- ದೀಪಾಂಕರ್ ಭಟ್ಟಾಚಾರ್ಯ
ಅನುವಾದ: ರಘುಪತಿ ಸಿದ್ದಯ್ಯ


"ಸ್ವಾತಂತ್ರ್ಯ - ನೀನು ಉದ್ಯಾನವನದಲ್ಲಿರುವ ಒಂದು ಕೋಣೆ, ಕೋಗಿಲೆಯ ಹಾಡು, ಹಳೆಯ ಆಲದ ಮರದ ಹೊಳಪಿನ ಎಲೆಗಳು, ನಾನು ಬಯಸಿದಂತೆ ಬರೆಯ ಬಹುದಾದ ನನ್ನ ಕವನ ಪುಸ್ತಕದ ಪುಟ.” ಕವಿ ಶಂಸುರ್ ರೆಹಮಾನ್‍ರವರು ಈ ‘’ಫ್ರೀಡಂ ಯು’’ (Freedom You) ಎಂಬ ಅಮರ ಕವಿತೆಯನ್ನು ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬರೆದಿದ್ದಾರೆ. ಬಾಂಗ್ಲಾದೇಶದ ವಿಮೋಚನೆಯ ಹೋರಾಟದ ಆಳದಿಂದ ಹುಟ್ಟಿಕೊಂಡ ಈ ಕವಿತೆಯು ಸ್ವಾತಂತ್ರ್ಯದ ಸಾರ್ವತ್ರಿಕ ಪ್ರಣಾಳಿಕೆ ಎಂದು ಹೇಳಬಹುದು. ಬಾಂಗ್ಲಾದೇಶ ತನ್ನ ಸ್ವಾತಂತ್ರ್ಯದ 50 ನೇ ವರ್ಷವನ್ನು ದಾಟಿದೆ. ಮತ್ತು ಭಾರತದಲ್ಲಿ ನಾವು ನಮ್ಮ 75 ನೇ ಹೊಸ್ತಿಲಲ್ಲಿ ನಿಂತಿದ್ದೇವೆ. ಆದರೆ ಕೋಗಿಲೆಯ ಹಾಡು ಎಲ್ಲಿದೆ, ಒಬ್ಬನು ಏನು ಬೇಕಾದರೂ ಬರೆಯಬಹುದಾದ ಕವನ ಪುಸ್ತಕ ಎಲ್ಲಿದೆ? ನಾವು ಸಾಕ್ಷಿಯಾಗಿರುವ ಕೋವಿಡ್ -19 ಸಮಯದ ಸಾವಿನ ಸರಮಾಲೆಯಲ್ಲಿ ಕೋಗಿಲೆಯು ದುಃಖದಲ್ಲಿ ಮುಳುಗಿದೆ, ಆಲದ  ಎಲೆಗಳು ಅದರ ಹೊಳಪನ್ನು ಕಳೆದುಕೊಂಡಿವೆ ಮತ್ತು ನಮ್ಮ ಕವನ ಪುಸ್ತಕದ ಪುಟಗಳನ್ನು ಯುಎಪಿಎ ಅಥವಾ ದೇಶದ್ರೋಹದ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗಿದೆ ಅಥವಾ ಪೆಗಾಸಸ್‍ನ ಕಣ್ಗಾವಲಿಗೆ ಒಳಪಡಿಸಲಾಗಿದೆ. 

