ಕರ್ನಾಟಕ ರಾಜ್ಯದ ಜನರು ಬಿಜೆಪಿಯ ದುರಾಡಳಿತದ ಪರಿಣಾಮ ಭ್ರಷ್ಟಾಚಾರ, ಮಿತಿಮೀರಿದ ಜೀವನ ವೆಚ್ಚ, ಹೆಚ್ಚಿದ ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಧಾರ್ಮಿಕ ದ್ವೇಷ ಮತ್ತು ಕೋಮು ಧ್ರುವೀಕರಣದಿಂದ ನಲುಗಿ ಈಗಷ್ಟೇ ಅದರಿಂದ ಹೊರಬಂದಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಪಿಐ (ಎಂಎಲ್) ಲಿಬರೇಶನ್ ಪಕ್ಷದ ಎರಡನೇ ರಾಜ್ಯ ಸಮ್ಮೇಳನ ವನ್ನು ಡಿಸೆಂಬರ್ 9 ಮತ್ತು 10, 2023ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಲಾಗಿತ್ತು.
ರಾಜ್ಯ ಸಮ್ಮೇಳನದ ಭಾಗವಾಗಿ 'ಫ್ಯಾಶಿಸಂ ವಿರುದ್ಧ ಕರ್ನಾಟಕ' ಜನಜಾಥಾ ಮತ್ತು ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಈ ಜನಜಾಥಾ ಮತ್ತು ಬಹಿರಂಗ ಸಮಾವೇಶದಲ್ಲಿ ಸಾವಿರಾರು ಪಕ್ಷದ ಸದಸ್ಯರು, ಜನಸಮೂಹ ಸಂಘಟನೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು, ಪಕ್ಷದ ಮುಖಂಡರು, ಮತ್ತು ಇನ್ನಿತರರು ಭಾಗವಹಿಸಿದರು. ಮುಂಬರಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಸಮಾಜದ ಪ್ರಜಾಪ್ರಭುತ್ವೀಕರಣಕ್ಕಾಗಿ ಈ ಜನಜಾಥಾ ಮತ್ತು ರಾಜ್ಯ ಸಮ್ಮೇಳನವು ಕರ್ನಾಟಕದ ಜನತೆಗೆ ಕರೆ ನೀಡಿತು.
ಬಿಜೆಪಿ ಸರ್ಕಾರ ಕೋವಿಡ್ ಹಾವಳಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಸಾವಿರಾರು ಮುಗ್ದ ಜನರು ಜೀವ ಕಳೆದುಕೊಂಡರು. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳು ಜನರ ಮೇಲೆ ಸಮರವನ್ನೇ ಸಾರಿವೆ. ಮೋದಿಯವರ ಕಾರ್ಪೋರೇಟ್ ಪರವಾದ ಮೂರು ಕೃಷಿ ಕಾನೂನುಗಳ ಜೊತೆಗೆ ರಾಜ್ಯ ಸರ್ಕಾರ ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿತು. ಇದು ಶ್ರೀಮಂತರು, ಬಡ ರೈತರಿಂದ ಭೂಮಿಯನ್ನು ಖರೀದಿಯ ನೆಪದಲ್ಲಿ ಕಬಳಿಸಲು ಮುಕ್ತ ಅವಕಾಶ ಮಾಡಿಕೊಟ್ಟಿತು. ಅಲ್ಲದೇ ಮೋದಿಯವರು 4 ಲೇಬರ್ ಕೋಡ್ಗಳ ಜೊತೆಗೆ, ರಾಜ್ಯ ಸರ್ಕಾರವು ವಿವಿಧ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ಕಾರ್ಮಿಕರನ್ನು ಕಾನೂನಿನ ರಕ್ಷಣೆಯಿಂದ ಹೊರಗೆ ಹಾಕಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕೋಮುದ್ವೇಷ ಪ್ರೇರಿತ, ಧರ್ಮಾಧಾರಿತ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ಹುನ್ನಾರ ನಡೆಸಿದರೆ, ಅಂದಿನ ರಾಜ್ಯ ಸರ್ಕಾರವು ಹಿಜಾಬ್ ನಿಷೇಧ ಜಾರಿಗೆ ತಂದಿತು. ಸಂವಿಧಾನದ ಪೀಠಿಕೆಗೆ ವಿರುದ್ಧವಾಗಿ ಅಲ್ಪಸಂಖ್ಯಾತ ಮುಸ್ಲಿಮರ ಮೀಸಲಾತಿ ಹಿಂತೆಗೆದುಕೊAಡಿತು. ಅಲ್ಲದೇ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿ, ಹಿಂದುತ್ವದ ಸಂಘಟನೆಗಳನ್ನು ಬೆಂಬಲಿಸುವ ಮೂಲಕ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪರೋಕ್ಷ ಬೆಂಬಲವನ್ನು ನೀಡಿತು.
