಯ ಹೆಸರಿನಲ್ಲಿ ನಡೆಯುವ ಗೂಂಡಾಗಿರಿಯು ಅಪರಾಧಿಕ ಕೃತ್ಯವಾಗಿದ್ದು, ಕಾನೂನಿನಲ್ಲಿ ಇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಧರ್ಮದ ಹೆಸರಲ್ಲಿ ಅಪರಾಧಿಕ ಕೃತ್ಯವೆಸಗುವ ಗೂಂಡಾಗಳನ್ನು ಶಿಕ್ಷಿಸಬೇಕೆ ವಿನಃ ಅವರಿಗೆ ಸರ್ಕಾರ ರಕ್ಷಣೆ ನೀಡಬಾರದೆಂದು ಮತ್ತು ತಕ್ಷಣದಲ್ಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಪಕ್ಷವು ಆಗ್ರಹಿಸುತ್ತದೆ.

ಕ್ಲಿಫ್ಟನ್ ಡಿ’ ರೋಜಾರೀಯೋ,
ಕರ್ನಾಟಕ ರಾಜ್ಯ ಕಾರ್ಯದರ್ಶಿ, ಸಿಪಿಐ(ಎಂಎಲ್) ಲಿಬರೇಷನ್