ಸ್ವಾತಂತ್ರ್ಯದ ಅರ್ಥವು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಆರಂಭವಾಗುತ್ತದೆ. ಆ ಇತಿಹಾಸವು ಅನೇಕ ದೊಡ್ಡ ಮತ್ತು ಸಣ್ಣ, ತಿಳಿದಿರುವ ಮತ್ತು ತಿಳಿಯದ ವೈಭವದ ಕಥೆಗಳು ಮತ್ತು ಅಸಂಖ್ಯಾತ ಜನರ ಮಹಾನ್ ತ್ಯಾಗಗಳನ್ನು ಒಳಗೊಂಡಿದೆ. ನಾವು ಇಂದು ನೋಡುವ ಮತ್ತು ತಿಳಿದುಕೊಂಡಿರುವ ಈ ಇತಿಹಾಸದ ಅಡಿಪಾಯದ ಮೇಲೆ ಭಾರತವನ್ನು ನಿರ್ಮಿಸಲಾಗಿತ್ತಾದರೂ, ಈ ಕಥೆಗಳಲ್ಲಿ ಹೆಚ್ಚಿನವು ಇನ್ನೂ ಬೆಳಕಿಗೆ ಬಂದಿಲ್ಲ ಮತ್ತು ಕಾಣದಂತೆ ಉಳಿದಿವೆ. ನಾವು ಇಂದು ಅರ್ಥಮಾಡಿಕೊಂಡಿರುವ ಭೌಗೋಳಿಕ ಏಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯು ಈ ಇತಿಹಾಸದಿಂದ ಹುಟ್ಟಿದೆ. 18 ಮತ್ತು 19 ನೇ ಶತಮಾನಗಳಲ್ಲಿ ನಡೆದ ಅನೇಕ ಆದಿವಾಸಿ ಕ್ರಾಂತಿಗಳು ಅಮರವಾಗಿದ್ದಾವೆ, 1857ರಲ್ಲಿ ಭಾರತೀಯ ಸ್ವಾತಂತ್ರ್ಯದ ಮೊದಲ ಯುದ್ಧ ಜರುಗಿತು,  1942 ರ ಕ್ವಿಟ್ ಇಂಡಿಯಾ ಚಳುವಳಿ ಹಲವಾರು ಸ್ಥಳೀಯ ಸರ್ಕಾರಗಳನ್ನು ಮತ್ತು ತಮ್ಮನ್ನು ಹುತಾತ್ಮರನ್ನಾಗಿಸಿಕೊಂಡ ಸಾವಿರಾರು ಜನರ ಪ್ರತಿರೋಧವನ್ನು ಸೃಷ್ಟಿಸಿತು - ಈ ಭವ್ಯವಾದ, ಬಹುರೂಪದ ಇತಿಹಾಸ ಮುಂದಿನ ದಿನಗಳಲ್ಲಿ ಸಂಶೋಧಕರು ಮಾಡುವ ಸಂಶೋಧನೆಗಳಿಂದ ಹೊರ ಬರುತ್ತಲೇ ಇರುತ್ತದೆ.  

ನಾವು ಸಾಮಾನ್ಯವಾಗಿ ಸ್ವಾತಂತ್ರ್ಯ ಚಳುವಳಿಯನ್ನು ಬ್ರಿಟಿಷ್ ವಸಾಹತುಗಾರರ ದಬ್ಬಾಳಿಕೆಯ ಆಡಳಿತದಿಂದ ದೊರೆತ  ಸ್ವಾತಂತ್ರ್ಯ ಇತಿಹಾಸ ಎಂದು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಬ್ರಿಟಿಷ್ ಶಕ್ತಿಗಳ ಈ ಸುದೀರ್ಘ  ವಸಾಹತೀಕರಣ ಆಡಳಿತಕ್ಕೆ ದೇಶದೊಳಗಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಸಹಕಾರಿಯಾಗಿದ್ದವು. ಆದ್ದರಿಂದ, ಅನಿವಾರ್ಯವಾಗಿ ವಸಾಹತುಶಾಹಿಗೆ ಸಹಕಾರ ನೀಡುತ್ತಿದ್ದ ಸ್ಥಳೀಯರು ಮತ್ತು ಸಹಯೋಗಿಗಳು ಕೂಡ ಸ್ವಾತಂತ್ರ್ಯ ಹೋರಾಟದ ಗುರಿಯಾಗಿದ್ದಾರೆ. ಆದಿವಾಸಿ ಮತ್ತು ರೈತ ಚಳುವಳಿಗಳು ಭೂಮಾಲೀಕರು ಮತ್ತು ಸಾಲಗಾರರ ಊಳಿಗಮಾನ್ಯ ಆಡಳಿತಕ್ಕೆ  ಸವಾಲು ಹಾಕಿದ್ದವು, ಇದೇ ಸಮಯದಲ್ಲಿ ರಾಜಪ್ರಭುತ್ವದ ವಿರುದ್ಧ ಸ್ವಾತಂತ್ರ್ಯ ಚಳುವಳಿಗಳು ಸ್ಥಳೀಯ ರಾಜರ ಆಳ್ವಿಕೆಯ ವಿರುದ್ಧ ಹೋರಾಟ ಮಾಡಿದವು.  