ಮೋದಿಯವರ ಕಾರ್ಪೊರೇಟ್ ಪ್ರೇರಿತ ಕೋಮುವಾದಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಮೊಟ್ಟ ಮೊದಲಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದೆ. ಇದು ಅಕ್ಷರಶಃ ಪ್ರಜಾಪ್ರಭುತ್ವ, ಜಾತ್ಯತೀತತೆ, ಜನರು ಮತ್ತು ಸಂವಿಧಾನದ ಮೇಲೆ ಡಬಲ್ ಇಂಜಿನ್ ಸರ್ಕಾರ ಮಾಡಿದ ವ್ಯವಸ್ಥಿತ ದಾಳಿಯಾಗಿದೆ. ಆದಾಗ್ಯೂ ಕರ್ನಾಟಕದ ಜನರು ಈ ದಾಳಿಗಳನ್ನು ಸಮರ್ಥವಾಗಿ ಎದುರಿಸಿದರು. ಸಿಎಎ ವಿರೋಧಿ ಹೋರಾಟಗಳು, ರೈತ ವಿರೋಧಿ ಕಾನೂನು ವಿರುದ್ಧದ ಹೋರಾಟಗಳು, ಕಾರ್ಮಿಕ ಮತ್ತು ವಿದ್ಯಾರ್ಥಿ ವಿರೋಧಿ ಕಾನೂನುಗಳ ವಿರುದ್ಧ ಹೋರಾಟಗಳು ಕರ್ನಾಟಕ ಮತ್ತು ದೇಶಾದ್ಯಂತ ವ್ಯಾಪಿಸಿದ್ದಲ್ಲದೇ ಫ್ಯಾಸಿಸ್ಟ್ ಪ್ರಭುತ್ವಕ್ಕೆ ಪ್ರಬಲ ಪ್ರತಿರೋಧವನ್ನೊಡ್ಡಿದವು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಹೊಸ ಕೃಷಿ ಕಾನೂನುಗಳನ್ನು ಮತ್ತು ಸಿಎಎ ಮತ್ತು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಇದಕ್ಕೆ ಹೆದರಿದ ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ೪೦ ಪರ್ಸೆಂಟ್ ಕುಖ್ಯಾತಿಯ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳಿಗೆ ಬೇಸತ್ತ ಕರ್ನಾಟಕದ ಜನರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಸರಿಯಾದ ಪಾಠ ಕಲಿಸಿದ್ದಾರೆ. ಆ ಮೂಲಕ ಜನತೆಯ ಮೇಲಿನ ದಾಳಿಗೆ ರಾಜ್ಯದ ಜನರು ಸರಿಯಾದ ಉತ್ತರ ನೀಡಿದ್ದಾರೆ.
ಬಿಜೆಪಿಯ ಸೋಲಿನ ನಂತರ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕಳೆದ ನಾಲ್ಕಾರು ತಿಂಗಳಲ್ಲಿ ಖಾತರಿ ಯೋಜನೆಗಳನ್ನಷ್ಟೇ ಜಾರಿಗೆ ತಂದಿದೆ. ಆದರೆ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅನುಷ್ಠಾನಗೊಳಿಸಿದ ಹಲವಾರು ಜನವಿರೋಧಿ ಕಾನೂನುಗಳನ್ನು ಇನ್ನೂ ಹಿಂಪಡೆದಿಲ್ಲ. ಈ ನಡುವೆ ಆರ್ಎಸ್ಎಸ್/ಬಿಜೆಪಿ ಮತ್ತೆ ಕೋಮುದ್ವೇಷ ಹರಡುವುದನ್ನು ಮುಂದುವರೆಸಿವೆ; ಆ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿವೆ.
ಕೋಮುವಾದ ಹಾಗೂ ರಾಜಕೀಯ ವಿಭಜಕ ಕುತಂತ್ರಗಳಿಂದಾಗಿ ರಾಜ್ಯದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. 2024ರ ಸಾರ್ವತ್ರಿಕ ಚುನಾವಣೆಗಳು ಹತ್ತಿರದಲ್ಲಿದ್ದು, ಈ ಚುನಾವಣೆಯಲ್ಲಿ ಜನವಿರೋಧಿ ಹಾಗೂ ಪ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲೇಬೇಕಿದೆ. ಈ ನಿಟ್ಟಿನಲ್ಲಿ ದೇಶಮಟ್ಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಸಕಾಲಿಕವಾಗಿದ್ದು, ರಾಜ್ಯದಲ್ಲಿಯೂ ಎಡ ಪಕ್ಷಗಳು ಜನರಿಗೆ ರಾಜಕೀಯ ತಿಳಿವಳೀಕೆಯನ್ನು ನೀಡುವ ಮೂಲಕ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ.