ಸ್ವಾತಂತ್ರ್ಯದ ನಂತರ, ಕಾನೂನಿನ ಪ್ರಕಾರ ಭೂಮಾಲೀಕರು, ಸಾಲಗಾರರ ಮತ್ತು ರಾಜರ ಆಡಳಿತವನ್ನು ರದ್ದುಗೊಳಿಸಲಾಗಿದೆ, ಆದರೆ ಈವಾಗ ಏನಾಗಿದೆ? ಈಗ ನಾವು ನೋಡುತ್ತಿರುವುದು ಹೊಸ ಭೂಮಾಲೀಕ, ಹೊಸ ಸಾಲಗಾರ ಮತ್ತು ಹೊಸ ರಾಜನ ಅವತರಗಳು - ಕಾರ್ಪೊರೇಟ್ ಅಧಿಪತಿಗಳು ಅಥವಾ ಹೊಸ 'ಕಂಪನಿ ರಾಜ್' ಪ್ರಾಬಲ್ಯ.

ಸ್ವಾತಂತ್ರ್ಯ ಚಳುವಳಿ ಮತ್ತು ರಾಷ್ಟ್ರೀಯ ಪ್ರಜ್ಞೆಯು ಬೆಳೆಯುತ್ತಿದ್ದಂತಹ ಸಮಯದಲ್ಲಿ, ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ವಿತರಣೆಯ ಪ್ರಶ್ನೆಗಳು ಮಾತ್ರ ಚಳುವಳಿಯಲ್ಲಿ ಎತ್ತಲ್ಪಟ್ಟವು. ದೇಶವು ಊಳಿಗಮಾನ್ಯ ಭೂಮಾಲೀಕರ ವ್ಯವಸ್ಥೆಯನ್ನು ರದ್ದುಗೊಳಿಸುವತ್ತಾ, ಭೂ ಸುಧಾರಣೆಗಳು, ಆಪತ್ತಿನಲ್ಲಿದ್ದ ನೈಸರ್ಗಿಕ ಮತ್ತು ಆರ್ಥಿಕ ಸಂಪನ್ಮೂಲಗಳ ರಾಷ್ಟ್ರೀಕರಣ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ಮೇಲೆ ಭಾಗಶಃ ನಿಯಂತ್ರಣವನ್ನು ಸಾಧಿಸಲು ಸಾಗಲಾರಂಭಿಸಿತು. ಎಪ್ಪತ್ತರ ದಶಕದ ಹೊತ್ತಿಗೆ ದೇಶದಲ್ಲಿ ಕಲ್ಲಿದ್ದಲು ಮತ್ತು ಇತರ ಖನಿಜ ಸಂಪತ್ತು ಹಾಗೂ ಬ್ಯಾಂಕ್ ಮತ್ತು ವಿಮೆ ಸಂಸ್ಥೆಗಳ ರಾಷ್ಟ್ರೀಕರಣವು ಪೂರ್ಣಗೊಂಡಿತು. ಆದಾಗ್ಯೂ, ಪ್ರಸ್ತುತವಿರುವ ವಿದ್ಯಮಾನಗಳು ತೊಂಬತ್ತರ ದಶಕದಿಂದ ಸಂಪೂರ್ಣವಾಗಿ ಬದಲಾಗಿವೆ. ಆ ಬದಲಾವಣೆಯು ಇಂದು ನಾವು ನೋಡುತ್ತಿರುವುದಕ್ಕೆ ಕಾರಣವಾಗಿದ್ದು - ಈ ದೇಶದ ಆರ್ಥಿಕತೆಯನ್ನು ಬೆರಳೆಣ ಕೆಯಷ್ಟು ದೊಡ್ಡ ಉದ್ಯಮಗಳಿಗೆ ಹಸ್ತಾಂತರಿಸಲಾಗುತ್ತಿದೆ. ಇದು ರಾಷ್ಟ್ರೀಕರಣಕ್ಕೆ ವಿರುದ್ಧವಾಗಿರುವುದು ಮಾತ್ರವಲ್ಲ,  ನಾವು ಹಿಂದೆಂದೂ ಊಹಿಸದಿದ್ದನ್ನು ಈಗ ಮಾಡಲಾಗಿದೆ - ರೈಲ್ವೇ, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ವಲಯಗಳನ್ನು ನಿಧಾನವಾಗಿ ಮತ್ತು ನಿಶ್ಚಿತವಾಗಿ ಖಾಸಗಿ ವಲಯಕ್ಕೆ ಬಿಟ್ಟುಕೊಡಲಾಗುತ್ತಿದೆ. ರಾಜಕೀಯ ವಾಕ್ಚಾತುರ್ಯವು ರಾಷ್ಟ್ರೀಯತೆಯನ್ನು ಮೆರೆಯುತ್ತಿದ್ದರೆ, ಆರ್ಥಿಕ ರಂಗದಲ್ಲಿ ಸಾರ್ವತ್ರಿಕ ಕಂಪನಿ ರಾಜ್ ಬೆಳೆಯುತ್ತಿದೆ.

ಇದನ್ನು ಸಾಧಿಸುವುದಕ್ಕಾಗಿ, ದೇಶದ ಆಡಳಿತಗಾರರು ಆ ವಿದೇಶಿ ವಸಾಹತುಗಾರರು ಅನುಸರಿಸುತ್ತಿದ್ದ ಆಚರಣೆಗಳಿಗೆ ಹಿಂತಿರುಗುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಂಪನಿ ರಾಜ್ ನಿಯಂತ್ರಣವನ್ನು ಸ್ಥಾಪಿಸಲು, ಪ್ರಕೃತಿಗೆ ಹತ್ತಿರವಿರುವ ಜನರನ್ನು ಅಂದರೆ ಆದಿವಾಸಿಗಳನ್ನು ಅವರ ನೈಸರ್ಗಿಕ ಆವಾಸಸ್ಥಾನಗಳಿಂದ ಸ್ಥಳಾಂತರಿಸಲು ಒಂದು ದಂಡಯಾತ್ರೆಯನ್ನು ಆರಂಭಿಸಲಾಗಿದೆ. ಮತ್ತು ಅವರು ಆ ಬುಲ್ಡೋಜರ್‍ಗಳ ವಿರುದ್ಧ ಪ್ರತಿಭಟಿಸಿದಾಗ,  ಗುಂಡು ಹಾರಿಸಲಾಗುತ್ತಿದೆ ಮತ್ತು ರಾಕ್ಷಸ ಸ್ವರೂಪದಲ್ಲಿರುವ ಕಾನೂನುಗಳ ಅಡಿಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಆದಿವಾಸಿಗಳು ಹೆಚ್ಚಾಗಿರುವ ಗುಜರಾತ್, ರಾಜಸ್ಥಾನ, ಛತ್ತೀಸ್‍ಗಡ್, ಒಡಿಶಾ ಮತ್ತು ಜಾಖರ್ಂಡ್‍ಗಳಲ್ಲಿ ಇದೇ ರೀತಿಯ ವ್ಯಥೆಯ ಕಥೆಗಳು ಪುನರಾವರ್ತಿತ ವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದಿವಾಸಿ ಜನರ ನ್ಯಾಯಯುತ ಬೇಡಿಕೆಗಳು ಮತ್ತು ನ್ಯಾಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಧಾ ಭಾರದ್ವಾಜ್ ಅವರನ್ನು ಜೈಲಿಗೆ ಹಾಕಲಾಗಿದೆ, ಇದೇ ಪ್ರಕರಣ ಸಂಬಂಧ ಜೈಲಿನಲ್ಲಿದ್ದ ಫಾದರ್ ಸ್ಟಾನ್‍ಸ್ವಾಮಿಯವರು ತಮ್ಮ ಇಳಿವಯಸ್ಸು, ದುರ್ಬಲತೆ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲಿ ಜೈಲಿನಲ್ಲಿ ತಮ್ಮ ಜೀವವನ್ನು ಬಿಡುತ್ತಾರೆ. 