ಆರ್ಎಸ್ಎಸ್ನ ಫ್ಯಾಸಿಸ್ಟ್ ದಾಳಿಯ ವಿರುದ್ಧ ಹೋರಾಡುತ್ತಲೇ ಬಿಜೆಪಿಯನ್ನು ಚುನಾವಣೆಯಲ್ಲಿ ಹಿಮ್ಮೆಟ್ಟಿಸುವ ಮೂಲಕ ಕರ್ನಾಟಕದ ಜನತೆಗೆ ರಾಜಕೀಯ ಪರ್ಯಾಯವಾಗಿ ಹೊರಹೊಮ್ಮಬೇಕಿದೆ. ಬಿಜೆಪಿ/ಆರ್ಎಸ್ಎಸ್ ವಿರುದ್ಧದ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಥಿಕ ಹೋರಾಟವನ್ನು ಮುಂದುವರಿಸುತ್ತಲೇ ಕಾಂಗ್ರೆಸ್ ಸರಕಾರವನ್ನು ಹಿಡಿತದಲ್ಲಿಡಲು ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಮೂಲಕ ಸಿಪಿಐ(ಎಂಎಲ್) ಲಿಬರೇಶನ್ ಹೋರಾಟದ ಶಕ್ತಿಯಾಗಿ ಮುಂಚೂಣಿಗೆ ಬರಬೇಕಿದೆ. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಬಿಜೆಪಿ ತಂದಿರುವ ಜನವಿರೋಧಿ ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಳ್ಳಲು ಜನ ಹೋರಾಟವನ್ನು ರೂಪಿಸಬೇಕು.
ಜನರ ಬಗೆಗಿನ ಪ್ರಮುಖ ಕಾಳಜಿಗಳಾದ ಭೂಮಿ, ವಸತಿ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿ, ರೈತರ ಎಲ್ಲಾ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಖಾತರಿಪಡಿಸುವುದು, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆ, ಜಾತಿ ವಿರುದ್ಧದ ಹೋರಾಟವನ್ನು ಮುಂದುವರಿಸಲು ಜನಾಂದೋಲನ ತೀವ್ರಗೊಳಿಸಬೇಕು. ಕೋಮುವಾದ ಮತ್ತು ಲಿಂಗ ತಾರತಮ್ಯವನ್ನು ತೊಡೆದು ಹಾಕಲು ಸಂಸದೀಯ ಪ್ರಜಾಪ್ರಭುತ್ವದ ಮಿತಿಗಳನ್ನು ಮೀರಿ, ಬಂಡವಾಳಶಾಹಿಯ ಸೋಲು ಮತ್ತು ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಗೆಲುವಿನ ಶ್ರಮಜೀವಿ ಪ್ರಜಾಪ್ರಭುತ್ವಕ್ಕಾಗಿ ಜನ ಹೋರಾಟವನ್ನು ಕಟ್ಟಲು ಸಂಕಲ್ಪ ಮಾಡಬೇಕಿದೆ. ಕ್ರಾಂತಿಕಾರಿ ಸಾಮೂಹಿಕ ರಾಜಕೀಯ ಹೋರಾಟದ ಅಲೆಗಳ ಉಬ್ಬರದೊಂದಿಗೆ ಕರ್ನಾಟಕದ ಜನರನ್ನು ಸಜ್ಜುಗೊಳಿಸಲು ಈ ಸಮ್ಮೇಳನವು ಹೊಸ ಹಾದಿ ಮತ್ತು ಕಣ್ಣೋಟವನ್ನು ನೀಡುತ್ತದೆ ಎಂದು ದೃಢಸಂಕಲ್ಪದೊಂದಿಗೆ ರಾಜ್ಯ ಸಮ್ಮೇಳನವು ಮುಕ್ತಾಯಗೊಂಡಿತು.
ನಾವೆಲ್ಲರೂ ಶ್ರಮಿಜೀವಿ ಪ್ರಭುತ್ವಕ್ಕಾಗಿ ಹೋರಾಡೋಣ. ಕಾರ್ಪೊರೇಟ್ ಕೋಮುವಾದಿ ಫ್ಯಾಸಿಸ್ಟ್ ಆಕ್ರಮಣದ ವಿರುದ್ಧ, ನವ-ಉದಾರವಾದಿ ನೀತಿಗಳ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಪಿತೃಪ್ರಭುತ್ವದ ವಿರುದ್ಧ, ದಲಿತರು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯ ಮತ್ತು ದಮನಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೊರಡೋಣ ಎಂದು ಸಂಕಲ್ಪ ಮಾಡಲಾಯಿತು. ಹಾಗೆಯೇ, ಶ್ರಮಜೀವಿಗಳ ರಾಜಕೀಯ ಸಮರ್ಥನೆಗಾಗಿ, ಜನರ ಹೋರಾಟಗಳ ಹೆಚ್ಚುಗಾರಿಕೆಗಾಗಿ, ಸಮಾನತೆಯ ಕರ್ನಾಟಕಕ್ಕಾಗಿ, ರಾಜ್ಯದಲ್ಲಿ ಕ್ರಾಂತಿಕಾರಿ ಎಡ ಪರ್ಯಾಯಕ್ಕಾಗಿ ಸಮಾಜದಲ್ಲಿ ತೀವ್ರಗಾಮಿ ಹೋರಾಟ ರಚಿಸಲು ಸಂಕಲ್ಪ ಮಾಡಲಾಯಿತು.