ಬ್ರಿಟಿಷರ ಕಾಲದಲ್ಲಿದ್ದ ಆಡಳಿತವು ರೌಲತ್ ಕಾಯ್ದೆ ಮತ್ತು ದೇಶದ್ರೋಹದ ಕಾನೂನಿನ ಮೂಲಕ ದೇಶ ಮತ್ತು ಅದರ ಜನರನ್ನು ನಿಯಂತ್ರಿಸುತ್ತಿತ್ತು. ಒಂದು ವೇಳೆ ಸರ್ಕಾರದ ವಿರುದ್ಧ ಮಾತನಾಡಿದರೆ ಪಿತೂರಿ ಪ್ರಕರಣಗಳಡಿಯಲ್ಲಿ ವಿಚಾರಣೆಯಿಲ್ಲದೆ ಜೈಲುವಾಸ ಅನುಭವಿಸಬೇಕಾಗಿತ್ತು, ಅಲ್ಲದೆ ಜಲಿಯನ್ ವಾಲಾ ಬಾಗ್‍ನಲ್ಲಿ ನಡೆದಂತಹ ಹತ್ಯಾಕಾಂಡಗಳನ್ನು ಎದುರಿಸಬೇಕಾಗುತ್ತಿತ್ತು. ಯುಎಪಿಎ ಇಂದು ಅದೇ ರೌಲತ್ ಕಾಯಿದೆಯ ಪರಂಪರೆಯಾಗಿದೆ, ಮತ್ತು ದೇಶದ್ರೋಹದ ಕಾನೂನು ಹಿಂದಿನಂತೆಯೇ ಉಳಿದಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವಿರುದ್ಧ ಯುಎಪಿಎ ಬಳಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ನೆನಪಿಸಿದೆ. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರು ಏಳು ದಶಕಗಳಿಂದ ಸ್ವತಂತ್ರವಾಗಿರುವ ದೇಶದಲ್ಲಿ ತನ್ನದೇ ಜನರ ವಿರುದ್ಧ ದೇಶದ್ರೋಹದ ಕಾನೂನಿನ ಬಳಕೆಯ ಅಗತ್ಯವೇನೆಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.  ಆದರೆ ಸರ್ಕಾರ ನಾಚಿಕೆಯಿಲ್ಲದೆ ಮೌನವಾಗಿದೆ ಎಂದು ಹೇಳಬೇಕಾದ ಅವಶ್ಯಕತೆ ಇಲ್ಲ. 
ಸತ್ಯಾಂಶವೇನೆಂದರೆ, ಸರ್ಕಾರವು ಬ್ರಿಟಿಷರ ಕಾಲದಲ್ಲಿದ್ದಕ್ಕಿಂತಲೂ ಹೆಚ್ಚು ದಬ್ಬಾಳಿಕೆಯ ಪ್ರಾಬಲ್ಯವನ್ನು ಉಪಯೋಗಿಸುವುದರಲ್ಲಿ ಮುಂದಿದೆ. ಸರ್ಕಾರ ದೈಹಿಕ ಪ್ರಾಬಲ್ಯದ ಜೊತೆಗೆ ಅಧೀನತೆಗೊಳಪಡಿಸುವುದಕ್ಕಾಗಿ ಡಿಜಿಟಲ್ ಆಯುಧಗಳನ್ನು ಸಹ ಹೊಂದಿದೆ. ಪೆಗಾಸಸ್‍ನೊಂದಿಗೆ ಸರ್ಕಾರವು ಈಗ ಯಾವುದೇ ಪ್ರಜೆಯ ಪೋನ್ ಕದ್ದಾಲಿಕೆ ಮಾಡಬಹುದು. ಚುನಾವಣಾ ಆಯುಕ್ತರು, ಸಿಬಿಐ ನಿರ್ದೇಶಕರು, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರ ಒಳಗೊಂಡಂತೆ ಯಾರನ್ನು ಬಿಡುತ್ತಿಲ್ಲ ಎಲ್ಲಾರ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಈ ಇಸ್ರೇಲಿ ಕಂಪನಿಯು ತನ್ನ ಬೇಹುಗಾರಿಕೆ ತಂತ್ರಜ್ಞಾನವನ್ನು ಸರ್ಕಾರಗಳು ಅಥವಾ ಸರ್ಕಾರಿ ಏಜೆನ್ಸಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಿದೆ. ಭಾರತದಲ್ಲಿ ಈ ತಾಂತ್ರಿಕ ಆಯುಧವನ್ನು ಖರೀದಿಸಿದವರು ಯಾರು? ಎಂಬ ಈ ಪ್ರಶ್ನೆಗೂ ಸಹ ಸರ್ಕಾರವು ನಾಚಿಕೆಯಿಲ್ಲದೆ ಮೌನವಾಗಿದೆ. ವಿದೇಶಿ ಮತ್ತು ಸಾಂಸ್ಕೃತಿಕ ಇಲಾಖೆಗಳ ಕೇಂದ್ರ ಮಂತ್ರಿಗಳು ತಮ್ಮ ಶತ್ರುಗಳಾದ  ಎಡಪಂಥೀಯರ ವಿರುದ್ಧ ಬಳಸುತ್ತಿರುವ ತಂತ್ರಜ್ಞಾನಗಳನ್ನು ಏಕೆ ಬಹಿರಂಗಪಡಿಸಬೇಕು ಎಂದು ಕೇಳುತ್ತಾರೆ!

ದೇಶವು ತನ್ನ ಸ್ವಾತಂತ್ರ್ಯವನ್ನು ಗಳಿಸಿದಾಗ, ನಾವು ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡೆವು. ಸ್ವತಂತ್ರ ರಾಷ್ಟ್ರದ ಪ್ರಜೆಗಳು ಕೂಡ ಸ್ವತಂತ್ರರು ಎಂದು ಸಂವಿಧಾನದ ಪ್ರಾರಂಭದಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ. ಚಿಂತನೆಯ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಸಿದ್ಧಾಂತ ಮತ್ತು ಪೂಜಾ ಸ್ವಾತಂತ್ರ್ಯಗಳನ್ನು ತನ್ನ ಪ್ರಜೆಗಳಿಗೆ ನೀಡಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಖಾತರಿ ಪಡಿಸಲಾಗಿದೆ. ಇಂದು ಸ್ವತಂತ್ರ ರಾಷ್ಟ್ರದ ಆ ಸ್ವತಂತ್ರ ಪ್ರಜೆಗಳು ತಮ್ಮನ್ನು ಅಧೀನತೆಗೆ ಒಳಪಡಿಸಲಾಗಿದೆ ಎಂದು ಕಂಡುಕೊಂಡಿದ್ದಾರೆ. ರಾಜನು ತಾನು ಉಚಿತ ಆಹಾರ, ಲಸಿಕೆ ನೀಡುತ್ತಿದ್ದೇನೆ ಎಂದು ಹೇಳುತ್ತಾನೆ ಮತ್ತು ಹೀಗಾಗಿ ಎಷ್ಟು ಲಸಿಕೆ ಮತ್ತು ಆಹಾರ ನೀಡಲಾಗಿದೆ ಎಂದು  ಯಾರೂ ಆತನನ್ನು ಕೇಳಲು ಸಾಧ್ಯವಿಲ್ಲ - ಪ್ರಜೆಗಳು 'ನನ್ನ ಸ್ವಾಮಿಗೆ ಧನ್ಯವಾದಗಳು' ಎಂದು ಮಾತ್ರ ಹೇಳಬೇಕಾಗುತ್ತದೆ. ಈ ಕಾರ್ಯವನ್ನು ಜನರ ತೆರಿಗೆ ಹಣದಲ್ಲೇ ಮಾಡುತ್ತಿದ್ದರೂ ಸಹ ಸರ್ಕಾರದ ಮಹಾನ್ ಕಾರ್ಯವೆಂಬಂತೆ ಬೃಹತ್ ಜಾಹೀರಾತು ಫಲಕಗಳನ್ನು ಹಾಕಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. 

ಸ್ವಾತಂತ್ರ್ಯದ ಏಳು ದಶಕಗಳ ನಂತರ ನಾವು 'ಆತ್ಮನಿರ್ಭರ್' ಆಗಿರಬೇಕು, ಸ್ವಾವಲಂಬಿಗಳಾಗಬೇಕು ಎಂದು ಸರ್ಕಾರ ಹೇಳುತ್ತದೆ. ಈ ಸ್ವಾವಲಂಬನೆಯ ಅರ್ಥವೆಂದರೆ ಪ್ರತಿಯೊಬ್ಬರು ತಮ್ಮ ಕಾಲಿನ ಮೇಲೆ ನಿಲ್ಲಬೇಕು-ಅವರು ಸರ್ಕಾರವನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬುದಾಗಿದೆ.  ಅದಕ್ಕಾಗಿಯೇ ಕೋವಿಡ್ -19 ಸಾಂಕ್ರಾಮಿಕದ ಲಾಕ್‍ಡೌನ್ ಸಮಯದಲ್ಲಿ ಲಕ್ಷಾಂತರ ಈ ಸ್ವಾವಲಂಬಿ ಜನರು ನೂರಾರು ಮೈಲುಗಳಷ್ಟು ನಡೆದುಕೊಂಡು ತಮ್ಮ ಮನೆಗೆ ತಲುಪುವುದನ್ನು ನಾವು ನೋಡಿದ್ದೇವೆ. ಸ್ವಾವಲಂಬಿ ಭಾರತವು ತನ್ನ ಹೊಸ ಸಂಸತ್ತನ್ನು ನಿರ್ಮಿಸುತ್ತಿದೆ - ಬ್ರಿಟಿಷ್ ಯುಗದಲ್ಲಿದ್ದ ಸ್ಥಳದಲ್ಲಿ - ಇದೊಂದು ಹೊಸ ಮತ್ತು ಸ್ವಾವಲಂಬಿ ರಾಜಮನೆತನದ ನ್ಯಾಯಾಲಯ (ರಾಯಲ್ ಕೋರ್ಟ್). ಜುನ ಅಖಾರದ ಮುಖ್ಯಸ್ಥ ಯತೀಂದ್ರ ನಾಥ್ ಗಿರಿ ಅವರು ಹೊಸ ಸಂಸತ್ತನ್ನು ಸ್ಥಾಪಿಸಲಿರುವ ಕಾರಣ ಹೊಸ ಸಂವಿಧಾನವನ್ನು ಏಕೆ ಹೊಂದಬಾರದೆಂದು ಮತ್ತು  ಕೈಯಲ್ಲಿರುವ ಹೊಸ ಸಂವಿಧಾನದೊಂದಿಗೆ ಈ ಹೊಸ ಸಂಸತ್ತಿನ ಗೃಹಪ್ರವೇಶ ನಡೆಯಲಿ ಎಂದು ಸಲಹೆ ನೀಡಿದ್ದಾರೆ. 

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಭೀಮರಾವ್ ಅಂಬೇಡ್ಕರ್ ಅವರು ಸಂವಿಧಾನದ ವಿವಿಧ ಆಂತರಿಕ ಸಂಘರ್ಷಗಳ ಬಗ್ಗೆ ಮಾತನಾಡಿದ್ದರು. ಅವರು ರಾಜಕೀಯ ಸಮಾನತೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ನಡುವೆ ಉದ್ಭವವಾಗಬಹುದಾದ ಘರ್ಷಣೆಯನ್ನು ಉಲ್ಲೇಖಿಸಿದ್ದಾರೆ. ಅವರು ರಾಜಕೀಯ ಕ್ಷೇತ್ರದಲ್ಲಿ ಒಬ್ಬ ನಾಯಕನನ್ನು ಆರಾಧನೆ ಮಾಡುವ ಅಪಾಯಕಾರಿ ಪ್ರವೃತ್ತಿಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಹಿಂದೂ ರಾಷ್ಟ್ರ ನಿರ್ಮಾಣದಿಂದ ಭಾರತದ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ತತ್ವಗಳಿಗೆ ಅಂತಿಮವಾಗಿ ವಿಪತ್ತು ಉಂಟಾಗುತ್ತದೆಂದು ಎಚ್ಚರಿಕೆ ನೀಡಿದ್ದರು. ಇಂದು ನಾವು 75 ನೇ ವರ್ಷದ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆ ಅನಾಹುತವನ್ನು ಎದುರಿಸುತ್ತಾ ಮುಖಾಮುಖಿಯಾಗಿದ್ದೇವೆ. ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳ ಮೂಲಕ ನಿರ್ಮಿಸಲಾದ ಭಾರತದ ಏಕತೆಯು ಇಂದು ಬಹು ಬಿರುಕುಗಳಿಂದ ಕೂಡಿದ್ದು ವಿವಿಧ ಆಯಾಮಗಳಲ್ಲಿ ಕಳಚಿಬೀಳುತ್ತಿದೆ. ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ನಡುವೆ ಇರುವ ಗಡಿ ವಿವಾದವು, ಆ ರಾಜ್ಯಗಳ ಪೆÇಲೀಸರ ನಡುವೆ ಸಶಸ್ತ್ರ ಘರ್ಷಣೆಯ ರೂಪವನ್ನು ಪಡೆಯುತ್ತಿದೆ.
ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಂಡಿರದ ಇಂತಹ ಸಂಕಷ್ಟದ ಸಮಯದಲ್ಲಿ, ನಾವು ಮತ್ತೊಮ್ಮೆ ಕೆಲವು ಪ್ರಮುಖ ಪ್ರಶ್ನೆಗಳಿಗೆ ಪರಿಹಾರಗಳನ್ನು ಹುಡುಕಬೇಕು. ಸ್ವತಂತ್ರ ದೇಶ ಎಂದರೆ ಹಕ್ಕುಗಳನ್ನು ಹೊಂದಿರುವ ಸ್ವತಂತ್ರ ನಾಗರಿಕರು ಎಂದರ್ಥ - ಅಧೀನದಲ್ಲಿರುವುದಲ್ಲ - ನಾವು ಇದನ್ನು ಗಟ್ಟಿಯಾಗಿ ಘೋಷಿಸಬೇಕಾಗುತ್ತದೆ. ಭಾರತದ ಏಕತೆಯು ಅದರ ವೈವಿಧ್ಯತೆಯಲ್ಲಿದೆ – ಆ ವೈವಿಧ್ಯತೆ ಮತ್ತು ಬಹುತ್ವವು ಸಂಪೂರ್ಣ ಗೌರವವನ್ನು ಪಡೆಯಬೇಕು. ಯಾವುದೇ ರೀತಿಯಲ್ಲೂ ಬಹುಸಂಖ್ಯಾತ ಧಾರ್ಮಿಕ ಸಮುದಾಯದ ಸಂಕುಚಿತ ಸ್ವ-ಹಿತಾಸಕ್ತಿಗಳು ಮತ್ತು ಬೆರಳೆಣ ಕೆಯ ಲಾಭಕೋರ ಬಂಡವಾಳಶಾಹಿಗಳು ಆ ವೈವಿಧ್ಯತೆಯನ್ನು ನಾಶಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಗಣರಾಜ್ಯವು ಅದರ ಸಂವಿಧಾನ ಮತ್ತು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತದೆ, ಕಾನೂನುಬಾಹಿರ ಹಿಂಸೆ ಮತ್ತು ಸರ್ಕಾರಿ ಯಂತ್ರದ ಪಿತೂರಿಗಳಿಂದ ಅದನ್ನು ಚುನಾಯಿತ ನಿರಂಕುಶಾಧಿಕಾರವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರವನ್ನು ಯಾವುದೇ ನಡುವಣ-ಮಾರ್ಗದ ಮೂಲಕ ಹುಡುಕಲಾಗುವುದಿಲ್ಲ. ಇದಕ್ಕೆ ಉತ್ತರ,  ಫ್ಯಾಸಿಸ್ಟ್ ಆಕ್ರಮಣದ ವಿರುದ್ಧ ಹೋರಾಟಗಳನ್ನು ಮಾಡುವುದರ ಮೂಲಕ ಹಾಗೂ ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಲಾಗಿರುವ  ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ತತ್ವಗಳನ್ನು ಎತ್ತಿಹಿಡಿಯುವ ಮೂಲಕ ಮಾತ್ರ ಕಂಡುಕೊಳ್ಳಲು ಸಾಧ್ಯ.